ಕೊರೊನಾಗೆ ಗೆರೆ ಎಳೆದವರು: ಕನ್ನಡ ನಾಡಿನ 22 ಕಾರ್ಟೂನಿಸ್ಟರು ಮತ್ತವರ ಕಾರ್ಟೂನುಗಳು
ವ್ಯಂಗ್ಯಚಿತ್ರ ಕಲಾವಿದರ ಕುಂಚದ ಚಾಟಿಯೇಟಿಗೆ ಕೊರೊನಾ ವೈರಾಣು ಕೂಡಾ ಹೊರತಾಗಿಲ್ಲ. ನಗುವಿನ ಬುಗ್ಗೆಯನ್ನು ಚಿಮ್ಮಿಸುತ್ತಲೇ ನಮಗೆ, ಸಮಾಜಕ್ಕೆ ಸಂದೇಶ ಸಾರುವ ಅವರ ಕೊರೊನಾ ಸಂಬಂಧಿ ಕಾರ್ಟೂನುಗಳಲ್ಲಿ ಕೆಲವು ಇಲ್ಲಿವೆ.
Published: 07th January 2022 06:23 PM | Last Updated: 07th January 2022 07:15 PM | A+A A-

ಸಾಂದರ್ಭಿಕ ಚಿತ್ರ
- ಸಂಕೇತದತ್ತ
2022ರ ಹೊಸ ವರ್ಷದ ಮೊದಲ ದಿನವೇ ಬೆಂಗಳೂರಿನ ಟ್ರಿನಿಟಿ ವೃತ್ತದಲ್ಲಿರುವ ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಈ ವ್ಯಂಗ್ಯಚಿತ್ರ ಉತ್ಸವವು ಉದ್ಘಾಟನೆಯಾಗಿದೆ. ದೊಡ್ಡ ಅಳತೆಯ ಕ್ಯಾರಿಕೇಚರ್ (ವ್ಯಂಗ್ಯ ಭಾವಚಿತ್ರ) ಗಳ ಪ್ರದರ್ಶನವು ಇಲ್ಲಿ ನಡೆಯಲಿದ್ದು ಜನವರಿ 22ರವರೆಗೂ ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿರುತ್ತದೆ.
ಬಿ. ಜಿ. ಗುಜ್ಜಾರಪ್ಪ (ಗುಜ್ಜಾರ್)
ಇತಿಹಾಸದಲ್ಲಿ ಎಂಎ ಮಾಡಿದ್ದರೂ ಬಿ ಜಿ ಗುಜ್ಜಾರಪ್ಪ ಚಿತ್ರ ರಚನೆಯ ಸೆಳೆತದಿಂದ `ಲಂಕೇಶ್ ಪತ್ರಿಕೆ'ಯ ಮೂಲಕ ಕಾರ್ಟೂನ್ ಕ್ಷೇತ್ರಕ್ಕೆ ಬಂದರು. ಅಲ್ಲಿಂದ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಸುಧಾ ಹಾಗೂ ಮಯೂರ ಪತ್ರಿಕೆಗಳಿಗೆ ಕಲಾವಿದರಾಗಿ ಕೆಲಸ ಮಾಡಿದರು.
ಸರ್ಕಾರ ಹಾಗೂ ಸರ್ಕಾರೇತರದ ಹಲವಾರು ಕಾರ್ಯಕ್ರಮಗಳಿಗೆ ಕಲಾವಿದರಾಗಿ ಸೇವೆ ಸಲ್ಲಿಸಿದ್ದಲ್ಲದೇ ರೈಲ್ವೆ ಇಲಾಖೆಯ ಹಲವಾರು ಯೋಜನೆಗಳಿಗೆ ಮುಖ್ಯ ಚಿತ್ರಕಾರರಾಗಿದ್ದಾರೆ.
ಇವರ ಪುಸ್ತಕ ಮಾಲಿಕೆಯು 16 ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಭಾಷೆಗಳಲ್ಲಿ ಪ್ರಕಟಣೆಗೊಂಡಿವೆ. ಬಾಪು ಹಾಗೂ ಬುದ್ಧನ ಸಂದೇಶ ಸಾರುವ ಚಿತ್ರ ಸಹಿತ ಪುಸ್ತಕಗಳು ಕಾಮಿಕ್ಸ್ ಲೋಕಕ್ಕೆ ಕೊಡುಗೆಯಾಗಿವೆ.
ವೈ. ಎಸ್. ನಂಜುಂಡ ಸ್ವಾಮಿ
ಟ್ರೆಡಿಷನಲ್ ಹಾಗೂ ಕಮರ್ಷಿಯಲ್ ಕಲೆಗಳಲ್ಲಿ ಪಳಗಿರುವ ಶಿವಮೊಗ್ಗ ಮೂಲದ ನಂಜುಂಡಸ್ವಾಮಿ ಅವರು ಐದು ವರ್ಷಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ.
