ಅಖಂಡ ಕರ್ಣಾಟಕ (ಕುವೆಂಪು ಕವನ)

ಅಖಂಡ ಕರ್ಣಾಟಕಅಲ್ತೋ ನಮ್ಮ ಕೂಗಾಟದ ರಾಜಕೀಯ ನಾಟಕ! ಹರಸುತಿಹನು ದೇವ ಗಾಂಧಿ;
ಕುವೆಂಪು
ಕುವೆಂಪು
ಅಖಂಡ ಕರ್ಣಾಟಕ
ಅಲ್ತೋ ನಮ್ಮ ಕೂಗಾಟದ ರಾಜಕೀಯ  ನಾಟಕ!
 ಹರಸುತಿಹನು ದೇವ ಗಾಂಧಿ;
ಮಂತ್ರಿಸಿಹುದು ಋಷಿಯ ನಾಂದಿ;
ತನಗೆ ತಾನೆ ಋತಸ್ಯಂದಿ
   ಅವಂಧ್ಯೆ ಕವಿಯ ಕಲ್ಪನೆ!
ಒರ್ವನಾದೊಡೋರ್ವನಲ್ತು 
ಶಕ್ತಿ ಸರ್ವನಲ್ಪನೆ?
ಹಿಂದದೊಂದು ಹಿರಿಯ ಕನಸು
ಇಂದು ಕೋಟಿ ಕೋಟಿ ಮನಸು
ಕೂಡಿ ಮೂಡಿ ನಿಂದ ನನಸು
ತಡೆವುದೇನೋ ನಿನ್ನ ಕಿನಿಸು
ಒಣರುವಲ್ಪ ಜಲ್ಪನೆ?
ಭುವನ ವಂದ್ಯೆ , ಕೇಳ್ , ಅವಂಧ್ಯೆ
ಕವಿಯ ವಿಂಧ್ಯ ಕಲ್ಪನೆ!
ಅಖಂಡ ಕರ್ಣಾಟಕ :
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!
ಅಖಂಡ ಕರ್ಣಾಟಕ:
ಅಲ್ತೋ  ನಮ್ಮ ನಾಲ್ಕು ದಿನದ  ರಾಜಕೀಯ ನಾಟಕ!
ನೃಪತುಂಗನೆ ಚಕ್ರ ವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ !
ರನ್ನ ಜನ್ನ ನಾಗವರ್ಮ
   ರಾಘವಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ :
ಸರಸ್ವತಿಯೆ ರಚಿಸಿದೊಂದು
   ನಿತ್ಯ ಸಚಿವ ಮಂಡಲ
  ತನಗೆ ರುಚಿರ ಕುಂಡಲ !
ಅಖಂಡ ಕರ್ಣಾಟಕ :
ಅಲ್ತೊ ನಮ್ಮ ಕೀರ್ತಿಶನಿಯ ರಾಜಕೀಯ ನಾಟಕ !
ಬರಿಯ ಹೊಟ್ಟೆ ಬಟ್ಟೆಗಲ್ತೊ ;
ಪಕ್ಷ ಜಾತಿ ಕಲಹಕಲ್ತೊ ;
ಹಮ್ಮು ಬಿಮ್ಮು ಸೊಮ್ಮಿಗಲ್ತೊ ;
ಬಣ್ಣ ಚಿಟ್ಟೆ ಬಾಳಿಗಲ್ತೊ ;
ಜೋಳವಾಳಿ ಕೂಳಿಗಲ್ತೊ ;
ದರ್ಪ ಸರ್ಪ ಕಾರ್ಕೋಟಕ 
ಸ್ವಾರ್ಥ ಫಣಾ ಕ್ರೀಡೆಗಲ್ತೊ
ರಾಜಕೀಯ ಪೇಟಕ
ಅಖಂಡ ಕರ್ಣಾಟಕ!
ಅಖಂಡ ಕರ್ಣಾಟಕ :
ಸರಸ್ವತಿಯೆ ರಚಸಿದೊಂದರಾಜಕೀಯ ತ್ರೋಟಕ !
ಮೆರೆಯಲಾತ್ಮ ಸಂಸ್ಕೃತಿ ;
ಬೆಳಗೆ ಜೀವ ದೀಧಿತಿ ;
ಪರಮಾತ್ಮನ ಚರಣ ದೀಪ್ತಿ
ಶರಣ ಹೃದಯಗಳಲಿ ಹೊತ್ತಿ
ಉಸಿರುಸಿರಿನ ಹಣತೆ ಬತ್ತಿ
ಉರಿಯಲೆಂದು ತಣ್ಣಗೆ ;
ಬಾಳ ಸೊಡರ್ ಗುಡಿಯ ನೆತ್ತಿ
ತನ್ನ ಮುಡಿಯ ಬಾನಿಗೆತ್ತಿ
ಸೊಗಸಲೆಂದು ರಸಸ್ಪೂರ್ತಿ
 ಭಗವಂತನ ಕಣ್ಣಿಗೆ ;
ಹಾಡುತಿಹೆನು ಕಂಡ ನಾನು
ದಿಟ್ಟಿಗೇಡೊ ? ಹುಟ್ಟು ಕುರುಡೋ ?
ಬುದ್ಧಿ ಬರಡೋ ಬೇರೆ ಹುರುಡೊ?
ಮೆಳ್ಳಗಣ್ಣ, ಕಾಣೆ ನೀನು !
ಹೇಳು ! ತಪ್ಪು ನನ್ನದೇನು ?
ಕರ್ಣಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ ! ಶಕ್ತಿ ಕಣಾ !
ತಾಯಿ ಕಣಾ ! ದೇವಿ ಕಣಾ !
ಬೆಂಕಿ ಕಣಾ ! ಸಿಡಿಲು ಕಣಾ !
ಕಾವ ಕೊಲುವ ಒಲವ ಬಲವ
ಪಡೆದ ಚಲವ ಚಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ !
ವಿರೋಧಿಗಾಸ್ಫೋಟಕ,
ಕಂಡ ಕವಿಗಖಂಡ ದೇವಿ ಕಣಾ ಕರ್ಣಾಟಕ!
ಸರಸ್ವತಿಯೆ ರಚಿಸಿದೊಂದರಾಜಕೀಯ ತ್ರೋಟಕ !
ವಿರೋಧಿಗಾಸ್ಫೋಟಕ, 
ಅಖಂಡ ಕರ್ಣಾಟಕ :
ಅಲ್ತೊ ನಾವು ನರ್ತಿಪೊಂದು ರಾಜಕೀಯ ನಾಟಕ
ಅಖಂಡ ಕರ್ಣಾಟಕ !
ಅಖಡಂ ಕರ್ಣಾಟಕ !
ಜಯ್ ಜಯ್ ಜಯ್ ಅಖಂಡ ಕರ್ಣಾಟಕ !
- ಕುವೆಂಪು 
02-05-1949
-(ಇಕ್ಷುಗಂಗೋತ್ರಿ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com