
ಸಾಂದರ್ಭಿಕ ಚಿತ್ರ
ನೆನಪಿದೆಯಾ..
ಕತ್ತಲಾವರಿಸಿದ ಆ ಹೊತ್ತು
ಇಬ್ಬರೇ ಇದ್ದದ್ದು
ಬರೀ ಆಕಾಶ ಹೊದ್ದದ್ದು
ನೆನಪಿದೆಯಾ ನಿನಗೆ?
ಹುಟ್ಟೆನ್ನುವುದು ಆದಿಯಾಗದ
ಸಾವೆನ್ನುವುದು ಅಂತ್ಯವೂ ಆಗದ
ಘಳಿಗೆಗಳ ಪರಾಗಸ್ಪರ್ಶ ಮಾಡುತ್ತಿದ್ದ
ನಿನ್ನೆದುರು ಮಂಡಿಯೂರಿ ನಾ ಬೊಗಸೆಯೊಡ್ಡಿದ್ದೆ
ರಾತ್ರಿಯೊಂದು ಉನ್ಮತ್ತವಾಗಲು
ಬೆಳದಿಂಗಳು, ತಂಗಾಳಿ
ಏನೆಲ್ಲ ಇರಬೇಕೆನ್ನುವವರಿಗೆ
ನೀನೆಂಬ ನೀನು ಎಂದೂ ಎದುರಾಗಿರಲಿಕ್ಕಿಲ್ಲ
ಒಡ್ಡಿದ ಬೊಗಸೆಯಲ್ಲಿಟ್ಟ ಕ್ಷಣಗಳು
ಮಿಂಚು ಹುಳುಗಳಂತೆ ಹೊತ್ತಿ ಆರುತ್ತಿದ್ದವು,
ನಾನು-ನೀನು ಉರಿದು ಇಲ್ಲವಾದೆವು
ರಾತ್ರಿಯೊಂದು ಬೆಳಕಾಗಿತ್ತು ಹೀಗೆ ...
