ಬಿಜೆಪಿ ಜೊತೆ ಮೈತ್ರಿಯಿಂದ ದಳಪತಿಗಳಿಗೆ ಸರಣಿ ಸಂಕಷ್ಟ; ಜೆಡಿಎಸ್ನ ಮತ್ತೊಂದು ಪ್ರಮುಖ ವಿಕೆಟ್ ಪತನ
ಮುಂಬರುವ ಲೋಕಸಭಾ ಚುನಾವಣೆ ಅಂಗವಾಗಿ ಜೆಡಿಎಸ್- ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಇದನ್ನು ವಿರೋಧಿಸಿ ಜೆಡಿಎಸ್ ನಾಯಕರು ಒಬ್ಬೊಬ್ಬರಾಗಿಯೇ ಪಕ್ಷ ತೊರೆಯುತ್ತಿದ್ದಾರೆ. ಇದೀಗ, ಪಕ್ಷದ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ತುಮಕೂರಿನಲ್ಲಿ ಜೆಡಿಎಸ್ನ ಮತ್ತೊಂದು ವಿಕೆಟ್ ಪತನವಾಗಿದೆ.
Published: 27th September 2023 11:23 AM | Last Updated: 27th September 2023 03:16 PM | A+A A-

ಮಾಜಿ ಶಾಸಕ ಶಫಿ ಅಹಮದ್ ಬುಧವಾರ ಜೆಡಿಎಸ್ ಪ್ರಾಥಮಿಕ ಸದಸ್ಯತ್ವ ಹಾಗೂ ರಾಜ್ಯಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಅಂಗವಾಗಿ ಜೆಡಿಎಸ್- ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಇದನ್ನು ವಿರೋಧಿಸಿ ಜೆಡಿಎಸ್ ನಾಯಕರು ಒಬ್ಬೊಬ್ಬರಾಗಿಯೇ ಪಕ್ಷ ತೊರೆಯುತ್ತಿದ್ದಾರೆ. ಇದೀಗ, ಪಕ್ಷದ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ತುಮಕೂರಿನಲ್ಲಿ ಜೆಡಿಎಸ್ನ ಮತ್ತೊಂದು ವಿಕೆಟ್ ಪತನವಾಗಿದೆ.
ತುಮಕೂರು ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಪ್ರಬಲ ಮುಖಂಡ ಹಾಗೂ ಮಾಜಿ ಶಾಸಕ ಶಫಿ ಅಹಮದ್ ಬುಧವಾರ ಜೆಡಿಎಸ್ ಪ್ರಾಥಮಿಕ ಸದಸ್ಯತ್ವ ಹಾಗೂ ರಾಜ್ಯಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿಯೊಂದಿಗಿನ ಪಕ್ಷದ ಮೈತ್ರಿಯನ್ನು ವಿರೋಧಿಸಿ ಬುಧವಾರ ಶಫಿ ಅವರು ತಮ್ಮ ರಾಜೀನಾಮೆ ಪತ್ರವನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರಿಗೆ ವಾಟ್ಸಾಪ್ ಮೂಲಕ ರವಾನಿಸಿದ್ದಾರೆ.
ಜೆಡಿಎಸ್ ಪಕ್ಷಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿರುವುದಾಗಿ ಅಹ್ಮದ್ ತಮ್ಮ ಎರಡು ಸಾಲಿನ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಫಿ ಅಹಮದ್ ಕಾಂಗ್ರೆಸ್ಗೆ ಗುಡ್ ಬೈ ಹೇಳಿ ಜೆಡಿಎಸ್ ಸೇರಿದ್ದರು. ಇದೀಗ ಜೆಡಿಎಸ್ ತೊರೆದು ವಾಪಸ್ ಕಾಂಗ್ರೆಸ್ನತ್ತ ಮುಖ ಮಾಡುವ ಸಾಧ್ಯತೆ ಇದೆ. ಆದರೆ, ಕಾಂಗ್ರೆಸ್ ಸೇರುವ ಬಗ್ಗೆ ಅವರು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ಬಿಜೆಪಿ ಜೊತೆಗಿನ ಮೈತ್ರಿ ತಂದಿಟ್ಟ ಸಂಕಷ್ಟ: ಮತ್ತಷ್ಟು ಮುಸ್ಲಿಂ ನಾಯಕರು ಜೆಡಿಎಸ್ ತೊರೆಯಲು ನಿರ್ಧಾರ?
ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಘೋಷಣೆಯಾದ ಬಳಿಕ ಅಸಮಾಧಾನಗೊಂಡಿರುವ ಜೆಡಿಎಸ್ನ ಅಲ್ಪಸಂಖ್ಯಾತ ನಾಯಕರು ಮೊನ್ನೆಯಷ್ಟೇ ಸಭೆ ಮಾಡಿದ್ದು, ಸಾಮೂಹಿಕವಾಗಿ ಜೆಡಿಎಸ್ ತೊರೆಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮೈತ್ರಿ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅವರೂ ಕೂಡ ಜೆಡಿಎಸ್‌ಗೆ ಗುಡ್‌ಬೈ ಹೇಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಮೂಲಗಳು ತಿಳಿಸಿವೆ.
ಮೈತ್ರಿ ಘೋಷಣೆಗೂ ಮುನ್ನ ಪಕ್ಷದ ರಾಜ್ಯಾಧ್ಯಕ್ಷ ಇಬ್ರಾಹಿಂ ಅವರಿಲ್ಲದೆಯೇ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ ದೇವೇಗೌಡರ ಕುಟುಂಬದ ನಡೆ ಬಗ್ಗೆ ಅಲ್ಪಸಂಖ್ಯಾತ ಸಮುದಾಯದ ಕಾರ್ಯಕರ್ತರನ್ನು ಕೆರಳಿಸಿದೆ.
ಇದನ್ನೂ ಓದಿ: ಬಿಜೆಪಿಯೊಂದಿಗೆ ಮೈತ್ರಿಯಿಂದ ಸಂಕಷ್ಟ; ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸೈಯದ್ ಶಫಿವುಲ್ಲಾ ಸಾಹೇಬ್ ರಾಜೀನಾಮೆ
ಕಳೆದ ಶನಿವಾರ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸೈಯದ್ ಶಫಿವುಲ್ಲಾ ಸಾಹೇಬ್ ಅವರು ಕೇಸರಿ ಪಕ್ಷದೊಂದಿಗಿನ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಮುಂದಿನ ನಡೆ ಬಗ್ಗೆ ಅವರು ಪಕ್ಷದ ಇತರ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿದ್ದರು.
ಮೂಲಗಳ ಪ್ರಕಾರ, ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮೇಲೆ ಜೆಡಿಎಸ್ ಗಣನೀಯ ಪ್ರಭಾವ ಹೊಂದಿದೆ. ವಾಸ್ತವವಾಗಿ, ಅನೇಕ ಸಂದರ್ಭಗಳಲ್ಲಿ ಮುಸ್ಲಿಮರು ಕಾಂಗ್ರೆಸ್‌ಗಿಂತ ಜೆಡಿಎಸ್‌ಗೆ ತಮ್ಮ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಆದರೆ, ಈ ಮೈತ್ರಿ ಮುಸ್ಲಿಂ ಸಮುದಾಯಕ್ಕೆ ಆಘಾತವನ್ನುಂಟು ಮಾಡಿದೆ. ಪಕ್ಷವು ತನ್ನ ಬೆಂಬಲವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಕೆಲ ರಾಜಕೀಯ ವೀಕ್ಷಕರು ತಿಳಿಸಿದ್ದಾರೆ.