ಕವನ ಸುಂದರಿ: ಕಾಂತಿ ಹೆಗಡೆ, ಸಾಗರ: ಕವನದ ಶೀರ್ಷಿಕೆ: ಓ ಅವಳಾ!?
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 14th March 2022 01:44 PM | Last Updated: 14th March 2022 01:45 PM | A+A A-

ಕಲೆ
ಓ ಅವಳಾ!?
ಸರಿರಾತ್ರಿ ಹತ್ತಕ್ಕೆ
ಆಫೀಸಿನ ನಾಲ್ಕು ಗೋಡೆ ದಾಟಿ
ಸರಸರನೆ ಬಸ್ಸು ಹಿಡಿಯಲು
ಓಡುತ್ತಲೇ, ರಿಂಗಣಿಸಿದ
ಅಮ್ಮನ ಫೋನು ಎತ್ತಿ
ಹಲೋ ! ಎಂದಿದ್ದೆ
ಎಲ್ಲಿದ್ದೀಯೆ ಸೂಳೆ
ಇನ್ನೂ ಮನೆ ಸೇರಿಲ್ಲವೇನೆ ?
ಸೂಳೆ ಹೊಸ ಪದವೇ ?
ಅಮ್ಮ ಎಂದಿಗೂ ನನ್ನ
ಕರೆದದ್ದು ಹಾಗೆಯೇ!
ಸೂಳೆ, ಕುನ್ನಿ, ಪ್ರಾರಬ್ಧ ...
ಅಮ್ಮನೆಂದರೆ ಹಾಗೆಯೇ!
ಮಮತೆಯ ಕರೆಯೋಲೆ
ಅಮ್ಮನೇನು? ಊರ ಮಂದಿ
ನೆಂಟರು, ಅವರ ಬಳಗ
ಎಲ್ಲರೂ ನನ್ನ
ಕರೆವುದು ಹಾಗೆಯೇ! ಸೂಳೆ
ಪಾಪ, ಅಪ್ಪ ನೆಟ್ಟ ಆಲಕ್ಕೆ
ಜೋತುಬಿದ್ದು ಜೋಗುಳ ಹಾಡುವ
ಬಾವಲಿಗಳ ತಪ್ಪಾದರೂ ಏನು ?
ಹೆಣ್ಣೆಂದರೆ? ಸರಪಳಿಯಲ್ಲಿ
ಬಂಧಿಯಾದ ಮಾತುಮಾತಿಗೂ
ಭಿಕ್ಕುವ ಸುಕೋಮಲೆಯರು
ನೀನು ವಿಜ್ಞಾನ ಓದಿ
ಮಾಡುವುದೇನಿದೆ ಮಣ್ಣು ?
ಪಾತ್ರೆ ತಿಕ್ಕುವ ಕೆಲಸಕ್ಕಷ್ಟೇ
ಲಾಯಕ್ಕು ಹೆಣ್ಣು
ದಪ್ಪ ಪುಸ್ತಕ ಓದುತ್ತಿದ್ದ ನನ್ನನ್ನು
ನೆಂಟನೊಬ್ಬ ಕಟಕುತ್ತಾನೆ
ಚುಚ್ಚು ಮಾತಿಗೆ
ಗಂಟಲು ಕಟ್ಟಿದರೂ
ಮೇಲೆ ನಸು ನಗುತ್ತಾ
ರುಚಿ ಶುಚಿಯಾಗಿ
ಅಡುಗೆ ಮಾಡಿ ತಟ್ಟೆ ಹಾಕಿ
ಮತ್ತಷ್ಟು ತಿನ್ನೆಂದು ಬಡಿಸುವ
ನಿಮ್ಮ ಎಂಜಲು ಬಳಿವ
ವೀರ ವನಿತೆ ಹೆಣ್ಣು
ನಾನೋ! ನನ್ನ ಪಾಡಿಗೆ ನಾನು
ಮುಚ್ಚಟೆಯಾಗಿ ಬೇಕೆಂದಲ್ಲಿ ತಿರುಗಿ
ಮರ ಮಟ್ಟು ಪ್ರಾಣಿ ಪಕ್ಷಿಗಳ
ಜೊತೆ ನಲಿದು, ಬೇಕೆಂದವರೊಡನೆ
ಮುಚ್ಚು ಮರೆಯಿಲ್ಲದೆಯೇ ಹರಟಿ
ಸ್ವಾಭಿಮಾನವ ಎಡವಿಯೂ
ಅಡವಿಡದೆ ಕಾಪಿರಿಸಿ
ಲೇಖನಿ ಹಿಡಿದು ಉದ್ದುದ್ದ
ಕವಿತೆ ಗೀಚುವ ನಾನು
ಸೂಳೆಯಲ್ಲದೆ ಮತ್ತೇನು ?