ಈ ಐದು ವರ್ಷಗಳಲ್ಲಿ ಕಾರ್ಟೂನ್ ಹಾಗೂ ಕ್ಯಾರಿಕೇಚರ್ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಈ ಅಲ್ಪ ಸಮಯದಲ್ಲೇ 1000 ಕ್ಕೂ ಹೆಚ್ಚು ಕಾರ್ಟೂನ್‍ಗಳನ್ನೂ ಹಾಗೂ 500 ಕ್ಕೂ ಹೆಚ್ಚು ಕ್ಯಾರಿಕೇಚರ್‍ಗಳನ್ನು ರಚಿಸಿದ್ದು ಇವರ ಸಾಧನೆಯೇ ಸರಿ ಎನ್ನಲ್ಲಡ್ಡಿಯಿಲ್ಲ.
ರಾ ಸೂರಿ
ಉದಯವಾಣಿ, ಪ್ರಜಾವಾಣಿ, ಮಲ್ಲಿಗೆ ಹಾಗೂ ಮುಂತಾದ ಪತ್ರಿಕೆಗಳಲ್ಲಿ ಮುವತ್ತು ವರ್ಷಗಳ ಕಾಲ ಕಲಾವಿದರಾಗಿದ್ದರು. 1977ರಲ್ಲಿ ಉದಯವಾಣಿ ಪತ್ರಿಕೆಯ ದೀಪಾವಳಿ ವಿಶೇಷಾಂಕದ ವಿನ್ಯಾಸಕ್ಕಾಗಿ ರಾಷ್ಟ್ರೀಯ ಪುರಸ್ಕಾರ ದೊರಕಿತ್ತು. ಇದು ಕನ್ನಡ ಪತ್ರಿಕೋದ್ಯಮಕ್ಕೆ ಹಾಗೂ ಕನ್ನಡಿಗನಿಗೆ ಸಿಕ್ಕ ಪ್ರಪ್ರಥಮ ರಾಷ್ಟ್ರೀಯ ಪುರಸ್ಕಾರ.
ಇವರ ಪ್ರತಿಭೆಯು ಪತ್ರಿಕೆಗಳಿಗಷ್ಟೇ ಸೀಮಿತವಾಗದೇ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿವಿಧ ಕಲಾ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಸೂರಿ ಅವರ ರಚನೆಯ ಕನಕದಾಸರ ರೇಖಾಚಿತ್ರವು ಅಂಚೆ ಚೀಟಿಯಾಗಿಯೂ, ರಾಜ್ಯ ಕುರುಬರ ಸಂಘದ ಲಾಂಛನವಾಗಿಯೂ ಖ್ಯಾತವಾಗಿದೆ.
ಸತೀಶ್ ಆಚಾರ್ಯ
ಹುಟ್ಟಿದ್ದು ಕುಂದಾಪುರ. ಫೋಬ್ರ್ಸ್ ಪತ್ರಿಕೆ ಬಿಡುಗಡೆ ಮಾಡಿದ 24 ಥಿಂಕರ್ಸ್ ಪಟ್ಟಿಯಲ್ಲಿ ಸತೀಶ್ ಸ್ಥಾನ ಪಡೆದಿದ್ದಾರೆ. ಪುಸ್ತಕ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟವಾದ ಕಾರ್ಟೂನ್‍ಗಳನ್ನು ನೋಡುತ್ತಾ, ಅವನ್ನು ಅಭ್ಯಾಸಿಸುತ್ತಾ ತಾವೇ ಸ್ವತಃ ಕಲಿತರು.
ಕುಂದಾಪುರದ ಭಂಡಾರ್ಕರ್ ಕಾಲೇಜಿನಲ್ಲಿ ಬಿಕಾಂ ಪದವಿ ಗಳಿಸಿದರು. ಮುಂಬಯಿಯ `ಮಿಡ್ ಡೇ' ಪತ್ರಿಕೆಗೆ ದಿನವೂ ಕಾರ್ಟೂನ್ ಬರೆಯುತ್ತಿದ್ದರು. 2003 ರ ನಂತರ ರಾಜಕೀಯ ವಲಯದ ಕಾರ್ಟೂನ್‍ಗಳತ್ತ ಆಸಕ್ತರಾದರು.
ಇವರ ಕಾರ್ಟೂನ್‍ಗಳು ಪ್ರತಿಷ್ಟಿತ ಪತ್ರಿಕೆಗಳಾದ ವಾಲ್ ಸ್ಟ್ರೀಟ್ ಜರ್ನಲ್, ಟೈಮ್ಸ್ ಹಾಗೂ ಗಾರ್ಡಿಯನ್‍ಗಳಲ್ಲಿ ಪ್ರಕಟವಾಗಿವೆ. ಸತೀಶ್ ದಿನವು ಬರೆಯುವ ರಾಜಕೀಯ ಕಾರ್ಟೂನ್‍ಗಳು ಹೊಸ ಸಂಚಲನವನ್ನೇ ಉಂಟು ಮಾಡುತ್ತಿವೆ.
