ಅಡುಗೆ ಮನೆಯ ಹೋಮ್ ಮಿನಿಸ್ಟರ್ ಹೇಳಿದ ಅವಲಕ್ಕಿ ಪುರಾಣ

ದಶಕಗಳ ಹಿಂದಿನ ಮಾತು. ಪಕ್ಕದ ಗೆಳತಿಗೆ ನಮ್ಮ ಮನೆಯ ಅವಲಕ್ಕಿ ಒಗ್ಗರಣೆ ಎಂದರೆ ಇಷ್ಟ. ಪ್ರತಿ ಸಲ ಬಂದಾಗಲೂ ಅಮ್ಮನ ಬಳಿ ನಿನ್ನೆಯ ಅವಲಕ್ಕಿ ಇದೆಯಾ ಎಂದು ಕೇಳುವುದು ಅವಳಿಗೆ ಪರಿಪಾಠ. ಅಮ್ಮ ಇಲ್ಲವೆಂದು ಹೇಳಿ ಹೊಸದಾಗಿ ಮಾಡಿಕೊಡುತ್ತಿದ್ದರು. ಈಗಲೂ ಗೆಳತಿ ಸಿಕ್ಕಾಗ 'ನಿನ್ನೆಯ ಅವಲಕ್ಕಿ ಇದೆ, ಬೇಕಾ?' ಎಂದು ತಮಾಷೆ ಮಾಡುತ್ತೇನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
<strong>ಲೇಖಕಿ: ಸಾವಿತ್ರಿ ಶ್ಯಾನುಭಾಗ</strong>
ಲೇಖಕಿ: ಸಾವಿತ್ರಿ ಶ್ಯಾನುಭಾಗ

ಅವಲಕ್ಕಿ ಕುರಿತು ಬರೆಯಬೇಕು ಎಂದು ತುಂಬಾ ದಿನಗಳಿಂದ ಅಂದುಕೊಂಡಿದ್ದೆ. ಆದರೆ ಅದಕ್ಕೆ ಮುಹೂರ್ತವೇ ಬಂದಿರಲಿಲ್ಲ .ಇಂದು ಬರೆಯಲೇಬೇಕು ಎಂದು ಬರೆಯಲು ಶುರು ಮಾಡಿದ್ದೇನೆ ಅವಲಕ್ಕಿ ತಿನ್ನುತ್ತಾ.
ಅಕ್ಕಿಯಿಂದ ಅವಲಕ್ಕಿ,ಅರಳು,ಅಕ್ಕಿ ರವೇ ಮಾಡುವುದು ನಮಗೆ ನಮಗೆ ತಿಳಿದೇ ಇದೆ.ಅಕ್ಕಿಯಿಂದ ಮಾಡಿದ ಪದಾರ್ಥಗಳ ರುಚಿಯೇ ಬೇರೆ ಅಲ್ಲವೇ.ಅವಲಕ್ಕಿಯಿಂದ ಕಲೆಸುವ ಅವಲಕ್ಕಿ,ಒಗ್ಗರಣೆ ಅವಲಕ್ಕಿ,ಉಂಡೆ,ಪಾಯಸ,ಅವಲಕ್ಕಿ ಕಾಯಿರಸ,ಮೊಸರವಲಕ್ಕಿ,ಮಿಕ್ಸ್ಚರ್,ಹೀಗೆ ನಾನಾ ಪದಾರ್ಥಗಳನ್ನು ತಯಾರಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವುದೇ.ಚಿಕ್ಕ ಮಕ್ಕಳಿಗಂತೂ ಈ ಪದಾರ್ಥಗಳೆಂದರೆ ತುಂಬಾ ಇಷ್ಟ. 

