ಹೈ ಹೀಲ್ಸ್ ಹೈಡ್ರಾಮಾ: ಓ ಹೆಣ್ಣೇ, ನಿನಗೆ ನೀನೇ ಏಕೆ ಇಷ್ಟೊಂದು ಶಿಕ್ಷೆ ಕೊಟ್ಟುಕೊಳ್ಳುತ್ತೀ?

ಅಭದ್ರ ನಡಿಗೆ, ಬೀಳುವ ಭಯ, ಕಾಲುಗಳು ದಣಿವ ಆತಂಕ, ಕಾಡುವ ನೋವು….. ಎಲ್ಲವನ್ನೂ ಎದೆಯಲ್ಲಿ ಹುದುಗಿಸಿ ಪೋಸ್ ಕೊಡುವ ಚಾಕಚಕ್ಯತೆಯನ್ನು ಕರಗತ ಮಾಡಿಕೊಂಡವಳು ಹೆಣ್ಣು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
<strong>ಕವಿತಾ ಹೆಗಡೆ ಅಭಯಂ </strong>
ಕವಿತಾ ಹೆಗಡೆ ಅಭಯಂ 

ಉತ್ತರಕನ್ನಡ ಮೂಲದವರಾದ ಕವಿತಾ ಹೆಗಡೆ, ಈಗ ಹುಬ್ಬಳ್ಳಿಯ ಮಂಜುನಾಥ ನಗರದ ಕೆ ಎಲ್ ಇ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿಯಾಗಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಥೆ, ಕವನ, ಪ್ರಬಂಧ, ವ್ಯಕ್ತಿತ್ವ ವಿಕಸನ ಲೇಖನಗಳು, ಅನುವಾದ, ಅಂಕಣ ಬರಹ, ವಿಮರ್ಶೆಗಳಲ್ಲಿ ಆಸಕ್ತಿ. ನಾಡಿನ ಖ್ಯಾತ ಪತ್ರಿಕೆಗಳು, ಮ್ಯಾಗಝಿನ್ಗಳು, ಬ್ಲಾಗುಗಳಲ್ಲಿ ನಿಯಮಿತವಾಗಿ ಬರಹಗಳು ಪ್ರಕಟವಾಗುತ್ತಿವೆ. 'ದ ನೆಸ್ಟೆಡ್ ಲವ್' ಇವರ ಮೊದಲ ಆಂಗ್ಲ ಕಥಾ ಸಂಕಲನ.

"ನಾನು ಬೆಳೆಯುತ್ತ ಬಂದ ಹಾಗೆ ಎತ್ತರದ ಚಪ್ಪಲಿ ಧರಿಸಿದ ಹುಡುಗಿಯರ ಕಾಲುಗಳು ಸೆಳೆದ ಹಾಗೆ ಕಣ್ಣುಗಳೂ ಸೆಳೆದಿರಲಿಲ್ಲ. ಎತ್ತರೆತ್ತರದ ಬಣ್ಣ ಬಣ್ಣದ ಚಪ್ಪಲಿ, ಶೂಸ್ ಧರಿಸಿ ವೈಯ್ಯಾರವಾಗಿ ಟುಕು ಟುಕು ಎಂದು ನಡೆಯುವ ಹುಡುಗಿಯರು ನನ್ನ ಎದೆಗೇ ಮೋಹದ ಮೊಳೆಯನ್ನು ಹೊಡೆಯುತ್ತಿದ್ದರು. ಆ ಮೊಳೆಗಳನ್ನು ಕೀಳಲು ಎಂದೂ ನನಗೆ ಸಾಧ್ಯವಾಗಲಿಲ್ಲ.

