ಕವನ ಸುಂದರಿ: ಮೌಲ್ಯ ಸ್ವಾಮಿ, ಮೈಸೂರು: ಕವನದ ಶೀರ್ಷಿಕೆ: ಹೀಗೊಂದು ಅನಿರ್ದಿಷ್ಟಾವಧಿ ನಿವೇದನೆ...
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 14th March 2022 01:22 PM | Last Updated: 14th March 2022 01:44 PM | A+A A-

ಕಲೆ
ಹೀಗೊಂದು ಅನಿರ್ದಿಷ್ಟಾವಧಿ ನಿವೇದನೆ...
ನಾನೆಂದೂ ಕೈಚಾಚಿರದಿದ್ದರೂ
ಎಲ್ಲೋ ಇರುವ ಅವನಿರುವಲ್ಲಷ್ಟೇ
ಸುಖವಾಗಿದ್ದೆ ನಾನು
ಇಳಿದು ಬಂದು ಬೆರಳನಿಡಿದೆಳದದ್ದು
ಇನ್ಯಾರದೂ ಅಲ್ಲ,
ಚಂದಿರನದೇ ತಪ್ಪು
ಈಗ ನಾನು ಭೂದಿಯಾಗಲು ಸಿದ್ದಳಾದ ಮೇಲೆ
ಚಂದಿರನೇಕೋ ಪರಾರಿ
ಕಣ್ಣಳತೆಯಿಂದ ತುಸು ತುಸುವೇ
ಹಿಂದಕಡಿ ಇಡುತ್ತಿದ್ದಾನೆ..
ಸ್ಪಷ್ಟವಾಗಿ ಕಾಣಿಸದಿದ್ದರೂ
ಇಲ್ಲೊಂದು ಅಂತರ ಹಿಗ್ಗುತ್ತಿದೆ
ಅನವರತ
ಕೈ ಜಗ್ಗಿ ವಿವರಣೆ ಕೇಳಬೇಕಿಸುತ್ತಿದೆ
ಇರಬಹುದೇ ಇದುವೇ ಅವನ ಪ್ರೀತಿಯ
ರೀತಿಯಲ್ಲೊಂದು ಬಣ್ಣ?
ಸೋಲದ ಸತಾಯಿಸದ ಮಾರ್ಧನಿಸದ
ನೀರವ ಪ್ರೇಮವೂ ಇರಬಹುದೇ ಇದು?
ಒಂಟಿತನ ಕಲಿಸಿದ ಎಲ್ಲಾ ವಿದ್ಯೆಗಳ
ವಿದ್ಯಾವಂತ ತಟಸ್ಥಗಳ
ಬುಡಮೇಲು ಮಾಡಿ ಅವಮಾನಿಸಿದವನಿಗೆ
ಕೇಳಲೇ ಬೇಕು
ನಾನೀಗ ನಿಲ್ಲಬೇಕಿರುವ ತಿರುವುದು ಎಲ್ಲಿದೆ?
ನನಗೆ ಮಂಜೂರಾದ ಸ್ಥಾನ ಯಾವುದು? ನಿಗದಿತ ಸಮಯ? ಎಂದೆಲ್ಲಾ
ಆದರೆ ಏನು ಮಾಡಲಿ..
ಕೂಗಿ ಕರೆದು ಕದಡಿಬಿಡುವ ವಿಷಯವಲ್ಲವಿದು
ಆತ್ಮದ ಭಾಷೆ ಅರಿಯದವನಿ
ಆತ್ಮವಂಚನೆಯ ಪಠ್ಯ ಅರ್ಥವಾಗುವುದೆಲ್ಲಿ?
ನಗುವ ಚಿಮ್ಮಿಸಿ ತೇಲಿಕೊಳ್ಳುವವನಿಗೆ ಎಷ್ಟೆಂದು ವಿವರಿಸಲಿ
ಕುರುಡುತನವ ಅರೊಪಿಸಿಕೊಂಡವನಿಗೆ..
ನಾನೀಗಾಗಲೇ ಕಂಠಮಟ್ಟ ಮುಳುಗುತ್ತಿರುವೆ..
ಕೈಮೀರುವ ಎಲ್ಲದಕೂ ಶಾರಣಾಗತಿಯೊಂದೇ ಉಳಿವಿನ ಸೂತ್ರವೇ?
ಕೈಬೆರಳುಗಳ ನಡುವೆ ಈಗೀಗ ಸುಯ್ಗುಡುವ ಮೌನದ ಸಪ್ಪಳ
ಮೊದಲ ಬಾರಿಗೆ ನೋಡಿಕೊಂಡೆ ಅಂಗೈ ರೇಖೆಗಳ
ಎಷ್ಟೋ ಕಾಲಗಳ ನಂತರ
ಬೇರನೂರಿ ಇದ್ದ ಖಾಲಿಗತನಗಳೂ ಖಾಲಿಯಾಗಿಹೋಗಿವೆ..
ಮುದ್ರೆಯನ್ನೊತ್ತಿದ್ದ ಬೆವರ ಪಸೆ ಆರಿಹೋಯಿಯೇ ಇಷ್ಟು ಬೇಗ?
ದುರಂತಗಳು ನನಗೆ ಹೊಸದಲ್ಲದಿದ್ದರೂ..
ನಾನೆಕೋ ಈ ದುರಂತಕ್ಕೆ ಹೊಸಬಳು..
ಅಎಷ್ಟು ಕಾಲದ ಧ್ಯಾನವೋ..
ಈ ಶಾಪಕ್ಕೆ ನನ್ನನ್ನೇ ಅರ್ಹಗೊಳಿಸಲು..
ಕರುಣಾಳು!
ನಾನೀಗ ಅದೃಷ್ಟ ವಂತ ಶಾಪಗ್ರಸ್ಥೆ!
ಈಗವನು ಉಸಿರೂ ತಾಕದಷ್ಟು ದೂರ
ಮತ್ತು ಕಣ್ಣು ಸೋಕುವಷ್ಟು ಹತ್ತಿರ
ಆತುಮಕ್ಕಂತೂ....
ಊಹುಂ..ಆ ಮಾತು ಬೇಡವೀಗ
ಯಾವುದು ಹೆಚ್ಚು ಘೊರವೆಂದು
ಮತ್ತೆ ಮತ್ತೆ ಜಗಳಕ್ಕೆ ನಿಲ್ಲುತ್ತೇನೆ
ನನ್ನ ಜೊತೆ ನಾನೇ
ಹಿಂದೆ ಸರಿದವನ ಅಪರಾಧ
ತನ್ನಷ್ಟಕ್ಕೆ ತಾನೆ ಮಾಫಿಯಾಗಿದೆ
ಈಗ
ಅವನ ಕಲ್ಪನೆಯಲ್ಲಿಯೇ ಅರೆ ಬೆಂದುಹೋಗಿರುವ ನನಗೆ
ಅವನಿಟ್ಟ ಬೆಂಕಿಯನು ಆರಿಸಲು ಮನಸಿಲ್ಲ
ಉರಿದು ಹೋಗುವುದ ನೋಡಲಾದರೂ
ಅವನೇ ಇಲ್ಲ
ಮತ್ಯಾಕೆ ಬಂದ ಅವನು?
ನನ್ನ ಒಬ್ಬಂಟಿತನದ ಬಯಲಿಗೆ?
ಪುಂಡ ಚಂದಿರ!
ದದ್ದಾದ ನನ್ನ ರದ್ದು ಮಾಡಿದವರೇ ಎಲ್ಲಾ..
ಗಲಗಲಗೊಳಿಸುವ ನನ್ನ ಕೋಶಗಳಿಗೆ
ಮೌನ ಕಲಿಸುವವರೇ ಸುತ್ತಲೂ
ಏನು ಮಾಡಲಿ ..
ಬಾಯಿಬಡುಕಿ ಎಂಬ ಹಣೆಪಟ್ಟಿ ಹೊತ್ತು
ರಟ್ಟೆ ನೋಯುತ್ತಿದೆ
ಸುಡುವಾಸೆಗಳ ರುಮಾಲುಗೆ
ನಿರಾಸೆಗಳ ಕಾದ ಎಣ್ಣೆಯ ಸುರಿದು
ಬೆಂಕಿಯ ಜರಿ ಸೀರೆ ಉಡಿಸಿ
ಮಲ್ಲಿಗೆಯ ಘಮ ವಿವರಿಸು
ಎಂದು ಪೀಡಿಸಿದರೆ
ನಾಭಿ ತುಂಬಾ ನನ್ನದೇ ಸುಟ್ಟ
ಘಾಟು..
ಯಾವ ಪರಿಮಳದ ಹುಸಿ ಕನಸ ನೀಡಲಿ ನಿಮಗೆ?

ಕವಯಿತ್ರಿ ಮೌಲ್ಯ ಸ್ವಾಮಿ ಅವರು ಮೂಲತಃ ಮೈಸೂರಿನವರು. ಮೌಲ್ಯ ಅವರ ಕವಿತೆಗಳಲ್ಲಿ ಕಂಡು ಬರುವ ಸಂವೇದನೆ ಬೆರಗು ಮೂಡಿಸುವಂಥದ್ದು. ಕವಿತೆಗಳ ಮೂಲಕ ಹೊಸ ದನಿ ಹುಟ್ಟು ಹಾಕುತ್ತಿರುವ ಮೌಲ್ಯ ಸ್ವಾಮಿ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ. ಅವರಿಗೆ 2015ನೇ ಸಾಲಿನ ಟೊಟೊ ಪುರಸ್ಕಾರ ಲಭಿಸಿದೆ. ರಂಗಭೂಮಿಯಲ್ಲಿಯೂ ಗುರುತಿಸಿಕೊಂಡಿರುವ ಮೌಲ್ಯಸ್ವಾಮಿ, ಹಲವು ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’ ಮೌಲ್ಯ ಸ್ವಾಮಿ ಅವರ ಕವನ ಸಂಕಲನ.