ಜೆಡಿಎಸ್ ಜಾತ್ಯಾತೀತತೆಯ ಬಗ್ಗೆ ಪ್ರಶ್ನಿಸಿದ ಸಿದ್ದರಾಮಯ್ಯಗೆ ಕುಮಾರಸ್ವಾಮಿ ತಿರುಗೇಟು

ಜಾತ್ಯತೀತ, ಕೋಮುವಾದ ಹೆಸರಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಲಾಭ ಮಾಡಿಕೊಂಡಿದ್ದಾರೆ. ಅವರೊಬ್ಬ ಛದ್ಮವೇಷಧಾರಿ, ಡೋಂಗಿ ಸಮಾಜವಾದಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಟೀಕಿಸಿದ್ದಾರೆ.
ಜೆಡಿಎಸ್ ನಾಯಕ ಹೆಚ್'ಡಿ.ಕುಮಾರಸ್ವಾಮಿ
ಜೆಡಿಎಸ್ ನಾಯಕ ಹೆಚ್'ಡಿ.ಕುಮಾರಸ್ವಾಮಿ

ಬೆಂಗಳೂರು: ಜಾತ್ಯತೀತ, ಕೋಮುವಾದ ಹೆಸರಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಲಾಭ ಮಾಡಿಕೊಂಡಿದ್ದಾರೆ. ಅವರೊಬ್ಬ ಛದ್ಮವೇಷಧಾರಿ, ಡೋಂಗಿ ಸಮಾಜವಾದಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಜೆಡಿಎಸ್ ಜಾತ್ಯಾತೀತತೆಯ ಬಗ್ಗೆ ಪ್ರಶ್ನಿಸಿದ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಅವರ ಬೆನ್ನು ಅವರಿಗೆ ಕಾಣುವುದಿಲ್ಲ. ನಾಲಿಗೆಗೂ ಮೂಳೆ ಇರುವುದಿಲ್ಲ. ಸಿಎಂ ಸೀಟಿನಲ್ಲಿ ಕೂತರೂ 'ಸಿದ್ದಸುಳ್ಳು'ಗಳಿಗೆ ಕೊರತೆಯೇನೂ ಇಲ್ಲ. ' ಜಾತ್ಯತೀತ ' ಎನ್ನುವ ಟ್ಯಾಗ್ ಲೈನ್ ಇಟ್ಟುಕೊಂಡು ಜಾತಿ ಸಭೆಗಳನ್ನು ಮಾಡಿ ಕುಕ್ಕರ್, ಇಸ್ತ್ರೀ ಪೆಟ್ಟಿಗೆ ಹಂಚುವುದು ಜಾತ್ಯತೀತವೇ? ಅಹಿಂದ ಎಂದು ಹೇಳಿಕೊಂಡು ಧರ್ಮಕ್ಕೊಂದು ಸಮಾವೇಶ, ಜಾತಿಗೊಂದು ಸಭೆ ನಡೆಸುವುದು ಜಾತ್ಯತೀತವೇ? ಸ್ವಲ್ಪ ಹೇಳುವಿರಾ ಸಿದ್ದರಾಮಯ್ಯ ಅವರೇ? ಎಂದು ಪ್ರಶ್ನಿಸಿದ್ದಾರೆ.

