ಡಿಜಿಟಲ್ ಪರದೆ ಹಿಂದಿನ ಡೇಂಜರ್: ಸೈಬರ್ ಜಗತ್ತಿನಲ್ಲಿ ನಾವು ಪಾಲಿಸಬೇಕಾದ 5 ಪಾಲಿಸಿಗಳು
ಇಂದಿನ ಕಾಲದಲ್ಲಿ ಪ್ರತಿಯೊಬ್ಬರು ಸೈಬರ್ ಲಾ ನಿಯಮಗಳನ್ನು ತಿಳಿದುಕೊಂಡರೆ ತೊಂದರೆಗಳಿಂದ ಪಾರಾಗಬಹುದು. ಭಾರತದಲ್ಲಿ ಸೈಬರ್ ಲಾ ಅನ್ನು 'ಇನ್ ಫಾರ್ಮೇಶನ್ ಟೆಕ್ನಾಲಜಿ ಆಕ್ಟ್' ಎನ್ನುತ್ತಾರೆ.
Published: 20th March 2022 01:43 PM | Last Updated: 20th March 2022 01:43 PM | A+A A-

ಸಾಂದರ್ಭಿಕ ಚಿತ್ರ

ಲೇಖಕಿ ಮಂಜುಳಾ ಸಿ ಎಸ್ ಅವರು ಮೂಲತಃ ಚನ್ನಪಟ್ಟಣದವರು. ಸದ್ಯ ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕವಿತೆ, ಅಂಕಣ, ಲಘು ಬರಹಗಾರರಾದ ಇವರು ಹವ್ಯಾಸಿ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಅವರ ಕವಿತೆಗಳು, ಬರಹಗಳು ನಾಡಿನ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಇಂದು ಸೈಬರ್ ಅಪರಾಧ ಜಾಗೃತಿಯ ಅನಿವಾರ್ಯತೆ ಎಂದಿಗಿಂತಲೂ ಹೆಚ್ಚಾಗಿದೆ. ಈ ಬಗ್ಗೆ ಜನಸಾಮಾನ್ಯರು ತಿಳಿದುಕೊಳ್ಳಬೇಕಾದುದು ಅವಶ್ಯ. ಸೈಬರ್ ಕ್ರೈಂ ಎಂದರೆ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್, ಟಾಬ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿಕೊಂಡು ಎಸಗುವ ಅಪರಾಧ.
1. ಸೈಬರ್ ವಂಚನೆಯ ಜಾಗೃತಿ
ಭಾರತದಂತಹ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಸೈಬರ್ ಖದೀಮರು ತಮ್ಮ ಕೈಚಳಕ ತೋರುತ್ತಿರುವುದರಿಂದ ಸೈಬರ್ ಕ್ರೈಂ ಪ್ರಕರಣಗಳ ಸಂಖೈ ಗಣನೀಯವಾಗಿ ಏರಿಕೆಯಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ಜನರು ಅನಿವಾರ್ಯವಾಗಿ ಆನ್‌ಲೈನ್ ಮೇಲೆ ಅವಲಂಬಿತರಾಗಬೇಕಾಗಿ ಬಂದಿತ್ತು. ಇದು ಸೈಬರ್ ಖದೀಮರಿಗೆ ವಂಚನೆಯ ಅವಕಾಶಗಳನ್ನು ಹೆಚ್ಚಿಸಿದ್ದವು.
