ಲಡಾಖ್ ಹೋಟೆಲ್ ಮಾಲೀಕನ ಆತಿಥ್ಯ ಕಂಡು ಹೃದಯ ತುಂಬಿ ಬಂತು: ಪ್ರವಾಸ ನೆನಪು

ರೂಮಿನ ಬಾಗಿಲಿನ 'ಡೋರ್ ಲಾಕ್' ತೆರೆಯಲಾಗಲಿಲ್ಲ. ಒಬ್ಬಾತ ಬಂದು ಪರಿಶೀಲಿಸಿದ. ಅವನಿಂದ ಸರಿಪಡಿಸಲಾಗಲಿಲ್ಲ.  'ಹಮಾರಾ ಓನರ್  ಕೋ ಬೇಜ್ತಾ ಹೂಂ' ಅಂದು ಹೊರಟು ಹೋದ. ನಮಗೆ ಮುಸಿಮುಸಿ ನಗು, ಎಲ್ಲಾದರೂ ಹೋಟೆಲ್ ನೌಕರನು ತನ್ನ 'ಒಡೆಯನನ್ನು' ಬೀಗ ರಿಪೇರಿಗೆ ಕಳುಹಿಸಲು ಸಾಧ್ಯವೇ?
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
<strong>ಲೇಖಕಿ: ಹೇಮಮಾಲಾ ಬಿ.</strong>
ಲೇಖಕಿ: ಹೇಮಮಾಲಾ ಬಿ.

ಭಾರತದ ಮುಕುಟಮಣಿಯಾದ  ಜಮ್ಮು ಕಾಶ್ಮೀರ ರಾಜ್ಯದ  ಶ್ರೀನಗರ, ಕಾರ್ಗಿಲ್ ದಾರಿಯಾಗಿ ರಸ್ತೆಮಾರ್ಗದಲ್ಲಿ ಪ್ರಯಾಣಿಸಿದ ನಮ್ಮ ತಂಡವು ಲೇಹ್ ತಲಪಿದಾಗ ಸಂಜೆ 7.30 ಗಂಟೆ ಆಗಿತ್ತು. ಇಲ್ಲಿಯ ಹವಾಮಾನಕ್ಕೆ ತಕ್ಕಂತೆ ಆಗ ಇನ್ನೂ ನಸುಬೆಳಕಿತ್ತು. ಅಲ್ಲಿರುವುದು ಕಡಿಮೆ ಅಗಲದ ರಸ್ತೆಗಳು. ಹಾಗಾಗಿ ನಮ್ಮ ಬಸ್ಸು ಹೋಟೆಲ್ ನ ಸಮೀಪಕ್ಕೆ ಹೋಗಲಾಗುವುದಿಲ್ಲ ಎಂದು ಮುಖ್ಯರಸ್ತೆಯಲ್ಲಿಯೇ ನಿಲ್ಲಿಸಿದ್ದರು. ನಮ್ಮ ಲಗೇಜುಗಳನ್ನು ಎಳೆದುಕೊಂಡು ಸಣ್ಣ ಬೀದಿಯೊಂದರ ತಿರುವಿನ ವರೆಗೆ ಹೋದಾಗ ನಮಗಾಗಿ ಕಾಯ್ದಿರಿಸಲಾಗಿದ್ದ 'ಹೋಟೆಲ್ ಏಷಿಯಾ' ಕಾಣಿಸಿತು.  