ತೀರಾ ಬಡತನದಲ್ಲಿ ಬೆಳೆದ ನನಗೆ ದುಬಾರಿ ಹೈ ಹೀಲ್ಸ್ ಗಳು ಕೇವಲ ಸುಂದರ ಸ್ವಪ್ನಗಳಾಗಿದ್ದವು! ಕನಸು ಕಾಣೋದನ್ನು ಬಿಡಲಿಕ್ಕುಂಟೆ? ಇನ್ನಷ್ಟು ಬೆಳೆದಂತೆಲ್ಲ ಎತ್ತರದ ಚಪ್ಪಲಿಗಳು ನನ್ನ ಯುವ ಮನಸ್ಸನ್ನು ಪೂರ್ತಿಯಾಗಿ ಆವರಿಸಿಬಿಟ್ಟಿದ್ದವು. ನಾನೂ ಫಿಲಂ ಹೀರೋಯಿನ್ ಆದಂತೆ, ಟಾಪ್ ಮಾಡೆಲ್ ಆದಂತೆ, ನೂರಾರು ಫೋಟೋ ಶೂಟ್ ಮಾಡಿದ ಹಾಗೆ... ಬರೀ ಇವೇ ಕನಸುಗಳು. ಆ ಕನಸಲ್ಲಿ ಕೂಡ ಮುಖದ ಬದಲು ಬರೀ ಹೈ ಹೀಲ್ಸ್ ಗಳೇ!

ಮೊದಲ ಸಂಭಾವನೆಯಲ್ಲಿ ಖರೀದಿ

ಮುಂದೆ ಹೈಸ್ಕೂಲ್ ಮುಗಿದು ಕಾಲೇಜ್ ಸೇರಿದಾಗ ಗೆಳತಿಯೊಬ್ಬಳ ಸಹಾಯದಿಂದ ಧಾರಾವಾಹಿಯಲ್ಲಿ ಚಿಕ್ಕ ಪುಟ್ಟ ಪಾತ್ರಗಳು ದೊರೆಯುತ್ತ ಮುಂದೆ ನನ್ನ ಪ್ರತಿಭೆಗೆ ತಕ್ಕಂತೆ ನಿಧಾನವಾಗಿ ಒಳ್ಳೆಯ ಪಾತ್ರಗಳೇ ಸಿಕ್ಕವು. ಕಡೆಗೊಮ್ಮೆ ಚಲನಚಿತ್ರವೊಂದರಲ್ಲಿ ಫ್ಯಾಷನ್ ಪ್ರಿಯ ಸಹನಾಯಕಿಯ ಪಾತ್ರವನ್ನೂ ಮಾಡಿದೆ. ಮೊದಲ ಸಂಭಾವನೆಯಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಸುರಿದು ಮನಸ್ಸು ತೃಪ್ತಿಯಾಗುವಷ್ಟು ಹೈ ಹೀಲ್ಸ್ ಖರೀದಿಸಿ ಊರು ತುಂಬ ಮೆರೆದಿದ್ದೆ! ಸುಮಾರು ಐದು ವರ್ಷಗಳ ಈ ಅಂತರದಲ್ಲಿ ಹಲವು ಚಿತ್ರಗಳು ನನ್ನದಾಗಿವೆ. ಎಷ್ಟೋ ನೂರಾರು ವಿಧದ - ಬಣ್ಣಗಳ ಹೈ ಹೀಲ್ಸ್ ತೊಟ್ಟಿರಬೇಕು ನಾನು. ಅಂತೂ ಕನಸು ನನಸಾಗಿತ್ತು!

ಮೂರು ಕಾಸೂ ಇಲ್ಲದೇ ಹೈ ಹೀಲ್ಸ್ ಕೊಳ್ಳಲು ಪರದಾಡಿದ ದಿನಗಳನ್ನೂ ವರ್ಷವಿಡೀ ದಿನವೂ ಹೊಸದಾಗಿ ಧರಿಸಬಹುದಾದಷ್ಟು ಚಪ್ಪಲಿಗಳು ತುಂಬಿರುವ ಈ ದಿನಗಳನ್ನೂ ನೋಡಿದರೆ ಇದು ನನ್ನದೇ ಜೀವನವಾ ಅನಿಸಿಬಿಡುತ್ತದೆ. ಉಡುಪಿಗೆ ತಕ್ಕಂತೆ ಹೈ ಹೀಲ್ಸ್ ಧರಿಸುವ ಮಜವೇ ಬೇರೆ. ಮಿನಿ ಮೈಕ್ರೋ ಡ್ರೆಸ್ಗಳು, ಗೌನ್, ಸ್ಕರ್ಟ್, ಜೀನ್ಸ್, ಸೀರೆ ಹೀಗೆ ಯಾವ ಡ್ರೆಸ್ ಹಾಕಿಕೊಂಡ್ರೂ ಮ್ಯಾಚಿಂಗ್ ಹೀಲ್ಸ್ ಧರಿಸದೆ ಇದ್ದ ದಿನವೇ ಇಲ್ಲ. ಅದೇ ನನ್ನ ಪ್ರಪಂಚವಾಗಿತ್ತು!

