ಯಾರೂ ಯಾಕೆ ನಿಮ್ಮ ಮಾತು ಕೇಳುತ್ತಿಲ್ಲ ಗೊತ್ತಾ?
ನೀವೊಬ್ಬ ಅನಪೇಕ್ಷಿತ ಅತಿಥಿ ಎಂದು ಯಾವತ್ತೂ ಅನ್ನಿಸುತ್ತಾ? ಯಾರೂ ನನ್ನ ಮಾತು ಕೇಳ್ತಿಲ್ಲ ಎಂಬ ಕೊರಗು ನಿಮಗಿದೆಯೇ? ಇದೇ ವಿಷಯವಾಗಿ ಲೇಖಕಿ ಕವಿತಾ ಹೆಗಡೆ ಬರೆದಿರುವ 'ನೀವೂ ಗೆಲ್ಲಬಹುದು' ಪುಸ್ತಕದಿಂದ ಆಯ್ದ ಬರಹ ಇಲ್ಲಿದೆ.
Published: 06th February 2022 04:46 PM | Last Updated: 06th February 2022 04:46 PM | A+A A-

ಸಾಂದರ್ಭಿಕ ಚಿತ್ರ

ಉತ್ತರಕನ್ನಡ ಮೂಲದವರಾದ ಲೇಖಕಿ ಕವಿತಾ ಹೆಗಡೆ, ಈಗ ಹುಬ್ಬಳ್ಳಿಯ ಮಂಜುನಾಥ ನಗರದ ಕೆ ಎಲ್ ಇ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿಯಾಗಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಥೆ, ಕವನ, ಪ್ರಬಂಧ, ವ್ಯಕ್ತಿತ್ವ ವಿಕಸನ ಲೇಖನಗಳು, ಅನುವಾದ, ಅಂಕಣ ಬರಹ, ವಿಮರ್ಶೆಗಳಲ್ಲಿ ಆಸಕ್ತಿ. ನಾಡಿನ ಖ್ಯಾತ ಪತ್ರಿಕೆಗಳು, ಮ್ಯಾಗಝಿನ್ಗಳು, ಬ್ಲಾಗುಗಳಲ್ಲಿ ನಿಯಮಿತವಾಗಿ ಬರಹಗಳು ಪ್ರಕಟವಾಗುತ್ತಿವೆ. 'ದ ನೆಸ್ಟೆಡ್ ಲವ್' ಇವರ ಮೊದಲ ಆಂಗ್ಲ ಕಥಾ ಸಂಕಲನ.
"ನನ್ನ ಅಭಿಪ್ರಾಯವನ್ನು ಯಾರೂ ಕೇಳೋರೇ ಇಲ್ಲ… ಎಲ್ಲರೂ ತಮಗೆ ಬೇಕಾದ ಹಾಗೆ ಮಾಡೋರೇ…"
"ಪ್ಲೀಸ್, ಇಲ್ಲಿ ಕೇಳಿ, ಪ್ಲೀಸ್ ಪ್ಲೀಸ್ ಪ್ಲೀಸ್… ನಾ ಏನು ಹೇಳ್ತಾ ಇದ್ದೀನಿ ಪ್ಲೀಸ್ ಕೇಳಿ."
"ನನ್ನ ಮಾತಿಗೆ ಕವಡೆ ಕಿಮ್ಮತ್ತು ಕೂಡ ಇಲ್ಲ. ಏನು ಮಾತಾಡ್ಬೇಕು ನಾನು?"
"ಯಾಕಾದರೂ ಇಲ್ಲಿ ಬಂದೆನೋ, ನನ್ನನ್ನು ತುಂಬ ನಿಕೃಷ್ಟವಾಗಿ ನಡೆಸಿಕೊಳ್ಳಲಾಯಿತು."
"ಇನ್ಮೇಲೆ ಯಾವತ್ತೂ ಅವರ ಮನೆಗೆ ಕಾಲಿಡೋಲ್ಲ"
ಈ ರೀತಿಯ ಅನಿಸಿಕೆ ಎಂದಾದರೂ ನಿಮ್ಮದಾಗಿದ್ದರೆ ಮೌನವಾಗಿ ಕುಳಿತು ಒಮ್ಮೆ ವಿಚಾರ ಮಾಡುವುದು ಒಳಿತು. ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ತುದಿಗಾಲಲ್ಲಿ ನಿಂತಿದ್ದರೂ ನಿಮ್ಮ ಅಭಿಮತವನ್ನು ಕೇಳುವವರೇ ಇಲ್ಲ ಎಂದು ಅನಿಸಿರಬಹುದು. ಯಾರ ಮನೆಗಾದರೂ ಹೋದಾಗ ನೀವೊಬ್ಬ ಅನಪೇಕ್ಷಿತ ಅತಿಥಿ ಎನಿಸಿದ್ದು ಕೂಡ ಇರಬಹುದು. ಯಾಕೆ ಹಾಗಾಯ್ತು?
ನಾವು ಹೇಳಿದ್ದೇ ಶ್ರೇಷ್ಠ
ಪ್ರತಿಯೊಬ್ಬ ವ್ಯಕ್ತಿಗೂ ತಾನು, ತನ್ನ ಅಭಿಪ್ರಾಯ ಸರ್ವೋತ್ತಮ ಎಂಬ ಅನಿಸಿಕೆ ಮೊದಲಿನಿಂದಲೇ ಬೆಳೆದುಬಂದಿರುತ್ತದೆ. ಯಾವುದೇ ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ತನ್ನ ಅಭಿಪ್ರಾಯಕ್ಕೆ ಸೂಕ್ತ ಮನ್ನಣೆ ಸಿಗಲೇಬೇಕು ಎಂಬ ಅನಿಸಿಕೆ ಇರುತ್ತದೆ.
ತನ್ನ ಅತ್ಯುತ್ತಮ ಅಭಿಮತವನ್ನು ಪರಿಗಣಿಸಿದ್ದರೆ ಸಮಸ್ಯೆ ಸುಲಭವಾಗಿ ಪರಿಹಾರವಾಗುತ್ತದೆ ಎಂಬ ಧೃಡವಾದ ನಂಬಿಕೆ ಇರುತ್ತದೆ. ಆ ಸಮಸ್ಯೆಗೆ ತನಗಿಂತ ಉತ್ತಮ ಪರಿಹಾರ ಒದಗಿಸುವವರು ಯಾರೂ ಇಲ್ಲ ಎಂಬ ಭಾವನೆ ಬೇರೂರಿಬಿಟ್ಟಿರುತ್ತದೆ.
ನಾವು ಎಷ್ಟು ಮುಖ್ಯ
ನಮಗೆ ಅತಿ ಮಹತ್ವದ್ದು ಎಂಬ ವಿಷಯ ಬೇರೆಯವರಿಗೆ ಏನೂ ಅಲ್ಲದೆ ಇರಲು ಹಲವು ಕಾರಣಗಳಿವೆ. ಮೊದಲನೆಯದಾಗಿ ಇತರರ ಮಟ್ಟಿಗೆ ನಾವು ಎಷ್ಟು ಮುಖ್ಯ ಎಂಬುದರ ಮೇಲೆ ನಮ್ಮ ಮಾತಿಗೆ ಪ್ರಾಮುಖ್ಯತೆ ಸಿಗುತ್ತದೆ.
ನಮ್ಮ ಅಭಿಪ್ರಾಯ ನಿಜವಾಗಿಯೂ ತುಂಬ ಉತ್ತಮವೇ ಇದ್ದರೂ ಬಹಳಷ್ಟು ಸಲ ಅದನ್ನು ಅರ್ಥಮಾಡಿಕೊಳ್ಳುವ ಪ್ರಬುದ್ಧತೆ ಇಲ್ಲದೇ ಇರಬಹುದು. ಬಹಳಷ್ಟು ಸಂದರ್ಭಗಳಲ್ಲಿ ನಿಮ್ಮ ಪರಿವಾರ ಅಥವಾ ಕೆಲಸದ ಸ್ಥಳಗಳಲ್ಲಿ ನಿರ್ವಿವಾದವಾಗಿ ನೀವೇ ಸರ್ವೋತ್ತಮರಿರುತ್ತೀರಿ. ಆದರೆ ಅಲ್ಲಿ ನೀವು ಏನೂ ಅಲ್ಲವೆಂಬ ಹಾಗೆ ನಿಮ್ಮನ್ನು ಕಾಣಲಾಗುತ್ತದೆ.
ಬಾಸ್ ಈಸ್ ಆಲ್ವೇಸ್ ರೈಟ್
ಒಮ್ಮೊಮ್ಮೆ ನೀವಲ್ಲದಿದ್ದರೆ ಇನ್ನೊಬ್ಬರು ಸಮರ್ಥರು ಎದ್ದು ಕಾಣುತ್ತಿರುತ್ತಾರೆ. ನಿಮ್ಮೆಲ್ಲರಿಗಿಂತ ಎಲ್ಲದರಲ್ಲೂ ಕನಿಷ್ಠನಾದ ಅಥವಾ 'ಬಾಸ್ ಈಸ್ ಆಲ್ವೇಸ್ ರೈಟ್' ಎಂದು ಬಕೆಟ್ಟು ಹಿಡಿಯುವ ಚೇಲಾಗಳು ನಿಮಗಿಂತ ಮೇಲಿನ ಸ್ಥಾನದಲ್ಲಿ ರಾರಾಜಿಸುವುದನ್ನು ನೋಡಿ ನಿಮ್ಮ ಹೊಟ್ಟೆ ಉರಿದಿರಬಹುದು.
ಅಂಥವರು ದಿನ ಬೆಳಗಾದರೆ ನಿಮ್ಮ ವಿರುದ್ದ ನೂರು ಮಸಲತ್ತು ನಡೆಸಿ ನಿಮ್ಮನ್ನು ಕೆಳಗೆ ತಳ್ಳಿರಬಹುದು. ನಿಮ್ಮ ಯೋಗ್ಯತೆಗೆ ನಿಜವಾದ ಬೆಲೆ ಸಿಗದೇ ನೀವು ಖಂಡಿತ ನೊಂದಿರುತ್ತೀರಿ.
ಒಂದು ಮಾತನ್ನು ಮಾತ್ರ ನಾವು ಸದಾ ನೆನಪಿನಲ್ಲಿಡಬೇಕು. ನೀವು ನಿಜವಾಗಿ ಉತ್ತಮರಾಗಿದ್ದಲ್ಲಿ ನಿಮ್ಮನ್ನು ನಿರಾಕರಿಸಿದವರೇ ನಿಮ್ಮ ಅದ್ಭುತ ವಿಚಾರದಿಂದ ವಂಚಿತರಾಗುವುದು ಖಚಿತ. ಇಂತಹ ಸನ್ನಿವೇಶದಲ್ಲಿ ನಿಮ್ಮ ಮಾತಿಗೆ ಬೆಲೆಯಿಲ್ಲವೆಂದು ಗೋಳಾಡುವ ಬದಲು ಅವರು ನಿಮ್ಮ ಅರ್ಹತೆಯನ್ನು ಅರಿಯಲಾರದ ಮೂರ್ಖರೆಂದು ತಿಳಿದುಕೊಂಡುಬಿಡಿ.
ಚೇಲಾಗಳಿಗೆ ಉನ್ನತ ಹುದ್ದೆ ಏಕೆ?
ಕೆಲವೊಮ್ಮೆ ನಿಮ್ಮ ಘನ ವ್ಯಕ್ತಿತ್ವ ನಿಮ್ಮ ಮೇಲಿನವರಲ್ಲಿ ಕೂಡ ಕೀಳರಿಮೆ ಉಂಟು ಮಾಡಬಹುದು. ಅದೇ ಕಾರಣಕ್ಕೆ ಅವರು ನಿಮ್ಮನ್ನು ನಿಧಾನಕ್ಕೆ ಬದಿಗೆ ಸರಿಸಿ ನಿಮಗಿಂತ ಕೆಳಮಟ್ಟದ, 'ತಮ್ಮ ಮಟ್ಟಕ್ಕೆ ' ಕಂಫರ್ಟೆಂಬಲ್ ಎನಿಸುವ ಚೇಲಾಗಳನ್ನು ಮೇಲಿನ ಸ್ಥಾನದಲ್ಲಿ ಕೂರಿಸುವುದು. ಯಾಕೆಂದರೆ ನಿಮ್ಮ ಜ್ಞಾನ, ಸಲಹೆ ಅವರಿಗಿಂತ ಉತ್ತಮ ಎಂಬ ಕೀಳರಿಮೆ ಅವರನ್ನು ಸದಾ ಕಾಡಬಾರದು ತಾನೇ?
ಹೀಗಿದ್ದಲ್ಲಿ 'ದೇ ಡೋಂಟ್ ಡಿಸರ್ವ್ ಯುವರ್ ಬೆಸ್ಟ್ ಸರ್ವಿಸ್' ಎಂಬುದು ನಿಶ್ಚಿತ. ಅದರಿಂದ ನಿಮ್ಮ ಘನತೆಗೆ ಒಮ್ಮೆ ಧಕ್ಕೆಯಾಯಿತು ಎಂದು ಅನಿಸಿದರೂ ಅದು ತಾತ್ಕಾಲಿಕ. ಕಾಲ ಪ್ರವಾಹ ನಿಮ್ಮನ್ನು ಮೇಲೆ ಖಂಡಿತ ಎತ್ತಿ ಹಿಡಿದು ತೊಳಗಿ ಬೆಳಗಿಸುವುದು ಖಂಡಿತ. ಹಾಗಾಗಿ ಖಿನ್ನತೆ ಬೇಡ. ನಿಮ್ಮ ಕರ್ತವ್ಯವನ್ನು ಎಂದಿನಂತೆ ಮಾಡಿ. ಸುಫಲ ಖಂಡಿತ ಬೇರೊಂದು ರೀತಿಯಲ್ಲಿ ನಿಮ್ಮ ಕೈಯಲ್ಲಿ ಇರುತ್ತದೆ.
ಸ್ವಯಂ ಕೃಪಾಪೋಷಿತ ಅಹಂ
ಇನ್ನುಳಿದಂತೆ ಇತರರು ನಿಮಗೆ ಬೆಲೆ ಕೊಡುತ್ತಿಲ್ಲ ಅನಿಸಿದರೆ ನೀವು ಅವರ ಅಪೇಕ್ಷೆ ಅಥವಾ ನಿರೀಕ್ಷೆಯ ಮಟ್ಟ ಮುಟ್ಟಲು ಅಸಮರ್ಥ ಅಥವಾ ತುಸು ಕೆಳಗಿರಬಹುದು. ಸ್ವಯಂ ಕೃಪಾಪೋಷಿತ ಈ ಅಹಮಿಕೆಯ ಬೆಳವಣಿಗೆ ತಮಗೇ ಅರಿವಿಲ್ಲದಂತೆ ಭದ್ರವಾಗಿ ನೆಲೆಯೂರಿರುತ್ತದೆ.
ಆದರೆ ಇತರರೂ ಕೂಡ ಇದನ್ನು ಒಪ್ಪಲೇಬೇಕೆಂದೇನೂ ಇಲ್ಲ. ಇತರರಿಗೆ ನಮ್ಮ ಅಭಿಪ್ರಾಯ ಮಹತ್ವದ್ದಾಗಲೇಬೇಕು ಎಂಬುದು ಕಡ್ಡಾಯವಿಲ್ಲ. ಹೀಗಿದ್ದಲ್ಲಿ ನೀವು ನಿಮ್ಮ ಈ ಪರಿಸ್ಥಿತಿಯನ್ನು ಒಪ್ಪಿಕೊಂಡು ಸುಮ್ಮನಿರುವುದೇ ಘನತೆ ತರುತ್ತದೆ. ನಿಮ್ಮನ್ನು ನೀವು ಉತ್ತಮಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ.
ಕರೆಯದೆ ಇದ್ದಲ್ಲಿ ಹೋಗಬೇಡಿ
ನಮ್ಮ ಅಭಿಪ್ರಾಯ -ಸಲಹೆಗೆ ಬೆಲೆ ಎಲ್ಲಿ ಅದನ್ನು ಕೇಳಲಾಗಿರುತ್ತದೋ ಅಲ್ಲಿ ಮಾತ್ರ ಸಲಹೆ ಕೊಡಿ. ಕೇಳದೆ ಇದ್ದಲ್ಲಿ ಸಲಹೆ ಕೊಡಬೇಡಿ. ಕರೆಯದೆ ಇದ್ದಲ್ಲಿ ಹೋಗಬೇಡಿ. ಹೀಗೆ ಮಾಡುವುದರಿಂದ ನಿಮಗೇ ನೋವು, ತೊಂದರೆ ಮತ್ತು ಖಿನ್ನತೆ ಕಟ್ಟಿಟ್ಟ ಬುತ್ತಿ.
ಈ ರೀತಿಯ ವರ್ತನೆ ಬಾಲ್ಯದಿಂದಲೂ ಮಕ್ಕಳಲ್ಲಿ ಮನೆಮಾಡಿರುತ್ತದೆ. ತನ್ನ ಮಾತೆನ್ನೇ ಎಲ್ಲರೂ ಕೇಳಬೇಕು ಎಂಬ ಹಠ ಸಾಧನೆಗಾಗಿ ಮಕ್ಕಳು ತೀರ ಅತಿರೇಕದ ವರ್ತನೆ ತೋರುವುದು ಸಹ ಇದೆ. ಹಾಗಾಗಿ ಮಕ್ಕಳಿಗೆ
ತಾನೇ ಸರಿ ಎಂಬ ಅಹಂಕಾರ ಉದಯಿಸದ ರೀತಿಯಲ್ಲಿ ನಮ್ರತೆಯಿಂದ ಬದುಕುವುದನ್ನು ಕಲಿಸಬೇಕು.