ಕೋಲಾರ ಲೋಕಸಭಾ ಕ್ಷೇತ್ರ: ಬಿಕ್ಕಟ್ಟುಗಳ ಹೊರತಾಗಿಯೂ ಭದ್ರಕೋಟೆಯನ್ನು ಹಿಡಿದಿಟ್ಟುಕೊಳ್ಳುವುದೇ ಕಾಂಗ್ರೆಸ್?

ರಾಜ್ಯ ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ಕೋಲಾರ ಲೋಕಸಭಾ ಕ್ಷೇತ್ರ ಸಾರ್ವತ್ರಿಕ ಚುನಾವಣೆಗೆ ಕಾದಿದೆ. ಕಾಂಗ್ರೆಸ್‌ನ ಪ್ರಬಲ ಭದ್ರಕೋಟೆಯಾಗಿರುವ ಕೋಲಾರ (ಎಸ್‌ಸಿ ಮೀಸಲು) ಕ್ಷೇತ್ರವು ತನ್ನ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಈ ಬಾರಿ ಭಾರೀ ಸುದ್ದಿಯಾಯಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲಾರ: ರಾಜ್ಯ ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ಕೋಲಾರ ಲೋಕಸಭಾ ಕ್ಷೇತ್ರ ಸಾರ್ವತ್ರಿಕ ಚುನಾವಣೆಗೆ ಕಾದಿದೆ. ಕಾಂಗ್ರೆಸ್‌ನ ಪ್ರಬಲ ಭದ್ರಕೋಟೆಯಾಗಿರುವ ಕೋಲಾರ (ಎಸ್‌ಸಿ ಮೀಸಲು) ಕ್ಷೇತ್ರವು ತನ್ನ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಈ ಬಾರಿ ಭಾರೀ ಸುದ್ದಿಯಾಯಿತು.

ಈ ಕ್ಷೇತ್ರವನ್ನು ಸತತ ಏಳು ಬಾರಿ ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಪ್ರತಿನಿಧಿಸಿದ್ದರು, ಅವರು ಈಗ ರಾಜ್ಯ ಸಚಿವ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದಾರೆ. ಮಾಜಿ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಶಾಸಕರು ಅವರ ವಿರುದ್ಧ ನಿಂತ ಕಾರಣ 2019ರ ಲೋಕಸಭೆ ಚುನಾವಣೆಯಲ್ಲಿ ಸೋತರು. ಇದು ಬಿಜೆಪಿಗೆ ಮೊದಲ ಬಾರಿಗೆ ಇಲ್ಲಿ ಗೆಲುವಿನ ರುಚಿ ಹತ್ತಿಸಿತು. ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಗೆಲುವು ಕಂಡರು.

2019 ರ ಚುನಾವಣೆಯ ನಂತರವೂ, ಕಾಂಗ್ರೆಸ್ ಹೈಕಮಾಂಡ್ ಮತ್ತು ಹಿರಿಯ ರಾಜ್ಯ ನಾಯಕರು ಮುನಿಯಪ್ಪ ಮತ್ತು ರಮೇಶ್ ಕುಮಾರ್ ಪಾಳಯಗಳ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಪ್ರಯತ್ನಿಸಿದರು, ಆದರೆ ಅದರಿಂದ ಏನೂ ಸಕಾರಾತ್ಮಕ ಫಲಿತಾಂಶ ಕಾಣಲಿಲ್ಲ. ಪರಿಣಾಮ ಈ ಬಾರಿಯ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಗೊಂದಲ, ಅಸಮಾಧಾನ ಕಂಡುಬಂತು.