ಇಂದಿನ ಕಾಲದಲ್ಲಿ ಪ್ರತಿಯೊಬ್ಬರು ಸೈಬರ್ ಲಾ ನಿಯಮಗಳನ್ನು ತಿಳಿದುಕೊಂಡರೆ ತೊಂದರೆಗಳಿಂದ ಪಾರಾಗಬಹುದು. ಭಾರತದಲ್ಲಿ ಸೈಬರ್ ಲಾ ಅನ್ನು 'ಇನ್ ಫಾರ್ಮೇಶನ್ ಟೆಕ್ನಾಲಜಿ ಆಕ್ಟ್' ಎನ್ನುತ್ತಾರೆ. ಡಿಜಿಟಲ್ ಉಪಕರಣಗಳನ್ನು ಹೆಚ್ಚು ಬಳಸುವವರು ಸೈಬರ್ ಲಾ ತಿಳಿವಳಿಕೆ ಹೊಂದಿರಬೇಕು. ಶಾಲಾ ಕಾಲೇಜುಗಳಲ್ಲಿ ಈ ಕಾನೂನಿನ ಅರಿವು ಮೂಡಿಸುವ ಪ್ರಯತ್ತ ನಡೆಯುತ್ತಿದೆ.
2. ಸೆಕೆಂಡ್ ಹ್ಯಾಂಡ್ ಖರೀದಿ ಡೇಂಜರ್
ಐಟಿ ಆಕ್ಟ್ 66 ‘ಬಿ’ ನ ಪ್ರಕಾರ ಯಾವುದೇ ಕದ್ದ ಕಂಪ್ಯೂಟರ್ ಅಥವಾ ಮೊಬೈಲ್‌ನ್ನು ನೀವು ಖರೀದಿಸಿದರೆ 3 ವರ್ಷ ಜೈಲು ಶಿಕ್ಷೆ ಹಾಗು 1 ಲಕ್ಷ ರೂ ದಂಡ ಅಥವಾ ಎರಡೂ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಜನಸಾಮಾನ್ಯರು ಸೆಕೆಂಡ್ ಹ್ಯಾಂಡ್ ಪೋನ್‌ಗಳನ್ನು ಖರೀದಿಸುವ ಮುನ್ನು ಜಾಗ್ರತೆ ವಹಿಸದೇ ಹೋದರೆ ಅಪಾಯ.
ಮಕ್ಕಳ ನೀಲಿ ಚಿತ್ರಗಳನ್ನು ವೀಕ್ಷಿಸುವುದರಲಿ ಸರ್ಚ್ ಮಾಡುವುದು ಗಂಭೀರ ಅಪರಾದ. ಯಾವುದೇ ಸೆನ್ಸಿಟಿವ್ ಸಂದೇಶಗಳನ್ನು ಫಾರ್ವಡ್ ಮಾಡುವುದು ಅಪರಾಧವೆಂಬುದು ನೆನಪಿರಲಿ.
3. ಪ್ರೈವೆಸಿ ಸೆಟ್ಟಿಂಗ್ ಬದಲಾಯಿಸಿ
ಫೇಸ್ ಬುಕ್, ಟ್ವಿಟ್ಟರ್, ಇನ್ ಸ್ಟಾಗ್ರಾಂ ಸೇರಿದಂತೆ ಹಲವು ಜನಪ್ರಿಯ ಸಾಮಾಜಿಕ ಜಾಲತಾಣಗಳ ಬಳಕೆದಾರರು ತಮ್ಮ ಪ್ರೊಫೈಲ್ ಗಳನ್ನು ದುಷ್ಕರ್ಮಿಗಳಿಂದ ರಕ್ಷಿಸಿಕೊಳ್ಲಬಹುದು. ಅದಕ್ಕಾಗಿ ಆ ಸಂಸ್ಥೆಗಳೇ ಪ್ರೈವೆಸಿ ಸೆಟ್ಟಿಂಗ್ ಗಳನ್ನು ನೀಡಿವೆ. ಬಳಕೆದಾರರು ಆ ಸೆಟ್ಟಿಂಗ್ ಅನ್ನು ಆಯ್ಕೆ ಮಾಡಿಕೊಂಡು ಭದ್ರತೆಯನ್ನು ಹೆಚ್ಚಿಸಿಕೊಳ್ಳಬಹುದು.
