ಕವನ ಸುಂದರಿ: ಮಮತಾ ಸಾಗರ: ನಾವು ಪದ ಸಾಲೆಯಲ್ಲಿ ಪಳಗಿದವರು...
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 03rd January 2022 05:04 PM | Last Updated: 04th January 2022 04:59 PM | A+A A-

ಸಾಂದರ್ಭಿಕ ಚಿತ್ರ
ನಾವು ಪದ ಸಾಲೆಯಲ್ಲಿ
ಪಳಗಿದವರು
ನಾವು ಪದ ಸಾಲೆಯಲ್ಲಿ ಪಳಗಿದವರು
ಪದಸಂಚಾರ ಮಾಡುವವರು
ಮೆತ್ತುಕೊಳ್ಳುವ ನೋಟಗಳ ಮೈತುಂಬಾ
ಹೊತ್ತು ತಿರುಗುವವರು
ಕಣ್ಣಲ್ಲೇ ಜೊಲ್ಲ ಸುರಿಸಿ
ಉಂಗುಷ್ಟದಿಂದ ಬೆನ್ನಹುರಿಗಂಟ ತೆವಳಿ,
ಬಾಗಿದ ನಡು ಬಳಸಿ, ಮೊಲೆ ಮುಡಿ ಎನ್ನದೆ
ಹೊಕ್ಕುಳ ಸುತ್ತ ತೊಡೆಸುತ್ತ ಯೋನಿ ಜಪ ಮಾಡುತ್ತ
ಸರ್ಪ ಸುತ್ತಿನ ಹಾಗೆ, ನೋಟಸುತ್ತಿನ
ದೃಷ್ಟಿ ಬೊಬ್ಬೆಗಳು
ಮೈಸುಟ್ಟ ನೆನಪು ಮಾಗದಿದ್ದರು
ಮೈಯೆಲ್ಲಾ ಕಣ್ಣಾಗಿಸಿಕೊಂಡು ಪ್ರೀತಿಗೆ ಸೋತವರು
ಕತ್ತಲ ಘಳಿಗೆಯಲ್ಲಿ ಬೆಳಕ ಬಿತ್ತುವ ಪುಳಕಗಳ
ಲೇಪಿಸಿಕೊಂಡು ಘಮಗುಡುವ ನೆನಪುಗಳ
ಎದೆಯಲ್ಲಿ ಬೆಚ್ಚಗೆ ಕಾಪಿಡುವವರು
ನಮ್ಮದು, ಒಳಗಣ್ಣು ಹೊರಗಣ್ಣು
ನಭೋಮಂಡಲದಾಚೆಗೂ ನೋಟ ಬೀರುವ ಮುಗಿಲ ಕಣ್ಣು
ಉಮ್ಮಳಿಸಿದರೂ, ನೀರ ಹರಿಯಲುಗೊಡದ ಕಡಲ ಕಣ್ಣು
ಬೆನ್ನ ಹತ್ತುವ ಈ ಕೆಂಪು ಕಣ್ಣು
ಮೆಳ್ಳಗಣ್ಣು ಕಳ್ಳ ಸನ್ನೆ ಮಾಡೋ ಪಿಳ್ಳೆಗಣ್ಣು
ಸುಕ್ಕುಗಟ್ಟಿದ ಹಣ್ ಹಣ್ಣು ಗೆರೆಗಣ್ಣು
ಹೀಗೆ ಊರೂರ ಕಣ್ಣುಗಳ
ಹರಿದಾಡುವ ಜಿಗಟು ನೋಟವ ಚಿವುಟಿ,
ಆ ದೃಷ್ಟಿ, ಈ ದೃಷ್ಟಿ, ತಾಯಿ ದೃಷ್ಟಿ, ನಾಯಿ ದೃಷ್ಟಿ
ಅಂತಂದು ಒಂದು ಹಿಡಿ ಕಲ್ಲುಪ್ಪು, ಒಣಮೆಣಸ
ಬೆಳಗಿ ಬಿಸಾಡಿ ಕಳೆಯಿತು ಹೋಗೆಂದು
ಕೈ ಝಾಡಿಸಿ ಮುನ್ನಡೆವ ನಾವು,
ಪದ ಸಾಲೆಯಲ್ಲಿ ಪಳಗಿದವರು
ಪದ ಸಂಚಾರ ಮಾಡುವವರು