ಫ್ಯಾಷನ್ ನಿಂದ ಉಳುಕಿದ ಕಾಲು

ಕನಸಿನಲ್ಲಿ ಕಾಡುವ ವೆಡ್ಜ್ಸ್, ಪೆನ್ಸಿಲ್ ಹೀಲ್ಸ್ ನಂತಹ ಚಪ್ಪಲಿಗಳು ಕಾಲನ್ನೇರಿದ ಕೆಲವು ದಿನಗಳಲ್ಲೇ ಅವು ಕಚ್ಚುವ, ಚುಚ್ಚುವ, ಗಾಯ ಮಾಡುವ, ನಡೆಯಲಾಗದಂತೆ ತೀವ್ರ ನೋವುಂಟುಮಾಡುವ, ಪಾದಗಳನ್ನು ಮುದ್ದೆಯಾಗಿಸುವ ಪರಿಗೆ ಹೌಹಾರಿಲ್ಲ ಅಂತಲ್ಲ. ಇನ್ನು ಒಂದು ಹೆಜ್ಜೆ ಕಿತ್ತಿಡಲೂ ಸಾಧ್ಯವಿಲ್ಲದೆ ಕಣ್ಣೀರು ಬರುತ್ತಿದ್ದರೂ ನನ್ನ ಹೀಲ್ಸ್ ಪ್ರೀತಿಯ ಮರೆಯಲಾಗದೆ ಕೃತಕ ನಗು ಲೇಪಿಸಿಕೊಂಡು ನಟಿಸಿದ್ದು, ನರ್ತಿಸಿದ್ದು ತುಂಬ ಸಲ ಇದೆ.

ಮತ್ತೆ ಹೈ ಹೀಲ್ಸ್ ಧರಿಸಿ ಬಿಂಕದಿಂದ ನಡೆಯುವಾಗ ಕಾಲು ಉಳುಕಿದ್ದು, ಮುಗ್ಗರಿಸಿ ಸಾವರಿಸಿಕೊಂಡಿದ್ದು, ಢಬ್ಬನೆ ಉರುಳಿ ಬಿದ್ದದ್ದು ಇಲ್ಲವೆ ಅಂತ ಕೇಳಬೇಡಿ, ಅದೂ ಇದೆ. ಇಂತಹ ಹತ್ತಾರು ಅನುಭವಗಳಾದ ಮೇಲೆ ನನ್ನ ಹೈ ಹೀಲ್ಸ್ ಫ್ಯಾಷನ್ ಈಗ ಪ್ಯಾಶನ್ ಆಗಿ ಉಳಿದಿಲ್ಲ. ಹೋದ ವರ್ಷ ಹೊಸ ವರ್ಷದ ಪಾರ್ಟಿಯಲ್ಲಿ ನರ್ತಿಸುವಾಗ ಉಳುಕಿದ ಕಾಲು ಇವತ್ತು ಯಾವ ಟ್ರೀಟ್ಮೆಂಟಿಗೂ ಬಗ್ಗುತ್ತಿಲ್ಲ. ಆಗಾಗ ನೋವು ಕೆಣಕುತ್ತಲೇ ಇರುತ್ತದೆ. ಆದರೂ ಮತ್ತೂ ನಾನದನ್ನು ಧರಿಸುವುದನ್ನು ಬಿಟ್ಟಿಲ್ಲ….ಯಾಕೆಂದರೆ ನನಗೆ ಬುದ್ಧಿಯಿಲ್ಲ…."