ಅವಲಕ್ಕಿಯ ಬಗೆಗಳು

ಅವಲಕ್ಕಿಯಲ್ಲಿ ನಾನಾ ವಿಧಗಳಿವೆ. ತೆಳು, ಮಧ್ಯಮ, ದಪ್ಪ, ಪೇಪರ್,ನೈಲಾನ್ ಅವಲಕ್ಕಿ ಹೀಗೆ ಪ್ರಕಾರಗಳು. ತೆಳು ಅವಲಕ್ಕಿ ಮನೆಯಲ್ಲಿ ಉಪ್ಪಿಟ್ಟು, ಶ್ಯಾವಿಗೆ ಒಗ್ಗರಣೆ, ಬನ್ಸ್, ಕಡಲೆ ಒಗ್ಗರಣೆ ಮಾಡಿರುವಾಗ ಅದರೊಂದಿಗೆ ಜೋಡಿಯಾಗಿ,ಕಲೆಸುತ್ತಾರೆ. ಕೊತ್ತಂಬರಿ, ಒಣಮೆಣಸು, ಪುಡಿ ಮಾಡಿ ಸಕ್ಕರೆ ಅಥವಾ ಬೆಲ್ಲ (ಸ್ವಲ್ಪ ಪ್ರಮಾಣದಲ್ಲಿ, ಉಪ್ಪಿನಷ್ಟು) ಬೆರೆಸಿ ಕಲೆಸುವರು, ಇನ್ನೂ ಕೆಲವೆಡೆ ರಸಂ, ಸಾಂಬಾರ್ ಪುಡಿ ಹಾಕಿ ಕಲೆಸಿದರೆ, ಅವಲಕ್ಕಿ ಕಲೆಸುವ ಪುಡಿಯೆಂದೇ ಕೆಲವು ಕಡೆ ಸಿಗುವುದು. ನಮ್ಮ ಮನೆಯಲ್ಲಿ ಅಮ್ಮ ಅರಿಸಿನ, ಶೇಂಗಾ, ಸಾಸಿವೆ ಒಗ್ಗರಣೆಯೊಂದಿಗೆ ಸಕ್ಕರೆ, ಉಪ್ಪು ಬೆರೆಸಿ ಕಲೆಸುವಳು. ಸ್ವಲ್ಪ ಖಾರ,ಸಿಹಿ ಮಿಶ್ರಣವಾಗಿರುವುದರಿಂದ ನಾವು ಸಣ್ಣವರಿರುವಾಗ ಬಹಳ ಇಷ್ಟ ಪಟ್ಟು ತಿನ್ನುತ್ತಿದ್ದೆವು, ಈಗ ಮಗರಾಯನಿಗೂ ತುಂಬಾ ಇಷ್ಟ.ಮೊಸರವಲಕ್ಕಿಗೂ ಈ ಅವಲಕ್ಕಿಯೇ ಬೇಕು. ಅವಲಕ್ಕಿ, ಸಕ್ಕರೆ, ಮೊಸರು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿದರೆ ತಯಾರು.ಚಿಕ್ಕಮಕ್ಕಳಿಗೆ ಹಸಿವು ಎಂದಾಗ ತಕ್ಷಣ ಇದನ್ನು ಮಾಡಿಕೊಡಬಹುದು. ಮೊಸರು ಇಷ್ಟ ಪಡುವ ಮಗರಾಯನಿಗೆ ಶಾಲೆಗೆ ಪ್ರಥಮ ಬಾರಿಗೆ ಇದನ್ನೇ ಡಬ್ಬಿಗೆ ಹಾಕಿ ಕಳಿಸಿದ್ದೆ.ಅವನು ಅದರಲ್ಲಿಯ ಮೊಸರು ತಿಂದು, ಅವಲಕ್ಕಿಯನ್ನು ಹಾಗೆ ಮನೆಗೆ ತಂದಿದ್ದ!