ಹೋಟೆಲ್ ಆವರಣದಿ ತೋಟ

ಮೊದಲು ಕಾಣಸಿಕ್ಕಿದುದು  ಬಗೆಬಗೆಯ ಬಣ್ಣದ 'ಪಿಟುನಿಯ' ಹೂಕುಂಡಗಳನ್ನು ಅಚ್ಚುಕಟ್ಟಾಗಿ ಜೋಡಿಸಿರುವ ತಾರಸಿ. ಅದರ ಕೆಳಭಾಗದಲ್ಲಿ ವಿಶಾಲವಾದ  ಊಟದ ಹಾಲ್ ಇದೆ ಎಂದು ಆಮೇಲೆ ಗೊತ್ತಾಯಿತು. ಎಡಕ್ಕೂ, ಬಲಕ್ಕೂ ಹಲವಾರು ರೂಮುಗಳಿದ್ದುವು. ಎದುರುಗಡೆ ಜುಳುಜುಳು ಸದ್ದು ಮಾಡುತ್ತಾ ಹರಿಯುತ್ತಿದ್ದ ಸಣ್ಣ ತೊರೆ. ನಮಗೆ ಕೊಡಲಾದ ರೂಮಿನ ಕಡೆಗೆ ಹೋಗುವ ಕಾಲುದಾರಿಯ ಅಕ್ಕಪಕ್ಕದಲ್ಲಿ ನಳನಳಿಸುತ್ತಿದ್ದ ಮೂಲಂಗಿ, ಕಾಲಿ ಫ್ಲವರ್ , ಜುಕಿನಿ ಮೊದಲಾದ ತರಕಾರಿ ಗಿಡಗಳು. ಅಹಾ... ಒಂದಿಂಚೂ ನೆಲವನ್ನು ವ್ಯರ್ಥ ಮಾಡದೆ ತರಕಾರಿ ಬೆಳೆಸಿದ್ದಾರಲ್ಲ, ಭೇಷ್ ಅಂದುಕೊಂಡೆವು. 

ಮಹಡಿಯ ಮೇಲಿರುವ ರೂಮಿಗೆ ಹೋಗಿ, ಲಗೇಜು ಇರಿಸಿ ಊಟಕ್ಕೆ ಬನ್ನಿ ಎಂಬ ಆದೇಶವಿತ್ತು. ರೂಮು ಬಹಳ ಚೊಕ್ಕವಾಗಿ, ವಿಶಾಲವಾಗಿತ್ತು. ಒಂದೇ ಸಣ್ಣ ತೊಡಕಾದುದು ಏನೆಂದರೆ, ರೂಮಿನ ಬಾಗಿಲಿನ 'ಡೋರ್‍ ಲಾಕ್' ಅನ್ನು ಒಳಗಿನಿಂದ ತೆರೆಯಲಾಗಲಿಲ್ಲ. ಕೂಡಲೇ ರಿಸೆಪ್ಷನ್ ನವರಿಗೆ ತಿಳಿಸಿದೆವು. ನಾವು ಬಾಗಿಲು ಹಾಕಿದರೆ ಹೊರಗಿನಿಂದ ಯಾರಾದರೂ ತೆರೆದು ಸಹಕರಿಸಬೇಕಾಗಿತ್ತು! ನಮ್ಮ ಸಂಗಡಿಗರು ಹೊರಗಡೆಯಿಂದ   'ಹಮ್ ತುಮ್ ಏಕ್ ಕಮರೇ ಮೆ ಬಂದ್ ಹೋ' ಅಂತ ನಗುತ್ತಾ ಹಾಡಲಾರಂಭಿಸಿದ್ದರು!  

ನೌಕರನೋ ಒಡೆಯನೋ

ಒಬ್ಬಾತ ಬಂದು ಪರಿಶೀಲಿಸಿದ. ಬಹುಶ ಅವನಿಂದ ಸರಿಪಡಿಸಲಾಗಲಿಲ್ಲ. 'ಹಮಾರಾ ಓನರ್  ಕೋ ಬೇಜ್ತಾ ಹೂಂ' ಅಂದು ಹೊರಟು ಹೋದ.  ನಮಗೆ ಮುಸಿಮುಸಿ ನಗು, ಎಲ್ಲಾದರೂ ಹೋಟೆಲ್ ನೌಕರನು ತನ್ನ 'ಒಡೆಯನನ್ನು' ಬೀಗ ರಿಪೇರಿಗೆ ಕಳುಹಿಸಲು ಸಾಧ್ಯವೇ... ಇವನೇನೋ ಬಾಯಿತಪ್ಪಿನಿಂದ 'ಓನರ್' ಅಂದಿರಬೇಕು ಅಂದುಕೊಂಡೆವು.  ಐದೇ ನಿಮಿಷದಲ್ಲಿ,  ಹಸನ್ಮುಖಿಯಾದ, ದೃಢಕಾಯದ,  ಹೋಟೆಲ್ ನ ಮಾಲೀಕರು ಟೂಲ್ ಕಿಟ್ ಸಮೇತ ಬಂದರು. ಬಾಗಿಲನ್ನು ಪರಿಶೀಲಿಸುತ್ತಾ ರಿಪೇರಿ ಕೆಲಸ ಆರಂಭಿಸಿದೆವು. 

