ಕವನ ಸುಂದರಿ: ವಸುಂಧರಾ ಕದಲೂರು, ಮಂಡ್ಯ: ಕವನದ ಶೀರ್ಷಿಕೆ: ಒಡಲುರಿ
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 27th March 2022 04:16 PM | Last Updated: 27th March 2022 04:16 PM | A+A A-

ಕಲೆ
ಒಡಲುರಿ
ಒಗ್ಗರಣೆಗಿಟ್ಟ ಎಣ್ಣೆ ಸಿಡಿದು
ಚರ್ಮ ಸುಟ್ಟಿ ಮೈ ತರಗುಟ್ಟಿ,
ತಣ್ಣನೆ ನೀರು ಸುರಿದರೂ
ಉಪಶಮನವಾಗದ ಮೇಲುರಿ
ಉಪಚಾರ ಬಯಸಿ ಉಳಿಯಿತು ಅಸಡ್ಡೆಗೊಳಗಾದ ಅನಾಥನಂತೆ...
ಅಬ್ಬಬ್ಬೋ... ಬರ್ನಾಲು ಹಚ್ಚಿ
ತೆಂಗಿನೆಣ್ಣೆ ಸವರಿ; ತಣಿಸಲು
ಶ್ರಮಿಸಿದರೂ ತಣ್ಣಗಾಗಲಿಲ್ಲ ಉರಿ,
ಇಡೀ ದಿನ ನೋವು ಒಡಲೊಳಗೆ
ಸಣ್ಣಗೆ ನವೆ ಜೊತೆಗಿಷ್ಟು ಕಿರಿಕಿರಿ...
ದಿನ ಕಳೆದು ಚರ್ಮ ಕೆಂಪಾಗಿ
ಒಂಥರಾ ಚೆಂದ ಕಂಡಿತು. ದಿನವೆರಡು
ಕಳೆದರೆ, ನೀರುದುಂಬಿದ ಕಪ್ಪು ಬೊಬ್ಬೆ!
ಸುಟ್ಟ ಜಾಗಕೇ ಮತ್ತೆ ಮತ್ತೆ ಏನಾದರೂ
ತಾಕಿ ಮನ ಚೀರುತ್ತಿತ್ತು ಹಾಕಿ ಬೊಬ್ಬೆ
ಔಷಧ ಹಚ್ಚಿ,ಸುಮ್ಮನಿರಲಾರದ
ಸಂಕಟಕೆ ಉಗುರಲಿ ಬೆಂಟಿ, ಹಳೆ
ನೋವು ಕೆದಕಲು; ಸುಟ್ಟ ತೊಗಲ
ತಳದಿ ಕಂಡಿತು ಹುಟ್ಟುತಲಿದ್ದ
ಮಾಯಕದ ಹೊಸ ಚರ್ಮ !
ನುಣುಪು ಮೃದುವಿನ ನವಚರ್ಮ
ಸವರಿ ಪುಳಕ ಅನುಭವಿಸುವ
ಹೊತ್ತಲ್ಲಿ ನೆನಪಾಗಿ ಮೈ ನಡುಗಿತು;
ಸತಿಯ ಚಿತೆಗೆ ನೂಕುತ್ತಿದ್ದ ಹಳೆಯ
ಕಟ್ಟುಪಾಡಿನ ಕರ್ಮ.

ಕವಯಿತ್ರಿ ವಸುಂಧರಾ ಕದಲೂರು ಅವರು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಕದಲೂರು ಗ್ರಾಮದವರು. ಸದ್ಯ ವಾಸವಾಗಿರೋದು ಬೆಂಗಳೂರಿನಲ್ಲಿ. ಕರ್ನಾಟಕ ಸರ್ಕಾರದ ಕೃಷಿ ಮಾರಾಟ ಮಂಡಳಿಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮೈಸೂರು ವಿ.ವಿ.ಯಿಂದ ಎಂ.ಎ. ಕನ್ನಡ. ಸ್ನಾತಕೋತ್ತರ ಪದವಿ ಪಡೆದಿರುವ ವಸುಂಧರಾ ಅವರು ಹಂಪಿ ವಿ.ವಿಯಲ್ಲಿ ಪಿಎಚ್ಡಿ ಸಂಶೋಧನಾ ಅಧ್ಯಯನ ನಡೆಸುತ್ತಿದ್ದಾರೆ. ‘ಮರೆತು ಬಿಟ್ಟದ್ದು’ ಎನ್ನುವುದು ಅವರ ಮೊದಲ ಕಾವ್ಯ ಸಂಕಲನ.