
ಕಲೆ
ಅರ್ಪಣೆ
ನಿನ್ನ ಮುಂದಿರುವುದು ಬರೀ
ಎರಡೇ ಎರಡು ಆಯ್ಕೆಗಳಷ್ಟೆ
ನನ್ನ ಮಾತು… ಅಥವಾ ಮೌನ…
ಮಾತನ್ನೇ ಆರಿಸಿಕೊಂಡರೆ,
ಮೌನದಲ್ಲಿ ಕಣ್ಣುಗಳರಹುವ
ದಿವ್ಯ ಸತ್ಯಕ್ಕೆ ಕುರುಡಾಗುವೆ!
ಗಲಗಲನೆ ಗಿಜಿಗುಟ್ಟುವ
ಜಾತ್ರೆಯ ಫಕ್ಕನೆ ಹೊಕ್ಕಂತೆ,
ಬರಡು ನುಡಿಗಳ ನಡುವೆ
ಕಕ್ಕಾಬಿಕ್ಕಿಯಾಗಿ ಕನಲುವೆ…
ನಿನ್ನಾಳದೊಳಗಿನದೇನನ್ನೋ
ಶೋಧಿಸಲಾಗದ ಹಪಹಪಿಗೆ
ಎಷ್ಟೇ ತಿಣುಕಿದರೂ ಸಿಗದ
ಅನೂಹ್ಯ ಶಬ್ಧಗಳ ಜಾಲದ
ಒಳಹೊಕ್ಕು ಶಪಿಸುವೆ…
ಒಂದು ವೇಳೆ ನಿನ್ನ ಆಯ್ಕೆ
ಮೌನವೇ ಆದ ಪಕ್ಷದಲ್ಲಿ,
ಮಾತಿನ ಸಜೀವ ಸ್ಪರ್ಶವ
ಆಸ್ವಾದಿಸದೇ ಮರುಗುವೆ…
ಸದ್ದಿಲ್ಲದ ಸಾವು ಬಳಿಸಾರಿ
ಬಿಗಿದು ಆವರಿಸಿ ನಿಂತಂತೆ
ಗಾಳಿಯಾಡದ ಗುಹೆಯ
ಹೊಕ್ಕಂತೆ ನೀರವಕ್ಕೆ ಬೆಚ್ಚುವೆ!
ವೇದ್ಯವಾಗದ ಸನ್ನೆಗಳ
ನೂರರ್ಥ ಕಂಡು ಕಾಣದ,
ಸುಳಿಯೊಳಗೆ ಧುಮುಕಿ
ಮಾತೆಂಬ ಜ್ಯೋತಿರ್ಲಿಂಗ
ಅರಸುತ್ತ ಮುಳುಗುವೆ!
ತಬ್ಬಿಬ್ಬಾದರೆ ತುಸು ನಿಲ್ಲು
ಮತ್ತೊಂದು ದಾರಿಯಿದೆ
ನನ್ನ ಕಣ್ಣೀರನ್ನು ತೆಗೆದುಕೊ
ಗರ್ವ ಬಾಯಾರಿದಾಗ
ತಟ್ಟನೆ ತಣಿಸಬಹುದು,
ಮೇಲರಿಮೆಯ ಧಗೆಗೆ
ಸ್ನಾನದ ಸುಖ ಧಕ್ಕಬಹುದು.
ಆವರಿಸುವ ಬೇಸರಕ್ಕೊಂದು
ರಂಜನೆಯ ಆಟವಾದೀತು.
ಕೊಡಬಹುದಾದ್ದು ಇಷ್ಟೇ,
ಇನ್ನಾವ ಕೊಡುಗೆಯೂ ಇಲ್ಲ,
ನಿನ್ನ ಅಹಮ್ಮಿನ ಅರಮನೆಯ
ಮಂಕು ಗೋಡೆಗಳಿಗೆ ಹಚ್ಚಲಾರೆ,
ನನ್ನಾತ್ಮದ ಉಜ್ವಲ ವರ್ಣ!

ಯುವ ಕವಯಿತ್ರಿ ಶ್ರುತಿ ಬಿ.ಆರ್., ಮೂಲತಃ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯವರು. ಬೆಂಗಳೂರಿನಲ್ಲಿ ನೆಲೆಸಿರುವ ಇವರು ಕೆ.ಎ.ಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾನಸ ಗಂಗೋತ್ರಿಯ ಮೈಸೂರು ವಿಶ್ವವಿದ್ಯಾಲಯದಿಂದ ಪ್ರಥಮ ರ್ಯಾಂಕ್ ಮತ್ತು ಐದು ಚಿನ್ನದ ಪದಕಗಳೊಂದಿಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, 2017 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿ.ಹೆಚ್.ಡಿ. ಪದವಿ ಪಡೆದಿದ್ದಾರೆ. ಅವರ ಹಲವಾರು ಲೇಖನಗಳು, ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.