
ಕಲೆ

ಶನಿವಾರ ಬಂತೆಂದರೆ ತರಕಾರಿಗಳ ಸಾಮ್ರಾಜ್ಯಕ್ಕೆ ಸ್ವಾಗತವೆಂದು ತರಕಾರಿಗಳು ನನ್ನನ್ನು ಕರೆದಂತೆ ಭಾಸವಾಗುತ್ತದೆ. ನಮ್ಮೂರ ಸಂತೆ ಆ ದಿನ. ಮಾವನವರು ಏನೇನು ತರಕಾರಿ ಬೇಕು ಎಂದು ನನ್ನನ್ನು ಮತ್ತು ನನ್ನ ವಾರಗಿತ್ತಿಯನ್ನು ಕೇಳಿದಾಗ, ನಮಗೆ ಗೊತ್ತಿರುವ ತರಕಾರಿಯ ಹೆಸರನ್ನೆಲ್ಲ ಹೇಳಿಬಿಡುತ್ತೇವೆ. ಆ ತರಕಾರಿಯ ಸೀಸನ್ ಹೌದೋ ಅಲ್ಲವೇ ಎಂಬ ಆಲೋಚನೆಯೂ ಒಮ್ಮೊಮ್ಮೆ ನಮಗೆ ಬಾರದು, ಅದಕ್ಕೆ ಸರಿಯಾಗಿ ಕೆಲವು ತರಕಾರಿಗಳು ಈಗ ಎಲ್ಲ ಸೀಸನ್ ನಲ್ಲೂ ದೊರೆಯುವುದರಿಂದ ಒಮ್ಮೊಮ್ಮೆ ನಾವು ಹೇಳಿದ ತರಕಾರಿಗಳು ಅವರ ಚೀಲ ಸೇರಿರುತ್ತವೆ, ಸಿಗದಿದ್ದರೆ ಆ ಸೊಸೆಯ ಇಷ್ಟದ ಚೌಳಿಕಾಯಿ ತಂದಿದ್ದೇನೆ, ನಿನ್ನಿಷ್ಟದ ಅಲಸಂಡೆ ತಂದಿದ್ದೇನೆ, ಈ ವಾರ ನೀನು ಹೇಳಿದ ತರಕಾರಿ ಸಿಗಲಿಲ್ಲ ಬೇಸರಿಸಬೇಡ ಎಂದೆಲ್ಲ ಸಮಾಧಾನ ಮಾಡುತ್ತಾರೆ.
ಮಹಾಭಾರತ ಕಥನ
ತರಕಾರಿ ತಂದರೆ ಸಾಕೆ, ಅವುಗಳನ್ನೆಲ್ಲ ಚೆನ್ನಾಗಿ ಜೋಡಿಸಿಟ್ಟು, ಹಸಿ ಬಟಾಣಿ ತಂದಿದ್ದರೆ ಅದನ್ನು ಸುಲಿದಿಟ್ಟು, ಸೊಪ್ಪುಗಳನ್ನು ಚೆನ್ನಾಗಿ ಆರಿಸಿ, ಪೇಪರಿನಲ್ಲಿ ಸುತ್ತಿತ್ತು ತಂಪು ಪೆಟ್ಟಿಗೆಯೊಳಗೆ ಇಟ್ಟು (ರೆಫ್ರಿಜಿರೇಟರ್, ತಂಗಳು ಪೆಟ್ಟಿಗೆ ಎಂದುಕೋಬೇಡಿ), ಹುರುಳಿಕಾಯಿ, ಚೌಳಿಕಾಯಿ, ಮೆಣಸು ಇತ್ಯಾದಿಗಳ ಚೊಟ್ಟು ತೆಗೆದು, ಹೂಕೋಸನ್ನು ಆರಿಸಿ, ಉಪ್ಪು ಮತ್ತು ಹಳ್ದಿ ಮಿಶ್ರಿತ ನೀರಲ್ಲಿ ನೆನೆಹಾಕಿ ಹೀಗೆ ಒಂದೇ ಎರಡೇ ತರಕಾರಿ ಎಂದರೆ ಮಹಾಭಾರತವೇ ಆಯಿತು. ಆಶ್ಚರ್ಯ ಪಡಬೇಡಿ ತರಕಾರಿ ತರುವ ನನ್ನ ಮಾವನವರು ಹೆಸರಿನಲ್ಲೂ ಮಹಾಭಾರತದ ಸೂತ್ರಧಾರ ಕೃಷ್ಣನ ಹೆಸರಿನವರು.
