ಕವನ ಸುಂದರಿ: ಎಂ. ಆರ್. ಭಗವತಿ, ಬೆಂಗಳೂರು: ಕವನದ ಶೀರ್ಷಿಕೆ: ಆಡಬಾರದ ಬಯಲು
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 27th March 2022 03:32 PM | Last Updated: 27th March 2022 03:32 PM | A+A A-

ಕಲೆ
ಆಡಬಾರದ ಬಯಲು
ನಿನ್ನ ಮನೆಯ ಹಕ್ಕಿ
ನನ್ನ ಮನೆಗೆ ಬಂದು
ಹಾಕಿತು ಹಿಕ್ಕೆ
ಅಂಗಳದಿ ನೆರೆದ ಹಕ್ಕಿಗೊಂದು
ಹೆಸರನಿಟ್ಟು
ಸೇರಿಸಿ ಧರ್ಮದ ಬಿಂದು
ಮನದ ನೋವನ್ನೆಲ್ಲ ತಂದು
ಮನೆಯ ಕಸವನ್ನೆಲ್ಲ
ಗುಡಿಸಿ ಗುಡ್ಡೆ ಹಾಕಿ
ಮನೆಯ ಮುಂದೆ ರಾಶಿ ರಾಶಿ
ಒಂದಲ್ಲ ಒಂದು ದಿನ
ಸುಳಿದು ಸೂಸುವ ಗಾಳಿ
ಬಿರುಗಾಳಿಯೇ ಆಗಿ
ಎತ್ತಿ ಎತ್ತಿ ಒಗೆಯಿತು
ಗುಡಿಸಿ ಇದ್ದಬದ್ದ ಕಸವ
ಗುಡ್ಡೆ ಹಾಕುವಾಗ ತಾಕಿತು ಕಣ್ಣಿಗೂ
ಕೆಂಪಾಯಿತು ಕಣ್ಣು
ಸಣ್ಣಪುಟ್ಟ ಪುರಲೆಗಳನ್ನೆಲ್ಲ ಸೇರಿ
ಒಟ್ಟುಗೂಡಿಸಿ ಗಾಡಿ ಹೊಟ್ಟು
ಸೇರಿಸಿ ಮಂಕುಕಣ್ಣು
ಸಕಲ ಪುರವರಾಧೀಶರನೆಲ್ಲ
ಬಕೇಟಲ್ಲಿ ಹಿಡಿದು ಒರೆಸುವ ಬಟ್ಟೆ
ನೀರು ತುಂಬಿಸಿ ಬಟ್ಟೆ ಜಾಡಿಸಿ
ನಡುವೆ ಹಾದಿ ಬೀದಿಯಲೆಲ್ಲ
ಬಹುಪರಾಕ್ ಬಹುಪರಾಕ್ !
ಜಾತಿ ಧರ್ಮ ಹಿಡಿದು
ಬೆಂಕಿ ಹತ್ತಿದೆ ಒಡಲಿಗೆ
ಉರಿಯುತಿದೆ ಹೊತ್ತಿ ಹೊತ್ತಿ
ನನ್ನ ಮನೆಯ ಹಕ್ಕಿ
ನಿನ್ನ ಮನೆಗೆ ಬಂದು
ಹಾಕಿತು ಹಿಕ್ಕೆ
ಸಕಲ ಪುರವರಾಧೀಶರ ಸಂಗಸುಖ
ವಿಷವೇರಿತ್ತಯ್ಯಾ ಆಪಾದಮಸ್ತಕಕ್ಕೆ

ಕವಯಿತ್ರಿ ಎಂ. ಆರ್. ಭಗವತಿ ಅವರ ಹುಟ್ಟೂರು ಚಿಕ್ಕಮಗಳೂರು. ಬೆಂಗಳೂರಿನಲ್ಲಿ ವಾಸ. ಹವ್ಯಾಸಿ ಬರಹಗಾರ್ತಿ ಮತ್ತು ಛಾಯಾಗ್ರಾಹಕಿಯಾಗಿಯೂ ಅವರು ಹೆಸರು ಮಾಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದಿರುವ ಭಗವತಿ, ಈಗ ಕೆಮರಾ ಹಿಡಿದು ಹಕ್ಕಿಗಳ ಹಿಂದೆ ಬಿದ್ದಿದ್ದು, ದಿನಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆಯಲ್ಲಿ ಹಕ್ಕಿಗಳನ್ನು ಕುರಿತು ಲೇಖನ ಬರೆಯುತ್ತಿದ್ದಾರೆ. ’ಏಕಾಂತದ ಮಳೆ’ ಮತ್ತು ‘ಚಂಚಲ ನಕ್ಷತ್ರಗಳು’ ಇವರ ಪ್ರಕಟಿತ ಕವನ ಸಂಕಲನಗಳು. ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಇವರ ಅಂಕಣ ಬರೆಹ, ಕವಿತೆ, ಕತೆ, ಪುಸ್ತಕ ಪರಿಚಯ, ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ.