
ಕಲೆ

ಲೇಖಕಿ ಪೂರ್ಣಿಮಾ ಹೆಗಡೆ ಮೂಲತಃ ಶಿರಸಿಯವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೃತ್ತಿಯಿಂದ ಸಾಫ್ಟ್ ವೇರ್ ಎಂಜಿನಿಯರ್. ಬರಹಗಾರರಾಗಿ ಗುರುತಿಸಿಕೊಂಡಿರುವ ಪೂರ್ಣಿಮಾ ಅವರ ಬರಹಗಳು ನಾಡಿನ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಓದು ಅವರ ನೆಚ್ಚಿನ ಹವ್ಯಾಸ.
ಒಮ್ಮೆ ಒಬ್ಬ ಪುಟ್ಟ ಬಾಲಕ ಶಾಲೆಯಲ್ಲಿ ಕೊಟ್ಟ ಚೀಟಿಯನ್ನು ತಂದು ತನ್ನ ತಾಯಿಗೆ ನೀಡಿದ. ಆ ಪತ್ರವನ್ನು ಆತನ ತಾಯಿ ಗಟ್ಟಿಯಾಗಿ ಓದಿದಳು "ನಿಮ್ಮ ಮಗ ತುಂಬಾ ಪ್ರತಿಭಾವಂತ, ಹಾಗಾಗಿ ಶಾಲೆಯಲ್ಲಿ ಕಲಿಸಲು ಸಾಧ್ಯವಿಲ್ಲ, ಆತನಿಗೆ ಮನೆಯಲ್ಲಿಯೇ ಕಲಿಸುವುದು ಉತ್ತಮ". ಆ ಬಾಲಕ ಬೇರಾರೂ ಅಲ್ಲ, ವಿದ್ಯುತ್ ಬಲ್ಬ್ ಆವಿಷ್ಕಾರ ಮಾಡಿ ಜಗತ್ತಿಗೆ ಬೆಳಕು ಕೊಟ್ಟ ವಿಜ್ಞಾನಿ ಥಾಮಸ್ ಎಡಿಸನ್.
ತಾಯಿ ಸತ್ತ ನಂತರ ಆ ಪತ್ರ ಮತ್ತೆ ಎಡಿಸನ್ ಕೈಗೆ ಸಿಗುತ್ತದೆ. ಅದನ್ನು ಆತ ಮೊದಲ ಬಾರಿ ಓದುತ್ತಾರೆ. ಆದರೆ ಅದರಲ್ಲಿ ಶಾಲೆಯವರು ಎಡಿಸನ್ ಬಗ್ಗೆ ಕೆಟ್ಟದಾಗಿ ಬರೆದಿದ್ದರು. "ನಿಮ್ಮ ಮಗ ಬುದ್ಧಿಮಾಂದ್ಯ, ಅವನಿಗೆ ಶಾಲೆಯಲ್ಲಿ ಕಲಿಸಲು ಸಾಧ್ಯವಿಲ್ಲ. ಅವನನ್ನು ಮನೆಯಲ್ಲೇ ಇಟ್ಟುಕೊಂಡು ಕಲಿಸಿ." ಎಂದು ಬರೆಯಲಾಗಿತ್ತು. ಆದರೆ ಆ ಮಹಾತಾಯಿ ಶಾಲೆಯವರು ಬರೆದಿದ್ದನ್ನು ಓದದೆ ತನ್ನ ಮನಸ್ಸಿನಲ್ಲಿದ್ದುದನ್ನು ಎಡಿಸನ್ ಮುಂದೆ ಹೇಳಿದ್ದರು.
ಆ ಮಹಾತಾಯಿಯ ಸಕಾರಾತ್ಮಕ ನುಡಿಯಂತೆ ಜಗತ್ತೇ ಕೊಂಡಾಡುವ ವ್ಯಕ್ತಿಯಾಗಿ ಎಡಿಸನ್ ಬೆಳೆದರು. ಅದು ಪಾಸಿಟಿವ್ ಮಾತಿಗೆ ಇರುವ ಶಕ್ತಿ. ಒಂದು ವೇಳೆ ಆ ದಿನ ಶಾಲೆಯವರು ಬರೆದಂತೆಯೇ ಓದಿರುತ್ತಿದ್ದರೆ ಎಡಿಸನ್ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಿರುತ್ತಿರಲಿಲ್ಲ.
