ದೆಹಲಿಯಲ್ಲಿ ದೇವೇಗೌಡ; ಬುಧವಾರ ಕುಮಾರಸ್ವಾಮಿ ಪ್ರಯಾಣ, ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ನಿರ್ಣಾಯಕ ಹಂತಕ್ಕೆ?
2024ರ ಸಾರ್ವತ್ರಿಕ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಹೆಚ್ಚಿನ ಮಾತುಕತೆಗಾಗಿ ಕುಮಾರಸ್ವಾಮಿ ಅವರು ಬುಧವಾರ ದೆಹಲಿಗೆ ಹೋಗುವ ಸಾಧ್ಯತೆಯಿದೆ.
Published: 18th September 2023 09:16 AM | Last Updated: 19th September 2023 08:31 PM | A+A A-

ಹೆಚ್ ಡಿ ದೇವೇಗೌಡ-ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಬೆಂಗಳೂರು: 2024ರ ಸಾರ್ವತ್ರಿಕ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ ಎಂದು ಒಪ್ಪಿಕೊಂಡಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಇಂದು ಸೋಮವಾರದಿಂದ ಆರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಭಾಗಿಯಾಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ನಿನ್ನೆಯೇ ದೆಹಲಿಗೆ ಆಗಮಿಸಿರುವ ದೇವೇಗೌಡರು ನಿನ್ನೆ ಪ್ರಧಾನ ಮಂತ್ರಿಗಳ ಹುಟ್ಟುಹಬ್ಬದ ಸಮಯದಲ್ಲಿ ಶುಭಾಶಯಗಳನ್ನು ತಿಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ 73 ನೇ ಜನ್ಮದಿನದಂದು ನನ್ನ ಆತ್ಮೀಯ ಹುಟ್ಟುಹಬ್ಬದ ಶುಭಾಶಯಗಳು. ಸರ್ವಶಕ್ತ ಭಗವಂತ ಅವರಿಗೆ ರಾಷ್ಟ್ರದ ಸೇವೆ ಮಾಡಲು ಉತ್ತಮ ಆರೋಗ್ಯವನ್ನು ನೀಡಲಿ ಎಂದು ನಿನ್ನೆ ಟ್ವೀಟ್ ಮಾಡಿದ್ದರು.
ಮೇ 28ರಂದು ನೂತನ ಸಂಸತ್ ಭವನ ಉದ್ಘಾಟನೆಯಲ್ಲಿ ದೇವೇಗೌಡರು ಭಾಗವಹಿಸಿದ್ದರು. ಈಗ, ಅವರ ಭೇಟಿಯು ಮೈತ್ರಿ ಮಾತುಕತೆಗೆ ನಿರ್ಣಾಯಕವಾಗಿರುತ್ತದೆ. ನಾನು ಇಬ್ಬರನ್ನು ಭೇಟಿಯಾಗಿರುವುದು ನಿಜ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಎರಡೂ ಪಕ್ಷಗಳ ಮಧ್ಯೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ದೇವೇಗೌಡರು ಹೇಳಿದ್ದರು. ದಶಕಗಳಿಂದ ಅಂತರ ಕಾಯ್ದುಕೊಂಡಿದ್ದ ಕೇಸರಿ ಪಕ್ಷದೊಂದಿಗೆ ಕೈಜೋಡಿಸುವ ಕ್ರಮವನ್ನು ದೇವೇಗೌಡರು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ ಸಮೀಕರಣ: ಉಲ್ಟಾ ಹೊಡೆಯಲಿದ್ಯಾ ಕಾಂಗ್ರೆಸ್ ಲೆಕ್ಕಾಚಾರ; ಸಿದ್ದು, ಡಿಕೆಶಿಗೆ ಟಫ್ ವಾರ್!
"ಪ್ರಾದೇಶಿಕ ಪಕ್ಷವನ್ನು ಉಳಿಸುವ ಸಲುವಾಗಿ, ಕುಮಾರಸ್ವಾಮಿ ಅವರು 2006 ರಲ್ಲಿ ಬಿಜೆಪಿಯೊಂದಿಗೆ ಸರ್ಕಾರ ರಚಿಸಿದಾಗ ಅದು ಅನಿವಾರ್ಯವಾಗಿತ್ತು. ಈಗ ಮತ್ತೆ ಅನಿವಾರ್ಯತೆ ಎದುರಾಗಿದೆ ಎಂದು ಅವರು ಹೇಳಿದರು.
ಮೂಲಗಳ ಪ್ರಕಾರ, ಮೈತ್ರಿ ಕುರಿತು ಹೆಚ್ಚಿನ ಮಾತುಕತೆಗಾಗಿ ಕುಮಾರಸ್ವಾಮಿ ಅವರು ಬುಧವಾರ ದೆಹಲಿಗೆ ಹೋಗುವ ಸಾಧ್ಯತೆಯಿದೆ. ದೇವೇಗೌಡರ ಅನಾರೋಗ್ಯದ ಕಾರಣ ಆಗಾಗ್ಗೆ ದೆಹಲಿಗೆ ಭೇಟಿ ನೀಡಲು ಸಾಧ್ಯವಾಗದ ಕಾರಣ, ಅವರ ಪ್ರಸ್ತುತ ಭೇಟಿಯಲ್ಲೇ ಮೈತ್ರಿ ಒಪ್ಪಂದವನ್ನು ಮಾಡಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ ನಾಯಕತ್ವವು ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಐದು ಸ್ಥಾನಗಳನ್ನು ಕೇಳಬಹುದು. ಸಂಧಾನದ ನಂತರ ಜೆಡಿಎಸ್ ನಾಲ್ಕಕ್ಕೆ ತೃಪ್ತಿಪಟ್ಟುಕೊಳ್ಳುವ ಸಾಧ್ಯತೆಯಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ದೇವೇ ಗೌಡರು ಸ್ಪರ್ಧಿಸಬೇಕು ಎಂದು ಬಿಜೆಪಿಯ ಉನ್ನತ ನಾಯಕತ್ವ ಒತ್ತಾಯಿಸುತ್ತದೆಯೇ ಅಥವಾ ಇಲ್ಲವೇ ಎಂಬುದು ಕುತೂಹಲಕಾರಿಯಾಗಿದೆ. 2019ರಲ್ಲಿ ಗೌಡರು ತುಮಕೂರಿನಿಂದ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.