ಕವನ ಸುಂದರಿ: ಪದ್ಮಿನಿ ನಾಗರಾಜು, ಮೈಸೂರು: ಕವನದ ಶೀರ್ಷಿಕೆ: ಮೊದಲ ದಿನ ಮೌನ
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 14th March 2022 05:05 PM | Last Updated: 14th March 2022 05:25 PM | A+A A-

ಕಲೆ
ಮೊದಲ ದಿನ ಮೌನ
ಅದೇನೋ ಗಂಟಿಗೆ ಸಿಕ್ಕಿ
ಅಡುಗೆ ಮನೆಯಲ್ಲಿ ಬಿಕ್ಕುತ್ತಾಳೆ
ಕುಕ್ಕರಲ್ಲೆ ಸಿಕ್ಕ ಗಾಳಿ
ಹೊರ ಹೋಗದೆ ಬಂಧಿಯಾದಂತೆ
ಪರಂಪರೆಯ ಮಾತುಗಳ
ಮಿಕ್ಸಿಯಲಿ ರುಬ್ಬಿದರೂ ನುಣ್ಣಗಾಗದು
ತಳ ಹಿಡಿದ ಬಾಣಲಿಯ
ಕಪ್ಪನ್ನು ಉಜ್ಜುತ್ತಲೇ ಇದ್ದಾಳೆ
ಸೆರಗಿನಡಿಯಲಿ ಬಿಕ್ಕಿದ್ದು
ಹೊರಬರದಂತೆ ಕಾಪಿಟ್ಟು
ಭರಣಿಯ ಉಪ್ಪಿನಕಾಯಂತೆ
ಮಾಗಿಸಬೇಕಿದೆಯಂತೆ
ಅಮ್ಮನ ಮಾತಿದು
ಅವಳ ಪಿಸುನುಡಿ
ಒಗ್ಗರಣೆಯ ಶಬ್ಧಕ್ಕೆ
ಹೊರಗೆ ಬರದೆ
ಪಾತ್ರೆಯ ತಳಸೇರಿದೆ
ಈರುಳ್ಳಿ ಹೆಚ್ಚಿದಕ್ಕೆ
ಕಣ್ಣಲ್ಲಿ ನೀರಾ?
ತೌರ ನೆನಪುಗಳು
ಆಳದ ಬಾವಿಯಲಿ
ಒರತೆಯಂತೆ ಜಿನುಗುತ್ತಿವೆ
ಮನೆಯಲ್ಲಿ ಏನುಂಟು ಏನಿಲ್ಲ
ಕಡಿಮೆಯಾಗಿರುವುದೇನು
ಸದಾ ಅಳುಮುಂಜಿ
ಸುತ್ತಲ ಮಾತುಗಳಿಗೆ
ಹಾಲು ಹುಳಿನುಂಗಿ
ಮೊಸರಾಗಿದೆ ಎಂದಿನಂತೆ
ತೌರಿನ ಬೇರು ಕಿತ್ತು
ಇಲ್ಲಿಯ ಇಳೆಯಲ್ಲಿ
ಬೇರು ಬಿಡುವ ಪಾಡು
ನಿನಗೆ ಬಂದಿಲ್ಲವಲ್ಲ
ಅವನಿಗೆ ಕೇಳಬೇಕೆಂದ
ಪ್ರಶ್ನೆಗಳು ಪ್ಲಾಸ್ಕಿನಲ್ಲೇ
ಬಂಧಿಯಾಗಿವೆ
ಹೊಸತನಕ್ಕೆ ಮನವ ಒಗ್ಗಿಸಿ
ದೇಹ ಪಳಗಿಸಿ
ಒಲೆಹಹತ್ತಿ ತಣ್ಣಗಾಗುವ
ಕಲೆಯ ಕೈಹಿಡಿಯುವವರೆಗೆ
ಮೌನ ಮಾತಾಗಿದೆ

ಕವಯಿತ್ರಿ ಡಾ. ಪದ್ಮಿನಿ ನಾಗರಾಜು ಅವರ ಹುಟ್ಟೂರು ಮೈಸೂರು ಜಿಲ್ಲೆಯ ಸಾಲಿಗ್ರಾಮ. ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ, ಪಿ.ಎಚ್ಡಿ ಪಡೆದಿರುವ ಅವರು ಪ್ರಸ್ತುತ ಬೆಂಗಳೂರಿನ 'ರಾಣಿ ಸರಳಾದೇವಿ ಪದವಿ ಕಾಲೇಜಿ'ನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ 'ಕೇಂದ್ರ ಸಾಹಿತ್ಯ ಅಕಾದೆಮಿ'ಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಬಾಷ್ ಕಂಪನಿಯ 'ಮೈಕೊ ಕನ್ನಡ ಬಳಗ’ದ ಗೌರವ ಅಧ್ಯಕ್ಷೆಯೂ ಆಗಿದ್ದು, ಕರ್ನಾಟಕ ಸರ್ಕಾರದ `ರನ್ನ ಪ್ರತಿಷ್ಠಾನ'ದ ನಿಕಟಪೂರ್ವ ಸದಸ್ಯೆಯಾಗಿದ್ದರು. ಸಾಹಿತ್ಯ ರಚನೆ ಮಾತ್ರವಲ್ಲದೆ ಅನೇಕ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಡಾ. ಪದ್ಮಿನಿ ನಾಗರಾಜು ತೊಡಗಿದ್ದಾರೆ.