ಜಗತ್ತು ಮರೆತ ಅಸಲಿ ಕೆಜಿಎಫ್ ರಕ್ತಸಿಕ್ತ ಇತಿಹಾಸ
ಕೆಜಿಎಫ್ ಚಾಪ್ಟರ್ 2 ಕಥೆ ನೋಡಲು ಜಗತ್ತೇ ಕಾದಿದೆ. ಎಲ್ಲೆಡೆ ಕೆಜಿಎಫ್ ದೇ ಹವಾ. ಚಾಪ್ಟರ್1 ಕಥೆ ಇಂದಿಗೂ ನಮ್ಮ ಕಣ್ಣ ಮುಂದಿದೆ. ಆದರೆ ನಮ್ಮಲ್ಲದೆಷ್ಟು ಮಂದಿಗೆ ಅಸಲಿ ಕೆಜಿಎಫ್ ಬಗ್ಗೆ ಗೊತ್ತಿದೆ? ಕೋಲಾರ್ ಗೋಲ್ಡ್ ಫೀಲ್ಡ್ಸ್ ಬಗ್ಗೆ ಲೇಖಕ, ಪತ್ರಕರ್ತ ಕೇಶವಮೂರ್ತಿ ಬರೆದ 'ಬಂಗಾರದ ಮನುಷ್ಯರು' ಪುಸ್ತಕದಿಂದ ಆಯ್ದ ಭಾಗ ಇಲ್ಲಿದೆ...
Published: 13th April 2022 04:36 PM | Last Updated: 13th April 2022 04:36 PM | A+A A-

ಚಿನ್ನದ ಗಣಿಗಾರಿಕೆಯಲ್ಲಿ ತೊಡಗಿರುವ ಬ್ರಿಟಿಷ್ ಕೆಲಸಗಾರರು
ಕೆಜಿಎಫ್ ಎಂಬುದು ಮೂರು ರಾಜ್ಯ, ನಾಲ್ಕು ಭಾಷೆಯ ಜನರಿಂದ ಜನ್ಮ ಪಡೆದುಕೊಂಡ ಬ್ರಿಟಿಷರ ನಗರ ಎಂಬುದು ಬಹುತೇಕರಿಗೆ ಗೊತ್ತಿಲ್ಲದಿರುವ ಸಂಗತಿ. ಹೀಗಾಗಿ ಈ ಕೆಜಿಎಫ್ ನ ನಿಜವಾದ ಹೆಸರು ಎಷ್ಟು ಮಂದಿಗೆ ಗೊತ್ತು ಎನ್ನುವ ಪ್ರಶ್ನೆ ಮುಂದಿಟ್ಟರೆ ಉತ್ತರಿಸುವವರು ಸಿಗುವುಗುದು ತೀರಾ ಅಪರೂಪ.

ಎರ್ರಗೊಂಡ ಕಗ್ಗಾಡು
17ನೇ ಶತಮಾನದಲ್ಲಿ, ಆಂಗ್ಲರ ಈಸ್ಟ್ ಇಂಡಿಯಾ ಕಂಪನಿಯ ಪಾದಗಳು ಭಾರತದ ನೆಲಕ್ಕೆ ತಾಕಿದ ದಿನಗಳತ್ತ ತಿರುಗಿದಾಗ ಬೆಟ್ಟ, ಗುಡ್ಡ, ಮುಳ್ಳಿನ ಗಿಡಗಳಿಂದ ಕೂಡಿದ ಅರೆ ಬಯಲಿನ ಎರ್ರಗೊಂಡ ಎಂಬ ಪ್ರದೇಶವೊಂದರ ಪುಟವೊಂದು ನಿಧಾನಕ್ಕೆ ತೆರೆದುಕೊಳ್ಳುತ್ತದೆ. ಆ ನಗರ ‘ನನ್ ಹೆಸ್ರು ಈಗ ನೀವು ಕೇಳುತ್ತಿರುವ, ಓದುತ್ತಿರುವ, ಬ್ರಿಟಿಷರು ನಾಮಕರಣ ಮಾಡಿ ಹೋಗಿರುವ ಕೆಜಿಎಫ್ ಅಲ್ಲ, ಎರ್ರಗೊಂಡ’ ಎಂದು ಮೆಲ್ಲಗೆ ಕಿವಿ ಬಳಿ ಬಂದು ಪಿಸುಗುಟ್ಟುತ್ತದೆ.
ಬ್ರಿಟಿಷರ ಸಂಚು
ಈ ಗುಡ್ಡದ ಪತ್ತೆಯ ಹಿಂದೆ 80 ವರ್ಷಗಳ, ನೂರಾರು ಮಂದಿ ತಜ್ಞರ ಸಂಶೋಧನೆ ಕಣ್ಣುಗಳ ಅಧ್ಯಯನ, ಸಾಹಸಗಳು ಅಡಗಿವೆ. ಈ ಸಾಹಸದ ಕೊಂಡಿ ಶುರುವಾಗುವುದು 15 ಮತ್ತು 16ನೇ ಶತಮಾನದಲ್ಲಿ. ಈಸ್ಟ್ ಇಂಡಿಯನ್ ಕಂಪನಿ, 1600ರಲ್ಲಿ ಭಾರತವನ್ನು ಆಕ್ರಮಿಸಿಕೊಳ್ಳುವ ಸಂಚು ರೂಪಿಸಿತು. ಆ ಸಂಚಿನ ಭಾಗವಾಗಿ ಭಾರತದಲ್ಲಿನ ನೈಸರ್ಗಿಕ ಲೋಹ ಸಂಪತ್ತುಗಳ ಸರ್ವೇ ಕಾರ್ಯಕ್ಕೆ ಮುಂದಾಯಿತು.