'ಮೈ ಸೋನಂ, ಹೋಟೆಲ್ ಕಾ ಓನರ್.. ಮೈ ಇಸ್ಕಾ ರಿಪೇರ್ ಕರೂಂಗಾ..'. ಅಂದರು!.  ನಾವು ತಬ್ಬಿಬ್ಬಾಗಿ ಮುಖ ಮುಖ ನೋಡಿಕೊಂಡೆವು! ನಮಗೆ, ಸಣ್ಣ ಪುಟ್ಟ ಅಂಗಡಿಯವರು ಕೂಡ ತಮ್ಮ ಸಹಾಯಕರನ್ನು ಗದರಿಸುತ್ತಾ ಕೆಲಸ ಮಾಡಿಸುವುದನ್ನು ನೋಡಿ ಗೊತ್ತಿತ್ತು. ಆದರೆ ಸುಮಾರು 60 ರೂಮುಗಳುಳ್ಳ ಸುಸಜ್ಜಿತವಾದ ಹೋಟೆಲ್ ನ ಮಾಲಿಕರು ಯಕಶ್ಚಿತ್ ಡೋರ್ ಲಾಕ್ ಸರಿಪಡಿಸಲು ಖುದ್ದಾಗಿ ಟೂಲ್ ಕಿಟ್ ಹಿಡಿದು ಬರುವುದನ್ನು ಊಹಿಸಲೂ ಆಸಾಧ್ಯವಾಗಿತ್ತು ನಮಗೆ! ನಮ್ಮ ತಂಡದ ಇತರರು ಆಗಲೇ ಊಟಕ್ಕೆ  ಹೋಗಿಯಾಗಿತ್ತು. 

ಆಳಾಗಬಲ್ಲವನು ಅರಸಾಗಬಲ್ಲ

ಇಲ್ಲಿ ಇವರು ಇರುವಾಗ ನಾವು ಏನು ಮಾಡಲಿ ಎಂಬ ನಮ್ಮ ಮುಖಭಾವವನ್ನು ಗಮನಿದ ಅವರು ತಾವಾಗಿಯೇ 'ಆಪ್ ಡಿನ್ನರ್ ಕೋ ಜಾಯಿಯೇ. ಅಪ್ನಾ ಲಗೇಜು ಸೇಪ್ ರಹೆಗಾ.'' ಅಂದರು!. ನಾವು ಊಟ ಮುಗಿಸಿ ಬರುತ್ತಿರುವಾಗ, ಗುಂಪಿನಲ್ಲಿದ್ದ ನನ್ನನ್ನು ಗುರುತಿಸಿ 'ಅಪನಾ ಡೋರ್ ಲಾಕ್ ಠೀಖ್ ಹೋಗಯಾ' ಎನ್ನುತ್ತಾ ಕೀ ಯನ್ನು ಕೊಟ್ಟರು. 

ಆಮೇಲೆ ಸ್ವಲ್ಪ ಸಮಯದ ನಂತರ ಅವರು ಹೋಟೆಲ್ ನ ಆವರಣದಲ್ಲಿ ಬೆಳೆಸಿದ್ದ 'ಕಾಲಿ ಫ್ಲವರ್, ಮೂಲಂಗಿ ಇತ್ಯಾದಿ ತರಕಾರಿಗಳ ಮಡಿಗಳಿಗೆ ನೀರು ಹಾಯಿಸುವುದು ಕಾಣಿಸಿತು. ಎಂತಹಾ ವಿನಯಶೀಲ ನಡವಳಿಕೆ! 'ಆಳಾಗಬಲ್ಲವನು ಆಳುವನು ಅರಸಾಗಿ' ಎಂಬ ಗಾದೆ ಹೇಳಿ ಮಾಡಿಸಿದ ವ್ಯಕ್ತಿ ಇವರು ಅನಿಸಿತು. 

