
ಬಿಸಿಲು ಕುದುರೆ, ಮರಿಚಿಕೆ, ಮಾಯಾಮೃಗ, ಮೃಗತೃಷ್ಣೆಗೆ ಹೋಲಿಕೆ ಇಂದಿನ ಪೀಳಿಗೆಯವರ ಬದುಕು. ಮೊದಲೆಲ್ಲ ಸಣ್ಣ ಮನೆ,ಮನೆತುಂಬಾ ಮಕ್ಕಳು ಅಮ್ಮನ ಮಡಿಲು,ಆಮ್ಮನ ಕೈತುತ್ತು..ಬೆತ್ತದ ರುಚಿ. ಆದರೆ ಅಷ್ಟೆ ಪ್ರೀತಿ. ಕುಟುಂಬದವರೆಲ್ಲಾ ಒಂದೇ ಸೂರಿನಡಿ ಬದುಕುವ ಕೂಡು ಕುಟುಂಬ ಪದ್ದತಿ.!
ಕಷ್ಟಕ್ಕೆ ಹೆಗಲಾಗುವ ಸುಖದೊಳು ಭಾಗಿ ಆಗುವ, ಒಬ್ಬರಿಗೆ ಸಂಕಟ ಎದುರಾದರೆ ಇಡೀ ಕುಟುಂಬವೇ ಒಟ್ಟಾಗಿ ಎಲ್ಲವನ್ನೂ ಎದುರಿಸುವ ಬಗೆ, ಹಾಗೆಯೇ ಶಾಲೆಗೆ ರಜೆ ಬಂತೆಂದರೆ ಅಜ್ಜಿಮನೆಗೆ ಓಟ, ಒಂದೇ ಜಿಗಿತ, ಆ ಆನಂದ, ಆ ಕಕ್ಕುಲತೆ, ಅಜ್ಜಿಯ ನವಿರಾದ ಬೈಗುಳ, ಜತೆಗೆ ಬಗೆಬಗೆಯ ಊಟ.. ಸಾಂಪ್ರದಾಯಿಕ ಚೆಲುವಿನ ಅಂದಿನ ಮನೆ ಇಂದಿಲ್ಲ.
ಆ ಕೆರೆ, ಹೊಳೆ, ನದಿ, ತೊರೆಗಳಲ್ಲಿ ಸ್ನಾನ, ಈಜುವಿಕೆ ಅದೇ ನೀರನ್ನು ಕುಡಿಯುವಿಕೆ.. ಬಿದ್ದ ಮಾವಿನ ಹಣ್ಣನು ಚಡ್ಡಿಯಲ್ಲೊ ಲಂಗದಲ್ಲೊ ಒರೆಸಿ ಆಗಲೇ ತಿನ್ನುವ ಹಂಬಲ, ನೆಲ್ಲಿ ಮಾವು,ಹಲಸು,ಪೇರಲೆ,ನೇರಳೆಗಳ ಯಥೇಚ್ಛ ತಿನ್ನುವಿಕೆ.. ಯಾರು ಎಷ್ಟು ಹೊತ್ತಿಗೇ ಬರಲಿ, "ಬನ್ನಿ.." ಎಂಬ ಆದರದ ಸ್ವಾಗತ.. ಇರುವುದನ್ನು ಕೊಟ್ಟು ಚಾಪೆದಿಂಬು,ಹೊದಿಕೆ ಕೊಡುವ ಪದ್ಧತಿ.. ಮದುವೆ ಬಂತೆಂದರೆ ಎಲ್ಲರ ಸಹಕಾರ ಕೆಲಸದಲ್ಲೂ, ಹಣಕಾಸಿನಲ್ಲೂ ಯಾವುದೇ ಹಿಂದೇಟು ಹಾಕದೆ ತಮ್ಮದೇ ಮಗನದ್ದೊ, ಮಗಳದ್ದೊ ಎಂದು ಭಾವಿಸುತ್ತಿದ್ದ ದೊಡ್ಡಪ್ಪ, ಚಿಕ್ಕಪ್ಪ.