ನಿಕ್ಷೇಪ ಹುಡುಕಾಟ
ಆಗ ಮದ್ರಾಸ್ ರಾಜ್ಯದ ಪಶ್ಚಿಮ ಗಡಿ ಮತ್ತು ಮೈಸೂರು ರಾಜ್ಯದ ಪೂರ್ವ ಗಡಿಯನ್ನು ಸರ್ವೇ ಮಾಡುವ ಜವಾಬ್ದಾರಿಯನ್ನು 1802ರಲ್ಲಿ ಲೆಫ್ಟಿನೆಂಟ್ ವಾರನ್‌ಗೆ ವಹಿಸಲಾಯಿತು. ಈತನ ಸಾರಥ್ಯದಲ್ಲಿ ಸರ್ವೇ ಮಾಡುವಾಗ ಎರ್ರಗೊಂಡ ಗುಡ್ಡದ ಬಳಿ ಬಂಗಾರ ಸಿಗುತ್ತದೆಂಬ ಮಾಹಿತಿ ಸಿಕ್ಕಿತು. ಈ ಮಾಹಿತಿಯನ್ನು ಮುಂದಿಟ್ಟುಕೊಂಡು ಸತತ ಎರಡು ವರ್ಷಗಳ ಕಾಲ ಸಂಶೋಧನೆ ಮಾಡಿದಾಗ ಸಿಕ್ಕ ಮತ್ತಷ್ಟು ವಿವರಗಳನ್ನು ಸಂಗ್ರಹಿಸಿ ಪತ್ರಿಕೆಯಲ್ಲಿ ಒಂದು ದೀರ್ಘ ಲೇಖನವನ್ನೇ ಬರೆದ. ಇದನ್ನು ಓದಿದ ಮೇಲೆ ಅನೇಕ ಸಂಶೋಧಕರಿಗೆ ಭಾರತದಲ್ಲೂ ಚಿನ್ನದ ಗುಡ್ಡವಿದೆ ಎನ್ನುವುದು ತಿಳಿಯಿತು.
ಚಿನ್ನದ ಮೇಲೆ ಕಣ್ಣು
ಜಗತ್ತಿನ ಹಲವು ಭಾಗಗಳಲ್ಲಿ ಆಗಲೇ ಚಿನ್ನದ ಬೇಟೆಯಾಡಿ ಯಶಸ್ಸು ಗಳಿಸಿದ್ದ ಬ್ರಿಟಿಷರ ಕಣ್ಣಿಗೂ ಈ ಗುಡ್ಡ ಕಾಣದೆ ಇರಲಿಲ್ಲ. ನೇರವಾಗಿ ಪರದೇಶಿಗಳ ಪಾದ ಒಂದು ಸಾಮಾನ್ಯ ಜನರ ಗುಡ್ಡದ ಪ್ರದೇಶಕ್ಕೆ ಹೊಕ್ಕಿತು. ಹೀಗೆ 80 ವರ್ಷಗಳ ಕಾಲ ಅಧ್ಯಯನದ ಫಲವಾಗಿ ಕಂಡಿದ್ದೇ ಎರ್ರಗೊಂಡ ಎಂಬ ಗುಡ್ಡಗಳಿಂದ ಕೂಡಿದ ಬಯಲು ಪ್ರದೇಶ.
ನಿರಾಭರಣ ಸುಂದರಿ
ಈ ಪ್ರದೇಶವೇ ಬಂಗಾರದ ನಿಕ್ಷೇಪಗಳನ್ನು ಅಡಗಿಸಿಕೊಂಡಿರುವ ನಿರಾಭರಣ ಸುಂದರಿ ಎನ್ನುವ ನಿಗೂಢ ಬಯಲಾಯಿತು. ಮುಂದೆ ಅದೊಂದು ನೆತ್ತರಿನ ಚರಿತ್ರೆಗೂ ಮುನ್ನುಡಿಯಾಯಿತು. ಇದರ ಕಥಾನಾಯಕರು ಮೂವರು. ಅವರು ಕೆಜಿಎಫ್ ನಗರವಾಸಿಗಳ ಪಾಲಿಗೆ ಆಪರೇಷನ್ ಗೋಲ್ಡನ್ ಗ್ಯಾಂಗ್ ಆಗಿ ಕಂಡಿದ್ದರು. ಆ ಗ್ಯಾಂಗ್ ಪಾಲಿಗೆ ತುತ್ತಾದ ಎರ್ರಗೊಂಡವೇ ಮುಂದೆ ಕೋಲಾರ್ ಗೋಲ್ಡ್ ಫೀಲ್ಡ್ ಎನ್ನುವ ನಾಮಾಂಕಿತಕ್ಕೆ ಪಾತ್ರವಾಯಿತು.
(ಹೆಚ್ಚಿನ ಚಾರಿತ್ರಿಕ ಮಾಹಿತಿ 'ಬಂಗಾರದ ಮನುಷ್ಯರು' ಪುಸ್ತಕದಲ್ಲಿದೆ)