ಚಂದ್ರನಾಥ್ ಆಚಾರ್ಯ
1949ರ ಫೆಬ್ರವರಿ 28 ರಂದು ಉಡುಪಿ ಜಿಲ್ಲೆಯ ಪುತ್ತೂರಿನಲ್ಲಿ ಜನನವಾಯ್ತು. ಅಲ್ಲಿನ ಸುಂದರ ಪರಿಸರದ ಜತೆ ಜತೆಗೆ ಬೆಳೆದು ಬಾಲ್ಯದಲ್ಲೇ ಸೌಂದರ್ಯವನ್ನು ಆಸ್ವಾದಿಸುವ ಗುಣವನ್ನು ಅಳವಡಿಸಿಕೊಂಡರು. ಇವರು ಕಲಾವಿದರಾಗಲು ಮುಖ್ಯಪಾತ್ರ ವಹಿಸಿದವರು ಅಜ್ಜ (ತಾಯಿಯ ತಂದೆ) ಮಧೂರ ಮಹಾಲಿಂಗಾಚಾರ್ಯರು ಹಾಗೂ ಡಾ ಶಿವರಾಮ ಕಾರಂತರು.
1873ರಲ್ಲಿ ಕೆನ್ ಕಲಾಶಾಲೆಯಲ್ಲಿ ಕಲಾ ಡಿಪ್ಲೊಮಾ ಪಡೆದರು. `ಪ್ರಜಾವಾಣಿ'ಯ ಬಳಗದಲ್ಲಿ ಕಲಾವಿದರಾಗಿ ಸೇರಿ, `ಸುಧಾ' ಮತ್ತು `ಮಯೂರ'ಗಳಲ್ಲಿ ನವ್ಯದ ಜತೆಗೆ ಜನಪ್ರಿಯ ಕತೆ-ಕಾದಂಬರಿಗಳಿಗೆ ಮುಖಚಿತ್ರ ರಚಿಸಿದರು. ಈ ಅವಧಿಯಲ್ಲಿ ರಚಿಸಿದ ಸಾಂಧರ್ಭಿಕ ಚಿತ್ರಗಳು ಜನರ ಮೆಚ್ಚುಗೆ ಪಡೆದು ಪತ್ರಿಕಾರಂಗದಲ್ಲಿ ಹೊಸ ಹಾದಿಗೆ ಕಾರಣಕರ್ತರಾದರು.
ನಾಗನಾಥ್ ಜಿ. ಎಸ್.
ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿಯಿದ್ದ ಕಾರಣ ದಾವಣಗೆರೆಯಲ್ಲಿ ವಾಣಿಜ್ಯಕಲೆಯನ್ನು ಅಭ್ಯಸಿಸಿದರು. ಆನಂತರ ಖ್ಯಾತ ಆ್ಯಡ್ ಏಜೆನ್ಸಿಯಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದರು.
ಈವರೆಗೆ ಹತ್ತು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ರಚಿಸಿದ್ದು ನಾಡಿನ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕ್ಯಾರಿಕೇಚರ್‍ಗಳಲ್ಲೂ ಪರಿಣತಿ ಪಡೆದಿದ್ದು ಸ್ಪಾಟ್ ಕ್ಯಾರಿಕೇಚರ್ ರಚನೆಯನ್ನೂ ರೂಡಿಸಿಕೊಂಡಿದ್ದಾರೆ.
ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದಲ್ಲಿ ಉಪಾಧ್ಯಕ್ಷರಾಗಿದ್ದಾರೆ. ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯಲ್ಲಿ ಟ್ರಸ್ಟಿಯಾಗಿದ್ದಾರೆ. ದೇಶವಿದೇಶದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಹಾಗೂ ಪ್ರದರ್ಶನಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದಾರೆ.
ರಘುಪತಿ ಶೃಂಗೇರಿ
ಜನ್ಮಸ್ಥಳ ಶೃಂಗೇರಿಯ ಸಮೀಪದ ನೆಮ್ಮಾರು. ದಾವಣಗೆರೆ ಕಲಾ ಶಾಲೆಯಲ್ಲಿ ಅಪ್ಲೈಡ್ ಆರ್ಟ್‍ನಲ್ಲಿ ಪದವಿ ಪಡೆದಿದ್ದಾರೆ. ರಘುಪತಿ ಅವರ ಈ ಕಾರ್ಟೂನ್ ಕಲೆಗೆ ಪ್ರಭಾವ ಬೀರಿದ್ದು ಅವರ ಅಣ್ಣ ಹಾಗೂ ನಾಡಿನ ಪ್ರಖ್ಯಾತ ವ್ಯಂಗ್ಯಚಿತ್ರಕಾರರಾಗಿದ್ದ ಡಾ. ಸತೀಶ್ ಶೃಂಗೇರಿ ಅವರು ಹಾಗೂ ಅವರ ಕಾರ್ಟೂನ್ ಶೈಲಿಯೇ ಕಾರಣ ಎನ್ನುವುದು ರಘುಪತಿ ಅವರ ಮನದಾಳದ ಮಾತು.
ಸತೀಶ್ ಅವರು ಇಂದಿಲ್ಲದಿದ್ದರೂ ಅವರ ಕಾರ್ಟೂನ್‍ಗಳು ಈಗಲೂ ಜನರ ಮನದಲ್ಲಿ ಚಿರಸ್ಥಾಯಿಯಾಗಿದೆ. ಅಲ್ಲದೆ ರಘುಪತಿಯೂ ಸಹ ಅಣ್ಣನ ಹೆಸರನ್ನು ಉಳಿಸುವಂತೆ ಈ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದು 15 ಸಾವಿರಕ್ಕೂ ಅಧಿಕ ಕಾರ್ಟೂನ್‍ಗಳನ್ನು ರಚಿಸಿದ್ದಾರೆ.
ಮನೋಹರ್ ಆಚಾರ್ಯ
ಕನ್ನಡ ಪತ್ರಿಕೋಧ್ಯಮದಲ್ಲಿ ವಿಶುಯಲ್ ಜರ್ನಲಿಸ್ಟ್ ಆಗಿ 45 ವರ್ಷಗಳ ಅನುಭವವಿದೆ. ಸುಧಾ, ಮಯೂರ ಹಾಗೂ ಪ್ರಜಾವಾಣಿ ಪತ್ರಿಕೆಗಳಲ್ಲಿ ವಿಶುಯಲ್ ಜರ್ನಲಿಸ್ಟ್ ಆಗಿ 37 ವರ್ಷಗಳು ನಿರಂತರ ಸೇವೆ ಸಲ್ಲಿಸಿದ್ದ ಮನೋಹರ್ ಅವರು ಚೀಫ್ ಆರ್ಟಿಸ್ಟ್ ಆಗಿ ನಿವೃತ್ತಿ ಹೊಂದಿದ್ದಾರೆ.
ಈಗ ಮ್ಯಾಝ್ ಫೌಂಡೇಶನ್ (ವಿಶುಯಲ್ ಪ್ಲಾಂಟೇಶನ್ ಅಂಡ್ ರಿಸರ್ಚ್ ಸೆಂಟರ್ ಮತ್ತು ಆರ್ಟ್ ಗ್ಯಾಲರಿ) ಮಾಡಿಕೊಂಡು ಅದರ ಫೌಂಡೇಶನ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಕ್ರಿಯೇಟಿವ್ ಹೆಡ್ ಆಗಿ ಸಂಸ್ಥೆ ಸ್ಥಾಪಿಸಿದ್ದಾರೆ. ಸದಾ ಕಲಾ ಚಟುವಟಿಕೆಯಲ್ಲಿರುವ ಮನೋಹರ್ ಅವರ ಸಾಂರ್ದಭಿಕ ಚಿತ್ರ ಹಾಗು ಪೇಟಿಂಗ್‍ಗಳು ವಿಭಿನ್ನ ಶೈಲಿಯಲ್ಲಿದ್ದು ಆಕರ್ಷಿಸುವಂತಿರುತ್ತವೆ.
ಜೈರಾಮ್ ಉಡುಪ
ಶಿವಮೊಗ್ಗ ಜಿಲ್ಲೆಯ ಜನ್ನಾಪುರದ ಜೈರಾಮ್ ಅವರು ವಾಸವಿರುವುದು ಬೆಂಗಳೂರಲ್ಲಿ. ಇವರ ಮೊದಲ ವ್ಯಂಗ್ಯಚಿತ್ರವು 1988 ರಲ್ಲಿ `ತರಂಗ' ವಾರಪತ್ರಿಕೆಯಲ್ಲಿ ಪ್ರಕಟವಾಯ್ತು.
ವಿದ್ಯಾಭ್ಯಾಸವು ಬಿ.ಇ., ಎಲೆಕ್ಟ್ರಿಕಲ್ ಆಗಿದ್ದು ಅದರಲ್ಲೇ ವೃತಿಯನ್ನು ಆರಂಭಿಸಿದರು. ಆದರೆ ಪಂಜು ಗಂಗೊಳ್ಳಿ ಅವರ ವ್ಯಂಗ್ಯಚಿತ್ರಗಳಿಂದ ಸ್ಪೂರ್ತಿ ಪಡೆದು ವ್ಯಂಗ್ಯಚಿತ್ರವನ್ನು ಪ್ರವೃತ್ತಿಯಾಗಿಸಿಕೊಂಡರು. ಹಲವಾರು ಅಂತಾರಾಷ್ಟ್ರೀಯ ಮಟ್ಟ ಕಾರ್ಟೂನ್ ಹಾಗೂ ಕ್ಯಾರಿಕೇಚರ್ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.
ಜೀವನ್ ಶೆಟ್ಟಿ
`ನಾನು ಹುಟ್ಟು ಕಲಾವಿದನಲ್ಲ' ಎನ್ನುವುದು ಇವರ ಭಾವನೆ! ಸ್ವ-ಕಲಿಕೆಯ ಸಾಧನೆಯೇ ಮೂಲ ಮಂತ್ರ ಎನ್ನುತ್ತಾರೆ. ಕಾಲೇಜಿನ ಗೋಡೆ ಪತ್ರಿಕೆ ಮೇಲೆ ವಿವಿಧ ಮಾಧ್ಯಮಗಳಲ್ಲಿ ಚಿತ್ರ ಬರೆದು ಹಾಕುತ್ತಿದ್ದರಂತೆ.
ಚಿತ್ರಕಲೆಯ ಬಗ್ಗೆ ಶಾಲೆ-ಕಾಲೇಜುಗಳಲ್ಲಿ ಒಂದಿಷ್ಟು ಹುಚ್ಚು ಬೆಳೆಸಿಕೊಂಡದ್ದರಿಂದ ಅದನ್ನೇ ಮುಂದುವರಿಸಿಕೊಂಡು ಬಂದರು. ಹವ್ಯಾಸಿಯಾಗಿ ವ್ಯಂಗ್ಯಚಿತ್ರದತ್ತ ಒಲವು ಹರಿಸಿದರು.
1979ರಿಂದ ಇಲ್ಲಿಯವರೆಗೂ ಸರಿಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಜೇಮ್ಸ್ ವಾಜ್
ತೀರ್ಥಹಳ್ಳಿಯವರಾದ ಜೇಮ್ಸ್ ಅವರು ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ. ಮಣಿಪಾಲದ `ತರಂಗ' ವಾರಪತ್ರಿಕೆಯಲ್ಲಿ ಹಿರಿಯ ವಿನ್ಯಾಸಕ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಆ ನಂತರ ಜೇಮ್ಸ್ ಅವರಿಗೆ ಇಷ್ಟವಾದ ನೆಚ್ಚಿನ ವ್ಯಂಗ್ಯಚಿತ್ರಕಾರರೆಂದರೆ ಗುಜ್ಜಾರಪ್ಪ, ಪ್ರಕಾಶ್ ಶೆಟ್ಟಿ, ಪಂಜುಗಂಗೊಳ್ಳಿ ಹಾಗೂ ಸತೀಶ್ ಆಚಾರ್ಯ.
ದಿ ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯ ವ್ಯಂಗ್ಯಚಿತ್ರ ಹಾಗೂ ಕ್ಯಾರಿಕೇಚರ್ ಸ್ಪರ್ಧೆ, ಅರಣ್ಯ ಇಲಾಖೆಯ ಕಾರ್ಟೂನ್ ಸ್ಪರ್ಧೆಗಳಲ್ಲದೇ ಇಟಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕಾರ್ಟೂನ್ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳು ಲಭಿಸಿದೆ.
ಸುಭಾಷ್ ಚಂದ್ರಗೌಡ
ನೈಸರ್ಗಿಕವಾಗಿ ಹಾಗೂ ಸಾಂಸ್ಕøತಿಕವಾಗಿ ಶ್ರೀಮಂತವಾದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರವು ಇವರ ಹುಟ್ಟೂರಾಗಿದೆ.
ಕಲೆಯಲ್ಲಿ ಪದವಿಯನ್ನು ಪಡೆದಿದ್ದಾರೆ. ಹಾಗಾಗಿ ಕಲೆಯ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಬೆಂಗಳೂರಲ್ಲಿದ್ದು ಅನಿಮೇಷನ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರವೃತ್ತಿಗಾಗಿ ಸಾಂಪ್ರದಾಯಿಕ ಚಿತ್ರ ರಚನೆ ಹಾಗೂ ವ್ಯಂಗ್ಯಚಿತ್ರ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ರವಿ ಎಲ್. ಪುಜಾರಿ
ಬಾಗಲಕೋಟೆಯವರಾಗಿದ್ದು ಬೆಂಗಳೂರಲ್ಲಿ ನೆಲೆಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಅಸೋಸಿಯೇಟ್ ಕ್ರಿಯೇಟಿವ್ ಲೀಡ್ ಆಗಿದ್ದು, ಪ್ರವೃತ್ತಿಯಲ್ಲಿ ಕಾರ್ಟೂನಿಷ್ಟ್ ಹಾಗೂ ಕ್ಯಾರಿಕೇಚರಿಸ್ಟ್ ಆಗಿದ್ದಾರೆ.
ದಾವಣಗೆರೆಯ ಕಲಾ ಮಹಾವಿದ್ಯಾಲಯದಲ್ಲಿ ಪದವಿಯನ್ನು ಪಡೆದಿದ್ದಾರೆ. ಕಾಲೇಜು ದಿನಗಳಲ್ಲೇ ಸ್ಥಳೀಯ ದಿನಪತ್ರಿಕೆಗಳಿಗೆ ಕಾರ್ಟೂನ್ ಬರೆಯುತ್ತಿದ್ದರು.
ಆರ್ ಕೆ ಲಕ್ಷ್ಮಣ್, ಗುಜ್ಜಾರಪ್ಪ, ಕೃಷ್ಣಮೂರ್ತಿ ವೈ ದೊಡ್ಮನಿ ಹಾಗೂ ಮುಂತಾದ ಪ್ರಖ್ಯಾತ ಕಲಾವಿದರು ಸ್ಪೂರ್ತಿಯಾಗಿದ್ದಾರೆ ಎನ್ನುವುದು ರವಿ ಅವರ ಮಾತು.