ಆ ಪುಟ್ಟ ಮನೆ ದೇವರಗುಡಿಯಂತಿತ್ತು. ಮನೆ ಜೇನುಗೂಡಿನಂತಿತ್ತು. ಅಪ್ಪ,ಅಮ್ಮನೇ ಅಲ್ಲಿ ದೇವರು. ಅಪ್ಪ,ಅಮ್ಮನ ಮಾತಿಗಂದು ಬೆಲೆ ಇತ್ತು. ಗೌರವ ಇತ್ತು. ಸಾಕಿ ಸಲಹಿದವರನ್ನು ಕಡೇ ತನಕ ಜತನದಿಂದ ಕಾಪಾಡುವ ಮನೋ ವೈಶಾಲ್ಯತೆ ಯಜತೆಗೆ ಕರ್ತವ್ಯ ಪರತೆಯೂ ಇತ್ತು. ಜವಾಬ್ದಾರಿಯೂ ಇತ್ತು. ಹಬ್ಬ, ಹರಿದಿನ, ಊರಜಾತ್ರೆ ಎಂದರೆ ಎಲ್ಲರೂ ಒಟ್ಟಾಗಿ ಸೇರುವ ಆ ಸಂಭ್ರಮದ ಪರಿ ವರ್ಣನಾತೀತ!
ಎಷ್ಟೇ ಮಕ್ಕಳಿದ್ದರೂ ಬಡತನವಿದ್ದರೂ ಪ್ರೀತಿಗಲ್ಲಿ ಜಾಗವಿತ್ತು. ಅಮ್ಮನ ಮಡಿಲೇ ಸ್ವರ್ಗದ ತಾಣವಾಗಿತ್ತು. ತಾನು ಉಪವಾಸವಿದ್ದರೂ ಗಂಡ ಮಕ್ಕಳಿಗೆ ಉಪವಾಸ ಇರದಂತೆ ನೋಡಿಕೊಳ್ಳುವ ಮನೆಯಾಕೆ!
ಹಾಲು ಮಾರಿ ಎಮ್ಮೆ ,ಹಸು, ಕುರಿ ,ಕೋಳಿ ಮಾರಿ ಮಕ್ಕಳ ಶಾಲೆಗೆ ವಸ್ತ್ರಕ್ಕೆ, ಪುಸ್ತಕಕ್ಕೆ ಹಣ ಹೊಂದಿಸುತ್ತಿದ್ದ ಅಮ್ಮ, ಸವೆದು ಹೋದ ಚಪ್ಪಲಿ, ಹರಕು ಒಳ ಉಡುಪಿನಲಿ ಎರಡೇಜತೆ ಬಟ್ಟೆಯಲಿ ಕಳೆಯುವ ಅಪ್ಪ, ಮಕ್ಕಳೇ ಸರ್ವಸ್ವ ಎಂದು ಸಾಕುತ್ತಿದ್ದ ಪರಿ. ಹಾಗೆಯೇ ಮಕ್ಕಳಿಗೂ ಸಂಸ್ಕಾರ ಆಚಾರ, ನಡೆ ನುಡಿಗಳ ಪರಿಚಯ..ಅದರಂತೆ ನಡವಳಿಕೆ ಎಲ್ಲವೂ ಇತ್ತು. ಸಂಜೆಗೆ ಭಜನೆ ಇತ್ತು. ಮಗ್ಗಿ ಇತ್ತು. ಒಟ್ಟಿಗೆ ಊಟ ಮಾಡುವ ಸಂಸ್ಕಾರವಿತ್ತು. "ವಿದ್ಯಾ ವಿದಾತಿವಿನಯಂ" ಎಂಬುದು ಆಗಿನ ಕಾಲಕ್ಕೆ ಅಕ್ಷರಶ: ಸೂಕ್ತವಾಗಿತ್ತು.
