ಮದ್ವೆಯಾದ್ರೂ ಸಿಂಗಲ್!: ಮ್ಯಾರೇಜ್ ಲೈಫಲ್ಲಿ ಕಾಡೋ ಒಂಟಿತನ
ವಿವಾಹದ ನಂತರವೂ ಅದೆಷ್ಟು ಮಂದಿಗೆ ತಾವು ಒಂಟಿಯೆನಿಸುವ ಭಾವ ಕಾಡಿಲ್ಲ? ವಿಶೇಷವಾಗಿ ಮಹಿಳೆಯರಿಗಂತೂ ಭಾವನಾತ್ಮಕವಾಗಿ ಅದೆಷ್ಟು ಸುರಕ್ಷತೆಯನ್ನು ವೈವಾಹಿಕ ಜೀವನ ಈಡೇರಿಸಿದೆ ಎನ್ನುವುದನ್ನು ಅವಲೋಕಿಸಬೇಕಿದೆ. How to overcome loneliness in married life?
Published: 26th March 2022 04:48 PM | Last Updated: 26th March 2022 04:52 PM | A+A A-

ಕಲೆ

ಲೇಖಕಿ ಮಮತಾ ಅರಸೀಕೆರೆ ಅವರು ಮೂಲತಃ ಹಾಸನ ಜಿಲ್ಲೆಯವರು. ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಇವರು 'ಸಂತೆ ಸರಕು' ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಅಲ್ಲದೆ 'ಕಾಲಡಿಯ ಮಣ್ಣು' ಎಂಬ ಅನುವಾದಿತ ಕೃತಿಯನ್ನೂ ರಚಿಸಿದ್ದಾರೆ. ಅವರ ಕವಿತೆಗಳು, ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಎಲ್ಲಾ ಧರ್ಮದಲ್ಲೂ ವಿವಾಹವೆನ್ನುವ ಪ್ರಕ್ರಿಯೆ ಒಂದು ರೀತೀಯಲ್ಲಿ ಬದುಕನ್ನು ‘ಸೆಟಲ್’ ಮಾಡಿಕೊಳ್ಳುವ ವಿಧಾನ. ಅಂತಸ್ತು, ವರ್ಗ, ಸ್ಥಳ, ಪ್ರದೇಶಗಳೆನ್ನದೆ ಎಲ್ಲಾ ಬಗೆಯ ಜನಾಂಗದವರೂ ಅನಿವಾರ್ಯವಾಗಿ ಒಳಪಡಿಸಿಕೊಳ್ಳಬೇಕಾದ, ಅಂಗೀಕರಿಸಬೇಕೆಂದು ನಿರ್ಣಯಿಸಲ್ಪಟ್ಟ ಬದುಕಿನ ಹಾದಿ. ಮದುವೆಯೆಂದರೆ ಒಂಟಿತನದ ನೀಗುವಿಕೆಯೆನ್ನುವುದು ಅನೇಕರ ಅಭಿಪ್ರಾಯ. ಆದರೆ ಪರಿಸ್ಥಿತಿ ಹಾಗಿದೆಯೆ?
ವಿವಾಹದ ನಂತರವೂ ಅದೆಷ್ಟು ಮಂದಿಗೆ ತಾವು ಒಂಟಿಯೆನಿಸುವ ಭಾವ ಕಾಡಿಲ್ಲ? ವಿಶೇಷವಾಗಿ ಮಹಿಳೆಯರಿಗಂತೂ ಭಾವನಾತ್ಮಕವಾಗಿ ಅದೆಷ್ಟು ಸುರಕ್ಷತೆಯನ್ನು ವೈವಾಹಿಕ ಜೀವನ ಈಡೇರಿಸಿದೆ ಎನ್ನುವುದನ್ನು ಅವಲೋಕಿಸಬೇಕಿದೆ.
