ಕವನ ಸುಂದರಿ: ಸ್ನೇಹಲತಾ ದಿವಾಕರ್, ಕಾಸರಗೋಡು: ಕವನದ ಶೀರ್ಷಿಕೆ: ಸಮರಸವೇ ಜೀವನ
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 14th March 2022 05:39 PM | Last Updated: 14th March 2022 05:39 PM | A+A A-

ಕಲೆ
ಸಮರಸವೇ ಜೀವನ
ನಸು ಮುಂಜಾನೆ ಒಂಟಿ ಕಂಬಳಿಯೊಳಗೆ
ಪಿಸುಗುಡುತ್ತಿದೆ ಚಳಿ
ರೋಮಾಂಚನದ ಗೆಜ್ಜೆಯುಲಿ
ನೀನೇ ನಾನು ನಾನೇ ನೀನು!
ನಡು ಮಧ್ಯಾಹ್ನ ಸುಡು ಧಗೆಗೆ
ಪಾತ್ರೆಗಳಿಗೂ ಆಕ್ರೋಶ
ಬಾಗಿಲ ಮರೆಯ ಪುಟ್ಟ ಕಂಗಳಲಿ
ಬಿಕ್ಕುತ್ತಿದೆ ಭಯ
ನೆರೆಮನೆಯ ಗೋಡೆಯಲೂ
ಮೊಳೆಯುತಿದೆ ಕಿವಿ
ನಾನೋ ನೀನೋ? ನೀನೋ ನಾನೋ?
ಸಂಜೆಗತ್ತಲ ಚಾವಡಿಯಲ್ಲಿ
ತಂತಿಯಲೆಗಳ ಪಿಸುದನಿಗೆ ಕಾತರಿಸಿ
ಅಂಬೆಗಾಲಿಕ್ಕುತ್ತಿದೆ ಗಡಿಯಾರ
ಪತ್ರಿಕೆಯ ಪುಟದಾಚೆ ಮರಗಟ್ಟಿದ ಕಿವಿ
ಪರದೆಯಲಿ ಕೀಲಿಸಿದೆ ಕಣ್ಣು
ಅರಿವಾಗಿದೆ ಈಗ ನಾನು ನಾನೇ ನೀನು ನೀನೇ!
ನಟ್ಟಿರುಳ ನಿಟ್ಟುಸಿರು ದರ್ಘವಾಗುವ ವೇಳೆ
ಮುಂದಲೆ ಸವರುವ ಸೋತ ಬೆರಳುಗಳು
ಮುಚ್ಚಿದ ಪರದೆ ಸರಿಸಿ ಇಣುಕುತ್ತಿದ್ದಾನೆ ಚಂದ್ರ
ಪಿಸುಗುಡುತ್ತಿದೆ ತಾರೆ ನನಗೆ ನೀನು ನಿನಗೆ ನಾನು.

ಕವಯಿತ್ರಿ ಸ್ನೇಹಲತಾ ದಿವಾಕರ್ ಅವರು ಮೂಲತಃ ಕಾಸರಗೋಡಿನ ಕುಂಬ್ಳೆ ನಿವಾಸಿ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರ ಬರಹಗಳು, ಕತೆಗಳು, ಮಂಗಳ, ಹೊಸದಿಗಂತ, ತರಂಗ, ಪ್ರಜಾವಾಣಿ, ಮಯೂರ, ಮುಂತಾಗಿ ವಿವಿಧ ಪತ್ರಿಕೆಗಳಲ್ಲಿ ಮತ್ತು ಆಕಾಶವಾಣಿಯಲ್ಲಿ ಪ್ರಕಟಗೊಂಡಿವೆ. ‘ಮಗ್ಗ’, ‘ಆಮೆ’ ಸ್ನೇಹಲತಾ ಅವರ ಕಥಾಸಂಕಲನಗಳು. ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿರುವುದು ಅವರ ಹೆಗ್ಗಳಿಕೆ.