ಕವನ ಸುಂದರಿ: ಪೂರ್ಣಿಮಾ ಸುರೇಶ್ ಉಡುಪಿ: ಕವನದ ಶೀರ್ಷಿಕೆ: ಕೆಂಡಸಂಪಿಗೆ
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 20th March 2022 03:11 PM | Last Updated: 20th March 2022 03:11 PM | A+A A-

ಕಲೆ
ಕೆಂಡಸಂಪಿಗೆ
ಚೂಪು ನೀಳ ದೇಹದ ಈಕೆ
ಕೆಂಡಸಂಪಿಗೆ
ಮೈಮುರಿದು ಅರಳಿಸಿದರೆ ದೇಹ
ಪರಿಮಳದ ಸೊಂಪು
ಮನಸಿನಲಿ ಮೈತಳೆವ ಮರೆಯಲಸಾಧ್ಯ
ಮಾದಕ ದ್ರವ್ಯ
ಜೋಂಪು!
ಯಾರೇ ಸಖಿ
ನಿನಗಿಂಥ ಹೆಸರು ನೀಡಿದ್ದು?
ನಿನ್ನ ಘಮಘಮಘಮ ಕೆಂಡವೆಂದು
ವ್ಯಾಖ್ಯಾನಿಸಿದವರು
ಅದು ಯಾರೋ
ಎಂಥ ಮೋಹಕ ಕ್ರೋಧ ನಿನ್ನಲ್ಲಿ
ಆ ಹೆಸರಿಟ್ಟ ಮನದ ಅಸೂಯೆಗೆ
ಬಿಸಿ ಸ್ಪರ್ಶಕ್ಕೆ ಹೌಹಾರಿದರೇ,
ಮುಟ್ಟಿದ ಅಮಲು ನಾಸಿಕಕ್ಕೆ ಮುತ್ತಿ
ಮಸ್ತಿಷ್ಕದಲಿ ಕಲರವ ಹೂಡಿ
ನರಮಂಡಲ ಸೆಟೆದು ಬೇನೆ. ಶಿರಬೇನೆ
ಹೊರ ಹೋದರೂ ಹೊತ್ತೇ ಇರುವಂತೆ
ಹೊರ ತೋರದ ಚಡಪಡಿಕೆ.
ಎಲೆಲೇ, ಹಸಿರು ಸುತ್ತಿ ಎಳೆಯಾಗಿರುವಾಗಲೂ
ಎಂಥ ಎಳೆತ, ಸೆಳೆತ,ನಗೆ, ನಶೆ.
ಕೆಂಡಸಂಪಿಗೆ ಕಾಯುವ
ಕಾದು ಕಾವಿನಲಿ
ಸುತ್ತು ಸುತ್ತುವ ಮೂಸುವ ನೆಕ್ಕುವ
ಮುದಿ ಮಿಡಿ ನಾಗರಗಳು
ಒಣಗಿ ಬಿದ್ದಾಗಲೂ ಗೊಣಗದ
ಭಣಗುಡದ ಘಮ
ನೆರಿಗೆ ಬಿದ್ದು ದೇಹ ಬಡಕಲಾದರೂ
ಜನ್ಮಾಂತರದ ವಾಸನೆ ಕಾಪಿಟ್ಟಂತೆ
ಸಾವಿರದ ನಶೆ
ಕೆಂಡದ ಹೂವಿನೊಳಗೂ
ನೋವಿನ ಅಗ್ನಿಕುಂಡ!ಕಂಡಿರಾ?
ಆಕೆಯ ಮೆತ್ತನೆ ಕೆಂಪು ಚೂಪು ತುಟಿಯ ಬಳಿ
ಕಿವಿ ಆನಿಸಿ ಕೇಳಿ:
ಯಾವುದೋ ಯಾತನೆ
ದಿವ್ಯ ಯಾಚನೆ
ನವಿರು ನವ್ಯ ವಾಸನೆಯಾಗಿ
ಮಿಡಿಯಬಹುದು.

ಕವಯಿತ್ರಿ ಪೂರ್ಣಿಮಾ ಸುರೇಶ್ ಉಡುಪಿ ಜಿಲ್ಲೆಯ ಹಿರಿಯಡಕ ಊರಿನವರು. ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ರಂಗಕಲಾವಿದೆಯೂ ಹೌದು. ಕನ್ನಡ, ತುಳು, ಕೊಂಕಣಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ 7 ಪುಸ್ತಕಗಳು ಈವರೆಗೆ ಮುದ್ರಣ ಕಂಡಿವೆ. GSS ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯಪರಿಷತ್ತಿನ ದತ್ತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಲೇಖಕಿ ಭಾಜನರಾಗಿದ್ದಾರೆ. ಪೂರ್ಣಿಮಾ ಅವರು ಕೊಂಕಣಿ ಸಾಹಿತ್ಯ ಅಕಾಡಮಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಪೀಠದ ಸದಸ್ಯರೂ ಆಗಿದ್ದಾರೆ.