ಮಧ್ಯಮ,ದಪ್ಪ ಅವಲಕ್ಕಿ ಒಗ್ಗರಣೆ ಹಾಕಲು ಒಳ್ಳೆಯದು.ಕೆಲವರು ಬಟಾಟೆ ಮಾತ್ರ ಬಳಸಿ ಆಲೂ ಪೋಹಾ ಮಾಡಿದರೆ, ಈರುಳ್ಳಿ, ಟೊಮೇಟೊ, ಹಸಿ ಬಟಾಣಿ, ಶೇಂಗಾ ಬೆರೆಸಿ ಮಾಡುವರು.ಇನ್ನೂ ಕೆಲವರು ಪುಟಾಣಿ ಹುಡಿ,ತರಕಾರಿ ಬೆರೆಸಿ ಒಗ್ಗರಣೆ ಮಾಡುವರು. ಅದರೊಂದಿಗೆ ಸೇವ್, ಮಿಕ್ಸ್ಚರ್ ಇದ್ದರೆ ಒಳ್ಳೆಯ ಕಾಂಬಿನೇಶನ್.ಪೇಪರ್, ನೈಲಾನ್ ಅವಲಕ್ಕಿಯಿಂದ ಮಿಕ್ಸ್ಚರ್ ತಯಾರಿಸಬಹುದು. ದೂರದ ಕಾಲೇಜಿನಲ್ಲಿ ಓದುವ ಮಕ್ಕಳಿಗೆ ಹಾಸ್ಟೆಲಿನ ತಿಂಡಿ ರುಚಿಸದಿರುವ ದಿನಗಳಲ್ಲಿ ತಿನ್ನಲು, ಚಹಾದೊಂದಿಗೆ ತಿನ್ನಲು, ಓದುವಾಗ ನಿದ್ರೆಬಾರದಿರುವಂತೆ ಎಚ್ಚರಿಸಲು ಅಮ್ಮ ಮಾಡಿಕೊಡುವುದು ಇದೆ ಅವಲಕ್ಕಿ ಮಿಕ್ಸ್ಚರ್. ಎಣ್ಣೆಯಲ್ಲಿ ಚೆನ್ನಾಗಿ ಅವಲಕ್ಕಿ, ಶೇಂಗಾ, ಕರಿಬೇವು, ಬೆಳ್ಳುಳ್ಳಿ(ಬೇಕಿದ್ದರೆ), ಮೆಣಸು ಇವುಗಳನ್ನು ಹುರಿದು, ಮಾಡುವುದರಿಂದ ಗಾಳಿಯಾಡದ ಡಬ್ಬಿಯಲ್ಲಿಟ್ಟರೆ ತುಂಬಾ ದಿನ ಕೆಡದಂತೆ ಇಡಬಹುದು.

ನಿನ್ನೆಯ ಅವಲಕ್ಕಿ ಒಗ್ಗರಣೆ ಇದೆಯಾ?

ನಾನು 5- 6 ವರ್ಷದವಳಿದ್ದಾಗ ನಡೆದ ಘಟನೆ.ಪಕ್ಕದ ಮನೆಯ ನನ್ನ ಗೆಳತೀ ದಿನಾಲೂ ಆಡಲು ನಮ್ಮ ಮನೆಗೆ ಬರುತ್ತಿದ್ದಳು.ಒಮ್ಮೊಮ್ಮೆ ನಾನು ಆಡುತ್ತ ಅವರ ಮನೆಯಲ್ಲಿ ಕುರುಕಲು ತಿನ್ನುವುದು,ಅವಳು ನಮ್ಮ ಮನೆಯಲ್ಲಿ ಸಂಜೆಯ ಚಹಾ ಸಮಯವಾಗಿದ್ದರೆ ನಮ್ಮ ಮನೆಯಲ್ಲಿ ಸ್ವಲ್ಪ ತಿನ್ನುವುದು ನಮ್ಮ ಅಭ್ಯಾಸ.ಹಾಗೆಯೆ ಒಮ್ಮೆ ನಮ್ಮ ಮನೆಯಲ್ಲಿ ಗೆಳತೀ ಆಡುವಾಗ ಅಮ್ಮ ಚಹಾ ಮಾಡಲು ಬಂದವರು, ನಮಗಿಬ್ಬರಿಗೂ ಅವಲಕ್ಕಿ ಒಗ್ಗರಣೆ, ಮಿಕ್ಸ್ಚರ್ ನೀಡಿದರು.ಇಬ್ಬರೂ ಹರಟುತ್ತ ಚೆನ್ನಾಗಿ ತಿಂದೆವು.ಮಾರನೆಯ ದಿನ ಆಡಲು ಬಂದವಳು, ನಮ್ಮ ಅಮ್ಮನನ್ನು ಕರೆದು,'ಅತ್ತೆ,ನಿನ್ನೆಯ ಅವಲಕ್ಕಿ ಇದೆಯಾ ಎಂದು ಕೇಳಿದಳು!'. ಅವಲಕ್ಕಿಯನ್ನು ಸಂಜೆ ಚಹಾ ಸಮಯದಲ್ಲಿ ಹಂಚಿಕೊಂಡು ತಿಂದಿದ್ದೆವು,ಒಗ್ಗರಣೆ ಆಗಿ ಹೋಗಿತ್ತು.ಆದರಿಂದ ಅಮ್ಮ ಅವಳು ಕೇಳಿದಾಗ,ಇನ್ನೊಮ್ಮೆ ಮಾಡಿದಾಗ ನಿನಗೆ ಕರೆದುಕೊಡುತ್ತೇನೆ ಪುಟ್ಟಿ ಎಂದು ಹೇಳಿ ಕಳಿಸಿದರು.ಈಗಲೂ ಅವಳಿಗೆ ಕರೆ ಮಾಡಿದಾಗ,ನಿನ್ನೆಯ ಅವಲಕ್ಕಿ ಇದೆ ಬೇಕಾ ಎಂದು ಕಾಡುತ್ತೇನೆ.