ಸ್ಟೈಲಿಶ್, ಟ್ರೆಂಡಿ ಎನ್ನುವ ಭ್ರಮೆ

ನಿಟ್ಟುಸಿರು ಬಿಟ್ಟು ಎದ್ದು ನಿಂತ ಖ್ಯಾತ ನಟಿ ಚಿತ್ರಲೇಖಳ ಕಣ್ಣಂಚಿನಲ್ಲಿ ನೀರ ತೆಳುಗೆರೆ.  ತೇಲುವ ವಿಷಾದ ಭಾವ. ಕಣ್ಣ ಕಾಡಿಗೆಯ ಲಕ್ಷ್ಮಣರೇಖೆಯನ್ನು ಕಣ್ಣಹನಿಗಳು ಮೀರುವ ಮೊದಲೇ ಅವಳು ಮುಖ ತಿರುಗಿಸಿ ನಡೆದುಹೋಗುವಾಗ ಎತ್ತರ ಹಿಮ್ಮಡಿಯ ಚಪ್ಪಲಿಗಳು ನಿಧಾನವಾಗಿ ಸಾಗುತ್ತಿದ್ದವು. ಅವಳು ಹೋಗುವ ಹಾದಿಯನ್ನೇ ನೋಡುತ್ತ ಕುಳಿತವಳಿಗೆ ಮಾತ್ರ ತಾತ್ಕಾಲಿಕ ಮೂಕತನ ಪ್ರಾಪ್ತಿಯಾದಂತಿತ್ತು!

ಅದರಲ್ಲೂ ಹೈ ಹೀಲ್ಡ್ ಚಪ್ಪಲಿ ಧರಿಸಿ ನಡೆಯುವ ಮಹಿಳೆ ತಾನು ಅತ್ಯಂತ ಸ್ಟೈಲಿಶ್, ಸ್ಮಾರ್ಟ್ ಮತ್ತು ಟ್ರೆಂಡಿ ಆಗಿ ಕಾಣುತ್ತೇನೆಂದು ಭ್ರಮಿಸಿದವಳು. ಈ ಗುಂಗಿನಲ್ಲಿ ಪ್ರತಿ ನಿತ್ಯವೂ ಎತ್ತರದ ಚಪ್ಪಲಿ ಧರಿಸಿ ಸಂಜೆ ತಾಳಲಾರದ ಕಾಲು ನೋವಿದ್ದರೂ ಮರುದಿನ ಬೆಳಿಗ್ಗೆ ಮತ್ತದೇ ಚಪ್ಪಲಿಗಳಿಗೆ ಕಾಲೊಪ್ಪಿಸುವ ವ್ರತ! ಅಭದ್ರ ನಡಿಗೆ, ಬೀಳುವ ಭಯ, ಕಾಲುಗಳು ದಣಿವ ಆತಂಕ, ಕಾಡುವ ನೋವು….. ಎಲ್ಲವನ್ನೂ ಎದೆಯಲ್ಲಿ ಹುದುಗಿಸಿ ಪೋಸ್ ಕೊಡುವ ಚಾಕಚಕ್ಯತೆಯನ್ನು ಕರಗತ ಮಾಡಿಕೊಂಡವಳು. 

ಯಾರನ್ನೋ ಮೆಚ್ಚಿಸಲು...

"ಸ್ಟೈಲಿಶ್ ಉಡುಗೆ ಧರಿಸಿ ಮಾದಕವಾಗಿ ಕಾಣುವಾಗ ಕಾಲುಗಳು ಕೂಡ ಚೆನ್ನಾಗಿ ಕಾಣಬೇಡವೇನು? ಅಂದದ ಉಡುಗೆಗೆ ಒಪ್ಪುವ ಮ್ಯಾಚಿಂಗ್ ಹೀಲ್ಸ್ ನೋಡುಗರ ಮನಸ್ಸನ್ನು ಥಟ್ಟಂತ ಅಟ್ರಾಕ್ಟ್ ಮಾಡ್ತಾವೆ ಗೊತ್ತಾ?" ಅನ್ನುವ ಹುಡುಗಿಯರಿಗೆ ಎಂದೂ ಬರವಿಲ್ಲ. ಅದರಲ್ಲೂ ಕೆಲವೊಂದು ವೃತ್ತಿಗಳು ಇಂಥ ಕಾಲುಗಳನ್ನೇ ಬೇಡುವಾಗ ಉದ್ಯೋಗ ಬೇಕು - ಬೇಡ ಅನ್ನುವ ಬೆಡಗಿಯ ಮನಸ್ಸಿನ ತೊಳಲಾಟ, ಅನಿವಾರ್ಯತೆ ಅಥವಾ ಸಹಮತ ಅವಳಿಗೇ ಗೊತ್ತು.

