
ಕಲೆ
ಬಿಕ್ಕು
ರಸ್ತೆಯಲಿ ಒಬ್ಬಳೇ ನಡೆವಾಗ
ನೆನಪಾದ ತಮಾಷೆ
ತುಟಿಗೆ ಅಗುಳು ಮೆತ್ತಿದಂತೆ
ಕಸಿವಿಸಿಯಲಿ ಕೊಡವಿ
ಯಾರೆಂದೋ ತೋರಿ ಕೈಬೀಸಿ
ಹತ್ತಿರಾದರೆ, ಅಪರಿಚಿತ ಹುಡುಗ
ಸುತ್ತ ಗಮನಿಸುವ ಕಣ್ಣುಗಳು
ಜನಜಂಗುಳಿಯ ಮಧ್ಯೆಯೇ
ತೀರಾ ಒತ್ತರಿಸಿ ಬಂದ ಅಳು
ಕಡಿಮೆ ಬಿದ್ದ ಟಿಕೇಟು ಕಾಸು
ಎಡವಿದಾಗ ಹರಿದ ಅಂಗಿ
ಸದಾ ಮೇಲಾಟ ತೋರಿದವರ
ಅಣಕು ನೋಟ
ಕಿತ್ತ ಉಂಗುಷ್ಟದ ತೇಪೆ ಚಪ್ಪಲಿ
ಜಾತ್ರೆಯಂತಹ ಮದುವೆಗೆ
ತಪ್ಪು ಅಂದಾಜಿನಲಿ ತೊಟ್ಟ ಸಾದಾ ಅರಿವೆ
ನಿಶ್ಯಬ್ದ ಕೋಣೆಯಲಿ ಶಮನವಾಗದ ಬಿಕ್ಕಳಿಕೆ
ಮುಜುಗರಕ್ಕೆ ಮುಗಿಲಷ್ಟು ಹರಹು
ಚಳಿಯಲಿ ಮುದುರಿ
ಮರೆಯಲಾಗದೆ ಉಗುರು ಕಡಿದು ಕಡಿದು
ನೋವು ಒತ್ತರಿಸಿದ ಬೆರಳು
ಅರ್ಧರಾತ್ರಿಯಲಿ ಆರ್ತನಾದ
ಮೂಕವಾದ ಜೀವಗಳು
ಒಳಗೆ ನರಳುವುದು ಇಂತದ್ದೇ
ನೆನಪುಗಳ ಜೊತೆಗೆ
ಬರಿದೇ ಮಾತುಗಳಲಿ
ಸೂಕ್ಷ್ಮ ನಟಿಸುವುದು ಬೇರೆ
ಇಲ್ಲಿ ಹಗಲಿನ ಗಾಯಗಳಿಗೆ
ಕಣ್ಣೀರಿನ ಉಪ್ಪು ಮಾಯಿಸುವ
ಸೂಕ್ಷ್ಮಗಳೇ ಬೇರೆ
