ಕಂತೆ ಕಂತೆ ಲೈಕು ಚಿಂತೆ ನಮಗೇಕಯ್ಯಾ?: ವ್ಯಾಲಿಡೇಷನ್ ಭೂತ ಕಾಡದಿರಲಯ್ಯಾ

ನಮ್ಮಲ್ಲಿ ಹಲವು ಜನರಿಗೆ ಈ ರೀತಿ ಇತರರೊಂದಿಗೆ ಹೋಲಿಸಿಕೊಳ್ಳುವುದು, ತಮ್ಮನ್ನು ತಾವು ಅಲ್ಲಗಳೆಯುವುದು, ತಮ್ಮ ಬಗ್ಗೆ ತಮಗೇ ಕೀಳರಿಮೆ ಇರುವುದು, ತಾವು ನಾರ್ಮಲ್ ಅಲ್ಲಾ ಎನ್ನುವ ಅಧೀರತೆ ಕಾಡುವುದು ಸಾಮಾನ್ಯವಾಗಿದೆ.

Published: 22nd March 2022 04:22 PM  |   Last Updated: 22nd March 2022 04:31 PM   |  A+A-


ಕಲೆ

Online Desk

 

ಪೂರ್ಣಿಮಾ ಮಾಳಗಿಮನಿ



ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರು ಶಿವಮೊಗ್ಗ ಜಿಲ್ಲೆಯ ಹನುಮಂತಪುರದವರು. ಎಂಜಿನಿಯರಿಂಗ್ ಪದವೀಧರೆಯಾಗಿರುವ ಪೂರ್ಣಿಮಾ ಅವರು 'ಎನಿ ವನ್ ಬಟ್ ದಿ ಸ್ಪೌಸ್' ಎನ್ನುವ ಇಂಗ್ಲೀಷ್ ಕಿರುಗತೆಗಳ ಸಂಕಲನ ಪ್ರಕಟಿಸಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇವರ ಹಲವಾರು ತಾಂತ್ರಿಕ ಹಾಗೂ ಸಾಹಿತ್ಯಕ ಲೇಖನಗಳು ಪ್ರಕಟವಾಗಿವೆ. ಪ್ರತಿಷ್ಠಿತ ಭಾರತೀಯ ವಾಯುಸೇನೆಯಲ್ಲಿ ಏರೊನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಅಧಿಕಾರಿಯಾಗಿ ಆರು ವರ್ಷ ಸೇವೆ ಸಲ್ಲಿಸಿ, ಪ್ರಸ್ತುತ ಜಂಟಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

 


ಮನೆಗಳಲ್ಲಿ ಪವರ್ ಕಟ್ ಆಗುವಂತೆ ಅಪರೂಪಕ್ಕೆ ಫೇಸ್ಬುಕ್, ವಾಟ್ಸಪ್ಪ್, ಇನ್ಸ್ಟಾಗ್ರಾಮ್ ಎಲ್ಲವೂ ಒಟ್ಟಿಗೇ ಸ್ಥಗಿತಗೊಂಡಾಗ ನಾವೆಲ್ಲಾ ಒದ್ದಾಡಿಹೋಗುತ್ತೇವೆ. ಇದು ನಾವೆಲ್ಲಾ ಈ ಸೋಶಿಯಲ್ ಮೀಡಿಯಾಗೆ ಅದೆಷ್ಟು ಅಡಿಕ್ಟ್ ಆಗಿದ್ದೇವೆ ಎನ್ನುವುದನ್ನು ಹೇಳುತ್ತದೆ. ಇನ್ನು ತಮ್ಮನ್ನು ಆರಾಧಿಸುವ ಅಭಿಮಾನಿಗಳಿಗಾಗಿ ತಾವು ಉಂಡದ್ದು, ತಿಂದದ್ದು, ಕುಳಿತದ್ದು, ನಿಂತದ್ದು ಎಲ್ಲವನ್ನೂ ಗಳಿಗೆಗೊಮ್ಮೆ ಅಪ್ಡೇಟ್ ಮಾಡುವ ಸೆಲೆಬ್ರಿಟಿಗಳು, ವೃತ್ತಿಗಾಗಿ ಸೋಷಿಯಲ್ ಮೀಡಿಯ ಅವಲಂಬಿಸಿರುವವರ ಪಾಡು ದೇವರಿಗೇ ಪ್ರೀತಿ.  

ಲೈಕುಗಳ ಅವಲಂಬನೆ

ಫೇಸ್ ಬುಕ್ಕಿನಲ್ಲಿ ನಾವು ಸಮಯಹರಣ ಮಾಡುತ್ತಿದ್ದೇವೆ ಎನ್ನುವುದು ಮಾತ್ರ ಚಿಂತೆಯ ವಿಷಯವಲ್ಲ, ಅಸಲಿಗೆ ಬಹಳಷ್ಟು ಜನರ ಸಂತೋಷ ಮತ್ತು ಮಾನಸಿಕ ನೆಮ್ಮದಿ ನಾವು ಪೋಸ್ಟ್ ಮಾಡುವ ಫೋಟೋಗಳಿಗೆ, ಜನರು ನೀಡುವ ಪ್ರತಿಕ್ರಿಯೆಗಳ ಮೇಲೆ ಅವಲಂಬಿತವಾಗಿದೆ ಎನ್ನುವುದು ಚಿಂತೆಯ ವಿಷಯವೂ ಕೂಡ. 

ನಾನು 'ಗೇಮ್ ಆಫ್ ಥ್ರೋನ್ಸ್' ಎನ್ನುವ ವೆಬ್ ಸೀರೀಸ್ ನೋಡಿ ನನಗೆ ಬಹಳ ಇಷ್ಟವಾಯ್ತು ಎಂದು ಹೇಳಿದಾಗ ಕೆಲವರು, 'ಒಂದೆರಡು ಎಪಿಸೋಡ್ ಗಳಲ್ಲೇ ಅದರಲ್ಲಿ ಎಷ್ಟೊಂದು ಕ್ರೌರ್ಯ, ಅಶ್ಲೀಲತೆ, ಹಿಂಸೆ, ಅನೈತಿಕತೆ ಎಲ್ಲಾ ಇದೆ ಅನ್ನುವುದು ಗೊತ್ತಾಯಿತು, ನಾನಂತೂ ಅಂಥವುಗಳನ್ನು ನೋಡಲಾರೆ' ಎಂದರು. ಒಂದು ಕ್ಷಣ ನನಗೆ ನನ್ನದೇ ಅಭಿರುಚಿಯ ಬಗ್ಗೆ, ನನ್ನ ಭಾವನೆಗಳು, ಸಂವೇದನೆಗಳ ಬಗ್ಗೆಯೇ ಅನುಮಾನ ಬಂದಿತ್ತು. ಆಮೇಲೆ ಬೇರೆಯವರಿಗೆ ಅನಿಸಿದಂತೆಯೇ ನನಗೆ ಅನಿಸಲಿಲ್ಲ ಎಂದ ಮಾತ್ರಕ್ಕೆ ನನ್ನಲ್ಲಿ ಕೊರತೆಯಿದೆ ಎಂದುಕೊಳ್ಳುವ ಅಗತ್ಯವಿಲ್ಲ, ನಾನು ನಾರ್ಮಲ್, ಇತರರೊಂದಿಗೆ ನನ್ನನ್ನು ನಾನು ಹೋಲಿಸಿ ನೋಡಿಕೊಳ್ಳುವುದು ಬೇಕಾಗಿಲ್ಲ ಎಂದು ನಿರಾಳವಾದೆ. 

