ಕವನ ಸುಂದರಿ: ಡಾ. ಸುಜಾತ ಲಕ್ಷ್ಮೀಪುರ: ಕವನದ ಶೀರ್ಷಿಕೆ: ಸಮ್ಮಿಲನ
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 03rd April 2022 03:30 PM | Last Updated: 03rd April 2022 03:30 PM | A+A A-

ಕಲೆ
ಸಮ್ಮಿಲನ
ಸಂಜೆ ಹೊತ್ತಿಗೆ ನೆತ್ತಿಯ ಮೇಲೆ ಕೈ ಆಡಿಸಿ
ಸುಮ್ಮನೆ ಸೊಂಪಾಗಿ ಸುರಿದ ಮಳೆಹನಿ
ನಿರ್ದಯೆಯಿಂದ ಸುಟ್ಟ ಬಿರುಬಿಸಿಲ ಬೇಗೆಯನು
ತೋಯಿಸಿ ಮೀಯಿಸಿ ತಣಿಸಿತು.
ಬಿರಿದ ಇಳೆಯ ಒಡಲು ತುಂತುಂಬಿಕೊಂಡು
ಹಳ್ಳಕೊಳ್ಳಗಳು ಮುಕ್ಕಳಿಸಿ ತೂರಿದ
ನೀರ್ ಗುಳ್ಳೆಯಿಂದಲೆ ಬೀದಿಯೆಲ್ಲಾ
ಬೆಳ್ಳಗೆ ಬೆಳಗಿ ಬೆಳಕಾಗಿದೆ ಇರುಳ ಹಾದಿ.
ಶುಭ್ರ ನೀಲಿ ಆಗಸದಿ ಮೊಗ ತೊಳೆದು ಇಣುಕಿದ
ಚುಕ್ಕಿ ಚಂದ್ರಮರ ಸೆಲ್ಪಿಯನು ಹಿಡಿದು
ಕಡಲ ಕನ್ನಡಿಯೂ ಸೇವ್ ಮಾಡಿಟ್ಟುಕೊಂಡು
ಉರಿದು ಬೂದಿಯಾದ ಕಾನನದ ನಡುವೆ
ಹಸಿರು ಎಲೆಗೂಸುಗಳು ಮೂಡಿ ನಲಿದಿವೆ.
ಬಿಮ್ಮನೆ ಘಮ್ಮನೆ ಮಣ್ಣಿನ
ವಾಸನೆಯ ಸವಿಯುತ್ತ ನಲಿಯುತ್ತ
ತಣ್ಣನೆಯ ಒಡಲೊಳಗೆ ಬೆಚ್ಚನೆಯ ಸೊಬಗು
ಉಂಡು ಹೊದ್ದು ಮಲಗಿಬಿಡೋಣ...
ಹೀಗೆ ನಕ್ಕು ನಲಿಯುತ್ತಿರಲಿ
ಭೂಮಿ ಬಾನು ಹನಿ ಹನಿಯ ಮಳೆಹನಿಯ ಬೆಸುಗೆಯಲಿ...ಸಮ್ಮಿಲನದಲಿ.

ಕವಯಿತ್ರಿ ಡಾ. ಸುಜಾತ ಲಕ್ಷ್ಮೀಪುರ ಅವರು ಕನ್ನಡ ಉಪನ್ಯಾಸಕಿಯಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಕನ್ನಡ ಸ್ನಾತಕೋತ್ತರ ಪದವಿಯನ್ನು ಎರಡು ಚಿನ್ನದ ಪದಕಗಳೊಂದಿಗೆ ಪಡೆದಿದ್ದಾರೆ. ನವೋದಯ ವಿಮರ್ಶಾ ಸಾಹಿತ್ಯ, ವಿಚಾರವಾದಿ ಕುವೆಂಪು ಎಂಬ ವಿಮರ್ಶಾ ಕೃತಿಗಳನ್ನು, ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಅಧ್ಯಯನ ಮತ್ತು ಬರವಣಿಗೆ ಇವರ ಹವ್ಯಾಸ. ಹಲವಾರು ಕವಿಗೋಷ್ಠಿಗಳಲ್ಲಿ,ವಿಚಾರ ಸಂಕೀರ್ಣ ಗಳಲ್ಲಿ ಭಾಗಿಯಾಗಿದ್ದಾರೆ. ಇವರ ವಿಚಾರವಾದಿ ಕುವೆಂಪು ಪುಸ್ತಕಕ್ಕೆ ರಾಂ.ಕೆ.ಹನುಮಂತಯ್ಯ ಮತ್ತು ಶ್ರೀಗೋಪಾಲಯ್ಯ ಹೆಬ್ಬಗೋಡು ದತ್ತಿ ಪ್ರಶಸ್ತಿ ದೊರೆತಿದೆ.