
ಕಲೆ
ಕಂದೀಲು ನಾ
ಬಡವನ ಗುಡಿಸಲ ಕಂದೀಲು ನಾನು
ಸದಾ ಮಿನುಗುವುದೊಂದೇ ಗೊತ್ತು
ಮಂಕು ಮಂಕಾಗಿ.
ಪ್ರಜ್ವಲಿಸಬೇಕೆಂಬ ಆಸೆ ನನಗೂ ಇದೆ,
ಆಗೆಲ್ಲ ಅವನ ಹೊಟ್ಟೆಯ ಹೊಕ್ಕಿಬಿಡುತ್ತೇನೆ,
ದಿನದ ಬಹುಭಾಗ ಜ್ವಾಲಾಮುಖಿಯಾಗಿ
ಸ್ಫೋಟಗೊಳ್ಳುತ್ತ ಅವನ ನುಂಗಿ ನೊಣೆಯುತ್ತೇನೆ.
ಹಸಿವ ಹಾಹಾಕಾರದಲಿ ಅವನ ನೋಡಿ
ಗಹಗಹಿಸಿ ಅಬ್ಬರಿಸಿ ಬೊಬ್ಬರಿಯುತ್ತೇನೆ.
ತುತ್ತು ಸಿಗದ ಅವನ ನಿರಾಶೆಯಲಿ
ಕಣ್ಣ ಸಿಡಿ ನೋಟದ ಆಕ್ರೋಶವಾಗುತ್ತೇನೆ.
ಅಪ್ಪಿ ತಪ್ಪಿ ಕೆಲಸ ಸಿಕ್ಕರೆ ಬಾಹುಬಲದ
ಆವೇಶದುರಿಯಾಗುತ್ತೇನೆ.
ದೊರೆತ ಪುಡಿಗಾಸ ಗಡಂಗಿನಲಿ ಅವ ಚೆಲ್ಲಿದಾಗ
ಕುಡುಕನೆದೆಯ ಆರ್ತನಾದವಾಗುತ್ತೇನೆ.
ಒಡಲ ಸಿಡಿಲೆದ್ದು ಭಂಡರ ಬಾಳ ಸುಡುವ
ದಾವಾನಲವಾಗಬಯಸುತ್ತೇನೆ.
ಗುಡಿಸಲಲಿ ನಾನಿಲ್ಲದೆ ದೀಪ ಹಚ್ಚಲು
ಗಾಳಿಯ ನಿಂದಿಸುವ ಅವನ ಹೆಂಡತಿ,
ದೀಪ ಹಚ್ಚು ಬರೆಯಬೇಕಿದೆ ಎಂದು
ಗೋಳಿಡುವ ಕಂದನ ಚಿತ್ರ
ಥಟ್ಟನೆ ನೆನಪಾಗಿ ಅವನ ರಟ್ಟೆಯೆಳೆದು
ತಳ್ಳಿಕೊಂಡಾದರೂ ಗುಡಿಸಲತ್ತ
ನಡೆಸುವಾಗ ಬೆಳದಿಂಗಳಾಗುತ್ತೇನೆ.
ಅವನ ತೂರಾಡುವ ಬದುಕು,
ಅದೇ ಗುಡಿಸಲು ಕಂಡಾಕ್ಷಣ
ಆತ್ಮಸಾಕ್ಷಾತ್ಕಾರವಾದವನಂತೆ
ಅವನಿಗಿಂತ ಒಂದು ಹೆಜ್ಜೆ ಮುಂದೆ ಬಂದು
ಮತ್ತದೇ ಕಂದೀಲಾಗಿ ಮಿನುಗತೊಡಗುತ್ತೇನೆ.

ಉತ್ತರಕನ್ನಡ ಮೂಲದವರಾದ ಕವಿತಾ ಹೆಗಡೆ, ಈಗ ಹುಬ್ಬಳ್ಳಿಯ ಮಂಜುನಾಥ ನಗರದ ಕೆ ಎಲ್ ಇ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿಯಾಗಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಥೆ, ಕವನ, ಪ್ರಬಂಧ, ವ್ಯಕ್ತಿತ್ವ ವಿಕಸನ ಲೇಖನಗಳು, ಅನುವಾದ, ಅಂಕಣ ಬರಹ, ವಿಮರ್ಶೆಗಳಲ್ಲಿ ಆಸಕ್ತಿ. ನಾಡಿನ ಖ್ಯಾತ ಪತ್ರಿಕೆಗಳು, ಮ್ಯಾಗಝಿನ್ಗಳು, ಬ್ಲಾಗುಗಳಲ್ಲಿ ನಿಯಮಿತವಾಗಿ ಬರಹಗಳು ಪ್ರಕಟವಾಗುತ್ತಿವೆ. 'ದ ನೆಸ್ಟೆಡ್ ಲವ್' ಇವರ ಮೊದಲ ಆಂಗ್ಲ ಕಥಾ ಸಂಕಲನ.