ಯತೀಶ್ ಎಲ್. ಶೆಟ್ಟಿಗಾರ್
ದಕ್ಷಿಣ ಕನ್ನಡ ಜಿಲ್ಲೆಯ ಸಿದ್ಧಕಟ್ಟೆಯವರು. 2004ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಇನ್ಫೋಸಿಸ್ ಸಂಸ್ಥೆಯಲ್ಲಿ ಕಲಾವಿದರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲಿ ಇಲ್ಲಸ್ಟ್ರೇಟರ್, ವಿಶುವಲ್ ಥಿಂಕರ್, ಗ್ರಾಫಿಕ್ ಡಿಸೈನರ್ ಹಾಗೂ ಕಾರ್ಟೂನಿಸ್ಟ್ ಆಗಿಯೂ ಗುರುತಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ರಾಜಕೀಯ ಚಿತ್ರಗಳ ಮೂಲಕ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. 8 ವರ್ಷಗಳು ನಿರಂತರವಾಗಿ ಯತೀಶ್ ಬರೆದ ಕಾರ್ಟೂನ್ ಹಾಗೂ ಕ್ಯಾರಿಕೇಚರ್‍ಗಳು ಈ ಪತ್ರಿಕೆಯಲ್ಲಿ ಪ್ರಕಟವಾಗಿವೆ.
ಚಂದ್ರ ಗಂಗೊಳ್ಳಿ
ಬಿಬಿಎಂ ಪದವೀದರರಾದ ಚಂದ್ರು ಅವರು ವಿದ್ಯಾಭ್ಯಾಸದ ಜೊತೆ ಬೆಳೆಸಿಕೊಂಡ ವ್ಯಂಗ್ಯಚಿತ್ರಕಲೆಯು ಇವತ್ತು ಜೀವನಕ್ಕೆ ಆಧಾರವಾಗಿದೆ, ಇದು ಅವರದೇ ಮಾತು! ಒಂಟಿಯಾಗಿ ಹಾಗೂ ಜಂಟಿಯಾಗಿ ಸಾಕಷ್ಟು ವ್ಯಂಗ್ಯಚಿತ್ರ ಪ್ರದರ್ಶನಗಳನ್ನು ನೀಡಿದ್ದಾರೆ.
ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರು ನಾಡಿನ ಹಲವಾರು ದಿನ ಪತ್ರಿಕೆ, ಸಂಜೆ ಪತ್ರಿಕೆ, ವಾರ ಪತ್ರಿಕೆ ಹಾಗೂ ಮಾಸ ಪತ್ರಿಕೆಗಳಿಗೆ ಕೆಲಸ ಮಾಡಿದ್ದಾರೆ. ಇದೀಗ ಹದಿನೈದು ವರ್ಷಗಳಿಂದ ನಾಡಿನ ಸುಪ್ರಸಿದ್ಧ ದಿನ ಪತ್ರಿಕೆ `ವಿಜಯ ಕರ್ನಾಟಕ'ದಲ್ಲಿ ವ್ಯಂಗ್ಯಚಿತ್ರಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಂಕೇತ್ ಗುರುದತ್ತ
ಗುರುದತ್ತ ಎನ್ ಎಸ್ ಅವರ ಪೆನ್‍ನೆಮ್ 'ಸಂಕೇತ್'. ಈ ಹೆಸರಲ್ಲಿ ಇವರು ಪರಿಚಿತರಾಗಿದ್ದಾರೆ. 1984 ರಲ್ಲಿ ನಡೆದ ಭೋಪಾಲ್' ದುರಂತದಿಂದ ಆದ ಅನಾಹುತವನ್ನು ಪ್ರತಿಬಿಂಬಿಸುವಂತಹ ಚಿತ್ರಕಲಾ ಪ್ರದರ್ಶನಕ್ಕಾಗಿ ವ್ಯಂಗ್ಯಚಿತ್ರಗಳನ್ನು ರಚಿಸುವ ಮೂಲಕ ವ್ಯಂಗ್ಯಚಿತ್ರ ರಚನೆಯನ್ನು ಆರಂಭಿಸಿ ಇಲ್ಲಿಯವರೆಗೂ ನಡೆದು ಬಂದಿದ್ದಾರೆ.
2012ರಿಂದ ಕನ್ನಡಪ್ರಭ ಪತ್ರಿಕೆಯಲ್ಲಿ ಆರೂವರೆ ವರ್ಷಗಳು ಚಿತ್ರಕಲಾವಿದರಾಗಿ ಕಾರ್ಯ ನಿರ್ವಹಿಸಿ ಅಲ್ಲಿ ಎಲ್ಲಾ ತರಹದ ವ್ಯಂಗ್ಯಚಿತ್ರ, ವ್ಯಂಗ್ಯಭಾವಚಿತ್ರ ಹಾಗೂ ಸಾಂದರ್ಭಿಕ ಚಿತ್ರಗಳನ್ನು ರಚಿಸಿದ್ದಾರೆ. ಅಲ್ಲದೇ ವ್ಯಕ್ತಿಚಿತ್ರ ಲೇಖನ, ವಿಮರ್ಶೆ ಹಾಗೂ ಹಲವಾರು ರೀತಿಯ ಲೇಖನಗಳನ್ನು ಬರೆದಿದ್ದಾರೆ.
