ಕವನ ಸುಂದರಿ: ಚೈತ್ರಾ ಶಿವಯೋಗಿಮಠ, ವಿಜಯಪುರ: ಕವನದ ಶೀರ್ಷಿಕೆ: ಮಾಸದ ಬಣ್ಣ
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 27th March 2022 04:34 PM | Last Updated: 27th March 2022 04:34 PM | A+A A-

ಕಲೆ
ಮಾಸದ ಬಣ್ಣ
ನನಗೆ ಗೊತ್ತು
ನಿನ್ನೆದೆಯ
ಹೊಳೆಗೆ ಬೆಂಕಿ ಇಟ್ಟುಕೊಂಡು
ನನ್ನ ಹಡಗು ದಡ
ದಾಟಿಸುವಂಥವ ನೀನೆಂದು
ಮಾತುಗಳ ವೃಥಾ ಹತ್ಯೆ ಮಾಡಿ
ದೂರಾಗುವೆನ್ನುವ ಭ್ರಮೆ ಬಿಡು
ಈ ಮೌನ
ಆ ಕವಡೆ ಕಾಸಿನ
ಮಾತುಗಳಿಗಿಂತಲೂ ಬಲಿಷ್ಠ
ಇರುಳಲ್ಲಿ ಕಿಟಕಿಯಾಚೆ ಇಣುಕಿ
ಹಾಲು ಚೆಲ್ಲುವ ಬೆಣ್ಣೆಗಲ್ಲದವನೆದುರು
ನನ್ನೆಲ್ಲ ಮಾತುಗಳ ಹಗುರ
ಉಸುರುವೆ
ಅವ ಮಾತು ಕೊಟ್ಟಿದ್ದಾನೆ ನನಗೆ
ಸುಯ್ಯೆಂದು ಸಣ್ಣಗೆ
ಎಲರಿನೊಂದಿಗೆ ಮುತ್ತುಗಳ
ಅಲ್ಲಲ್ಲ ಮಾತುಗಳ ದಾಟಿಸುವನಂತೆ
ಮಾಸುವ ಬಣ್ಣಗಳ ಹಂಗಿಲ್ಲ
ನನಗೆ
ಎದೆಯೊಳಗೂ ನಂಜಿಲ್ಲ
ನಿನ್ನ ಅಷ್ಟೂ ಮಾತಿನ ಮೂಟೆಯನ್ನ
ಹೊತ್ತು ನಡೆದು ಬಿಡುವೆ
ದಾರಿ ಸವೆಸಲು ಆಸರೆಯಾದೀತು

ಕವಯಿತ್ರಿ ಚೈತ್ರಾ ಶಿವಯೋಗಿಮಠ ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್. ಓದು, ಬರಹ, ಕಾವ್ಯ, ಕಾರ್ಯಕ್ರಮ ನಿರೂಪಣೆ ಅಚ್ಚುಮೆಚ್ಚು. ಕವನ/ ಕಥಾವಾಚನದಲ್ಲಿ ವಿಶೇಷ ಆಸಕ್ತಿ. ರಾಜ್ಯದ ಜನಪ್ರಿಯ ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ.