ಕಾಂಗ್ರೆಸ್ ಸರ್ಕಾರ ಗೊಂದಲದ ಗೂಡಾಗಿದೆ: ಮಾಜಿ ಸಿಎಂ ಬೊಮ್ಮಾಯಿ
ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರ ನಡುವೆ ಹೊಂದಾಣಿಕೆ ಇಲ್ಲವಾಗಿದ್ದು, ಆ ಪಕ್ಷವು ಗೊಂದಲದ ಗೂಡಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Published: 02nd October 2023 09:38 AM | Last Updated: 02nd October 2023 05:18 PM | A+A A-

ಮಾಜಿ ಸಿಎಂ ಬೊಮ್ಮಾಯಿ
ಹಾವೇರಿ: ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರ ನಡುವೆ ಹೊಂದಾಣಿಕೆ ಇಲ್ಲವಾಗಿದ್ದು, ಆ ಪಕ್ಷವು ಗೊಂದಲದ ಗೂಡಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಹುರಳಿಕೊಪ್ಪ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಪ್ರತಿ ಸಚಿವರು ಪ್ರತಿ ದಿನ ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದು, ಇದು ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತಿದೆ. ಸಚಿವರ ನಡುವೆ ಸಮನ್ವಯದ ಕೊರತೆಯಿದ್ದು, ಅವರ ನಡುವೆ ಸೌಹಾರ್ದತೆ ಇಲ್ಲ ಎಂದು ಹೇಳಿದ್ದಾರೆ.
ಸಚಿವ ಸಂಪುಟದಲ್ಲಿ ಸಮನ್ವಯತೆ ಇಲ್ಲದ ಕಾರಣ ಕಾಂಗ್ರೆಸ್ ಶಾಸಕರು ಅತೃಪ್ತರಾಗಿದ್ದಾರೆ. ರಾಜ್ಯದ ಜನತೆಗೆ ಚುನಾಯಿತ ಸರ್ಕಾರದ ಅಸ್ತಿತ್ವದ ಭಾವನೆ ಇಲ್ಲ. ಬರ ಪರಿಹಾರ ಇನ್ನೂ ರೈತರಿಗೆ ತಲುಪಿಲ್ಲ. ನಾಲ್ಕು ತಿಂಗಳಲ್ಲೇ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಮುಖ್ಯಮಂತ್ರಿಗಳಿಗೆ ತಮ್ಮ ಸಚಿವರ ಮೇಲೆ ಹಿಡಿತವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ, ಶೀಘ್ರದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಬಿ.ಎಸ್. ಯಡಿಯೂರಪ್ಪ
ಇದೇ ವೇಳೆ ಕಾವೇರಿ ನದಿ ನೀರಿನ ವಿಚಾರವಾಗಿ ಮಾತನಾಡಿದ ಅವರು, ಕಾನೂನು ತಜ್ಞರ ಸಭೆಯಲ್ಲಿ ಒಂದು ಮಾತು, ಸಾರ್ವಜನಿಕವಾಗಿ ಇನ್ನೊಂದು ಮಾತು ಹೇಳುತ್ತಿದ್ದಾರೆ. ತಮಿಳುನಾಡಿಗೆ ನೀರು ಬಿಡುವುದನ್ನು ಸರ್ಕಾರ ಮೇಲ್ಮನವಿ ಸಲ್ಲಿಸಿ ತಡೆಹಿಡಿಯಲಿದೆ ಎಂದು ಕಾನೂನು ಗಣ್ಯರ ಸಭೆಯಲ್ಲಿ ಹೇಳಿದ್ದರು. ಆದರೆ ಹೊರಗೆ, ಸಿಎಂ ಮೇಲ್ಮನವಿ ಸಲ್ಲಿಸುವ ಬಗ್ಗೆ ಪುನರುಚ್ಚರಿಸಿ, ನೀರು ಬಿಡುಗಡೆ ಮಾಡದಿದ್ದರೆ, ನ್ಯಾಯಾಲಯ ನಿಂದನೆಯಾಗುತ್ತದೆ, ಅಧಿಕಾರ ಹೋಗುತ್ತದೆ ಎಂದರು. ಮುಖ್ಯಮಂತ್ರಿಗಳು ಅಧಿಕಾರಕ್ಕಾಗಿ ರಾಜ್ಯದ ಹಿತ ಬಲಿ ಕೊಡುತ್ತಿದ್ದಾರೆ. ಇವರು ಬಹಿರಂಗ ಹೇಳಿಕೆ ನೀಡುವಾಗ ಜವಾಬ್ದಾರಿಯುತವಾಗಿ ಮಾತನಾಡಬೇಕು. ಕೋರ್ಟ್‌ನಲ್ಲಿ ಸಮರ್ಪಕ ವಾದ ಮಾಡಬೇಕು. ಸುಪ್ರೀಂ ಕೋರ್ಟ್‌ನಲ್ಲಿ ಈಗಿನ ವಾಸ್ತವ ಸ್ಥಿತಿ ಹೇಳಿದರೆ ನ್ಯಾಯಾಂಗ ನಿಂದನೆ ಆಗುವುದಿಲ್ಲ. ಅಧಿಕಾರವು ಹೋಗುವುದಿಲ್ಲ ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ ವಿಚಾರವಾಗಿ ಮಾತನಾಡಿ, ಅವರು ಹಿರಿಯರು, ಅವರು ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿದ್ದಾರೆ. ಅವರು ಲಿಂಗಾಯತ ಅಧಿಕಾರಿಗಳಿಗೆ ಬೆಲೆ ಇಲ್ಲ ಅಂತ ಹೇಳಿದ್ದರೆ, ಅದು ಮುಂದಿನ ದಿನಗಳಲ್ಲಿ ಪರಿಣಾಮ ಬೀರಲಿದೆ ಎಂದರು.