ಒಳ್ಳೆ ಮಾತನಾಡಿ
ಒಳ್ಳೆಯ ಮಾತನಾಡಿ, ತಥಾಸ್ತು ದೇವತೆಗಳು ಅಸ್ತು ಅಸ್ತು ಎನ್ನುತ್ತಾರೆ ಹಿರಿಯರು. ನಕಾರಾತ್ಮಕ ಮಾತುಗಳು ಅಸ್ತು ದೇವತೆಗಳ ಭಯದಿಂದ ಎಲ್ಲೋ ಮಾಯವಾಗುತ್ತಿತ್ತು. ಶಾಲೆಯಲ್ಲಿ ಹೇಳಿಕೊಡುತ್ತಿದ್ದ 'ಓಂ ಸಹನಾಭವತು ಶಾಂತಿ ಮಂತ್ರವನ್ನು ಓಂ ಶಾಂತಿ ಶಾಂತಿ ಶಾಂತಿಃ' ಮಂತ್ರವನ್ನು ಈಗ ಜಪಿಸಿದರೂ ಏನೋ ಒಂದು ರೀತಿಯ ಸಮಾಧಾನ ಮನಸ್ಸನ್ನು ಆವರಿಸುತ್ತದೆ.
ಪಾಸಿಟಿವ್ ಸಂಗತಿಗಳನ್ನು ಮಾತನಾಡುವುದರಿಂದಲೇ ಒಳ್ಳೆಯದು ಸಂಭವಿಸುತ್ತದೆ. ಅದರ ಹಿಂದೆ ಎಷ್ಟು ಶಕ್ತಿ ಇದೆ ಎಂದು ನಾವು ಅದರಿಂದಲೇ ಅಂದಾಜಿಸಬಹುದು. ಈ ಬಗೆಯ ಮಂತ್ರಗಳನ್ನು ಬೀಜಮಂತ್ರ ಎನ್ನುವರು. ಬೀಜಮಂತ್ರವು ವ್ಯಕ್ತಿಗೆ ರಕ್ಷಣಾತ್ಮಕವಾಗಿ ನಿಲ್ಲುತ್ತದೆ.
ಭವಿಷ್ಯ ಬದಲಿಸುವ ಮಂತ್ರ
ಪ್ರಪಂಚದಾದ್ಯಂತ ಸಕಾರಾತ್ಮಕ ಪ್ರಭೆಯನ್ನು ಹೆಚ್ಚಿಸುವ ವಿವಿದ ವಿಧಾನಗಳಿವೆ. ಅವುಗಳಲ್ಲಿ ಒಂದು "ಸ್ವಿಚ್ವರ್ಡ್ಸ್". ಸ್ವಿಚ್ವರ್ಡ್ಗಳು ಎಂದರೆ ಬೇರೇನಲ್ಲ, ಬೀಜಮಂತ್ರಗಳೇ... ಸ್ವಿಚ್ ವರ್ಡ್ಗಳು ನಮ್ಮ ಶಕ್ತಿಯನ್ನು ಒಂದು ಆಯಾಮದಿಂದ ಇನ್ನೊಂದು ಆಯಾಮಕ್ಕೆ ತ್ವರಿತವಾಗಿ ಬದಲಾಯಿಸಬಲ್ಲ ಪದಗಳಾಗಿವೆ.
ಗೂಗಲ್ ಮಾಡಿದರೆ ಸ್ವಿಚ್ ವರ್ಡ್ ಸ್ಯಾಂಪಲ್ ಗಳು ಅಸಂಖ್ಯ ಸಿಗುತ್ತವೆ. ಪ್ರತಿಯೊಂದು ಪದಕ್ಕೂ ಒಂದು ನಿರ್ದಿಷ್ಟ ಶಕ್ತಿಯಿದ್ದು ಉತ್ತಮ ಆರೋಗ್ಯ, ಶಾಂತಿ ಹೀಗೆ ಜೀವನದ ಹಲವಾರು ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ಇದೆ ಎಂಬ ನಂಬಿಕೆಯಿದೆ. ಈ ಪದಗಳನ್ನು ಮಂತ್ರದಂತೆ ಉಚ್ಛರಿಸುವುದರಿಂದ ಧನಾತ್ಮಕ ಪ್ರಭೆಯೊಂದು ನಮ್ಮ ಸುತ್ತ ಸೃಷ್ಟಿಯಾಗುತ್ತದೆ.
ಬಳಸುವ ಕ್ರಮ
ಸ್ವಿಚ್ವರ್ಡ್ಗಳನ್ನು ಬಳಸುವ ವಿಧಾನಗಳು: 10, 28, 108 ಹೀಗೆ ಮೂರರಲ್ಲಿ ಒಂದು ಸಂಖ್ಯೆಯನ್ನು ಆರಿಸಿಕೊಂಡು ಜಪದಂತೆ ಪಠಿಸಬಹುದು. ಅಥವಾ ಕಾಗದದ ಮೇಲೆ ನೀಲಿ, ಕೆಂಪು ಶಾಯಿಯಲ್ಲಿ ಅಯಾ ಕೆಲಸಕ್ಕೆ ತಕ್ಕಂತೆ ಎಷ್ಟು ಸಲ ಬೇಕಾದರೂ ಬರೆದಿಡಬಹುದು.
ಸ್ವಿಚ್ವರ್ಡ್ಗಳನ್ನು ದೇಹದ ಮೇಲೆಯೂ ಬರೆಯಬಹುದು! ಇದು ಆರೋಗ್ಯಕ್ಕೆ ಸಂಬಂಧಿಸಿದ್ದರೆ ನಿರ್ದಿಷ್ಟ ದೇಹದ ಭಾಗದಲ್ಲಿ ಬರೆಯಬಹುದು. ಉದಾ: ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಹೊಟ್ಟೆಯ ಮೇಲೆ, ಎಡ ಭುಜದ ಮೇಲೆ ಹೀಗೆ ದೇಹದಲ್ಲಿ ಎಲ್ಲಿ ಬೇಕಾದರೂ ಬರೆಯಬಹುದು. ಒಂದು ವೃತ್ತಾಕಾರ ಹಾಕಿ ಅದರಲ್ಲಿ ಬೇಕಾದಷ್ಟು ಸ್ವಿಚ್ವರ್ಡ್ಸ್ ಗಳನ್ನು ಬರೆಯಬಹುದು. ಅದನ್ನು ಎನರ್ಜಿ ಸರ್ಕಲ್ಗಳು ಎಂದು ಕರೆಯಲಾಗುತ್ತದೆ.
ಕಾಮನ್ ಸ್ವಿಚ್ ವರ್ಡ್ ಗಳು
ಚಾರ್ಮ್: ವ್ಯಕ್ತಿತ್ವ ಸುಧಾರಣೆ : ಧನಾತ್ಮಕ ಸೆಳವು ಸೃಷ್ಟಿಸುತ್ತದೆ
ಡಿವೈನ್: ಪವಾಡಗಳನ್ನು ಸೃಷ್ಟಿಸುತ್ತದೆ.
ಬ್ರಿಂಗ್: ನಿಮ್ಮ ಗುರಿಸಾಧನೆಗೆ ಸಹಾಯ ಮಾಡುತ್ತದೆ.
ಡನ್: ಗುರಿ ಸಾಧಿಸುವ ತನಕ ಇಚ್ಛಾಶಕ್ತಿಯನ್ನು ಇರಿಸಿಕೊಳ್ಳಲು ಸಹಾಯ ಮಾಡುತ್ತದೆ
ಸನ್ ರೈಸ್ : ಸೋಮಾರಿತನ ಮತ್ತು ಒತ್ತಡವನ್ನು ಹೋಗಲಾಡಿಸಿ ಸಂತೋಷವನ್ನು ತುಂಬುತ್ತದೆ ಮತ್ತು ಧನಾತ್ಮಕ ಫಲಿತಾಂಶವನ್ನು ತರುತ್ತದೆ
ಹೀಗೆ ಎರಡಕ್ಕಿಂತ ಹೆಚ್ಚು ಪದಗಳನ್ನು ಉಪಯೋಗಿಸಿ "ಗೋಲ್ಡನ್ ಸನ್ರೈಸ್", "ಡಿವೈನ್ ಮ್ಯಾಜಿಕ್ ಬಿಗಿನ್ ನೌವ್"... ಇತ್ಯಾದಿ ಸ್ವಿಚ್ವರ್ಡ್ಸ್ ಗಳನ್ನು ಸೃಷ್ಟಿಸಬಹುದು.
ಜೀವನವನ್ನು ನಮಗೆ ಬೇಕಾದ ರೀತಿಯಲ್ಲಿ ರೂಪಿಸಿಕೊಳ್ಳಲು ಸ್ವಿಚ್ ವರ್ಡ್ಸ್ ಗಳಿಂದ ಸಾಧ್ಯ. ನಮ್ಮ ಇಷ್ಟಾರ್ಥದಂತೆಯೇ ಅದಕ್ಕೆ ತಕ್ಕ ಸ್ವಿಚ್ ವರ್ಡ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಅಷ್ಟೇ. ಸ್ವಿಚ್ವರ್ಡ್ಸ್ ಇರಲಿ, ಬೀಜಮಂತ್ರವಿರಲಿ ಪ್ರತಿಯೊಂದಕ್ಕೂ ನಂಬಿಕೆಯೇ ಬುನಾದಿ, ನಂಬಿಕೆಯೆ ತಳಹದಿ.