ಮದುವೆ ಮತ್ತು ಏಕಾಂಗಿತನ ಎರಡೂ ಪದಗಳು ಗಳಸ್ಯ ಬಂಧುಗಳಂತೆ ಕೈಹಿಡಿದೇ ಜೊತೆ ಸಾಗುತ್ತವೆ. ಒಮ್ಮೆ ಸಂಗಾತ ದಕ್ಕಿದರೂ ಕಾಲಕ್ರಮೇಣ ಅದರ ವರ್ಚಸ್ಸು ಗಮನೀಯವೆಂಬಂತೆ ಕುಂದಬಹುದು. ದಿನಗಳೆದಂತೆ ಆತ್ಮೀಯ ಮಾತುಕತೆಗಳೆಲ್ಲ ವಾದವಿವಾದಗಳಾಗಿ ಮಾರ್ಪಾಡಾಗಿ ಪ್ರತಿಕೂಲ ಸನ್ನಿವೇಶ ಏರ್ಪಡಬಹುದು.
ವೈವಾಹಿಕ ಬದುಕಿನಲ್ಲಿ ಏಕಾಂಗಿತನಕ್ಕೆ ಈಡು ಮಾಡುವ ಕೆಲ ಕಾರಣಗಳು ಇಂತಿವೆ
ಪ್ರತ್ಯೇಕತೆಯ ಮನೋಭಾವ
ವೈವಾಹಿಕ ಜೀವನದ ಪ್ರಾರಂಭದಲ್ಲಿ ಜತೆಗಾರ ಅಥವಾ ಜತೆಗಾರ್ತಿ ಉದ್ದೇಶಪೂರ್ವಕವಾಗಿ ಸಂಗಾತಿಯನ್ನು ತಮ್ಮ ಕುಟುಂಬದಿಂದ ದೂರವಿಟ್ಟರೆ, ಬಂಧುಬಾಂಧವರಿಂದ ದೂರವುಳಿದರೆ ತಮಗೆ ತಾವೇ ಒಂಟಿತನದ ಭಾವದಿಂದ ನರಳಬಹುದು.
ಸಮಯಾವಕಾಶದ ಕೊರತೆ
ಪತಿ ಮನೆಗೆ ಬರುವ ಸಮಯದಲ್ಲಿ ಪತ್ನಿ ಉದ್ಯೋಗಕ್ಕೆ ಹೊರಡುವಂತಾದರೆ ಅಲ್ಲಿ ಭಿನ್ನತೆಯೇರ್ಪಡುತ್ತದೆ. ಹೆಚ್ಚು ಸಮಯ ಸಂಪರ್ಕವೇ ತಪ್ಪಿ ಒಬ್ಬರನ್ನೊಬ್ಬರು ಕಾಣುವುದೇ ಅಪರೂಪದಂತಾಗಿ ಪುಟ್ಟ ಪುಟ್ಟ ಸಂಭ್ರಮದ ಕ್ಷಣಗಳೂ ಮಾಯವಾಗಿ ದಾಂಪತ್ಯದ ದೋಣಿಯಲ್ಲಿ ಬಿರುಕು ಮೂಡಿ ಏನೇ ತೇಪೆ ಹಾಕಿದರೂ ಅದು ಕ್ಷಣಿಕ ಸಮಯದ್ದಾಗಿಬಿಡುತ್ತದೆ.
ಭಾವನಾತ್ಮಕ ಅಸಹಕಾರ
ಸಂಗಾತಿಗಳು ಪರಸ್ಪರ ಅವಲಂಬಿಸಬೇಕಾದಂಥ ಸಂದರ್ಭದಲ್ಲಿ ಇನ್ನೊಬ್ಬರು ಅಲಭ್ಯರಾಗದೇ ಹೋದರೆ ಅದು ವಿರಸಕ್ಕೆ ದಾರಿಯಾಗುತ್ತದೆ. ಹಾಗೇನಾದರೂ ಪರಸ್ಪರ ಸಾಂತ್ವನ ಸಹಕಾರ ಸಿಗದಿದ್ದರೆ, ಭಾವನೆಗಳಿಗೆ ಇಂಬು ದೊರಕದಿದ್ದರೆ ಸಂಸಾರದಲ್ಲಿ ಕಂದಕ ಏರ್ಪಡುತ್ತದೆ.
