ಕವನ ಸುಂದರಿ: ತೇಜಾವತಿ ಎಚ್.ಡಿ, ತುಮಕೂರು: ಮೈಲುಗಟ್ಟಲೆ ಸಾಗುತ್ತಿದ್ದೇನೆ
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 05th March 2022 07:12 PM | Last Updated: 05th March 2022 07:12 PM | A+A A-

ಕಲೆ
ಮೈಲುಗಟ್ಟಲೆ ಸಾಗುತ್ತಿದ್ದೇನೆ
ನಾನು ನೀನು ಜೊತೆಯಾಗಿ ಹೆಜ್ಜೆ ಹಾಕುವಾಗ
ಪರ್ವತ ಭೂಶಿರಗಳಿಗೂ ಶಕ್ತಿ ಬರುತ್ತದೆ
ಪರ್ಯಟನೆ ವೇಗಕ್ಕಿಳಿದು
ಅದೇನೋ ಧೈರ್ಯ ನೀನಿದ್ದರೆ
ಅದೇನೋ ಮೋಹ ನೀನೆಂದರೆ
ದಾರಿಯ ಹಂಗಿಲ್ಲ
ಸ್ಥಿರ ಚರಗಳ ನಾಗಾಲೋಟವೂ ನಗಣ್ಯ ನನಗೆ
ನೀನೆಂದರೆ ಅಷ್ಟೇ ಸಾಕು..
ತುರ್ತು ಅಸಹಾಯಕತೆಯ ಬೆನ್ನೇರಿ ಅನುಭವಿಸುವ ನೂರಾರು ವಾಂಛೆಗಳ ನರಕವೂ ಈಗಿಲ್ಲ
ನೀನೆಂದರೆ ಜಗ
ನೀನೆಂದರೆ ಆತ್ಮವಿಶ್ವಾಸ
ನೀನೆಂದರೆ...
ಕನಸು ಚಿಗುರಿಸಿ ಪ್ರೀತಿ ಎರೆದು ಫಸಲು ಬೆಳೆಸುವ ಫಲವತ್ತಾದ ಭೂಮಿ
ಒಮ್ಮೊಮ್ಮೆ ನೀನೂ ರೇಗಿಬಿಡುವೆ
ಚಲಿಸುವ ನನ್ನ ಕೈಗಳ ಹಿಡಿತಕ್ಕೂ ಸಿಗದ ಹಾಗೆ
ಮಗದೊಮ್ಮೆ..
ಮೌನ ಆಗಸದಲ್ಲಿ ಮೇಲೇರಿ ಹಾದಿಯುದ್ದಕ್ಕೂ ಕೋಲ್ಮಿಂಚಾಗಿ ಹೊಳೆವ ಅಲ್ಲೊಂದು ಇಲ್ಲೊಂದು ಸಾಲುಗಳು
ರೂಪ ಕಟ್ಟಿಕೊಂಡು ಅರ್ಥ ಕೂಡಿಕೊಂಡು
ಈಜಾಡಿ
ಹೃದಯಕ್ಕೂ ಭಾವಕ್ಕೂ ಮೆದುಳು ಸೇತುವೆಯಾಗಿ ಮಿಡಿಯುತ್ತಿವೆ
ಕವಿತೆಗಳಾಗಿ ಜನಿಸಲು
ನಿನ್ನ ಮೌನವನ್ನು ಮಾತಾಡಿಸಿ
ಬೀಸುವ ಗಾಳಿಯನ್ನು ಹಾಡಾಗಿಸಿ ತೇಲಿಬಿಡುತ್ತೇನೆ ನಾನಲ್ಲಿ
ಸ್ವರ ಮಾಧುರ್ಯದ ಭಾವಗಡಲಲಿ ಅನಂತವಾಗಿ
ಬಂಧಗಳ ಗುರುತ್ವಾಕರ್ಷಣೆಯಿಂದ ಪಾರಾಗಿ
ಸುತ್ತುವರೆದಿರುವ ಭೂಮಿ ಬಾನು ಎದುರಾಗುವ ತಡೆಗೋಡೆಗಳು
ಇದಾವುದರ ಪರಿವೆಯೂ ಇಲ್ಲ ಈಗ
ನೇರ ಗುರಿ ದೂರ ದಾರಿ
ಸಾಗುತ್ತಿದ್ದೇನೆ ಮೈಲುಗಟ್ಟಲೆ
ಒಳನೋಟ ಆತ್ಮಸಖ್ಯ ಹಿತವೆನಿಸುತ್ತಿದೆ
ಮುಳ್ಳುಗಳ ಬೇಲಿ ದಾಟಲು..

ಕವಯಿತ್ರಿ ತೇಜಾವತಿ ಎಚ್.ಡಿ ಮೂಲತಃ ತುಮಕೂರಿನವರು. ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲಚಕ್ರ, ಮಿನುಗುವ ತಾರೆ ಮತ್ತು ಬಾ ಭವಿಷ್ಯದ ನಕ್ಷತ್ರಗಳಾಗೋಣ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಸಾವಿತ್ರಿಬಾಯಿ ಫುಲೆ ಪ್ರಶಸ್ತಿ, ದೆಹಲಿಯ ಪ್ರಜಾಪತಿ ಪತ್ರಿಕೆ ಕೊಡಮಾಡುವ ಕಾವ್ಯ ಸಮ್ಮಾನ್ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಸಿರಿ ಕಾವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಕವಿತೆಗಳು ಇತರ ಭಾಷೆಗಳಿಗೂ ಅನುವಾದಗೊಂಡಿವೆ.