ಕರ್ನಾಟಕ ರಾಜ್ಯ ವ್ಯಂಗ್ಯಚಿತ್ರಕಾರರ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರಿಯರಾಗಿದ್ದಾರೆ.
ಎಸ್. ಸತೀಶ್ ಬಾಬು
ಇವರು ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿ ಗ್ರಾಮದವರು. ಚಿಕ್ಕ ವಯಸ್ಸಿನಲ್ಲೇ ಕಲೆಯಲ್ಲಿ ಆಸಕ್ತಿ ಹೊಂದಿದ್ದರಿಂದ ಕಲೆಯಲ್ಲಿ ಸ್ನಾತಕೋತ್ತರ ಪಡೆದ ನಂತರ ಅನಿಮೇಷನ್ ಕ್ಷೇತ್ರವನ್ನು ಆರಿಸಿಕೊಂಡರು.
ಸುಮಾರು ಇಪ್ಪತ್ತು ವರ್ಷಗಳಿಂದ ಅನಿಮೇಷನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಹಲವಾರು ಕಾರ್ಟೂನ್‍ಗಳನ್ನು ಹಾಗೂ ಕ್ಯಾರಿಕೇಚರ್‍ಗಳನ್ನು ರಚಿಸುತ್ತಾ ಬಂದಿದ್ದಾರೆ.
ಇವರ ವಂಗ್ಯಚಿತ್ರಗಳು ಸೋಷಿಯಲ್ ಮಿಡಿಯಾದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿವೆ. ಅಲ್ಲದೇ ಸಾಕಷ್ಟು ಜನರ ಮೆಚ್ಚುಗೆಗೂ ಪಾತ್ರವಾಗಿವೆ.
ಶೈಲೇಶ್ ಉಜಿರೆ
ಉಜಿರೆಯ ಎಸ್‍ಡಿಎಮ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಟೂನ್ ರಚನೆಯನ್ನು ಪ್ರವೃತ್ತಿಯನ್ನಾಗಿ ಸ್ವೀಕರಿಸಿದ್ದಾರೆ. ಶೈಲೇಶ್ ಅವರ ಸಾವಿರಾರು ಕಾರ್ಟೂನ್‍ಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಹಲವಾರು ಪ್ರಶಸ್ತಿ-ಪುರಸ್ಕಾರಗಳು ಇವರ ವ್ಯಂಗ್ಯಚಿತ್ರಗಳಿಗೆ ಲಭಿಸಿವೆ. ಕ್ಯಾರಿಕೇಚರ್‍ಗಳನ್ನೂ ಬರೆಯುತ್ತಾ ಬಂದಿದ್ದಾರೆ.
ಗೀಚಾ ಬೋಳ್ಕಟ್ಟೆ
ಉತ್ತರ ಕರ್ನಾಟಕದ ಕುಮಟಾದ ಗಿರೀಶ್ ನಾಯಕ್ ಅವರು `ಗೀಚಾ ಬೋಳ್ಕಟ್ಟೆ' ಎಂಬ ನಾಮಾಂಕಿತರಾಗಿ ಚಿತ್ರ, ವ್ಯಂಗ್ಯಚಿತ್ರ ಹಾಗೂ ವ್ಯಂಗ್ಯಭಾವಚಿತ್ರಗಳನ್ನು ಬರೆಯುತ್ತಾ ಪ್ರಸಿದ್ಧರಾಗಿದ್ದಾರೆ. ಪ್ರತಿಭಾನ್ವಿತ `ಗೀಚಾ' ಅವರು ಪೆನ್ಸಿಲ್ ಕಲೆಯಲ್ಲಿ ಅತ್ಯುತ್ತಮ ಪರಿಣತಿ ಹೊಂದಿದ್ದು ಖ್ಯಾತನಾಮರ ವ್ಯಂಗ್ಯಭಾವಚಿತ್ರಗಳನ್ನು ರಚಿಸಿ ಸಾಮಾಜಿಕ ಜಾಲ ತಾಣದಲ್ಲಿ ಪ್ರಖ್ಯಾತರಾಗಿದ್ದಾರೆ.
ಈ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ವ್ಯಂಗ್ಯಭಾವಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಿದ್ದಾರೆ.
ಪ್ರಸನ್ನ ಕುಮಾರ್
ಬೆಂಗಳೂರಿನವರೇ ಆದ ಪ್ರಸನ್ನಕುಮಾರ್ ಅವರು ವೃತ್ತಿಯಲ್ಲಿ ನೋಕಿಯಾ ಸಂಸ್ಥೆಯಲ್ಲಿ ಆಗಿದ್ದು ಕಾರ್ಟೂನ್ ಕ್ಷೇತ್ರವನ್ನು ಪ್ರವೃತ್ತಿಯನ್ನಾಗಿ ಸ್ವೀಕರಿಸಿದ್ದಾರೆ.