ಲೈಂಗಿಕ ಆಪ್ತತೆಯ ಕೊರತೆ
ಲೈಂಗಿಕ ಆಪ್ತತೆಯ ಕ್ಷಣಗಳೂ ಸಹ ದಾಂಪತ್ಯದ ಮೌಲ್ಯಮಾಪನ ಮಾಡುತ್ತವೆ. ಅನಿವಾರ್ಯವಾಗಿ ಬಹಳ ಕಾಲ ದೂರವಿರುವಂತಹ ಸಂದರ್ಭದಲ್ಲಿಯೋ ಅಥವಾ ಜತೆಯಿದ್ದೂ ವಿಕ್ಷಿಪ್ತ ಅಥವಾ ಅರಿವಿನ ಕೊರತೆಯಿಂದ ದೂರವಿದ್ದಾಗಲೂ ಒಂಟಿತನದ ಅನುಭವವಾಗಿಬಿಡಬಹುದು. ಬೆಳಗಿನ ಒಂದು ವಿಷ್, ಒಂದು ಪುಟ್ಟ ಅಪ್ಪುಗೆ, ಒಂದು ಪುಟ್ಟ ಚುಂಬನ, ಮೊದಲಾದವು ಕಣ್ಮರೆಯಾಗಿ ಅಂತರವನ್ನೆ ಸೃಷ್ಟಿಸುತ್ತವೆ.
ಹಳೆಯ ಗಾಯಗಳ ಕೆದಕುವಿಕೆ
ಮದುವೆ ಮುಂಚಿನ ಬೇಡಿಕೆಗಳು, ಮದುವೆ ಸಂದರ್ಭ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆಗಳು ಕಾಲ ಗತಿಸಿದಂತೆ ನೆನಪಾಗಿ ಕಾಡಿ ಸಂದರ್ಭಾನುಸಾರ ನೋವನ್ನು ಹೆಚ್ಚಿಸಬಹುದು. ಸತಿಪತಿಯರಲ್ಲಿ ವಾಗ್ವಾದ ನಡೆದ ಸಂದರ್ಭ ಯಾರಾದರೊಬ್ಬರು ಆ ಕಲಹವನ್ನು ಮತ್ತೆ ಪ್ರಸ್ತಾಪಿಸಬಹುದು. ಇದು ವಿರಸಕ್ಕೆ ಕಾರಣವಾಗುತ್ತದೆ. ಭೂತದ ಗಾಯಗಳು ವ್ರಣವಾಗದೆ ಮಾಯಬೇಕು.
ಒಂಟಿ ಅಥವಾ ಏಕಾಂಗಿತನವನ್ನು ನಿವಾರಿಸಲು ಮಾರ್ಗೋಪಾಯಗಳು
- ವಾರಕ್ಕೊಮ್ಮೆ ಅಥವಾ ಎರಡು ಬಾರಿ ಸಮಯ ನಿಗದಿ
- ಪರಸ್ಪರ ತಮಾಷೆ ಅಥವಾ ಆರೋಗ್ಯಕರ ಮನಸ್ಥಿತಿ ರೂಢಿಸಿಕೊಳ್ಳಬೇಕು
- ಏನೇ ಬರಲಿ ಮಾತು ಬಿಡದಿರಿ
- ಸುಮಧುರ ನೆನಪುಗಳನ್ನು ಮೆಲುಕು ಹಾಕುತ್ತಿರಿ
- ಸಣ್ಣ ಸಣ್ಣ ಸಂಗತಿಗಳನೂ ಗಮನಿಸಿ
- ಗೌರವ ನೀಡಿ
- ಹವ್ಯಾಸಗಳಲ್ಲಿ ತೊಡಗಿಕೊಳ್ಳಿ
ಸಮಾನತೆ ಇಬ್ಬರದೂ ಧ್ಯೇಯವಾಕ್ಯವಾಗಬೇಕು. ಸಮಸ್ಯೆ ಸಂಘರ್ಷಗಳೇರ್ಪಟ್ಟಲ್ಲಿ ಆಪ್ತಸಲಹೆ ಪಡೆಯುವುದು ಉಚಿತವೆನಿಸಿದರೆ ಪಡೆಯುವ ಮನಸು ಇಬ್ಬರಿಗೂ ಇರಬೇಕು. ಸಾಧ್ಯವಾದಷ್ಟೂ ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯವಾಗಬೇಕು. ಒಂದು ವೇಳೆ ಪರಿಹಾರವೇ ಕಾಣದಿದ್ದಲ್ಲಿ ಆ ಬಾಂಧವ್ಯವನ್ನು ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ.