ಕವನ ಸುಂದರಿ: ಎಂ.ಜಿ ತಿಲೋತ್ತಮೆ, ಭಟ್ಕಳ: ಕವನದ ಶೀರ್ಷಿಕೆ: ನಾನು ಕವಿತೆಯಾಗಬೇಕು
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 03rd April 2022 04:39 PM | Last Updated: 03rd April 2022 04:42 PM | A+A A-

ಕಲೆ
ನಾನು ಕವಿತೆಯಾಗಬೇಕು
ನಾನು ಕವಿತೆಯಾಗಬೇಕು
ಯಾರೂ ಓದದೇ ಉಳಿದ ಕವಿತೆಯಲ್ಲ
ಸದಾ ಕಂಪಿಸುವ, ಉಸಿರಾಡುವ
ಕವಿತೆಯಾಗಬೇಕು.
ಪದಗಳಿಗೆ ಪದಗಳ ಸ್ನೇಹ ಬೆರೆಸಿ
ಆರಿಸಿ ಸೇರಿಸಿ ಸಾಲುಗಳಾಗಿಸಿದರೆ
ತುಟಿಯ ಮೇಲೆ ನಗುವಾಗುತ್ತದೆ
ಭಾವ ತುಂಬಿಕೊಂಡು
ಕಣ್ಣ ಕಟ್ಟೆ ಒಡೆದು ಹರಿಯುತ್ತದೆ
ಇನ್ನೊಮ್ಮೆ
ಹಾಡಾಗಿ ಮಿಡಿಯುತ್ತದೆ
ಯಾವ ಕವಿತೆ ಎಂದರೆ.. ಕೇಳಿ
ಆಗುವುದಾದರೆ .... ಬೇಡುವೆ
ಬಡವನ ಒಡಲ ಗೀತೆಯಲ್ಲಿ
ಮೂಡಿಬರುವೆ
ಅವಳ ಹಣೆಯ ಬೆವರಿಗೆ
ಪಾದದ ಮುಳ್ಳು ಹಡೆದ ನೋವಿಗೆ
ತಣ್ಣನೆ ಗಾಳಿಯಂತೆ, ಬೇಲಿಯಂತೆ
ಇದ್ದು ಬಿಡುವೆ
ಚರಿತ್ರೆ ಬರದಿಡುವನ ಪುಸ್ತಕದಲ್ಲಿ
ವೀರ ಸಾಲುಗಳಾಗಬೇಕು
ಹಸುಗೂಸಿನ ತುಟಿಯು
ತೊದಲುವ ನುಡಿಗಳಿಂದ
ಮೊದಲ ಕವಿತೆಯಾಗಬೇಕು
ದಂಡೆಯ ಮುಂದೆ ಬಿಕ್ಕುವ ವಿರಹ
ಪ್ರೇಮಿಗಳ ಕವಿತೆಗಳಲ್ಲಿ
ಕತ್ತಲು ಮರೆಸುವ ಶಶಿಯಂತಿರುವೆ
ಬೀದಿಯ ಹಸಿದ ಕಣ್ಣುಗಳಿಗೆ
ಅಲೆಮಾರಿಯ ಕನಸುಗಳಿಗೆ
ಉತ್ತರ ಸಿಗುವ ಕವಿತೆಯಾಗುವೆ
ಹಾಯಾದ ಕವಿತೆಯಾಗಿ ಮಾಯವಾಗದೆ
ನರಳಿಸುವ ದನಿಗೆ ದಿಟ್ಟತನದಿ ಪ್ರತಿಧ್ವನಿಯಾಗಿ
ಒಂದಿಷ್ಡು ಕಾಲ ಉಳಿಯುವ ಕವಿತೆಯಾಗಬೇಕು.

ಕವಯಿತ್ರಿ ಎಂ.ಜಿ ತಿಲೋತ್ತಮೆ ಉತ್ತರಕನ್ನಡ ಭಟ್ಕಳ ನಿವಾಸಿ. ಬಿ.ಎ ಮತ್ತು ಬಿ.ಎಡ್ ವಿದ್ಯಾಭ್ಯಾಸ ಮಾಡಿರುವ ಅವರು ಪ್ರಸ್ತುತ ದಕ್ಷಿಣಕನ್ನಡ ಪುತ್ತೂರಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 'ನೀಲಿ ಬಯಲು' ಅವರ ಪ್ರಕಟಿತ ಕವನ ಸಂಕಲನ. ನಾಡಿನ ಪತ್ರಿಕೆಗಳಲ್ಲಿ ಅವರ ಲೇಖನಗಳು, ಕವಿತೆಗಳು ಪ್ರಕಟಗೊಂಡಿವೆ.