ಇಡೀ ಜಗತ್ತಿನುದ್ದಕ್ಕೂ ಸರ್ವೇ ಮಾಡಿದರೂ ಹೆಣ್ಣಿನ ಕಾಲುಗಳು, ನಡಿಗೆ ಎರಡೂ ಹೈ ಹೀಲ್ಸ್ ನಲ್ಲೇ ಚೆನ್ನಾಗಿ ಗ್ಲಾಮರಸ್ ಆಗಿ ಕಾಣುತ್ತವೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಧರಿಸಿದ ಉಡುಪಿನ ಸೌಂದರ್ಯವನ್ನು ಎತ್ತಿ ಹಿಡಿಯಬೇಕೆಂದರೆ ಅದು ಹೈ ಹೀಲ್ಸ್ನಿಂದ ಮಾತ್ರ ಎಂಬ ಭಾವನೆ ಭದ್ರವಾಗಿ ಬೇರೂರಿದೆ. ಹೀಲ್ಸ್ಗಳ ಕಾರಣಕ್ಕೆ ನೌಕರಿ ದೊರೆತವರ ಸಂಖ್ಯೆ ಕಳೆದುಕೊಂಡ ಹೆಣ್ಣುಗಳಿಗಿಂತ ತುಸು ಹೆಚ್ಚು ಅಂತಲೇ ಅನ್ನಬಹುದು. ಹೀಗಿರುವಾಗ ಏನಕೇನ ಪ್ರಕಾರೇಣ ಮಿಂಚಲೇಬೇಕೆಂಬ ಆಸೆಗೆ ಇಂಬು ಕೊಡುವ ಹೀಲ್ಸ್ಗಳ ಸಹವಾಸವನ್ನು ಬಹಳಷ್ಟು ಹೆಂಗಳೆಯರು ಸುಲಭವಾಗಿ ಬಿಟ್ಟಾರೆಯೇ?

ಯಾರನ್ನೋ ಮೆಚ್ಚಿಸಬೇಕೆಂದೋ, ಯಾರಿಗೋ ತಾನು ಚೆನ್ನಾಗಿ ಕಾಣಬೇಕೆಂದೋ ಒಲ್ಲದ, ಒಪ್ಪದ ಉಡುಗೆ - ತೊಡುಗೆ, ಎತ್ತರದ ಚಪ್ಪಲಿ ಎಂದು ತನ್ನನ್ನೇ ತಾನು ಹಿಂಸಿಸಿಕೊಳ್ಳುವ ಮಹಿಳೆಯ ನೋವು ಅಂತ್ಯವಿಲ್ಲದ್ದು. ತನ್ನನ್ನೇ ತಾನು ದಂಡಿಸಿಕೊಳ್ಳುವ ಪ್ರವೃತ್ತಿಯನ್ನು ಸುಧಾರಿಸಲು, ಆ ಮೂಲಕ ತಾವೇ ತಂದುಕೊಂಡ ಪ್ರಾರಬ್ಧವನ್ನು ಬೇರೆಯವರು ಸುಧಾರಿಸಲಿ ಎಂದು ನಿರೀಕ್ಷೆ ಮಾಡುವುದು ತಪ್ಪಾದೀತು. ತಮ್ಮ ಬದುಕನ್ನು ತಾವೇ ನಿಯಂತ್ರಿಸುವ ಸಾಮರ್ಥ್ಯ ಇರುವ ಹೆಣ್ಣು ಮನಸ್ಸು ಒಪ್ಪದ ಯಾವ ಕೆಲಸವನ್ನೂ ಮಾಡಳು ಎಂಬುದೂ ನಿಜ.

ಕೇಳಬೇಕು ಎಂದುಕೊಂಡಿರುವುದು ಒಂದೇ.
ಓ ಹೆಣ್ಣೇ ಯಾಕೆ ನಿನಗೆ ನೀನೇ ಇಷ್ಟೊಂದು ಶಿಕ್ಷೆ ಕೊಟ್ಟುಕೊಳ್ಳುತ್ತೀ?
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com