ಆ....ದ..ರೆ.. ಇಂದು..? ಇಂದಿನಮಕ್ಕಳು.ಅವರ ನಡತೆ, ವ್ಯವಹಾರಗಳ ತುಲನೆ ಮಾಡಿದಾಗ ಅಜಗಜಾಂತರ! ಅಂದಿನಂತೆ ಮನೆತುಂಬ ಮಕ್ಕಳಿಲ್ಲ. ದೊಡ್ಡದಾದ ಮನೆ, ಅಪ್ಪ, ಅಮ್ಮ ಇಬ್ಬರೂ ನೌಕರಿಯವರು. ಎಲ್ಲದಕ್ಕೂ ಮಿಷನ್. ಅದು ಮಾತನಾಡದೆ ತನ್ನ ಕೆಲಸಮುಗಿಸುವಂತೆ ಮನೆಯವರುಯಂತ್ರಮಾನವರೇ.
ಮನೆಯೊಂದು ಮೂರು ಬಾಗಿಲು ಇಂದಿನ ಬದುಕು. ದೊಡ್ಡ ಮನೆಯೋಳಗೆ ಜನ ಮೂವರು ಆಥವಾ ನಾಲ್ಕು ಮಂದಿ.! ಬರೆ ವೇಗಸಹಿತ, ತಡೆ ರಹಿತ ಜೀವನ.. ಬರೇ ವಸ್ತು ಪ್ರೀತಿ, ಮನೆತುಂಬಾ ವಸ್ತುಗಳು, ಬೆಲೆ ಬಾಳುವ ಸಾಮಾನುಗಳು, ಅಲ್ಮೇರಾ ತುಂಬ ಉಡುಪುಗಳು, ಮನೆಮುಂದೆ ಕಾರು, ಬೇಕಾದಾಗ ಝೊಮೇಟೊ, ಸ್ವಿಗ್ಗಿಗಳೇ ಕೈತುತ್ತು. ಅಮ್ಮನಮಡಿಲು ಇಲ್ಲ. ಅಪ್ಪನ ಬೈಗುಳವಿಲ್ಲ ಹಾಯ್ ಡ್ಯಾಡ್ ಹಾಯ್‌ಮೋಮ್ ಎಂಬ ಉದ್ಗಾರ!
ಒಂದಷ್ಟು ಪೋಕೇಟ್ ಮನಿ..ಆದೇ ಶ್ರೇಷ್ಠ ಎಂಬ ಭಾವ.. ಪ್ರತಿಷ್ಠಿತ ಶಾಲೆಗಳಲ್ಲಿ ಓದು..ಶಿಸ್ತೆಂಬ ನೆಪದಲ್ಲಿ ಯಾರೊಂದಿಗೂ ಬೆರೆಯದ ಕಲಿಕಾ ಪದ್ಧತಿ. ಅಂಕೆ, ಅಂಕೆ ಎಂದು ಅದರ ಹಿಂದೆ ಓಡುವ ಮಕ್ಕಳು, ಓಡಿಸುವ ಹೆತ್ತವರು.ಟ್ಯೂಷನ್‌ಮನೆಶಾಲೆ ..ಇಷ್ಟೇ ಜೀವನ.
ಹಿರಿಯರು ಬಂದರೆ ಬುದ್ಧಿಮಾತು ಹೇಳಿದರೆ ಮಧ್ಯ ಪ್ರವೇಶ ಎಂಬ ಆರೋಪ.. ನಿಮ್ಮಿಂದ ಮಕ್ಕಳು ಹಾಳು ಎಂಬುದು ಮಗ ಸೊಸೆಯ ಆರೋಪ! ಪರಿಣಾಮ,? ಮಕ್ಕಳು ಕೋಣೆಯೊಳಗೆ ಹೋಮ್ ವರ್ಕ್, ಜತೆಗೊಂದು ಮೊಬೈಲ್! ಹಿರಿಯರು ಮನೆಗೆ ಭೂಷಣವಲ್ಲ..ಅವರು ತರಗೆಲೆ ಎಂಬ ಭಾವ.. ಮನೆಯ ಹಳೆಯ ಪೀಠೋಪಕರಣಗಳೆಂಬ ಭಾವ.. ಅವುಗಳನ್ನು ಎತ್ತಿ ಒಗೆದಂತೆ ಹೊರಗಟ್ಟುವ ಮನೋಭಾವನೆ. ವೃದ್ಧಾಶ್ರಮಗಳ ಕಡೆಗೆ ರವಾನೆ..ಹಣ ಕೊಟ್ಟು ಕರ್ತವ್ಯ ಮುಗಿಸುವ ಮಗ ಸೊಸೆ.