ನಮ್ಮೇಲೆ ನಮಗೇ ಡೌಟು

ಇದನ್ನು ಏಕೆ ಹೇಳಿದೆನೆಂದರೆ ಇತ್ತೀಚಿಗೆ ನಮ್ಮಲ್ಲಿ ಹಲವು ಜನರಿಗೆ ಈ ರೀತಿ ಇತರರೊಂದಿಗೆ ಹೋಲಿಸಿಕೊಳ್ಳುವುದು, ತಮ್ಮನ್ನು ತಾವು ಅಲ್ಲಗಳೆಯುವುದು, ತಮ್ಮ ಬಗ್ಗೆ ತಮಗೇ ಕೀಳರಿಮೆ ಇರುವುದು, ತಾವು ನಾರ್ಮಲ್ ಅಲ್ಲಾ ಎನ್ನುವ ಅಧೀರತೆ ಕಾಡುವುದು ಸಾಮಾನ್ಯವಾಗಿದೆ. ಇದನ್ನು ಮುಚ್ಚಿಕೊಳ್ಳಲು ಸಮಾಜ ನಮ್ಮನ್ನು ಹೇಗೆ ನೋಡಬಯಸುತ್ತದೆಯೋ ಹಾಗೆ ಇರಲು ಮುಖವಾಡ ಧರಿಸುವುದು, ನಟಿಸುವುದು, ವ್ಯರ್ಥ ಪ್ರಯತ್ನ ಮಾಡುವುದು ಸಾಮಾನ್ಯವಾಗಿದೆ. ಇದರ ಪರಿಣಾಮ ಸೋಶಿಯಲ್ ಮೀಡಿಯಾಗಷ್ಟೇ ಸೀಮಿತವಾಗದೆ ನಮ್ಮ ವೃತ್ತಿ ಬದುಕು, ಸಮುದಾಯ, ನೆರೆ ಹೊರೆ, ಸ್ನೇಹಿತರ ಬಳಗ, ಸಂಬಂಧಗಳು ಎಲ್ಲೆಡೆ ಕಾಣ ಸಿಗುತ್ತದೆ. 

ಸಂಬಂಧಗಳನ್ನು ಗಟ್ಟಿಗೊಳಿಸಲು, ಆತ್ಮ ವಿಶ್ವಾಸದಿಂದ ಬದುಕಲು, ನಮ್ಮೊಂದಿಗೆ ನಾವು ರಾಜಿಯಾಗಲು ಇದರಿಂದ ಹೊರ ಬರಬೇಕಾಗಿದೆ. ಇದರಿಂದ ಹೊರಬರುವುದು ಅಷ್ಟು ಸುಲಭವೇನಲ್ಲ, ಮತ್ತು ಇದು ರಾತ್ರೋ ರಾತ್ರಿ ಆಗಿಬಿಡುವ ಬದಲಾವಣೆಯೂ ಅಲ್ಲ. ನಮ್ಮ ಭಾವನೆಗಳಿಗೆ ಬೆಲೆ ಕೊಡುವುದು, ನಮ್ಮ ವರ್ತನೆಯನ್ನು ಸಹಜವಾದುದು ಎಂದು ಒಪ್ಪಿಕೊಳ್ಳುವುದು, ನಮ್ಮ ಆತ್ಮ ಗೌರವ ಕಾಯ್ದು ಕೊಳ್ಳುವುದನ್ನು ಪ್ರಯತ್ನ ಪೂರ್ವಕವಾಗಿ ಮಾಡಬೇಕಾಗುತ್ತದೆ. ಇದನ್ನು ಸೆಲ್ಫ್ ವ್ಯಾಲಿಡೇಷನ್ ಅಥವಾ ಆತ್ಮ ಸಮ್ಮಾನ ಎಂದು ಹೇಳಬಹುದು.

ನಿಮಗೆ ನೀವೇ ಬೈಕೋಬೇಡಿ

ನನಗೆ ಸಿನಿಮಾ ನೋಡುವುದು, ಕಾದಂಬರಿಗಳನ್ನು ಓದುವುದು ಎಂದರೆ ಬಹಳ ಇಷ್ಟ. ಆದರೆ ಎಷ್ಟೋ ಬಾರಿ ಮಾಡಲೇ ಬೇಕಾದ ರಾಶಿ ಕೆಲಸಗಳಿರುವುದರಿಂದ, ಸಮಯದ ಅಭಾವದಿಂದ ಆಗುವುದಿಲ್ಲ. ಆಗ ನನಗೆ ನಾನೇ ಕೆಲವು ಷರತ್ತುಗಳನ್ನು ವಿಧಿಸಿಕೊಳ್ಳುತ್ತೇನೆ. ಪಟ್ಟಿ ಮಾಡಿಕೊಂಡಿರುವ ಈ ಹತ್ತೂ ಕೆಲಸಗಳು ಮುಗಿದ ಮೇಲೆ ಸಿನಿಮಾ ನೋಡುವುದು ಎಂತಲೋ, ಕಾದಂಬರಿ ಓದುವುದು ಎಂತಲೋ ನಿರ್ಧರಿಸಿರುತ್ತೇನೆ. ಆದರೆ ಬಹಳಷ್ಟು ಸಲ ಅದು ಸಾಧ್ಯವಾಗುವುದಿಲ್ಲ. ಆಗೆಲ್ಲಾ ನನ್ನ ಮೇಲೆ ನನಗೆ ಜಿಗುಪ್ಸೆ ಬಂದು, ನಾನೆಂಥ ಸೋಮಾರಿ, ಲೂಸರ್ ಎಂದೆಲ್ಲಾ ಬೈದುಕೊಳ್ಳುತ್ತೇನೆ. ಇದು ಪದೇ ಪದೇ ಆದರೆ ನಮ್ಮ ಮೇಲೆ ನಮಗೆ ನಂಬಿಕೆಯೇ ಹೋಗಿಬಿಡಬಹುದು. 

