
ಕಲೆ
ಕವಿತೆ ಎಂದರೆ
ವಾಹ್ ಕವಿತೆಗಳಿಗೀಗೀಗ ಭರವೇನಿಲ್ಲ
ಕವಿತೆಯೆಂದರೆ ಅಂಗೈಲಿ ಅರಮನೆ
ತೋರುವ ಜಾದೂ ಪದಗಳ ಸಮೂಹ
ಅದು ಹೆಣ್ಣಿನ ಬಡತನದ ಮುಪ್ಪಿನ
ಬಗೆಗೇ ಬರೆದು ವಾರೆವಾಹ್ ಅನ್ನಿಸುವುದಲ್ಲಾ
ಕವಿತೆ ಎಂದರೆ
ಹೆಣ್ಣಿನ ಕಾಡಿಗಿ ಕಣ್ಣ ಕೊಳದೊಳಗಿಳಿದು
ಕಣ್ಣ ಕಾಂತೀಯ ಅನುರಣದೇ
ಸೌಂದರ್ಯದೊಂದು ಪ್ರಬಂಧ
ಮಾತಿಲ್ಲದೆ ಬರೆಯುವುದೇ ಹೊರತು
ಅವಳ ಗುಟ್ಟಾಗಿ ಮುಚ್ಚಿಟ್ಟ
ಮೊಲೆಗಳ ವರ್ಣಿಸಿ ಬಿಚ್ಚಿಡುತ್ತಾ
ಬಟಾಬಯಲಾಗಿಸುವುದಲ್ಲಾ.
ಕವಿತೆ ಎಂದರೆ
ವಾಚ್ಯದಲೇ ತುಟಿ ಕಟಿ ಆಸನ
ಜಘನಗಳ ತೆರೆದಿಡುವುದಲ್ಲಾ
ಮೌನದೆ ಸೂಚ್ಯದಲಿ ಆಸ್ವಾಧಿಸುವುದು
ಮಾಸದ ಮುಟ್ಟಿನ ದಿನಗಳ
ಮುಟ್ಟಿಮುಟ್ಟಿ ಬರೆದು ತೆರೆದಿಟ್ಟು
ಘಾತಿಸುವುದಲ್ಲಾ
ಮುಡಿಯ ಮುಂಗುರುಳಿಂದ
ಅಡಿಯ ಉಂಗುರದವರೆಗೆ
ಚುಂಬಿಸಿ ಆಲಿಂಗಿಸಿ
ಜೊತೆಯಾಗುವುದು
ಕವಿತೆ ಎಂದರೆ
ಮದಿರೆ ಸಾಕಿ ಸುರೆ ಸುರಾಂಗನೆ
ಅಮಲಿನ ಘಮಲೇ ಅಲ್ಲಾ
ಹಸಿವಿಗೆ ಅಂಬಲಿ ಕಸುವಿಗೆ ರೊಟ್ಟಿ
ಬೆವರಿನ ಫಲವಾಗಿ
ನೆರಳಿಗೊಂಡು ಗೂಡಾಗುವುದು
ಕವಿತೆ ಎಂದರೆ
ಮಂದಿರ ಮಸೀದಿ ಚರ್ಚುಗಳ
ಮಂತ್ರ ಆಜ಼ಾನ್ ಪ್ರಾರ್ಥನೆ
ತೆಗಳುವ ಜೀವಾಳವಲ್ಲಾ
ಪ್ರತಿಜೀವಿಗೂ ಒದಗುವ ಅನ್ನದ
ಅಗುಳಾಗುವುದು ಜೀವಸೆಲೆಗೆ
ಮಹಾನದಿಯಾಗುವುದು
ಕವಿತೆ ಎಂದರೆ
ಕರ್ತೃವಿಗೆ ಕರ್ಮವಾಗಿ
ಮಾನವೀಯ ಧರ್ಮವಾಗುವುದು
ಹೆಣ್ಣಿಗೆ ತನ್ನರಿವ ಕಣ್ಣಾಗುವುದು
ಬಡತನಕೆ ಕಿರಿಯ ಸಿರಿಯಾಗುವುದು
ಮುಪ್ಪಿಗೆ ಅಂದ ಒಪ್ಪಂದವಾಗುವುದು

ಕವಯತ್ರಿ ವಿಶಾಲಾ ಆರಾಧ್ಯ ಅವರು ಬೆಂಗಳೂರು ಜಿಲ್ಲೆ ಆನೇಕಲ್ ತಾಲ್ಲೂಕಿನ ರಾಜಾಪುರದವರು. ಎಂ.ಎ. ಕನ್ನಡ ಸ್ನಾತಕೋತ್ತರ ಪದವೀಧರರಾಗಿದ್ದು, ಶಿಕ್ಷಕ ವೃತ್ತಿಯಲ್ಲಿ ತೊಡಗಿದ್ದಾರೆ. ತಮ್ಮ ವೃತ್ತಿ ಕ್ಷೇತ್ರದಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಶಿಕ್ಷಕ ರತ್ನ ಪ್ರಶಸ್ತಿ, ಕನ್ನಡ ನಿಧಿ ಪ್ರಶಸ್ತಿ, ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ, ಆದರ್ಶ ಅಧ್ಯಾಪಕಿ ಪ್ರಶಸ್ತಿ, ಆದರ್ಶ ಮಹಿಳಾ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಅವರಿಗೆ ಸಂದಿವೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸಿದ್ದಾರೆ. ಕವನ ಕತೆಗಳನ್ನು ಬರೆದಿರುವ ಅವರು ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ. ಮಕ್ಕಳಿಗಾಗಿ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಗೊಂಬೆಗೊಂದು ಚೀಲ' ಎಂಬ ಮಕ್ಕಳ ಕತಾ ಸಂಕಲನವನ್ನೂ ಪ್ರಕಟಿಸಿದ್ದಾರೆ.