ತರಕಾರಿ ತಂದ ದಿನ ಯಾವುದನ್ನು ಮೊದಲು ಬಳಸಬೇಕು ಎಂದು ಪ್ರಶ್ನೆ ಮೂಡುತ್ತ, ಚೌಳಿಕಾಯಿ ಪಲ್ಯ ಮಾಡಿದರೆ, ಅಲಸಂದೆಯ ಮನ ನೋಯುವುದೋ ಎಂಬ ಬೇಸರ. ಅದಕ್ಕೆ ನಮ್ಮ ಅತ್ತೆ ಕಂಡುಕೊಂಡ ಪರಿಹಾರ, ಒಂದೋ ಎಲ್ಲ ತರಕಾರಿ ಹಾಕಿ ಮಧ್ಯಾಹ್ನ ಊಟಕ್ಕೆ ಸಾಂಬಾರು ಮಾಡುವುದು, ಇಲ್ಲವೇ ಮಾರನೆಯ ದಿನ ಬೆಳಿಗ್ಗೆಯ ಉಪಹಾರಕ್ಕೆ ಪಲಾವು ಮಾಡುವುದು. ಪಲಾವು ಬೇಡ ಎನಿಸಿದರೆ, ಇಡ್ಲಿ ಸಾಂಬಾರು. ಸಾಂಬಾರು ಬೋರೆನಿಸಿದರೆ ಕೊಂಕಣಿ ಖಾದ್ಯಗಳಾದ ಗಜಬಜೆ, ವಲವಲ ಅಥವಾ ಕೇರಳ ಸ್ಪೆಷಲ್ ಅವಿಯಲ್ ಮಾಡುವುದು.
ಕಾಯಿರಸದ ಸ್ನಾನ
ವಲವಲ ಮಾಡಲು ನಮ್ಮ ಮನೆಯಲ್ಲಿ ಭೀಮಸೇನ ತಯಾರಿರುವಾಗ ಅಡುಗೆ ಮನೆಯನ್ನು ಭೀಮರಾಯರಿಗೆ ಬಿಟ್ಟುಕೊಡುವೆವು (ನನ್ನ ಪತಿರಾಯರು). ಆ ದಿನ ಎಲ್ಲ ತರಕಾರಿಗಳನ್ನು ಹೆಚ್ಚುವ, ಕೊಚ್ಚುವ ಕೆಲಸ ಮಾತ್ರ ಅತ್ತೆಯ ಪಾಲಿನದು. ಕಾಯಿಯನ್ನು ಚೆನ್ನಾಗಿ ತುರಿದು, ಅದರ ರಸ ತೆಗೆದು, ಹದ ಉರಿಯಲ್ಲಿ ಕಾಯಿರಸ ಬೆರೆಸಿದ ತರಕಾರಿಗಳಿಗೋ ನಮಗೆಂತ ಸ್ವರ್ಗ ಸುಖ. ಕಾಯಿರಸದ ಸ್ನಾನವೆಂದು ಖುಷಿಪಡುವಾಗ ನಮಗೆ ಅದರ ಸುವಾಸನೆ ಅಘ್ರಾಣಿಸುವುದೇ ಕೆಲಸ. ಎಲ್ಲ ತರಕಾರಿಯೊಂದಿಗೆ ಉಪ್ಪು ಹಾಕಿ ಹಸಿಮೆಣಸು, ನೆಲಗಡಲೆ, ಗೋಡಂಬಿ ಬೆರೆಸಿ ಅವುಗಳು ಬೆಂದು, ಕುದಿ ಬಂದ ತಕ್ಷಣ ಸ್ವಲ್ಪ ಮೈದಾ ಅಥವಾ ಅಕ್ಕಿ ಹಿಟ್ಟು ನೀರಿನಲ್ಲಿ ಕದಡಿ ಹಾಕಿದರೆ ಅರ್ಧ ಪದಾರ್ಥ ತಯಾರಾದಂತೆ.
