CM ಬದಲಾವಣೆ ಬೇಡ, ಬದಲಾದರೆ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆಯೇ ಸೂಕ್ತ: ಬಸವರಾಜ ರಾಯರೆಡ್ಡಿ

ಸಿದ್ದರಾಮಯ್ಯ ಅವರು ಈ ಅವಧಿ ಪೂರ್ಣಗೊಳ್ಳುವವರೆಗೂ ಮುಖ್ಯಮಂತ್ರಿಯಾಗಿಯೇ ಮುಂದುವರಿಯುತ್ತಾರೆ ಎಂಬ ನಂಬಿಕೆ ನನಗಿದೆ. ಮತ್ತೆ ಮತ್ತೆ ಮುಖ್ಯಮಂತ್ರಿ ಬದಲಾವಣೆ ಮಾಡುವುದು ಸರಿಯಲ್ಲ.
Basavaraj Rayareddy-Siddaramaiah
ಬಸವರಾಜ ರಾಯರೆಡ್ಡಿ-ಸಿದ್ದರಾಮಯ್ಯ
Updated on

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸುವ ಅವಶ್ಯಕತೆ ಬಂದರೆ, ಅವರ ಸ್ಥಾನಕ್ಕೆ ಬರಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತ್ರ ಅರ್ಹರು ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಶನಿವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಮೇ 30ರೊಳಗೆ ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ನಡೆಯಬಹುದು ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಈ ಅವಧಿ ಪೂರ್ಣಗೊಳ್ಳುವವರೆಗೂ ಮುಖ್ಯಮಂತ್ರಿಯಾಗಿಯೇ ಮುಂದುವರಿಯುತ್ತಾರೆ ಎಂಬ ನಂಬಿಕೆ ನನಗಿದೆ. ಮತ್ತೆ ಮತ್ತೆ ಮುಖ್ಯಮಂತ್ರಿ ಬದಲಾವಣೆ ಮಾಡುವುದು ಸರಿಯಲ್ಲ. ಸಚಿವ ಸಂಪುಟ ಪುನರ್‌ರಚನೆಯಾದರೆ ಉಳಿದ ಎರಡು ವರ್ಷಗಳಲ್ಲಿ ಜನರಿಗೆ ಪರಿಣಾಮಕಾರಿ ಆಡಳಿತ ನೀಡಬಹುದು. ನಮ್ಮ ಕೊರತೆಗಳನ್ನು ಸರಿಪಡಿಸಿಕೊಂಡು 2028ರಲ್ಲೂ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಹೇಳಿದರು.

ಮುಂದಿನ ಚುನಾವಣೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲೇ ಎದುರಿಸುತ್ತೇವೆ. ನಾಯಕತ್ವ ಬದಲಾವಣೆಯಾಗಬಾರದು. ಒಂದು ವೇಳೆ ಆಗುವುದಾದರೆ ಸಿದ್ದರಾಮಯ್ಯ ಅವರಷ್ಟೇ ಆಡಳಿತ ಅನುಭವ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗಬೇಕು” ಎಂದು ಅಭಿಪ್ರಾಯಪಟ್ಟರು.

Basavaraj Rayareddy-Siddaramaiah
ಕೇರಳ ನಾಯಕತ್ವ ಬಿಕ್ಕಟ್ಟು ಬಗೆಹರಿಸಿದ ಕಾಂಗ್ರೆಸ್ ಹೈಕಮಾಂಡ್ ಗೆ ಮುಂದಿನ ಸವಾಲು ಕರ್ನಾಟಕ!

ಸಚಿವ ಸ್ಥಾನಕ್ಕಾಗಿ ನೀವು ಬಯಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಮಾಣ ಮಾಡಿ ಹೇಳುತ್ತೇನೆ ನಾನು ಏನನ್ನೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಮಧ್ಯಪ್ರಾಚ್ಯ ಯುದ್ಧವನ್ನು ನೆಪವನ್ನಾಗಿ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಿದ್ದಾರೆ. ದೇಶದ ರೂಪಾಯಿ ಮೌಲ್ಯ ಕುಸಿದಿದೆ. ಮೋದಿ ಆಡಳಿತ ಸಂಪೂರ್ಣ ವಿಫಲವಾಗಿದೆ. ಅವರು ರಾಜೀನಾಮೆ ನೀಡಬೇಕು. ಅರ್ಥಶಾಸ್ತ್ರಜ್ಞರು ಪ್ರಧಾನಿಯಾಗಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com