ಅವಲಕ್ಕಿಯಿಂದ ಮಾಡುವ ತಿನಿಸುಗಳು

ಪುಳಿಯೋಗರೆ ಗೊಜ್ಜು,ಪುಡಿ ಹಾಕಿ (ಹುಳಿ ಅವಲಕ್ಕಿ)ಮಾಡಿದರೆ,ತೆಂಗಿನಕಾಯಿ,ಬೆಲ್ಲ ಸೇರಿಸಿ ಸಿಹಿ ಅವಲಕ್ಕಿ ,ಬಾಳೆಹಣ್ಣು,ಸಕ್ಕರೆ ಸೇರಿಸಿ ಅವಲಕ್ಕಿ ಕಲೆಸುವವರು ಕೆಲವರು.ಅವಲಕ್ಕಿ,ಮಜ್ಜಿಗೆ,ಬೆಲ್ಲ ಹಾಕಿ ಸುರ್ನಳಿ(ಸಿಹಿ ದೋಸೆ) ಮಾಡಿದರೆ,ಬೆಲ್ಲ ಸೇರಿಸದೆ ಸಪ್ಪೆ ದೋಸೆಯೂ ಮಾಡುವರು.ದೋಸೆಗೆ ಹಿಟ್ಟು ರುಬ್ಬುವಾಗ,ಅವಲಕ್ಕಿ ಹಾಕಿದರೆ ಗರಿಗರಿ ದೋಸೆಯಾಗುವುದು.ಪದಾರ್ಥ ತೆಳ್ಳಗಾದರೆ ಒಂದಿಷ್ಟು ಅವಲಕ್ಕಿ ಹಾಕಿದರೆ ಸಾಕು.ರಸಾಯನಕ್ಕೆ ಒಂದೀಡೀ ಅವಲಕ್ಕಿ ಹಾಕಿದರೆ ರುಚಿಯೂ ಜಾಸ್ತಿ.ಕೆಲವರು ಬೆಲ್ಲ ಬೆರೆಸಿ ಉಂಡೆ ಕಟ್ಟಿದರೆ,ತೆಂಗಿನಕಾಯಿ ಹಾಲು,ಬೆಲ್ಲ ಬೆರೆಸಿ ಕಾಯಿರಸದ ಅವಲಕ್ಕಿ ಮಾಡುವರು.ಅವಲಕ್ಕಿ ಪಾಯಸವನ್ನೂ ಮಾಡುವರು ಕೆಲವರು.