ಸ್ವಂತ ಕಾರಿನಲ್ಲಿ ಡ್ರಾಪ್

ಲೇಹ್ ನ 'ಹೋಟೆಲ್ ಏಷಿಯಾ'ದಲ್ಲಿ ನಾವು 4 ದಿನ ವಾಸವಿದ್ದೆವು. ಪ್ರತಿದಿನವೂ, ಬೆಳಗ್ಗೆ ಶುಭಾಶಯ ಕೋರುತ್ತಾ, ಉಪಾಹಾರದ ಸಮಯದಲ್ಲಿ ಮನೆಯ ಅತಿಥಿಯನ್ನು ಉಪಚರಿಸುವಂತೆ ಮಾತನಾಡಿಸುತ್ತಾ ಇದ್ದರು. ನಮ್ಮ ತಂಡದಲ್ಲಿದ್ದ ವಯಸ್ಸಾದ ಒಬ್ಬರಿಗೆ, ನಮ್ಮ ಬಸ್ಸು ನಿಂತಿದ್ದ ಮುಖ್ಯರಸ್ತೆಯವರೆಗೆ ಹೋಗಲು ಕಷ್ಟ ಎಂದರಿತು, ತಮ್ಮ ಕಾರಿನಲ್ಲಿ ಡ್ರಾಪ್ ಕೊಟ್ಟರು.  ಇಂತಹ ವ್ಯಕ್ತಿತ್ವವುಳ್ಳ ' ಸೋನಂ'  ಅವರನ್ನು ಅಭಿನಂದಿಸಿ, ಅವರ ಆತಿಥ್ಯವನ್ನು ಶ್ಲಾಘಿಸಿ ಮಾತನಾಡಿಸಿದೆವು.  ಅವರು ತಿಳಿಸಿದ ಪ್ರಕಾರ, ಅವರ ವಿದ್ಯಾರ್ಹತೆ  ಹೈಸ್ಕೂಲ್ ವರೆಗೆ ಮಾತ್ರ. 

ಅವರ ತಂದೆಯವರು ಕೃಷಿಕರಾಗಿದ್ದರು. ಪ್ರವಾಸೋದ್ಯಮಮೇ  ಸ್ಥಳೀಯರ ಮುಖ್ಯ ಆದಾಯದ ಮೂಲ. ಎರಡೇ ರೂಮುಗಳಿಂದ ಆರಂಭವಾದ ಹೋಟೆಲ್ ಈಗ 60 ರೂಮುಗಳನ್ನು ಹೊಂದಿದೆ, ಕೊರೊನಾದಿಂದಾಗಿ ಬಹಳ ತೊಂದರೆಯಾಗಿದೆ. ಈಗ ಚೇತರಿಸಿಕೊಳ್ಲುತ್ತಿದೆ ಅಂದರು. ‘ನಿಮ್ಮ ಹೋಟೆಲ್ ನ ಅಚ್ಚುಕಟ್ಟು, ಊಟೋಪಚಾರ, ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಸರಳ, ವಿನಯಶೀಲ ನಡವಳಿಕೆ ಬಹಳ ಇಷ್ಟವಾಯಿತು’ ಎಂದು ಅವರನ್ನು ಅಭಿನಂದಿಸಿ, ನಾಲ್ಕು ದಿನ ನಮಗೆ ಆಶ್ರಯ ಕೊಟ್ಟ' ಹೋಟೆಲ್ ಏಷಿಯಾ'ಕ್ಕೆ  ವಿದಾಯ ಹೇಳಿದೆವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com