ಅಜ್ಜ, ಅಜ್ಜಿ ಎಂದರೆ ಪ್ರೀತಿಯೇ ಇರದ ಮೊಮ್ಮಕ್ಕಳು, ನೋಡಲು ಬರದ ಮಕ್ಕಳು..ಹಗಲು ರಾತ್ರಿ ಕಾಪಾಡಿದ ಮಕ್ಕಳಿಂದು ಹೆತ್ತವರನ್ನು ವೃದ್ಧಾಶ್ರಮದಲ್ಲಿ ಬಿಟ್ಟು ತಾವು ಮಜಾ ಉಡಾಯಿಸುವವರು. ಮರೆತೇ ಬಿಟ್ಟಿರುತ್ತಾರೆ.. ಹಿರಿಯರ ಕಷ್ಟ ನೋವು.. ಹೇಳಹೋದರೆ ನಮ್ಮನ್ನು ಹೆರಲು ನಾವು ಹೇಳಿಲ್ಲ.. ಹೆತ್ತ ಮೇಲೆ ಸಾಕಬೇಕು.. ಎಂದು ಆಸ್ತಿಯಲ್ಲಿ ಬಿಡಿಗಾಸೂ ಬಿಡದೆ ತೆಗೆದುಕೊಳ್ಳುವ ಗಂಡು, ಹೆಣ್ಣು ಮಕ್ಕಳು.
ಅಂದಿನ ದೀಪಾವಳಿಯ ಸಂಭ್ರಮ ಇಂದು ಇಲ್ಲ. ಆಕಾಶದೀಪಗಳಿದ್ದರೂ ರಂಗಿಲ್ಲ. ಆ ಹಂಡೆ ನೀರ ಸ್ನಾನವಿಲ್ಲ. ಹಬ್ಬ ಹರಿದಿನಗಳೇ ಬೇಡ ಎಂದು ಪ್ರವಾಸಹೋಗುವ ಪರಿಪಾಠ. ಅಂದು ಹಬ್ಬಗಳಲ್ಲಿ ಅಪರೂಪವಾಗಿರುತ್ತಿದ್ದ ತಿಂಡಿ ತಿನಿಸುಗಳು. ಇಂದು ಎಲ್ಲಾ ಮಾಲ್, ಬೇಕರಿಗಳಲ್ಲಿ ದಿನವೂ ಲಭ್ಯ. ಹಾಗಾಗಿ ಯಾವುದರ ಕೊರತೆ ಇಲ್ಲ. ಹಣ ಇದ್ದರೆ ಎಲ್ಲವೂ ಎಂದು ಮೃಗತೃಷ್ಣೆಯ ಹಿಂದೆ ಓಡುವಿಕೆ. ಒಂದು ಮನೆ ಜಾಗ, ತೋಟ, ಫ್ಲಾಟ್ ಬೇರೆ ವಾಹನ. ಹೀಗೆ ಆಸ್ತಿಗಳೇ ಅಲ್ಲಿ ಜಾಸ್ತಿ. ಹೂಡಿಕೆಯದೇ ಯೋಚನೆ. ಹಣದ್ದೇ ಮೇಲುಗೈ...ಸಾಧನೆ!
ಅಪ್ಪ, ಅಮ್ಮನ ಕಂಗಳು ಸದಾ ವೃದ್ಧಾಶ್ರಮದ ಬಾಗಿಲ ಬಳಿ. ಕಂಗಳೇ ಕರಗಿ ನೀರಾದರೂ ಮಕ್ಕಳ ಸುಳಿವಿಲ್ಲ. ಮೊಮ್ಮಕ್ಕಳ ದರುಶನವಿಲ್ಲ. ಯಾರೋ ಬೇರೆಯವರು ಬಂದು ಏನೋ ಕೊಟ್ಟು ಹೋಗ್ತಾರೆ.