ಕೋಮುವಾದಿ ಎಂದು ಬಿಜೆಪಿಯನ್ನು ಹೀಗಳೆಯುತ್ತಾ ಆ ಪದದಿಂದಲೇ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವ ಡೋಂಗಿ ಸಮಾಜವಾದಿ ನೀವು. ನಿಮ್ಮ ಅಡ್ಜಸ್ಟ್'ಮೆಂಟ್ ರಾಜಕಾರಣ ಜಗತ್ಪ್ರಸಿದ್ಧಿ. I.N.D.I.A ಎಂಬ ಮೈತ್ರಿಕೂಟದಲ್ಲಿ ಅದೇ ಬಿಜೆಪಿಯ ಬಿ ಟೀಂಗಳನ್ನು ಇಟ್ಟುಕೊಂಡು, ಅವುಗಳ ಬಾಲಂಗೋಚಿ ಆಗಿರುವ ಕಾಂಗ್ರೆಸ್ ಪಕ್ಷ ಜಾತ್ಯತೀತವೇ? ಉತ್ತರಿಸಿ ಮುಖ್ಯಮಂತ್ರಿಗಳೇ? ಸ್ಟಾಲಿನ್, ಮಮತಾ ಬ್ಯಾನರ್ಜಿ, ಫಾರೂಕ್ ಅಬ್ದುಲ್ಲಾ, ನಿತೀಶ್ ಕುಮಾರ್, ಹೇಮಂತ್ ಸೊರೇನ್, ವೈಕೋ, ಮೆಹಬೂಬಾ ಮುಫ್ತಿ, ಅಖೈರಿಗೆ ಶಿವಸೇನೆಯ ಉದ್ಧವ್ ಠಾಕ್ರೆ.. ಇವರೆಲ್ಲರೂ ಬಿಜೆಪಿ ಪಡಸಾಲೆಯಲ್ಲಿ ಪೊಗದಸ್ತಾಗಿ ಅಧಿಕಾರದ ಭೋಜನ ಉಂಡವರಲ್ಲವೇ? ಅವರ ಪಕ್ಕ ಕುರ್ಚಿ ಹಾಕಿಕೊಂಡು ಕೂರಲು ನಿಮಗೆ ನಾಚಿಕೆ ಆಗುವುದಿಲ್ಲವೇ? 2006ರಲ್ಲಿ ಬಿಜೆಪಿ ಜತೆ ಸರಕಾರ ರಚಿಸಿದ ಏಕೈಕ ಕಾರಣಕ್ಕೆ ಬಿಜೆಪಿ ಬಿ ಟೀಂ ಎಂದು ಜೆಡಿಎಸ್' ಗೆ ಮುದ್ರೆ ಹಾಕಿದಿರಿ. 2018ರಲ್ಲಿ ಅದೇ ಬಿ ಟೀಂ ಜತೆ ಸರಕಾರ ರಚಿಸಲು ಮಾನ್ಯ ದೇವೇಗೌಡರ ಮನೆಗೆ ಬಂದು ಸಾಲಾಗಿ ಕೈಕಟ್ಟಿ ನಿಂತುಕೊಂಡಿರಿ. ಮರೆತಿರಾ ಛದ್ಮವೇಷಧಾರಿ??

ಜಾತ್ಯತೀತ ಎನ್ನುವುದು ನಾಲಿಗೆ ಮೇಲಿನ ಮಾತಲ್ಲ, ಹೃದಯದ ಆಳದಲ್ಲಿರುವ ನಿಷ್ಠೆ. ಸ್ವಾರ್ಥ ರಾಜಕಾರಣವನ್ನೇ ಹಾಸಿಹೊದ್ದು, ಅಧಿಕಾರ ದಾಹವೇ ಹಾಸುಹೊಕ್ಕಾಗಿರುವ ನಿಮಗೆ ಜಾತ್ಯತೀತತೆ ಕೇವಲ ಭಾಷಣದ ಸರಕಷ್ಟೇ. ಜಾತ್ಯತೀತತೆ ಕುರಿತು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡ ಅವರು ಹಾಗೂ ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇವೆ, ಅದೂ ಜನರಿಗೆ? ನಮ್ಮ ಬದ್ಧತೆ, ಅಚಲತೆ, ಜಾತ್ಯತೀತತೆಯನ್ನು ಪ್ರಶ್ನಿಸುವ ಯೋಗ್ಯತೆ ನಿಮಗೆ ಖಂಡಿತಾ ಇಲ್ಲ. ಈ ಗುಣಗಳು ನಿಮಗೆ ಅನ್ವಯ ಆಗುವುದೂ ಇಲ್ಲ. ಏನಂತೀರಿ? ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com