
ಕಲೆ
ಸಿರಿಗೌರಿಯ ಶಿವ
ಸಿರಿಗೌರಿ ಎದೆಯಲ್ಲೂ ಇರುತಾಳೆ ಭಾಗೀರತಿ
ತೊರೆದು ಹೋದ ಮೇಲೆ
ತಿರುಗಿ ನೋಡುವುದಿಲ್ಲ
ಅರ್ಧ ದೇಹ ಕೊಟ್ಟವನು, ಅರ್ಧವಾಗಿ ಉಳಿದುಬಿಟ್ಟ
ಉಳಿದರ್ಧಕ್ಕಾಗಿ ಕನಲಿ ಹಂಬಲಿಸುತ್ತಾನೆ ರುದ್ರ
ಜಟೆಯ ತುದಿಯಿಂದ ಕಾಲುಗುರ ಮೊನೆಯವರೆಗೆ
ಧಿಮಿಧಿಮಿ ಧಿಮಿಧಿಮಿ ಹಣೆಯಲ್ಲಿ ಕಣ್ಣುರಿ
ಸುಡುತಾದೆ ನಿಂತ ನಿಲುವಾರ
ಹಿಮದ ಕಮರಿಯಲ್ಲಿ ಬೆಂಕಿಯ ತಾಂಡವ
ಕೈಲಾಸವೊಂದು ಮಂಜಿನ ಚಿತೆ
ಸುಟ್ಟರೂ ಬೂದಿಯಾಗದ ಹೆಣ್ಣು ಪಾರ್ವತಿ
ಶಿವನ ಮೈತುಂಬಾ ಅವಳದೇ ಚಿತೆ
ಹೊತ್ತು ತಿರುಗುತ್ತಾನೆ ಶಿವ, ಕೈ ಚಾಚಿ ಬೇಡುತ್ತಾನೆ
ಎದೆಯ ಮೇಲಿನ ಶವದ ಭಾರ
ಇಳಿಸಬಲ್ಲಿರಾ ಯಾರಾರ?
ಕೈಲಾಸಬಿಟ್ಟ ಶಿವ ಮೂಲೋಕ ಅಲೆಯುತ್ತಾನೆ
ಕಳಚಿಬೀಳಲಿ ನೆನಪುಗಳೆಲ್ಲಾ ತುಣುಕು ತುಣುಕಾಗಿ
ಢಮಢಮ ಢಮಢಮ ಡಮರುಗ ಡಿಂಡಿಮ
ನಿಲ್ಲುವಂತಿಲ್ಲ ಕ್ಷಣವಾದರೂ, ನಿಂತ ಮರುಚಣ
ಕಿವಿಯಲ್ಲಿ ಮೊರೆಯುತ್ತದೆ ಕಾತ್ಯಾಯನಿ ಗೆಜ್ಜೆಉಲಿ
ಮರಳಿಬಾರೆ ಗೌರಿ, ಮತ್ತೆ ಮುನಿಯುವುದಿಲ್ಲ
ಶಿವನ ತಾಂಡವದಲ್ಲೂ ಈಗ ಅವಳ ಜಪ
ಅವಳ ಕರೆಯುತ್ತಾನೆ, ಕರೆದೊಯ್ಯೇ
ಎಂದು ದನಿಯೆತ್ತಿ ಕೂಗುತ್ತಾನೆ
ಪರಶಿವನ ಈ ದುಃಖ ಆಡಿ ಮುಗಿಸುವುದಲ್ಲ
ಅತ್ತು ಮರೆಯುವುದಲ್ಲ
ಜಗದಗಲ ಮುಗಿಲಗಲ ಕಡಲಾಳ
ಅತಳ, ವಿತಳ, ಪಾತಾಳ, ರಸಾತಳ
ಶಿವನ ಹೆಜ್ಜೆ ಗುರುತು ಬೀಳದ ತಾವಿಲ್ಲ
ಹಗಲಲ್ಲಿ ಸೂರ್ಯ ಹಣೆಗಣ್ಣಲ್ಲಿ ಉರಿಯುತ್ತಾನೆ
ಇರುಳಾಯಿತೆಂದರೆ ಹಣೆಯ ಚಂದಿರನಿಗೆ ಬೆಂಕಿ ಇಕ್ಕುತ್ತಾನೆ
ಉಮೆಯ ಸ್ಪರ್ಶವಿಲ್ಲದ ಮುಡಿಯಲ್ಲಿ ನೂರು ಜಟೆ
ಒಂದೊಂದು ಎಳೆಯಲ್ಲೂ ಫೂತ್ಕರಿಸುವ ಕಾಳನಾಗರ
ಮರ್ತ್ಯವನ್ನೇ ನಂಬಿದ ಲೋಕ
ಆತ್ಮಹತ್ಯೆ ಎನ್ನುತ್ತದೆ, ತಿಳಿಯದೆ ಶಿವನಿಗೆ
ಗೌರಿ ಬೆಂದದ್ದು ಅವ ಮುಖ ತಿರುಗಿಸಿದಾಗ.
ಹೋಗಿ ಬಾರೆನ್ನಲಿಲ್ಲ, ಬೇಡ ನಿಲ್ಲೆನ್ನಲಿಲ್ಲ
ಬಿಟ್ಟು ಬರಲಿಲ್ಲ, ಕಾದು ನಿಲ್ಲಲಿಲ್ಲ
ಮುಂಜಾನೆ ತೆಗೆದೆಸೆವ ಜಟೆಯ ಹಳೆ ಹೂವಂತೆ
ಕಳಚಿ ಕೈಬಿಟ್ಟ, ಹೊರಟು ನಿಂತವಳೆಡೆಗೆ ಬೆನ್ನುಕೊಟ್ಟ
ಶಿವನ ಸಿಟ್ಟು ತಾಕದ ಹಿಮಗಿರಿ ತನಯೆಯನ್ನು
ಅವನ ಉಪೇಕ್ಷೆ ಸುಟ್ಟುಹಾಕಿತು
ನೂರು ಮಾತುಗಳು ಕೊಲ್ಲದ ಪ್ರೀತಿಯನು
ಒಂದು ಮೌನ ಕೊಚ್ಚಿ ಮುಗಿಸುವ ಹಾಗೆ
ಹಲುಬುತ್ತಾನೆ ಶಿವ, ಹುಡುಕುತ್ತಾನೆ ಶಿವ
ಶಿವೆಯಿಲ್ಲದ ಶಿವನೆದೆಯಲ್ಲಿ ಆರುವುದಿಲ್ಲ ಸತಿಯ ಚಿತೆ
