ಕವನ ಸುಂದರಿ: ಆಶಾ ಜಗದೀಶ್: ಕವನದ ಶೀರ್ಷಿಕೆ: ಯಾವ ದಾರಿಗಳೂ ನಮ್ಮನ್ನು ಕೂಡಿಸುವುದಿಲ್ಲ...
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 03rd April 2022 03:38 PM | Last Updated: 03rd April 2022 04:59 PM | A+A A-

ಕಲೆ
ಯಾವ ದಾರಿಗಳೂ ನಮ್ಮನ್ನು ಕೂಡಿಸುವುದಿಲ್ಲ...
ಈ ಅಂತರಿಕ್ಷ ಸದಾ ನನ್ನನ್ನು ಕಾಡುತ್ತದೆ ಗೆಳೆಯಾ
ನನಗೆ ಒಂದು ನಮೂನಿ ಅಕ್ರೋಫೋಬಿಯಾ
ಎತ್ತರಕ್ಕೆ ಹೋದಂತೆಲ್ಲಾ ಬೃಹತ್ ಎಂದು
ನಂಬಿಕೊಂಡು ಬಂದ ಭೂಮಿ
ಸಣ್ಣದಾಗುವುದನ್ನು ನನ್ನಿಂದ ನೋಡಲಾಗುವುದಿಲ್ಲ
ನಂಬಿಕೆ ಸುಳ್ಳಾಗುವುದು ಎಂದರೆ ಏನು?!
ಇನ್ನೂ ಎತ್ತರಕ್ಕೆ ಹೋದಂತೆಲ್ಲ ಬರೀ
ದಾರಿಗಳೇ ಕಾಣಿಸುತ್ತವೆ ನನಗೆ
ಒಂದೊಂದು ಜೀವಿಗೂ ಒಂದೊಂದು ದಾರಿ
ತನ್ನ ದಾರಿಯನ್ನು ಬಿಟ್ಟು ಯಾವ ಜೀವಿಯೂ ಬದುಕುವುದಿಲ್ಲ
ಗೋಚರಕ್ಕಿಂತ ಅಗೋಚರ ದಾರಿಗಳ ಜಾಲ ಮತ್ತೂ ಭಯಾನಕ
ಸುಮ್ಮನೆ ಅವರಿವರನ್ನು ಬದಲಾಯಿಸಲು ವ್ಯರ್ಥ ಪ್ರಯತ್ನ ಮಾಡುತ್ತಲೇ ಜೀವ ಸವೆಸುವ ನಮಗೆ
ಈ ಸತ್ಯವನ್ನು ಅರಗಿಸಿಕೊಳ್ಳುವುದು ಎಷ್ಟು ಕಷ್ಟವೋ
ನಾವಿಬ್ಬರೂ ನಮ್ಮ ನಮ್ಮ ದಾರಿಗಳನ್ನು ಒಂದಾಗಿಸುವ
ಸಲುವಾಗಿ ಪಟ್ಟ ಪಡಿಪಾಟಲು ನೆನಪಾಗುತ್ತದೆ ನನಗೆ
ಆದರೆ ಮೇಲೆ ಹೋದಂತೆಲ್ಲಾ ನಮ್ಮ ದಾರಿಗಳು
ಪೂರ್ವದಿಂದಲೇ ಪ್ರತ್ಯೇಕವಿದ್ದವು ಮತ್ತು ಮುಂದೆಯೂ ಹಾಗೇ ಇರುವವು ಎನ್ನುವ ಕಹಿ ರಾಚುತ್ತದೆ...
ನೀನು ಭಾವುಕನಾದಾಗ ನಾನು ನಿರ್ದಯಿಯಾಗಿದ್ದೆ
ನನ್ನ ಭಾವಗಳು ಕಣ್ಣಂಚಿಗೆ ಬಂದು ನಿಂತಾಗ
ನೀನಾಗಲೇ ಬೆನ್ನು ಮಾಡಿ ನಿನ್ನ ದಾರಿ ಹಿಡಿದಾಗಿತ್ತು
ಎಂಥ ವಿಪರ್ಯಾಸವಿದು... ಪೂರ್ವನಿಯೋಜಿತ
ನೀನೊಂದು ಪ್ರೀತಿಯ ಮಹಾಪೂರ
ನಾನೊಂದು ಪ್ರೀತಿಯ ಮಹಾಪೂರ
ನಮ್ಮದೇ ದಾರಿಗಳಲ್ಲಿ ಹರಿದು ಸಂಗಮಕ್ಕೆ
ಹಂಬಲಿಸುವುದರೊಳಗಾಗಿ
ಸಿಹಿಯೆಲ್ಲಾ ಕಳೆದು ಉಪ್ಪಾದ ಗಡಸಾದ
ಮೃತ ಸಮುದ್ರವೇ ಆಗಿಬಿಡುತ್ತೇವಲ್ಲ...