ಉದಾಹರಣೆಗೆ ಫೇಸ್ ಬುಕ್ ಪ್ರೊಪೈಲ್ ಪೋಟೊಗೆ ಸೇಫ್ ಗಾರ್ಡ್ ಬಟನ್ ಬಳಸಿದರೆ ಬೇರೆಯವರು ನಿಮ್ಮ ಭಾವಚಿತ್ರವನ್ನು ಸೇವ್ ಮಾಡುವುದು ಅಥವಾ ಡೌನ್‌ಲೋಡ್ ಮಾಡುವುದು ಸಾಧ್ಯವಿಲ್ಲ. ಹಲವು ಪ್ರಕರಣಗಳಲ್ಲಿ ಯುವತಿಯರ ಪೋಟೋಗಳನ್ನು ಬಳಸಿ ಅಶ್ಲೀಲ ಚಿತ್ರಗಳನ್ನು ಎಡಿಟ್ ಮಾಡಿ ಅವರ ಸ್ನೇಹಿತರಿಗೆ ಸಂಂಧಿಕರಿಗೆ ಕಳುಹಿಸುವುದಾಗಿ ಬ್ಲಾಕ್‌ಮೇಲ್ ಮಾಡುವ ಸೈಬರ್ ವಂಚಕರೂ ನಮ್ಮ ನಡುವಿದ್ದಾರೆ.
4. ಫೇಕ್ ಅಕೌಂಟ್ ರಿಪೋರ್ಟ್ ಮಾಡಿ
ನಿಮಗೆ ಯಾವುದಾದರೂ ಅಪರಿಚಿತ ವ್ಯಕ್ತಿಗಳು ಫ್ರೆಂಡ್ ರಿಕ್ವೆಸ್ಟ್ ಕಳಿಸಿದಲ್ಲಿ ಪರಾಮರ್ಶೆ ಮಾಡದೆ ಓಕೆ ಒತ್ತಬಾರದು. ಆ ಪ್ರೊಫೈಲನ್ನು ಪರಾಮರ್ಶಿಸುವಾಗ ಅದು ಫೇಕ್ ಎಂದು ಕಂಡುಬಂದರೆ ಅದನ್ನು ಫೇಸ್ ಬುಕ್ ಗಮನಕ್ಕೆ ತನ್ನಿ. ಅದಕ್ಕಾಗಿ ಫೇಸ್ ಬುಕ್ ರಿಪೋರ್ಟ್ ಎನ್ನುವ ಆಯ್ಕೆ ನೀಡಿದೆ.
ಅಪರಿಚರೊಂದಿಗೆ ಚಾಟ್ ಅಥವಾ ವಿಡಿಯೋ ಕಾಲ್ ಮುಂತಾದ ಚಟುವಟಿಕೆಗಳಿಂದ ದೂರವಿರಿ. ಲವರ್ ಗಳು ಬ್ರೇಕ್ ಅಪ್ ಆದ ನಂತರ ನಿಮ್ಮ ಭಾವಚಿತ್ರಗಳನ್ನು ಅಥವಾ ಖಾಸಗಿ ಚಿತ್ರಗಳನ್ನು ಮತ್ತೋರ್ವ ವ್ಯಕ್ತಿ ಅಪಲೋಡ್ ಮಾಡುವ ಸಾಧ್ಯತೆಯಿರುತ್ತದೆ. ಆನ್‌ಲೈನ್‌ನಲ್ಲಿ ಖಾಸಗಿ ಚಿತ್ರಗಳನ್ನು ಪ್ರಕಟಿಸಿದರೆ ಐಟಿ ಆಕ್ಟ್ 66 ‘ಇ’ ನ ಪ್ರಕಾರ 2 ಲಕ್ಷ ರೂ ದಂಡ ಹಾಗೂ 3 ವರ್ಷ ಜೈಲುಶಿಕ್ಷೆ ಅಥವಾ ಎರಡೂ ಶಿಕ್ಷೆಗಳಿಗೆ ಗುರಿಯಾಗಬಹುದು. ಇನ್ನು ಸೈಬರ್ ಟೆರರಿಸಮ್ ಚಟುವಟಿಕೆಗಳಿಗೆ ಜೀವಾವಧಿ ಶಿಕ್ಷೆಯನ್ನೂ ನೀಡಬಹುದು.
