
ಸಾಂದರ್ಭಿಕ ಚಿತ್ರ
ಈ ಬೀದಿಗೆ ಸಾಕಾಗಿದೆ!
ಎಲೆಗಳನ್ನು ಸಿಕ್ಕ ಸಿಕ್ಕಲ್ಲಿ ಎಸೆದು ನಡುಗುತ್ತ
ನಿಂತಿರುವ ಮರ. ಮುಚ್ಚಿರುವ ಮನೆಯೊಂದರ
ಕಿಟಕಿ ಬಳಿ ಗರ ಬಡಿದಂತಿರುವ ಕಿರಣ,
ಮಿನುಗುವುದೋ ಬೇಡವೋ ಎಂದೆಲ್ಲ ಲೆಕ್ಕ
ಹಾಕುತ್ತಿರುವ ಚುಕ್ಕೆ ಸಾಲು!
ಈ ಬೀದಿಗೆ ಸಾಕಾಗಿದೆ,
ಮರಗಟ್ಟಿದ ಮಾತು, ಮಂಕಾಗಿ ಹೋದ
ಮನೆ, ಬಿದ್ದ ಪ್ಲಾಸ್ಟಿಕ್ ಚೀಲದಲ್ಲಿ ಉಸಿರು
ನೀಗಿಕೊಂಡ ಹೂವು, ಗಿಡ ಮರಗಳ ದೊಗರೆದ್ದ
ಬುಡ, ಎದೆ ಬಗೆದು ತುಂಬಿದ ಜಲ್ಲಿ ಕಲ್ಲು!
ಈ ಬೀದಿಗೆ ಸಾಕಾಗಿದೆ,
ಆಗಸಕ್ಕೆ ಹೊಲಿದುಕೊಂಡ ಕಾರ್ಮೋಡ,
ಜೂಗುಡಿಸುವ ಆನ್ ಲೈನ್ ತರಗತಿ, ಕಣ್ಣೂದಿದ
ಪೋನಿ ಟೈಲ್ ಹುಡುಗಿ, ಬೀದಿಗೆ ಠೂ ಠೂ
ಹೇಳಿದ ಮಕ್ಕಳು, ಕೋಣೆಯಲ್ಲೇ ಹಿಮಗಟ್ಟಿದ
ಹಿರಿಯರು.
ಈ ಬೀದಿಯ ಬೊಗಸೆಗೊಂದು
ಸೂರ್ಯಕಾಂತಿಯ ಹೂ ಬೀಳಬೇಕಾಗಿದೆ!