ವಿರುದ್ಧ ದಿಕ್ಕುಗಳಲ್ಲಿ ಚಲಿಸುತ್ತಿರುವ ನಮ್ಮ ದಾರಿ
ಸರಳ ರೇಖೆಯಂತೆ ಒಂದೇ ಆಗಿರುವುದು
ಅದೃಷ್ಟವಾ?! ದುರಂತವಾ?!
ಎಲ್ಲವನ್ನೂ ಹಿಡಿತಕ್ಕೆ ತೆಗೆದುಕೊಳ್ಳಲು ಹೋರಾಡುತ್ತಾ
ಇಲ್ಲವಾಗುವ ನಮಗೆ ಯಾವುದೂ ನಮ್ಮ ಕೈಲಿಲ್ಲ
ಎಂಬುದನ್ನು ಅರಿಯುವುದು ಸಾಧ್ಯವಾ ಹೇಗೆ ಹೇಳು...
ನಿನಗೆ ಸಾಧ್ಯವಾ.. ನಾನು ಕಣ್ಮುಚ್ಚುತ್ತೇನೆ
ಕೈಹಿಡಿದು ನಡೆಸು... ತಬ್ಬಿ ಸಂತೈಸು
ಒಂದು ಜಾಗೃತ ಅರಿವಿನ ನೆಮ್ಮದಿಯ ಬೆಳಕಲ್ಲಿ
ನಾವು ಒಂದಾಗೋಣ...
ಹೀಗೆಲ್ಲ ಬಯಸುತ್ತೇನೆ ಎಲ್ಲ ಮರೆತವಳಂತೆ
ಮರೆವಿನ ವಶವಾಗುವಷ್ಟು ಸುಖ ಮತ್ತೆಲ್ಲೂ ಇಲ್ಲ
ನಾವು ಸುಖಾಸುಮ್ಮನೆ ಎಲ್ಲೆಲ್ಲೋ ಹುಡುಕುತ್ತೇವೆ
ಜೊತೆಗೆ ನಾವು ನಂಬಲೇ ಬೇಕಾದ ಸತ್ಯವೊಂದಿದೆ
ನಿನ್ನ ಪ್ರೇಮ ನಿವೇದನೆಯನ್ನು ತುಂಬಿ
ತುಳುಕುತ್ತಿರುವ ನನ್ನ ಎದೆಯ ಬೋಗುಣಿಯಲ್ಲಿ ತುಂಬಿಕೊಳ್ಳಲಾಗುವುದಿಲ್ಲ
ಕೊರೆಹಿಂಡುವ ಈ ಶಾಪಕ್ಕೆ ಉಶ್ಯಾಪವಿಲ್ಲ
ಮತ್ತು
ಯಾವ ದಾರಿಗಳೂ ನಮ್ಮನ್ನು ಕೂಡಿಸುವುದಿಲ್ಲ

ಕವಯಿತ್ರಿ ಆಶಾ ಜಗದೀಶ್, ವೃತ್ತಿಯಿಂದ ಶಿಕ್ಷಕಿ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ವಾಸ. ಕಥೆ, ಕವಿತೆ, ಪ್ರಬಂಧ, ವಿಮರ್ಶೆ ಈ ಎಲ್ಲ ಪ್ರಕಾರಗಳಲ್ಲೂ ಬರೆದ ಅನುಭವ ಅವರದು. ಇದುವರೆಗೂ ಮೂರು ಪುಸ್ತಕಗಳನ್ನು ಅವರು ಪ್ರಕಟಿಸಿದ್ದಾರೆ. 'ಮೌನ ತಂಬೂರಿ'- ಕವನ ಸಂಕಲನ, 'ಮಳೆ ಮತ್ತು ಬಿಳಿಬಟ್ಟೆ' ಕಥಾ ಸಂಕಲನ ಮತ್ತು 'ನಾದಾನುಸಂಧಾನ' ಅಂಕಣ ಬರಹದ ಪುಸ್ತಕ.