ಕವನ ಸುಂದರಿ: ಮಮತಾ ಅರಸೀಕೆರೆ: ಕವನದ ಶೀರ್ಷಿಕೆ: ಗಮ್ಮತ್ತನ್ನೇ ಸೃಷ್ಟಿಸಿಬಿಟ್ಟಿದೆ
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 20th March 2022 03:39 PM | Last Updated: 20th March 2022 05:14 PM | A+A A-

ಕಲೆ
ಗಮ್ಮತ್ತನ್ನೇ ಸೃಷ್ಟಿಸಿಬಿಟ್ಟಿದೆ
ಕಣ್ಣುಗಳ ಆರಾಧನೆ, ನೋಟದ ಸಂಯೋಜನೆ
ಇಂದ್ರಚಾಪವನ್ನೇ ಸೃಷ್ಟಿಸುತ್ತಿದೆ
ಅವನ ಒಲವಿನ ಕಾರಂಜಿಯೀಗ ಕುಡಿಯೊಡೆದು
ಝರಿಹೂಗಳನ್ನೇ ಸೃಷ್ಟಿಸುತ್ತಿದೆ
ಕಣ್ಣೀರಿನ ಹನಿಗಳಿಗೆ ಬೇಸರವಾಗಿ ಈಗ
ಸುರಿಸುವ ಪ್ರಕ್ರಿಯೆ ಮರೆತುಬಿಟ್ಟಿವೆ
ಕಾಡಿಗೆಯ ಸೊಬಗೀಗ ದಿನಗಳೆದಂತೆ
ಪುಟಿಯುವ ಯೌವನವನ್ನೇ ಸೃಷ್ಟಿಸುತ್ತಿದೆ
ಶ್ವಾಸದಲ್ಲಿ ಅಡಗಿದ್ದ ನಿಟ್ಟುಸಿರುಗಳಿಗೆ
ಬಿಕ್ಕಳಿಕೆಯಿಲ್ಲದೆ ಉದಾಸೀನತೆ ಆವರಿಸಿದೆ
ಅವನ ತುಟಿಯ ರಾಗಗಳೆಲ್ಲ ಈ ತುಟಿಗೆ ವರ್ಗವಾಗಿ
ರಾಗಪಲಕುಗಳನ್ನೆ ಸೃಷ್ಟಿಸುತ್ತಿದೆ
ಇಲ್ಲಂತೂ ದಿನವಾವುದೊ ರಾತ್ರಿ ಯಾವುದೋ
ತಿಳಿಯದೆ ನಶೆ ಕನವರಿಸಿದೆ
ಕೈಗಳಿಗೆ ಹಚ್ಚಿದ ಮೆಹಂದಿಯೆಲ್ಲ ಅನಾಯಾಸವಾಗಿ
ಅವನ ಹೆಸರನ್ನೇ ಸೃಷ್ಟಿಸುತ್ತಿದೆ
ಹೊತ್ತುಗೊತ್ತಿಲ್ಲದೆ ಧುಮ್ಮಿಕ್ಕುವ ಇಷ್ಟಾನಿಷ್ಟಗಳಿಗೆಲ್ಲ
ಧ್ಯಾನದ ಘಮಲು ಸವರಲ್ಪಟ್ಟಿದೆ
ದಮನಿಸಲ್ಪಟ್ಟಿದ್ದ ಕನಸಿನ ವಯ್ಯಾರಗಳಿಗೆ ಗಮ್ಮತ್ತೇರಿ
ಸಂಚಲವನ್ನೇ ಸೃಷ್ಟಿಸಿಬಿಟ್ಟಿದೆ
ಕೆಲವು ಆಸೆಗಳು ಸದ್ದು ಮಾಡಲಾರವು
ಕೆಲವಕ್ಕೆ ಮೌನದಾವರಣದ ಹೊದಿಕೆಯಿದೆ
ಶಮಾ ಅವನ ಸಾಂಗತ್ಯದ ಅಮೂಲ್ಯ ಸ್ಪರ್ಷವೀಗ
ನನ್ನೊಳಗೆ ಅದ್ಭುತವನ್ನೇ ಸೃಷ್ಟಿಸಿಬಿಟ್ಟಿದೆ

ಕವಯಿತ್ರಿ ಮಮತಾ ಅರಸೀಕೆರೆ ಅವರು ಮೂಲತಃ ಹಾಸನ ಜಿಲ್ಲೆಯವರು. ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಇವರು 'ಸಂತೆ ಸರಕು' ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಅಲ್ಲದೆ 'ಕಾಲಡಿಯ ಮಣ್ಣು' ಎಂಬ ಅನುವಾದಿತ ಕೃತಿಯನ್ನೂ ರಚಿಸಿದ್ದಾರೆ. ಅವರ ಕವಿತೆಗಳು, ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.