ಒಮ್ಮೊಮ್ಮೆ ನಮ್ಮ ಮನಸ್ಸಿನ ನಿಜವಾದ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ, ಪ್ರಾಮಾಣಿಕತೆಯಿಂದ ಅದನ್ನು ಅರ್ಥೈಸಿಕೊಂಡು, ಒಪ್ಪಿಕೊಳ್ಳಬೇಕಾಗುತ್ತದೆ. ನಮ್ಮೊಂದಿಗೆ ನಾವು ಸ್ನೇಹಿತರಂತೆ, ಹಿತೈಷಿಗಳಂತೆ ಪ್ರೀತಿಯಿಂದ ಮಾತಾಡಿ ಕೊಳ್ಳಬೇಕಾಗುತ್ತದೆ. ನಮ್ಮನ್ನು ಬೇರೆಯವರು ಜಡ್ಜ್ ಮಾಡಬಾರದೆಂದು ಬಯಸುವ ನಾವು, ನಮ್ಮನ್ನು ನಾವೇ ಜಡ್ಜ್ ಮಾಡಿಕೊಳ್ಳುವುದು ಏಕೆ? ನಮ್ಮ ಪ್ರತಿಯೊಂದು ನಡೆಯನ್ನೂ ನಾವೇ ಕಟುವಾಗಿ ವಿಮರ್ಶಿಸಿಕೊಂಡು,ಕುಗ್ಗುವ ಅವಶ್ಯಕತೆ ಇಲ್ಲ ಅನಿಸುತ್ತದೆ. 

ಹೋಲಿಕೆ ಬೇಡ

ನಮ್ಮ ಪ್ರತಿಯೊಂದು ನಡೆಯನ್ನೂ ಬೇರೆಯವರು ಅಪ್ರೂವ್ ಮಾಡಬೇಕೆಂದು ಬಯಸುವುದು, ಅವರಿಂದ ಮನ್ನಣೆ ಸಿಗದಾಗ ನೊಂದುಕೊಳ್ಳುವುದು ನಮ್ಮ ವ್ಯಕ್ತಿತ್ವದ ಮೇಲೆ ಬಹಳ ಋಣಾತ್ಮಕ ಪರಿಣಾಮ ಬೀರುತ್ತದೆ. ಒಂದು ಸನ್ನಿವೇಶಕ್ಕೆ ನಾವು ಹೇಗೆ ಪ್ರತಿಕ್ರಿಯೆ ನೀಡುತ್ತೀವಿ  ಎನ್ನುವುದನ್ನು ಗಮನಿಸಿ ಮನನ ಮಾಡಿಕೊಳ್ಳುವುದು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯವಾಗುತ್ತದೆ. ಅದೇ ಸನ್ನಿವೇಶಕ್ಕೆ ಇತರರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದರ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡವೆನಿಸುತ್ತದೆ. ಏಕೆಂದರೆ ನಾವು ನಾವೇ, ಅವರು ಅವರೇ. ಅಲ್ಲವೇ?


Stay up to date on all the latest ಸಂಚಯ news
Poll
Vidhana Saudha

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬೊಮ್ಮಾಯಿ ಸರ್ಕಾರ ವಿಫಲವಾಗಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp