ಮೈತ್ರಿ ಸರ್ಕಾರಕ್ಕೆ ಸಂಕಷ್ಟ, 14 ಶಾಸಕರೊಂದಿಗೆ ಬಿಜೆಪಿ ಸೇರ್ತಾರಾ ಜಾರಕಿಹೊಳಿ ಬ್ರದರ್ಸ್?

Published: 11 Sep 2018 08:54 AM IST | Updated: 11 Sep 2018 11:32 AM IST
ಸಾಂದರ್ಭಿಕ ಚಿತ್ರ
ಬೆಳಗಾವಿ/ ಬೆಂಗಳೂರು: ಬೆಳಗಾವಿಯ ಪಿಎಲ್ ಡಿ ಬ್ಯಾಂಕ್ ಚುನಾವಣೆ ನಂತರ ಕಾಂಗ್ರೆಸ್ ನಲ್ಲಿ ಎದ್ದಿರುವ ಸಮಸ್ಯೆ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಅಸಂತೃಪ್ತ ಜಾರಕಿಹೊಳಿ ಸೋದರರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯುರೋಪ್ ಪ್ರವಾಸದಿಂದ ಆಗಮಿಸಲು ಕಾಯುತ್ತಿದ್ದಾರೆ.

ನಮ್ಮಲ್ಲಿ ಕೆಲವು ಇನ್ನೂ ಬಗೆಹರಿಯದ ಸಮಸ್ಯೆಗಳಿದ್ದು  ಅದನ್ನು ಸಿದ್ದರಾಮಯ್ಯನವರಿಂದ ಮಾತ್ರ ಬಗೆಹರಿಸಲು ಸಾಧ್ಯ. ಸಿದ್ದರಾಮಯ್ಯನವರು ನಮ್ಮ ನಾಯಕರು, ಅವರು ಪ್ರವಾಸದಿಂದ ಬಂದ ಮೇಲೆ ನಮ್ಮ ಎಲ್ಲಾ ವಿಷಯಗಳನ್ನು ಅವರ  ಮುಂದೆ ಹೇಳಿ ಬಗೆಹರಿಸಿಕೊಳ್ಳುತ್ತೇವೆ ಎನ್ನುತ್ತಾರೆ ಸಚಿವ ರಮೇಶ್ ಜಾರಕಿಹೊಳಿ. ಈ ಮಾತನ್ನು ಅವರು ನಿನ್ನೆ ಬೆಂಗಳೂರಿನಲ್ಲಿ ಸುದ್ದಿರಾರರಿಗೆ ಹೇಳಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಮುರಿಯುವ ಪ್ರಯತ್ನ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಜಾರಕಿಹೊಳಿ ಬ್ರದರ್ಸ್ 14 ಮಂದಿ ಶಾಸಕರನ್ನು ತಮ್ಮ ಜೊತೆ ಕರೆದುಕೊಂಡು ಬಿಜೆಪಿಗೆ ಹೋಗಲಿದ್ದಾರೆ ಎಂಬ ಸುದ್ದಿ ಕಳೆದೆರಡು ದಿನಗಳಿಂದ ರಾಜಕೀಯ ವಲಯದಲ್ಲಿ ಕೇಳಿಬರುತ್ತಲೇ ಇದೆ.

ಆದರೆ ತಾವು ಕಾಂಗ್ರೆಸ್ ತೊರೆಯುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ, ನಾನು ಮತ್ತು ನನ್ನ ಸೋದರ ಸತೀಶ್ ಜಾರಕಿಹೊಳಿ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಿದ್ದಾರೆ.

ಆದರೆ ಜಾರಕಿಹೊಳಿ ಸೋದರರ ಆಪ್ತ ವಲಯದಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಮೈತ್ರಿ ಸರ್ಕಾರ ಮುರಿಯಲು ದಿನಗಣನೆ ಆರಂಭವಾಗಿದ್ದು ರಮೇಶ್ ಜಾರಕಿಹೊಳಿ ನೇತೃತ್ವದ 8 ಶಾಸಕರ ತಂಡ ನಿನ್ನೆ ಬೆಂಗಳೂರಿಗೆ ಆಗಮಿಸಿ ಅಂತಿಮ ಸುತ್ತಿನ ಸಭೆ ನಡೆಸಿದೆ. ಈ ಶಾಸಕರು ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಸತಾರಾದಲ್ಲಿ ಬಿಜೆಪಿಯ ಉನ್ನತ ಮಟ್ಟದ ನಾಯಕರನ್ನು ಭೇಟಿ ಮಾಡಿದ್ದರು. 11 ದಿನಗಳ ಗಣೇಶ ಉತ್ಸವ ಮುಗಿಯುವುದರೊಳಗೆ ಮೈತ್ರಿ ಸರ್ಕಾರ ಬಿದ್ದು ಹೋಗಲಿದೆ, ಜಾರಕಿಹೊಳಿ ಬೆಂಬಲಿಗ ಶಾಸಕರು ಇನ್ನೆರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಸೇರಿ ಮತ್ತೆ ಸಭೆ ನಡೆಸಿ ತೀರ್ಮಾನಕ್ಕೆ ಬರುವ ಸಾಧ್ಯತೆಯಿದೆ.

ಈ ಪ್ರಕ್ರಿಯೆಯ ಸೂತ್ರದಾರ ಎಂದು ಹೇಳಲಾಗುತ್ತಿರುವ ಬಿಜೆಪಿ ನಾಯಕ ಬಿ ಶ್ರೀರಾಮುಲು, ರಮೇಶ್ ಜಾರಕಿಹೊಳಿ ನನಗೆ ಪರಿಚಿತ ವ್ಯಕ್ತಿ, ಆದರೆ ಇತ್ತೀಚೆಗೆ ಭೇಟಿ ಮಾಡಿರಲಿಲ್ಲ. ಜಾರಕಿಹೊಳಿ ಸೋದರರು ಮತ್ತು ನನ್ನ ನಡುವೆ ಯಾವುದೇ ಮಾತುಕತೆಯಾಗಿಲ್ಲ. ಇವೆಲ್ಲಾ ಕೇವಲ ವದಂತಿಯಷ್ಟೇ ಎಂದು ಹೇಳಿದ್ದಾರೆ.

ಈ ಎಲ್ಲಾ ವದಂತಿಗಳನ್ನು ತಳ್ಳಿ ಹಾಕಿರುವ ಕಾಂಗ್ರೆಸ್ ನಾಯಕರೊಬ್ಬರು, ಬೆಳಗಾವಿಯ ವಿವಾದ ಬಗೆಹರಿಸಲಾಗಿದೆ. ರಮೇಶ್ ಅವರು ತಮಗೆ ಶಾಸಕರ ಬೆಂಬಲವಿದೆ ಎಂದು ಹೇಳಿ ಪಕ್ಷಕ್ಕೆ ಬೆದರಿಕೆಯೊಡ್ಡಲು ಸಾಧ್ಯವಿಲ್ಲ. ಅವರು ಪಕ್ಷ ತೊರೆದರೂ ಕೂಡ 2ರಿಂದ 3 ಶಾಸಕರಿಗಿಂತ ಹೆಚ್ಚು ಶಾಸಕರ ಬೆಂಬಲ ಅವರಿಗೆ ಸಿಗುವುದಿಲ್ಲ. ಅವರು ಪಕ್ಷ ತೊರೆಯುವುದು ಕೇವಲ ಊಹೆಯಷ್ಟೆ ಎಂದಿದ್ದಾರೆ.

ಬೆಳಗಾವಿ ವಿಚಾರದಲ್ಲಿ ಸಚಿವ ಡಿ ಕೆ ಶಿವಕುಮಾರ್ ಮಧ್ಯೆ ಪ್ರವೇಶಿಸಿರುವುದು ಜಾರಕಿಹೊಳಿ ಬ್ರದರ್ಸ್ ಗೆ ತೀವ್ರ ಇರಿಸುಮುರುಸು ತಂದಿದೆ ಎನ್ನಲಾಗುತ್ತಿದೆ.

Posted by: SUD | Source: The New Indian Express

ಈ ವಿಭಾಗದ ಇತರ ಸುದ್ದಿ