ಇಂದು 2024ರಲ್ಲಿ ಕೂಡ ಕೋಲಾರ ಕಾಂಗ್ರೆಸ್‌ನಲ್ಲಿ ಕಥೆ ಹಾಗೆಯೇ ಉಳಿದಿದೆ, ಮುನಿಯಪ್ಪ ತನ್ನ ಅಳಿಯ ಚಿಕ್ಕಪೆದ್ದಣ್ಣ ಅವರ ಪರ ಲಾಬಿ ಮಾಡಿದ್ದರೆ ರಮೇಶ್ ಕುಮಾರ್ ಮತ್ತು ಅವರ ಬೆಂಬಲಿಗರು ಮುನಿಯಪ್ಪ ಅವರ ಕುಟುಂಬದ ಯಾವುದೇ ಅಭ್ಯರ್ಥಿಯನ್ನು ಬಲವಾಗಿ ವಿರೋಧಿಸುವುದರೊಂದಿಗೆ ಟಿಕೆಟ್ ಅವರಿಗೆ ಸಿಗದಂತೆ ನೋಡಿಕೊಂಡರು. ಚಿಕ್ಕಪೆದ್ದಣ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ರಾಜೀನಾಮೆ ನೀಡುವುದಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸೇರಿದಂತೆ ಐವರು ಕಾಂಗ್ರೆಸ್ ಶಾಸಕರು ಬೆದರಿಕೆ ಹಾಕಿದ್ದಾರೆ. ಎಸ್ ಸಿ ಬಲ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ರಮೇಶ್ ಕುಮಾರ್ ಪಾಳೆಯದ ಇತರರು ಒತ್ತಾಯಿಸಿದರು.

ಸಾಂದರ್ಭಿಕ ಚಿತ್ರ
ಕೋಲಾರ ಲೋಕಸಭಾ ಕ್ಷೇತ್ರ: ಮುನಿಯಪ್ಪ ಪ್ರಯತ್ನ ವ್ಯರ್ಥ, ಕಾಂಗ್ರೆಸ್ ನಿಂದ ಗೌತಮ್ ಗೆ ಟಿಕೆಟ್ ಸಿಕ್ಕಿದ್ದೇಗೆ?

ಈ ಜಟಾಪಟಿಯು ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಘೋಷಣೆಯನ್ನು ವಿಳಂಬಗೊಳಿಸಲು ಕಾರಣವಾಯಿತು. ಅಂತಿಮವಾಗಿ, ಇದು ಎಸ್‌ಸಿ ಎಡ ವರ್ಗದಿಂದ ಅಭ್ಯರ್ಥಿ ಕೆವಿ ಗೌತಮ್ ಅವರನ್ನು ಆಯ್ಕೆ ಮಾಡಿತು, ಅವರು ಎರಡೂ ಪಾಳಯಗಳಿಗೆ ತಟಸ್ಥರೆಂದು ಪರಿಗಣಿಸಲ್ಪಟ್ಟಿದ್ದಾರೆ. ಬೆಂಗಳೂರು ಕೇಂದ್ರ ಕಾಂಗ್ರೆಸ್ ಅಧ್ಯಕ್ಷರಾಗಿರುವ ಗೌತಮ್ ಕೋಲಾರದ ಮತದಾರರಿಗೆ ತುಲನಾತ್ಮಕವಾಗಿ ಹೊಸಬರು. ಮುನಿಯಪ್ಪ ಮತ್ತು ರಮೇಶ್ ಕುಮಾರ್ ಇಬ್ಬರ ಆಶೀರ್ವಾದವಿದ್ದರೂ, ಕೋಲಾರದಲ್ಲಿ ಕಾಂಗ್ರೆಸ್ ಗೆ ಅನುಕೂಲಕರ ವಾತಾವರಣವಿದೆಯೇ ಎಂಬುದು ಜೂನ್ 4ರ ಫಲಿತಾಂಶದಂದು ಗೊತ್ತಾಗಲಿದೆ.

