ಕವನ ಸುಂದರಿ: ಭುವನಾ ಹಿರೇಮಠ, ಬೆಳಗಾವಿ: ಕವನದ ಶೀರ್ಷಿಕೆ: ನಿರ್ಗಮನ
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 11th April 2022 03:56 PM | Last Updated: 11th April 2022 03:56 PM | A+A A-

ಕಲೆ
ನಿರ್ಗಮನ
ದೃಷ್ಟಿಯಿಂದ ಮರೆಯಾಗಬೇಡ
ಹೃದಯದಿಂದ ನಿರ್ಗಮಿಸಿಬಿಡುತ್ತೀ,
ಕಾಲದ್ದೇನಿದೆ ಸಾಗುತ್ತದೆ ನೀನೂ ಸಾಗಿಯೇಬಿಡುತ್ತೀ,
ಅಷ್ಟೊಂದು ದುಃಖಿತನಾಗಬೇಡ
ಚಿಲ್ಲರೆ ಹೆಜ್ಜೆಯ ಸದ್ದುಗಳಿಗೆ,
ನಿನ್ನೊಳಗಿನ ಪ್ರತಿಧ್ವನಿಯ ಕೇಳಿ ಅದುರಿಬಿಡುತ್ತೀ,
ನಿನ್ನೊಳಗೆಲ್ಲೂ ನನ್ನ ಸುಳಿವಿಲ್ಲ ಬಿಡು
ಪ್ರತಿಷ್ಟಾಪಿತಗೊಂಡ ಖಾಲಿ ಜಾಗೆಯನ್ನು ತಪ್ಪಿಯೂ ಕೂಡ
ಕನ್ನಡಿಗೆ ತೋರಿಸಬೇಡ ಚೂರಾಗಿಬಿಡುತ್ತೀ,
ಹಣತೆಯೇನು ಶಾಂತವಾಗಿದೆ ನಿನ್ನೊಳಗೂ ಎಣ್ಣೆ ಮುಗಿದಿರಬೇಕು,
ಬೆಳಕಿಗಾಗಿ ಅಂಗಲಾಚಬೇಡ
ನೀನೇ ಉರಿದುಹೋಗುತ್ತೀ,
ದೋಣಿಯೊಳಗೆಲ್ಲೂ ತೂತುಗಳಿಲ್ಲ ಹುಟ್ಟು ಮುರಿದಿದೆ,
ನೀರಿಗಿಳಿಯಬೇಡ ನಿನ್ನದೇ ಸುಳಿಯೊಂದರಲ್ಲಿ ಮುಳುಗಿಹೋಗುತ್ತೀ,
ಬಾಗಿಲುಗಳೆಲ್ಲ ತೆರೆದುಕೊಂಡಿವೆ ಗಾಳಿಗೆ ಮುಕ್ತಿ ಸಿಕ್ಕಿದೆ,
ಹಾರುವ ಸಾಹಸಕ್ಕಿಳಿಯಬೇಡ
ಮತ್ತೆ ನನ್ನೊಳಗೇ ಕುಸಿದುಬೀಳುತ್ತೀ

ಕವಯಿತ್ರಿ ಭುವನಾ ಹಿರೇಮಠ ಅವರು ಬೆಳಗಾವಿಯವರು. ಶಿಕ್ಷಕಿಯಾಗಿ ವೃತ್ತಿ ನಿರ್ವಹಿಸುತ್ತಿರುವ ಅವರು ಸಾಹಿತ್ಯಕೃಷಿಯಲ್ಲೂ ತೊಡಗಿದ್ದಾರೆ. 'ಟ್ರಯಲ್ ರೂಮಿನ ಅಪ್ಸರೆಯರು, ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ ಕವನಸಂಕಲನಗಳನ್ನು ಅವರು ಹೊರತಂದಿದ್ದಾರೆ.