ಕವನ ಸುಂದರಿ: ಎಚ್.ಎನ್. ಆರತಿ: ಕವನದ ಶೀರ್ಷಿಕೆ: ನೀನು ಬಿಟ್ಟು ಹೋದ ಮೇಲೆ...
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 03rd April 2022 04:13 PM | Last Updated: 03rd April 2022 04:13 PM | A+A A-

ಕಲೆ
ನೀನು ಬಿಟ್ಟು ಹೋದ ಮೇಲೆ...
ನೀನು ಬಿಟ್ಟು ಹೋದ ಮೇಲೆ
ನೀನಿರದ ಘಳಿಗೆಗಳೆಲ್ಲಾ ಪ್ರಶ್ನೆಗಳಾಗಿ,
ಅರ್ಥವಿರದ ಆಕರ್ಷಕ
ಟಿಕ್-ಟಾಕ್ ಗಳಂತೆ,
ಒಬ್ಬರಿಗೊಬ್ಬರು ಅಂಟಿಕೊಂಡ
ಸ್ಟೇಟಸ್ ಗಳಾಗಿ,
ನನ್ನ ಗಂಟೆ ದಿನಗಳನ್ನು
ಜಗಿದು ಬಗೆದು ಸಿಗಿದು ನುಂಗಿ ಹಾಕುತ್ತಿವೆ.
"ನಖಶಿಖಾಂತ" ಎನ್ನುವುದು ಉರಿವ ಸಿಟ್ಟು ಮಾತ್ರವಲ್ಲ, ಮಡುಗಟ್ಟಿದ ದುಃಖವೂ...
ಎಂದು ತಿಳಿಯಲು
ರ್ರಾಫಿಡಿಕ್ಸ್ ಕ್ಲಾಸಿಗೆ ಹೋಗಬೇಕಾ?
ಗೂಗಲ್ ಮ್ಯಾಪ್ ನೆಚ್ಚಿಕೊಂಡ ಯಾರೂ ಹೇಳುತ್ತಿಲ್ಲ.
ಇಷ್ಟರ ನಡುವೆ,
ಮ್ಯಾನರ್ಸ್ ಕಲಿಯದ ಕಣ್ಣೀರು
ಎಲ್ಲೆಂದರಲ್ಲಿ ಪ್ರಕಟವಾಗುತ್ತಾ
ಕೆನ್ನೆ ಸವರುತ್ತಿದೆ,
ಒರೆಸುವ ಬೆರಳು ತುಟಿಗಳಿಲ್ಲದೆ.
ಬೈದರೆ, ರಚ್ಚೆ ಹಿಡಿದು
ಕಣ್ಣಲ್ಲೇ ಕಾಡಿಗೆಯಂತೆ ಚಕ್ಕಂಬಕ್ಕಳ ಕೂರುತ್ತದೆ
ಅತ್ತದೇ ಗೊತ್ತಾಗದಂತೆ.
ನಕ್ಷತ್ರವಾದರೂ ಸ್ವಕ್ಷೇತ್ರದಲ್ಲಿರಬೇಕು
ಎನ್ನುವವರನು,
ಅಂಗುಲ ಬಿಡದೆ
ಕಾಡುವವರನು,
ಕಂಡು ಮೋಹಿಸುವ ಎದೆಗೆ
ಯಾವ ಬ್ರಾ ತೊಡಿಸಿದರೆ,
ಕಾಲರ್ ಬಿಗಿದ ನಾಯಿಯಂತೆ ಕಾಂಪೌಂಡ್ ಒಳಗೆ
ಹೇಳಿದಂತೆ ಕೇಳಿಕೊಂಡು ಬಿದ್ದಿರಬಹುದು?!
ನೋಟ, ಬೇಟ, ಕೂಟಗಳೆಲ್ಲಾ ಬೀಪ್ ಗುಟ್ಟುವ ಅಲರಾಂ ಸದ್ದಂತೆ,
ನಿನ್ನ ಹೆಸರಿಗೆ ಮಾತ್ರ
ಟೈಮ್ ಸೆಟ್ ಆಗಿದೆಯೋ ಏನೋ?
ಈಗಂತೂ ಕೆಲಸಕಾರ್ಯವಿಲ್ಲದೇ
ಆರ್ಡರ್ ಗೆ ಕಾಯುವ ಸ್ವಿಗ್ಗಿ, ಡಂಝೊ ಏಜೆಂಟರಂತೆ ನಿಂತಲ್ಲೇ ಯಾಕೋ ಚಡಪಡಿಸುತ್ತಿವೆ...
"ನೀನಿಲ್ಲ" ಎನ್ನುವ
ಒಂದೇ ಸಾಲಿನ ಸುದ್ದಿಯನ್ನು
ನೂರೆಂಟು ಚಾನಲ್ಲು ಬೇರೆ ಬೇರೆ ಹೇಳಿದ ಹಾಗೆ,
ಅಧಿಕ ಪ್ರಸಂಗದಲ್ಲಿ
ಮೈ ತುಂಬಾ ಹಚ್ಚೆ ಹಾಕಿಸಿ,
ಈಗ ತೆಗೆಸಲಾಗದೇ
ಪೆಚ್ಚಾದ ಚಿತ್ರ,
ಯಾಕೋ ಕರ್ಫ್ಯೂ ಯಶಸ್ವಿಯಾದ ನಗರದಂತಿದೆ...

ಕವಯಿತ್ರಿ ಎಚ್.ಎನ್. ಆರತಿ ಅವರು ದೂರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಕೆ ಕವಿ, ಪತ್ರಕರ್ತೆಯೂ ಹೌದು. ತಂದೆ ಖ್ಯಾತ ಸಂಶೋಧಕ ಹಂಪ ನಾಗರಾಜಯ್ಯ, ತಾಯಿ ಲೇಖಕಿ ಕಮಲಾ ಹಂಪನಾ. ದೂರದರ್ಶನದಲ್ಲಿ ಜನಪ್ರಿಯವಾಗಿರುವ ‘ಥಟ್ ಅಂತ ಹೇಳಿ!?’ ರಸಪ್ರಶ್ನೆ ಕಾರ್ಯಕ್ರಮವನ್ನು ಆರಂಭಿಸಿ, 2500 ಸಂಚಿಕೆಗಳನ್ನು ನಿರ್ದೇಶಿಸಿದ ಕೀರ್ತಿ ಆರತಿ ಅವರದು. ಪ್ರವಾಸ, ನಾಟಕ ಅವರ ಮತ್ತಷ್ಟು ಆಸಕ್ತಿಯ ವಿಸ್ತಾರಗಳು. ಸಾಹಿತ್ಯ, ವೃತ್ತಿಯ ಹಾದಿಯಲ್ಲಿ ಏಳು ಕೃತಿಗಳನ್ನು ಹೊರತಂದಿದ್ದಾರೆ. ಲೇಖಕಿಯರ ಪರಿಷತ್ತಿನ ರಾಜ್ಯಮಟ್ಟದ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ‘ಅತ್ಯುತ್ತಮ ಕೃತಿ’ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.