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಜಯಶಾಲಿಯಾಗಿದ್ದರೆ, ಜೆಡಿಎಸ್‌ ಮೂರರಲ್ಲಿ ಗೆಲುವು ಸಾಧಿಸಿತ್ತು. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕೋಲಾರ ಮೂಲದ ಮಲ್ಲೇಶ್ ಬಾಬು ಈ ಬಾರಿ ಸ್ಪರ್ಧಿಸುತ್ತಿದ್ದಾರೆ. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಜೆಡಿಎಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ವಿಫಲರಾಗಿದ್ದ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್‌ಎನ್‌ ನಾರಾಯಣಸ್ವಾಮಿ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋತಿದ್ದರು. ಕೋಲಾರ, ಬಂಗಾರಪೇಟೆ, ಮಾಲೂರು, ಚಿಂತಾಮಣಿಯಲ್ಲಿ ಜೆಡಿಎಸ್ ಸಾಕಷ್ಟು ಮತ ಗಳಿಸಿದೆ. ಜೆಡಿಎಸ್‌ನಲ್ಲಿ ಎಂಎಲ್‌ಸಿ ಇಂಚರ ಗೋವಿಂದರಾಜ್‌, ಸಿಎಂಆರ್‌ ಶ್ರೀನಾಥ್‌, ಶಾಸಕರಾದ ರವಿಕುಮಾರ್‌, ಸಮೃದ್ಧಿ ಮಂಜುನಾಥ್‌, ವೆಂಕಟಶಿವಾರೆಡ್ಡಿ ಅವರಂತಹ ಪ್ರಬಲ ನಾಯಕರಿದ್ದು ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ.

ಸಾಂದರ್ಭಿಕ ಚಿತ್ರ
Lok Sabha election 2024: ಕೆ.ವಿ. ಗೌತಮ್ ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

ಮಲ್ಲೇಶ್ ಬೋವಿ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ತಾಯಿ ಮಂಗಮ್ಮ ಮುನಿಸ್ವಾಮಿ ಕೋಲಾರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದರು.

ಬಿಜೆಪಿಯ ಹಾಲಿ ಸಂಸದ ಮುನಿಸ್ವಾಮಿ ಅವರು ಟಿಕೆಟ್‌ಗಾಗಿ ಕೊನೆಯ ಕ್ಷಣದವರೆಗೂ ತೀವ್ರ ಪ್ರಯತ್ನ ನಡೆಸಿದರಾದರೂ ಮೈತ್ರಿ ಅಭ್ಯರ್ಥಿಗಾಗಿ ಪ್ರಯತ್ನ ಕೈಬಿಡಬೇಕಾಯಿತು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅತ್ಯಲ್ಪ ಮತಗಳ ಅಂತರದಿಂದ ಸೋತಿದ್ದ ಮಾಜಿ ಶಾಸಕ ವೈ.ಸಂಪಂಗಿ, ಬಿಜೆಪಿಯ ಕೋಡಿಹಳ್ಳಿ ಮಂಜುನಾಥ್‌ಗೌಡ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಜೆಡಿಎಸ್‌ ಪರ ಪ್ರಚಾರ ನಡೆಸುತ್ತಿದ್ದು, ಇದು ಮಲ್ಲೇಶ್‌ ಅವರಿಗೆ ವರದಾನವಾಗಬಹುದು. ಆದರೆ, ಮೈತ್ರಿಕೂಟದ ಪಾಲುದಾರ ಬಿಜೆಪಿಯ ಸಂಪೂರ್ಣ ಬೆಂಬಲವಿಲ್ಲದಿದ್ದರೆ, ಅವರು ಜಯ ಸಾಧಿಸುವುದು ಕಷ್ಟವಾಗಿದೆ.

ಕೋಲಾರದಲ್ಲಿ ಕಾಂಗ್ರೆಸ್‌ಗೆ ಭದ್ರ ನೆಲೆ ಇದ್ದರೂ ರಮೇಶ್‌ಕುಮಾರ್‌ ಮತ್ತು ಮುನಿಯಪ್ಪ ಪಾಳಯದಲ್ಲಿನ ಭಿನ್ನಾಭಿಪ್ರಾಯಗಳು ಚುನಾವಣಾ ಫಲಿಕಾಂಶ ಮೇಲೆ ಪರಿಣಾಮ ಬೀರಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com