ಕವನ ಸುಂದರಿ: ಹೆಚ್.ಆರ್. ಸುಜಾತಾ, ಹಾಸನ: ಕವನದ ಶೀರ್ಷಿಕೆ: ನಿಂತೇ ಇರುವ ಮರ
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 20th March 2022 04:57 PM | Last Updated: 20th March 2022 04:57 PM | A+A A-

ಕಲೆ
ನಿಂತೇ ಇರುವ ಮರ
ಹಕ್ಕಿಯ ಗುಕ್ಕಿಗೆ ಹಣ್ಣಾಗಬೇಕು,
ಮೀನಬಾಯಿಗೆ ಹೂವಾಗಿ ಉದುರಬೇಕು
ನಿಂತ ಮರಕಿಂತು ಮುಗಿಲಾಸೆ
ನೀರ ಮೇಗಳ ತೇವದ ಗಾಳಿ ಹಾವಸೆಯನ್ನಾಸಿ
ಝರಿ ಗಿಡದ ಹೂಬೀಜಗಳ ಹೊದ್ದು ಮಲಗೆದ್ದು
ಹಕ್ಕಿಹಿಕ್ಕೆಯಲಿ ಚಿಗುರೆದ್ದು ಗಾಳೀಬೇರಾಗುವುದು
ಆ ಗಿಡಗಳು ಹಸಿರು ಎಲೆ ದಾಟಿ ಹೂದಂಡೆ ಚಾಚಿ
ತುಡುಬೆ ಜೇನ ಊಟಿ ಕರೆಯುತ್ತವೆ ಗೆಣ್ಣುಗೆಣ್ಣಿಗೂ ಮರವೆಬ್ಬಿಸಿದ ಚಕ್ಕೆಗೂ ನೇಯುತ್ತವೆ ಮನಸ
ಮೈಮೇಲೆ ಮತ್ಯಾವುದೋ ಬಂದಳಿಕೆ
ಹೂದೂಗುವಾಗಲೂ ಮೈಮರೆತು ನಿಲ್ಲುವ ಮರ
ತಲೆ ತುಂಬಾ ತನ್ನ ನಿಜದ ಹೂವ ಹೂತರೂ
ಇಬ್ಬಗೆಯನ್ನರಿಯದೆ ಎಂದಿಗೂ ಜೀವಪರ
ಗೇಣಿಕ್ಕುವ ಕಂಬಳಿ ಹುಳದ ತಪಸ್ಸಿಗೂ
ಕೋಶಕ್ಕೆಡೆಯಿಟ್ಟು
ಮಿಂಚು ಹುಳದ ದಂಡಿಗೂ ಕರೆಯಿಟ್ಟು
ಅಣಬೆ ಬೆಳಕಿಗೂ ತಾವಿಟ್ಟು
ಗಿಳಿಗೊರವಂಕಕೂ ಪೊಟರೆ ಬಿಟ್ಟು
ಹೂವಿಗೆ ರೆಕ್ಕೆಕಟ್ಟಿ ಹಾರಿಬಿಟ್ಟು
ಮರದ ತುಂಬ ತಾರಾಡುವ ಚಿಟ್ಟೆಗಳ
ಹಸಿರ ಬಯಲ ಕಡೆಗೆ ತೂರಿ ಬಿಡುವುದು
ಹರಿವ ನೀರಿನ ಕನಸ ಇಂತು ತಡುವುತ್ತ
ನೀರ ತಡಿಯಲ್ಲೇ ನಿಲ್ಲುವ ಮರಕೆ
ನಿಂತಲ್ಲೇ ನೀರು ಕುಡಿಯಲು ಬರುವ
ಮಿಖದ ಕಣ್ಣು, ಸುತ್ತಿ ಸುಳಿವ ಹದ್ದ ಚುಂಚು
ಸದ್ದಿಲ್ಲದೇ ಹಾಯುವ ಹಾವನುಲಿಯ ಮರೆಮಾಚಿ ಹಕ್ಕಿ ಬಳಗದ ಕಣ್ಣಲ್ಲಿ ಮಿಲುಗುತ್ತ
ಹಣ್ಣ ಕೊರೆವ ಹುಳುವಿಗೂ ತಾವು ಕೊಟ್ಟು ಸಲಹುತ್ತಾ....ನಿಲ್ಲದೆ ನಿಲ್ಲುವುದು ಚಾಮರ

ಕವಯತ್ರಿ ಹೆಚ್.ಆರ್. ಸುಜಾತಾ ಮೂಲತಃ ಹಾಸನ ಜಿಲ್ಲೆ ಆಲೂರು ತಾಲೂಕಿನ ಮರಸುಹೊಸಹಳ್ಳಿಯವರು. ಅವರು ಬಿಎಸ್ಸಿ ಪದವೀಧರರು. ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ಮಕ್ಕಳ ರಂಗಭೂಮಿ, ಪತ್ರಿಕೋದ್ಯಮ, ಮಲೆನಾಡ ಬದುಕಿನ ಗಾಢ ಅನುಭವಗಳೇ ಅವರ ಸಾಹಿತ್ಯ ಕೃಷಿಗೆ ಸ್ಪೂರ್ತಿ. 'ನೀಲಿ ಮೂಗಿನ ನತ್ತು' ಕೃತಿ, 'ಕಾಡುಜೇಡ ಮತ್ತು ಬಾತುಕೋಳಿ' ಇವರ ಪ್ರಕಟಿತ ಕವನ ಸಂಕಲನ. 'ಜೇನುಮಲೆಯ ಹೆಣ್ಣು' ಎಂಬ ವಿಶೇಷವಾದ ಕಾವ್ಯಗುಚ್ಛ ಓದುಗರ ಗಮನ ಸೆಳೆದಿದೆ. ಅವರ ಕೃತಿಗಳಲ್ಲಿ ಗ್ರಾಮೀಣ ಸಂವೇದನೆ ವ್ಯಕ್ತವಾಗುತ್ತದೆ. ಇವರು ನಿರ್ಮಿಸಿದ ಸಹಜ ಕೃಷಿಯ ಹರಿಕಾರ ನಾರಾಯಣರೆಡ್ಡಿ ಅವರ ಕುರಿತ 'ಸರಳ ವಿರಳ' ಸಾಕ್ಷ್ಯಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರೆತಿದೆ. ರಾಜೀವ ತಾರಾನಾಥ ಅವರ ಕುರಿತಾದ ಇನ್ನೊಂದು ಸಾಕ್ಷ್ಯಚಿತ್ರ ಜನಮನ್ನಣೆ ಪಡೆದಿದೆ.