ಸೂಳೆಯಾಗಲು ಹತ್ತು ಪುರುಷರ
ಸಂಗಡ ಮಲಗಬೇಕೆಂದಿಲ್ಲ
ನನ್ನ ನೋಡಿ ಜೊಲ್ಲು ಸುರಿಸುವ,
ಕುರುಬುವ, ಜಗ್ಗಿ ಕಾಲೆಳೆವ,
ಬಿದ್ದರೆ ನಕ್ಕು ಮೆರೆವ
ಮನದ ತುಂಬೆಲ್ಲಾ
ಸೂಳೆತನವೇ ಮೇಳೈಸಿದ
ಸರ್ವಗುಣ ಸಂಪನ್ನೆಯರ ಮತ್ತೂ
ಹತ್ತು ಮಹಾಪುರುಷರ ಸುತ್ತಾ
ಬದುಕಿ ನೋಡಬೇಕು
ಐದರ ಹರೆಯದ
ಪ್ರಣಯಪಿಪಾಸು ಹೆಣ್ಣು ಮಗುವಿನ
ಕಾಮತೃಷೆ ತೀರಿಸುತ್ತಲೇ
ಅರೆ ರಾತ್ರಿ ಮಲಗಿದ
ಹತ್ತರ ಹರೆಯದ
ಕಾಮುಕ ಬಾಲೆಯ
ಲಂಗ ಎತ್ತಿ,
ಮೂಗು ಬಾಯಿ ಗಟ್ಟಿ ಕಟ್ಟಿ
ಯೋನಿಯೊಳಗೆ ತೂರಿಸುವ
ಹುರಿ ಮೀಸೆ ಬಲಿತ
ತಾ ಹೆತ್ತ ಧೀರ
ಗಂಡುಗಲಿ ಕುಲತಿಲಕ
ಬೆದೆಗೆ ಬಂದುದ ಕಂಡು
ತಣ್ಣಗೆ ನಗೆ ಬೀರಿ
ಅವಳು ಗಂಡುಬೀರಿ
ತಪ್ಪಿಯೂ ಬಾಯಿ ಬಿಡದಂತೆ
ಭದ್ರವಾಗಿ ಬೆಣೆ ಜಡಿದು
ಮುಚ್ಚಿಸಲು
ಗರತಿ ಗೌರಮ್ಮರ
ಸತಿ ಸಾವಿತ್ರಿಯರ ಕುಲದ
ಸಬಲ ಆಯುಧವೇ!