ಮನೆ ಸಣ್ಣದಾದರೂ ಹೃದಯ ವೈಶಾಲ್ಯತೆ ಇತ್ತು. ಇಂದು ಮನೆ ವಿಶಾಲವಾಗಿದೆ. ಹೃದಯ ವೈಶಾಲ್ಯತೆ ಮಾಯವಾಗಿದೆ.ಮಾನವೀಯತೆ ಇರದ ಗುಣ. ಅದು ಇಂದು ಅದು ಮಾಯವಾಗಿದೆ. ಮನುಷ್ಯತ್ವಕ್ಕಿಂತ ಹಣತ್ವವೇ ಮಹತ್ವ ಪಡೆದಿದೆ. ಹೆತ್ತವರಿಗಾಗಿ ತುಡಿಯುವ, ಮಿಡಿಯುವ ಮನವಿಲ್ಲ. ಖಾಯಿಲೆ ಆದಾಗಲೂ ಮಕ್ಕಳಿಗೆಸಮಯವಿಲ್ಲ. ಕಾದು ಕಾದ ನಿಸ್ತೇಜ ಕಂಗಳು ಸಾವಿನಂಚಿಗೆ ಸಾಗಿ ಒಂದೊಮ್ಮೆ ಮುಚ್ಚಿದಾಗಲೂ ಒಂದುಹೂವಿನ ಗುಚ್ಛವನ್ನಷ್ಟೆ ಮಕ್ಕಳು ಕಳುಹಿಸಿ ಕರ್ತವ್ಯ ಮುಗಿಸುತ್ತಾರೆ. ಸನಾತನ.. ತಾಳುವ, ಬದಲಾಗದ ಎಂಬ ಅರ್ಥ ಇರುವ ನಮ್ಮ ಭಾರತದ ಸಂಸ್ಕಾರ, ಸಂಸ್ಕೃತಿಗಳು ಹೇಳ ಹೆಸರಿಲ್ಲದಂತೆ ಮಾಯವಾಗಿವೆ. ಅಮ್ಮಾ ಎಂಬ ಕೂಗಿಲ್ಲ. ಆ ಕೂಗಲ್ಲಿ ಇಂಪಿಲ್ಲ. ಆಸ್ತಿಗಾಗಿ ತಲೆ ಒಡೆಯುವ, ಕರುಳಹಿಂಡುವ ಮಕ್ಕಳೇ ಇಂದು ಜಾಸ್ತಿ. ಮಾತೃದೇವೊಭವ ಪಿತೃದೇವೊಭವ ಇಂದು ಫಲಕಗಳಷ್ಟೆ. ಎಲ್ಲಿ ಮರೆಯಾಯಿತು ಆ ಭಾರತೀಯ ಕುಟುಂಬ ಪದ್ಧತಿ?! ಆ ಒಗ್ಗಟ್ಟು, ಆಮಮತೆ, ಆ ಪ್ರೀತಿ ಆತುಡಿತ! ಇದಲ್ಲವೇ ಮೃಗತೃಷ್ಣೆ ಯ ಹಿಂದೆ ಓಟ. ಕಾಲ ಯಾವುದೇ ಇರಲಿ. ಪ್ರೀತಿಗೇನು ಬರ ಕಾಲಬದಲಾಗಿಲ್ಲ ಮನುಷ್ಯ ಬದಲಾಗಿರುವ..ಮಕ್ಕಳು ಮಾಡುವುದು ಹೆತ್ತವರಂತೆ ಏಕೆಂದರೆ. ಬೀಜದಂತೆ ವೃಕ್ಷ ಅಲ್ಲವೇ?
ಡಾ.ಲಾವಣ್ಯ ಪ್ರಭಾ
LavanyaPrabha02@gmail.com
Advertisement