ಬಾಲ್ಯದಲ್ಲೇ ಚಿತ್ರಕಲೆಯಲ್ಲಿ ಆಸಕ್ತಿ ಇದ್ದ ಪ್ರಸನ್ನಕುಮಾರ್ ಅವರೀಗ ತಮ್ಮ ಮಗನಿಗೆ ಚಿತ್ರಕಲೆಯನ್ನು ಕಲಿಸುವ ಸಲುವಾಗಿ ಮತ್ತೆ ಚಿತ್ರ ರಚನೆಯನ್ನು ರೂಢಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರತಿಕ್ರಿಯೆಗಳನ್ನು ಪ್ರಶಸ್ತಿ-ಪುರಸ್ಕಾರವೆಂದೇ ಭಾವಿಸಿದ್ದಾರಂತೆ.
ದತ್ತಾತ್ರಿ ಎಂ. ಎನ್.

ಹುಟ್ಟಿದ್ದು ಮಲೆನಾಡಿನ ತೀರ್ಥಹಳ್ಳಿ ಸಮೀಪದ ಕಟ್ಟೆಹಕ್ಕಲು, ಸಧ್ಯಕ್ಕೆ ಬೆಂಗಳೂರಿನಲ್ಲಿ ವೃತ್ತಿ ಹಾಗೂ ಪ್ರವೃತ್ತಿಯಲ್ಲಿ ತೊಡಗಿದ್ದಾರೆ. ಖಾಸಗಿ ಜಾಹಿರಾತು ಕಂಪನಿಯೊಂದರಲ್ಲಿ ದೃಶ್ಯ ವಿನ್ಯಾಸಕನಾಗಿ ಕೆಲಸ ಮಾಡುತ್ತಿದ್ದಾರೆ. ವ್ಯಂಗಚಿತ್ರ ಬರೆಯುವುದು ದತ್ತಾ ಅವರ ಹವ್ಯಾಸ.
ದತ್ತಾ ಬರೆದದ್ದು ಬೆರೆಳೆಣಿಕೆಯಷ್ಟಾದರೂ ಜನರ ಮನದಲ್ಲಿ ಉಳಿದದ್ದು ಬರೆದ ಎಲ್ಲಾ ಕಾರ್ಟೂನ್‍ಗಳು, ಇವೆಲ್ಲವೂ ವಾಟ್ಸ್ಯಾಪ್ ಗ್ರೂಪ್‍ಗಳಲ್ಲಿ ಹರಿದಾಡಿ ವೈರಲ್ ಆಗುತ್ತಾ ನಾಡಿನ ಜನರ ಬಾಯಲ್ಲಿ, ಮನದಲ್ಲಿ ಸ್ಥಾನಗಳಿಸಿದ್ದಾರೆ. `ದತ್ತಾ3' ಎಂಬ ಹೆಸರಲ್ಲಿ ಕಾರ್ಟೂನ್ ಬರೆಯುತ್ತಾ ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು ಪಡೆದಿದ್ದಾರೆ.
ಕೆ. ಆರ್. ಸ್ವಾಮಿ
ಕನ್ನಡ ನಾಡು ಕಂಡ ಖ್ಯಾತ ವ್ಯಂಗ್ಯಚಿತ್ರಕಾರರಲ್ಲಿ ಕೆ ಆರ್ ಸ್ವಾಮಿ ಅವರು ಅಗ್ರಪಂಕ್ತಿಯಲ್ಲಿದ್ದಾರೆ. ಇಳಿವಯಸ್ಸಲ್ಲೂ ತಮ್ಮ ನೆಚ್ಚಿನ ಹವ್ಯಾಸವಾದ ಕಾರ್ಟೂನ್ ರಚನೆಯ ಉತ್ಸಾಹವು ಚಿಲುಮೆಯಂತೆ ನಿರಂತರವಾಗಿ ಸಾಗಿದೆ.
ವೃತ್ತಿಯಲ್ಲಿ ಕರ್ನಾಟಕ ವಿದ್ಯುನ್ಮಂಡಲಿಯಲ್ಲಿ ಇಂಜಿನಿಯರ್ ಆಗಿದ್ದವರು ನಿವೃತ್ತಿ ಹೊಂದಿದ ಮೇಲೆ ಪ್ರವೃತ್ತಿಯಾದ ಕಾರ್ಟೂನ್ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಅಲ್ಲದೇ ಈ ಉತ್ಸಾಹ ಇಮ್ಮಡಿಗೊಂಡಿದೆ.
ಪೆನ್ನು-ಪೇಪರ್‍ನಿಂದ ಆರಂಭಗೊಂಡರೂ ಈ ಕಾಲಘಟ್ಟಕ್ಕೂ ಅನ್ವಯವಾಗುವಂತೆ ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದಾರೆ. ಇವರ ವ್ಯಂಗ್ಯಚಿತ್ರದ ಅಭ್ಯಾಸ ತಂತ್ರಜ್ಞಾನ ಯುಗದಲ್ಲೂ ಅಷ್ಟೇ ಸ್ಪಷ್ಟ ಹಾಗೂ ವಿಭಿನ್ನವಾಗಿ ಮೂಡಿ ಬರುತ್ತಿದೆ. ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಇವರ ಕಾರ್ಟೂನ್‍ಗಳು ಪ್ರಕಟಗೊಂಡಿವೆ.