ಪದಾರ್ಥಕ್ಕೆ ಒಗ್ಗರಣೆ ಹಾಕುವುದೆಂದರೆ ದೊಡ್ಡ ಸಮಾರೋಪ ಕಾರ್ಯಕ್ರಮವೇ ಏರ್ಪಟ್ಟಂತೆ. ಮನೆಯಲ್ಲಿ ಎಲ್ಲರೂ ಊಟಕ್ಕೆ ಎಲೆ ಯಾವಾಗ ಬೀಳುತ್ತದೆ ಎಂದು ಕಾಯುತ್ತಿರುತ್ತಾರೆ. ತೆಂಗಿನೆಣ್ಣೆಯಲ್ಲಿ ಸಾಸಿವೆ, ಕರಿಬೇವು, ಒಣಮೆಣಸಿನ ಒಗ್ಗರಣೆಯಾದರೆ, ತುಪ್ಪದಲ್ಲಿ ಜೀರಿಗೆ ಒಗ್ಗರಣೆ ಹಾಕಿ ಎರಡು ಒಗ್ಗರಣೆಯ ರಾಜಖಾದ್ಯವೇ ತಯಾರು. ಊಟಕ್ಕೆ ಎಲೆ ಹಾಕಿ ಚಪ್ಪರಿಸಿ ತಿಂದು, ಗಡದ್ದಾಗಿ ನಿದ್ರೆ ಬಾರದೇ ಇರುವುದೇ? ತಯಾರಿಸಿದ ನಳರಾಜನಿಗೂ ಧನ್ಯವಾದ ಹೇಳಿ ಊಟದ ಎಲೆ ಮುದುರುವಾಗ, ಮತ್ತೆ ಈ ಖಾದ್ಯ ಯಾವಾಗ ಮಾಡೋಣ ಎಂಬ ಲೆಕ್ಕಾಚಾರ.
ತಾಜಾ ಇದ್ದಾಗಲೇ ಬಳಸುವ ಹಪಹಪಿ
ತರಕಾರಿಗಳಿಗೆ ನ್ಯಾಯ ಒದಗಿಸುವ ಕಾರ್ಯದೊಂದಿಗೆ ಸೊಪ್ಪುಗಳನ್ನು ತಾಜಾ ಇರುವಾಗಲೇ ಉಪಯೋಗಿಸಬೇಕೆಂಬ ಲೆಕ್ಕಾಚಾರ. ಪಾಲಕು, ಸಬ್ಬಸಿಗೆ, ಹರಿವೆ ದಂಟಿನ ಸೂಪು ಮಾಡಿದರೆ, ಈರುಳ್ಳಿ ಸೊಪ್ಪು, ಮೆಂತೆಯ ಕೋಸಂಬರಿ ಮಾಡುವೆವು. ಹಸಿರಿನಿಂದ ಕಂಗೊಳಿಸುವ ಸೊಪ್ಪುಗಳು ಬರೀ ನೋಟಕ್ಕೇ ಮನತಣಿಸುವಾಗ ಅವುಗಳ ಖಾದ್ಯಗಳೋ... ಆರೋಗ್ಯಕ್ಕೂ ಹಿತಕರ, ನಾಲಿಗೆಗೂ ರುಚಿಕರ. ದೇಹದ ಹಸಿರನ್ನು ಅವು ಜಾಗೃತಗೊಳಿಸುವಲ್ಲಿ ಎರಡು ಮಾತಿಲ್ಲ.
ತೊಂಡೆ ಕೆಂಪಾಗಲು ಶುರುವಾಯಿತು, ಬದನೆ ಮುನಿಸಿಕೊಂಡಿತು ಎಂದು ಕಂಡ ತಕ್ಷಣ ವಾರದ ಉಳಿದ ದಿನಗಳಲ್ಲಿ ಒಂದೊಂದೇ ಪಲ್ಯ, ಪದಾರ್ಥವಾಗಿಯೋ, ಕಾವಲಿಯ ಮೇಲೆ ಬಜೆಯಾಗಿಯೋ, ಪೋಡಿಯಾಗಿಯೋ ನಮ್ಮನ್ನು ತಿನ್ನು ಎಂದು ಕೂಗಿ ಕರೆದು, ಮನತಣಿಸುವಾಗ ಶನಿವಾರದ ದಿನ ತಮ್ಮ ಸಾಮ್ರಾಜ್ಯಕ್ಕೆ ಸ್ವಾಗತ ನೀಡಿದ ತರಕಾರಿ ಲೋಕದಲ್ಲಿ ವಿಹರಿಸಿದ ಸಂತೃಪ್ತಿಯೊಂದಿಗೆ ಬರುವ ಹೊಸ ಶನಿವಾರದ ಸಂತೆಗೆ ಮಾವನವರು ಚೀಲ ಹಿಡಿದು ಹೊರಟಿರುತ್ತಾರೆ ಎಂಬಲ್ಲಿಗೆ ತರಕಾರಿ ಪುರಾಣ ಮತ್ತೆ ಶುರುವಾಗುತ್ತದೆ.