5. ಎಲ್ಲವನ್ನೂ ಶೇರ್ ಮಾಡಬೇಡಿ
ಜನರು ಆನ್ ಲೈನಿನಲ್ಲಿ ತಮ್ಮ ದೈನಂದಿನ ಚಟುವಟಿಕೆ, ಇರುವನ್ನು ಜಗತ್ತಿಗೇ ಸಾರಿಕೊಳ್ಳುವುದರಿಂದ ದೂರ ಇರಬೇಕು. ಸಾಮಾಜಿಕ ಜಾಲತಾಣದ ಸಹಾಯದಿಂದ ಕುಟುಂಬವೊಂದು ಪ್ರವಾಸ ಹೋಗಿರುವುದನ್ನು ತಿಳಿದುಕೊಂದ ಕಳ್ಳನೊಬ್ಬ ಅದೇ ಸಮಯದಲ್ಲಿ ಆ ಮನೆಗೆ ಕನ್ನ ಹಾಕಿದ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಪ್ರತಿಯೊಂದು ವೈಯಕ್ತಿಕ ಮಾಹಿತಿಯನ್ನು ಸೋಷಿಯಲ್ ಮೀಡಿಯ್ದಲ್ಲಿ ಶೇರ್ ಮಾಡುವುದು ಅಪಾಯಕಾರಿ.
ಈಗಿನ ದಿನದಲ್ಲಿ ಆನ್‌ಲೈನ್ ನಲ್ಲೇ ಹಣಕಾಸಿನ ವ್ಯವಹಾರ ನಡೆಯುತ್ತಿರುವುದರಿಂದ ಆನ್ ಲೈನ್ ಬ್ಯಾಂಕ್ ಖಾತೆಗಳ ಸುರಕ್ಷತೆಗೆ ಜನರು ಹೆಚ್ಚು ಒತ್ತು ನೀಡಬೇಕು. 2 ಲೆವೆಲ್ ಪ್ರೊಟೆಕ್ಷನ್ ಆಯ್ಕೆ ಆನ್ ಮಾಡಿಕೊಳ್ಳಬೇಕು. ಆಗ ಬ್ಯಾಂಕ್ ಖಾತೆ ಓಪನ್ ಮಾಡುವಾಗ ಪಾಸ್ವರ್ಡ್ ಹೊಡೆದ ನಂತರ ಖಾತೆದಾರರ ಮೊಬೈಲಿಗೆ ಒಟಿಪಿ ನಂಬರ್ ಬರುತ್ತದೆ. ಒಟಿಪಿ ಎಂಟ್ರಿ ಮಾಡಿದರೆ ಮಾತ್ರ ಖಾತೆ ತೆರೆಯುತ್ತದೆ. ಹಣ ವರ್ಗಾವಣೆಯಲ್ಲಿ ಒಟಿಪಿ ಪ್ರಧಾನ ಪಾತ್ರ ವಹಿಸುವುದರಿಂದ ಯಾರಿಗೂ ಒಟಿಪಿ ಸಂಖ್ಯೆ ಮತ್ತು ಡೆಬಿಟ್ ಕಾರ್ಡ್ ಹಿಂಬದಿ ಇರುವ ಮೂರಂಕಿಯ ಸಿವಿವಿ ಸಂಖ್ಯೆಯನ್ನು ನೀಡಲೇ ಬಾರದು.
(ಮಾಹಿತಿ ಕೃಪೆ : ಡಾ. ಅನಂತ ಪ್ರಭು, ಸೈಬರ್ ಪರಿಣತರು)