ಓ ಅವಳಾ! ಮಹಾ ಗಂಡುಬೀರಿ ಸೂಳೆ
ಬೇಲಿಯೇ ಎದ್ದು
ಹೊಲ ಮೆಂದಂತೆ
ನಿಮ್ಮ ಚಪ್ಪು ನಾಲಗೆಯ
ಹಾದರದ ಗುಂಡಿಗೆ
ಬಿದ್ದ ಹೆಣ್ಣೊಂದು
ತನ್ನಷ್ಟಕ್ಕೆ ನರಳುತಿರಲು
ಮತ್ತೊಮ್ಮೆ ಮಗದೊಮ್ಮೆ
ಮುಗಿಬಿದ್ದು ಗುಮ್ಮಿ
ನಿಮ್ಮ ಮನದ ಅಶೌಚವ
ಎಗ್ಗಿಲ್ಲದೆ ಅವಳ ಮೈಮನಗಳಿಗೆ
ರಪ್ಪನೆ ರಾಚುತ ಕುಗ್ಗಿಸಿ
ಬಸವಳಿಸಿ ಬಾಗಿಸಿ
ಬಜರಂಗಬಲಿ
ಆ ಬಲಿ ಕುರಿಯ
ಜೀವಂತ ಸುಡಲು
ಉರಿಸಿದ ಕೆಂಡದ ಬೇಗೆಗೆ
ಮೈ ಕಾಸಿಕೊಂಡು
ಹುರಿಗಡಲೆ ಮೆಂದು
ಉಘೇ ಉಘೇ
ಎಂದು ಬೊಬ್ಬಿರಿವ
ಶೀಲದ ಸೋಂಕು ತಗುಲಿದ ನಿಮ್ಮ
ಉದ್ದಟತನಗಳನ್ನು ಮೆಚ್ಚಿಸಲು
ಸುತರಾಂ ತಿರಸ್ಕರಿಸಿ
ಮನಸ್ಪೂರ್ವಕವಾಗಿ
ಒಪ್ಪಿಕೊಂಡುಬಿಡುತ್ತೇನೆ
ಹೌದು! ನಾನು ಸೂಳೆಯೇ ಸೈ
ಓ ದೇವರೇ ನಿನ್ನ
ಅಸ್ತಿತ್ವವೊಂದಿದ್ದರೆ
ಮತ್ತೆ ಮತ್ತೆ ಕೋರುತ್ತೇನೆ
ದೂಡದಿರು ನನ್ನ ಸುಳ್ಳು
ಸಂಪನ್ನಿಕೆಯ ಕೂಪದೊಳು
ಬೆನ್ನಟ್ಟಿ ಭೂಮಿಯಿಂದಟ್ಟು
ಕುಲಗೆಟ್ಟ ಶೀಲವಂತಿಕೆಯ ಸೋಂಕು
ಹುಟ್ಟಿಸು ಮತ್ತಷ್ಟು
ಮಹಾ ಗಂಡುಬೀರಿಯರ
ಉರುಳ ಸರಪಳಿ ಮೆಟ್ಟಿ
ಕಿತ್ತೆಸೆವ ತಾಕತ್ತು ಕೊಟ್ಟು

ಕವಯಿತ್ರಿ ಕಾಂತಿ ಹೆಗಡೆ ಮೂಲತಃ ಸಾಗರದವರು. ಜೀವನೋಪಾಯಕ್ಕೆ ಸಾಫ್ಟ್ವೇರ್ ವೃತ್ತಿಯಲ್ಲಿರುವ ಅವರಿಗೆ ಪ್ರವಾಸ ಒಂದು ಗೀಳು. ಅದು ಬಿಟ್ಟರೆ ಕಲೆ, ಓದು, ಫೋಟೋಗ್ರಫಿ- ಬರವಣಿಗೆ ಎಲ್ಲದರಲ್ಲೂ ವಿಪರೀತ ಆಸಕ್ತಿ. ಸಂಚಾರಿ.ಕಾಮ್ ಎಂಬ ಹೆಸರಿನ ಪ್ರವಾಸಿ ಮತ್ತು ಇಕಾಮರ್ಸ್ ಜಾಲತಾಣ ಅವರ ಕನಸಿನ ಕೂಸು. ಆಗಾಗ ಉಚಿತ ಯೋಗ ತರಬೇತಿ ಕೊಡುವುದು ಕಾಂತಿ ಹೆಗಡೆಗೆ ತೃಪ್ತಿ ಕೊಡೋ ಕೆಲಸ. ಜೀವನ ಪ್ರೀತಿ ಸ್ವಲ್ಪ ಹೆಚ್ಚು. ಜಾಸ್ತಿ ತಲೆ ಕೆಡಿಸ್ಕೊಳದೇ ಈ ಕ್ಷಣ ಖುಷಿಯಾಗಿ ಬದುಕೋದೇ ಬದುಕಿಗೆ ಪ್ರೇರಣೆ.