ಕೃಷ್ಣ ಸುಧಾಮ ಕಥೆ

ಕೃಷ್ಣನಿಗೆ ಹಾಲು,ಬೆಣ್ಣೆ ಎಂದರೆ ಇಷ್ಟ ಎನ್ನುವರು,ಹಾಗೆಯೇ ಅವಲಕ್ಕಿ ಎಂದರೆ ತುಂಬಾ ಇಷ್ಟವಂತೆ.ಬಾಲ್ಯದ ಗೆಳೆಯ ಸುಧಾಮ ಕಡು ಬಡವ.ದೊಡ್ಡವರಾದಂತೆ ಕೃಷ್ಣ ಅರಮನೆ ಸೇರಿದ,ಸುಧಾಮ ಗೃಹಸ್ಥಾಶ್ರಮ ಸೇರಿ,ಮಕ್ಕಳು ಮರಿಯಾದ ನಂತರ ಕೃಷನನ್ನು ಭೇಟಿಯಾಗಲು ಬರುವಾಗ ಅವನ ಬಳಿ ಮನೆಯಲ್ಲಿ ಕೃಷ್ಣನಿಗಾಗಿ ತರಲು ಏನೂ ಇಲ್ಲ,ಪಕ್ಕದ ಮನೆಯವರಿಂದ ಹೆಂಡತಿ ಅವಲಕ್ಕಿ ಸಾಲ ಮಾಡಿ ತಂದುಕೊಟ್ಟರೆ ಅದನ್ನು ಸಣ್ಣ ಕರವಸ್ತ್ರದಲ್ಲಿ ಕಟ್ಟಿಕೊಂಡು ಬರಲು,ಕೃಷ್ಣನ ಆತಿಥ್ಯ,ವೈಭವ ಕಂಡು ಅವಲಕ್ಕಿ ನೀಡಲು ಮುಜುಗರವಾಯಿತು.ಅದನ್ನು ಮುಚ್ಚಿಟ್ಟುಕೊಂಡು ಅವನೊಂದಿಗೆ ಮಾತುಕತೆ ನಡೆಸಿ,ಊಟ ಮುಗಿಸಿ ಇನ್ನೇನೂ ಹೊರಡುವಾಗ ಕೃಷ್ಣ ನೀನು ನನಗಾಗಿ ತಂದುದನ್ನು ನೀಡಿಲ್ಲವಲ್ಲ ಎಂದು ಕೇಳುತ್ತ,ಅವನು ಮುಚ್ಚಿಟಷ್ಟು ಬಲವಂತದಿಂದ ಅದನ್ನು ಪಡೆದು,ಅಮೃತದ ಸಿಹಿಯಂತೆ ಅದನ್ನು ಚಪ್ಪರಿಸಿ ತಿನ್ನುತ್ತಾನೆ ಕೃಷ್ಣ.ಈ ಕಾರಣಕ್ಕಾಗೇ, ಕೃಷ್ಣಾಷ್ಟಮಿಯ ದಿನ ನೈವೇದ್ಯಕ್ಕೂ,ಉಪವಾಸಕ್ಕೂ ಅವಲಕ್ಕಿಯ ಖಾದ್ಯಗಳನ್ನು ಮಾಡುವರೇನೋ!  

ಅವಲಕ್ಕಿ ಪ್ರೀತಿ

ಕೃಷ್ಣನ ಹೆಸರಿನವನೇ ಆದ ನನ್ನ ಅಪ್ಪನಿಗೆ ಅವನಂತೆಯೇ ಅವಲಕ್ಕಿ ಎಂದರೆ ಪಂಚಪ್ರಾಣ.ನಾಳೆ ಏನು ತಿಂಡಿಗೆ ಎಂದು ಅಮ್ಮ ಅಪ್ಪನ ಸಲಹೆ ಕೇಳಲು ವಾರಕ್ಕೆ 2- 3 ದಿನ ಅವಲಕ್ಕಿ ಮಾಡು ಎಂದೇ ಉತ್ತರಿಸುವರು,ಇನ್ನೊಮ್ಮೆ ಕೇಳಿದರೆ ಉಪ್ಪಿಟ್ಟು ಎಂದು ಹೇಳುವರು.ಅಮ್ಮ ತವರು ಮನೆಗೆ ಹೋಗಲು ಅಪ್ಪ 3 ಹೊತ್ತು ಕೂಡ ಅವಲಕ್ಕಿ ಕಲಿಸಿಕೊಂಡು ತಿನ್ನುವರು.ಅವಲಕ್ಕಿ ಕಲಿಸುವಾಗ ಸ್ವಲ್ಪ ಜಾಸ್ತಿಯಾಯ್ತು ಎಂದು ಎಂದುಕೊಂಡರೆ ಅಪ್ಪನಿಗೆ ಬಹಳ ಖುಷಿಯೋ ಖುಷಿ,ಚಹಾ ತಿಂಡಿ ಮುಗಿದು ಅಡುಗೆ ಮನೆ ಕಡೆಗೆ ಹೋದಾಗಲೆಲ್ಲ ಉಳಿದ ಅವಲಕ್ಕಿಯನ್ನು ಒಂದೆರಡು ಚಮಚ ಬಾಯಿಯಾಡಿಸಿ ಬರುವರು.

ಅವಲಕ್ಕಿ ನೆನಪು

ಕಾಲೇಜಿನ ದಿನಗಳಲ್ಲಿ ನಾವು ಹಾಸ್ಟೆಲು ವಾಸಿಗಳು.ನನ್ನ ಪಕ್ಕದಲ್ಲಿ ಕುಳಿತ ಗೆಳತೀ,ಸ್ವಲ್ಪ ಅವಲಕ್ಕಿ ಮತ್ತು ಸಕ್ಕರೆ ತೆಗೆದುಕೊಂಡು ಬರುತ್ತಿದ್ದಳು.ತರಗತಿಯ ನಡುವೆ ಸಣ್ಣ ವಿರಾಮದಲ್ಲಿ(ಮಧ್ಯಾಹ್ನ 12ರ ಸುಮಾರು),ಅವಳು ಡಬ್ಬಿ ತೆಗೆದು,ನನಗೂ ತಿನ್ನಲು ಕೊಡುತ್ತಿದ್ದಳು.ಮೊದಲೇ ಹಸಿವೆಯಾಗಿ ತರಗತಿ ಯಾವಾಗ ಮುಗಿದು ಮೆಸ್ಸು ಸೇರಿ ಊಟ ಮಾಡುವೆವೋ ಎಂದುಕೊಳ್ಳುವಷ್ಟರಲ್ಲಿ,ಅವಳು ಕೊಟ್ಟ 4- 5 ಚಮಚ ಅವಲಕ್ಕಿ ತಿಂದು,ಹಸಿವೆ ಇನ್ನೂ ಜಾಸ್ತಿ ಆಗುತ್ತಿತ್ತು.ಈಗಲೂ ಕಾಲೇಜಿನ ನೆನಪುಗಳಲ್ಲಿ ಈ ನೆನಪು ಮರೆಯಾಗದೆ ಉಳಿದಿದೆ.

ಅವಲಕ್ಕಿಯ ಪ್ರತಾಪ

ಮನೆಯಲ್ಲಿ ಅವಲಕ್ಕಿಯಿದ್ದರೆ ಬೆಳಗ್ಗಿನ ಉಪಹಾರಕ್ಕೆ ಏನೂ ತಯಾರಿ ನಡೆಸಿಲ್ಲ,ಬೇಳೆ ನೆನೆಸಲು ಮರೆತು ಹೋಯಿತು ಎಂದರೆ ಆ ದಿನ ದಿಢೀರಾಗಿ ಅವಲಕ್ಕಿ ಒಗ್ಗರಣೆ ಮಾಡಬಹುದು.ಕಲೆಸಲೂ ಬಹುದು.   ಇದು ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿ ಆಗಿರುವುದು ಮತ್ತು ಆರೋಗ್ಯಕ್ಕೂ ಒಳ್ಳೆಯದು.ಅವಲಕ್ಕಿಯು ಅಷ್ಟು ಬೇಗನೆ ಜೀರ್ಣವಾಗುವುದು ಇಲ್ಲ. ಇದರಿಂದಾಗಿ ದೀರ್ಘಕಾಲ ತನಕ ಹೊಟ್ಟೆ ತುಂಬಿದಂತೆ ಮಾಡುವುದು. ಅವಲಕ್ಕಿ ಸೇವಿಸಿದರೆ ಅದರಿಂದ ರಕ್ತನಾಳಗಳಲ್ಲಿ ಸಕ್ಕರೆಯು ತುಂಬಾ ನಿಧಾನವಾಗಿ ಬಿಡುಗಡೆ ಆಗುವುದು. ಇದರಿಂದಾಗಿ ಹೊಟ್ಟೆ ತುಂಬಿಲ್ಲ ಎನ್ನುವ ಭಾವನೆಯು ಕಡಿಮೆ ಆಗುವುದು.ಬೆಳಗ್ಗೆ ಉಪಾಹಾರಕ್ಕೆ ಅವಲಕ್ಕಿ ತಿಂದರೆ ಆಗ ಪದೇ ಪದೇ ಹಸಿವಾಗುವುದು ತಪ್ಪುವುದು ಮತ್ತು ದಿನವಿಡೀ ಅತಿಯಾಗಿ ತಿನ್ನುವುದನ್ನು ಇದು ತಡೆಯುವುದು.ಹೀಗೆಯೇ ಅವಲಕ್ಕಿ ತಿನ್ನುವವನು ಬಲು ಲಕ್ಕಿಯೇ ಸರಿ.ಅವಲಕ್ಕಿ ಖಾದ್ಯ ಮಾಡುವ ನಿಮ್ಮ 'ಅವಳು' ಕೂಡ ಬಲು ಲಕ್ಕಿ,ನೀವೂ ಬಲು ಲಕ್ಕಿಯೇ.ನಮ್ಮ ಮನೆಯಲ್ಲಿ ಇಂದು ಅವಲಕ್ಕಿ ಒಗ್ಗರಣೆ,ಮೆಲ್ಲೋಣ ಬನ್ನಿ ಚಹಾದೊಂದಿಗೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com