ಮತ್ತೊಂದು ಖಗೋಳ ವಿಸ್ಮಯ ವೀಕ್ಷಣೆಗೆ ಸಿದ್ಧರಾಗಿ: ಇಂದು ಸೂಪರ್ ಮೂನ್!

ಮತ್ತೊಂದು ಖಗೋಳ ವಿಸ್ಮಯ ಸೋಮವಾರ ಭಾರತ ಸಾಕ್ಷಿಯಾಗಲಿದ್ದು, ದೇಶದ ಜನರು ಅತೀ ಹತ್ತಿರದಿಂದ ಚಂದ್ರನನ್ನು ವೀಕ್ಷಿಸಲಿದ್ದಾರೆ.
ಸೂಪರ್ ಮೂನ್ (ಸಂಗ್ರಹ ಚಿತ್ರ)
ಸೂಪರ್ ಮೂನ್ (ಸಂಗ್ರಹ ಚಿತ್ರ)

ನವದೆಹಲಿ: ಮತ್ತೊಂದು ಖಗೋಳ ವಿಸ್ಮಯ ಸೋಮವಾರ ಭಾರತ ಸಾಕ್ಷಿಯಾಗಲಿದ್ದು, ದೇಶದ ಜನರು ಅತೀ ಹತ್ತಿರದಿಂದ ಚಂದ್ರನನ್ನು ವೀಕ್ಷಿಸಲಿದ್ದಾರೆ.

ಹೌದು...ಇಂದು ಸಂಜೆ ಚಂದ್ರ ಎಂದಿನಂತೆ ಸಾಮಾನ್ಯವಾಗಿರುವುದಿಲ್ಲ, ಸೂಪರ್ ಮೂನ್ ಆಗಿ ಈ ಹಿಂದೆಂದಿಗಿಂತಲೂ ಸ್ಪಷ್ಟವಾಗಿ ಬೃಹತ್ ಆಗಿ ಗೋಚರಿಸಲಿದ್ದಾನೆ. ವೈಜ್ಞಾನಿಕವಾಗಿ ಚಂದ್ರ ಇಂದು ಭೂಮಿಗೆ ತೀರ ಸಮೀಪದಲ್ಲಿ  ಹಾದುಹೋಗಲಿದ್ದು, ಹೆಚ್ಚು ಪ್ರಕಾಶಮಯವಾಗಿ ಮತ್ತು ದೊಡ್ಡದಾಗಿ ಗೋಚರಿಸುತ್ತಾನೆ. ಖಗೋಳಶಾಸ್ತ್ರದಲ್ಲಿ ಈ ಪ್ರಕ್ರಿಯೆಯನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಭಾರತೀಯ ಕಾಲಮಾನ ಇಂದು ಸಂಜೆ 6 ಗಂಟೆಯಿಂದ  7.30ರವರೆಗೂ ಸೂಪರ್ ಮೂನ್ ಗೋಚರವಾಗಲಿದ್ದು, ಜನರು ಬರೀ ಗಣ್ಣಿನಿಂದಲೇ ಸೂಪರ್ ಮೂನ್ ಅನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಈ ಬಾರಿಯ ಸೂಪರ್ ಮೂನ್ ತೀರಾ ವಿಶೇಷವಾಗಿದ್ದು, 70 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಿಶೇಷ ಸೂಪರ್ ಮೂನ್ ಗೋಚರವಾಗುತ್ತಿದೆ. ಚಂದ್ರ ತನ್ನ ಕಕ್ಷೆಯಲ್ಲಿ ತಿರುಗುತ್ತಲೇ ಆಗ್ಗಾಗೆ ಭೂಮಿಯ ಹತ್ತಿರಕ್ಕೆ ಬಂದು  ಹೋಗುತ್ತಾನೆ. ಈ ಸಂದರ್ಭದಲ್ಲಿ ಚಂದ್ರ ಸಾಮಾನ್ಯವಾಗಿ ದೊಡ್ಡದಾಗಿಯೂ, ಪ್ರಕಾಶಮಾನವಾಗಿಯೂ ಕಾಣಿಸುತ್ತದೆ. 1948ರ ಬಳಿಕ ಇದೇ ಮೊದಲ ಬಾರಿಗೆ ಚಂದ್ರವು ಭೂಮಿಗೆ ಇಷ್ಟು ಹತ್ತಿರ ಬರುತ್ತಿದ್ದು, ಸಾಮಾನ್ಯ ದಿನಗಳಿಗಿಂತ  ಇಂದು ಚಂದ್ರ ಶೇ.14ರಷ್ಟು ಭೂಮಿಗೆ ಸಮೀಪದಲ್ಲಿ ಹಾದುಹೋಗಲಿದೆಯಂತೆ. ಹೀಗಾಗಿ ಅದು 30ಶೇ.ಹೆಚ್ಚು ಪ್ರಕಾಶಮಯವಾಗಿ ಗೋಚರಿಸಲಿದೆ ಎಂದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಹಿಂದೆಯೂ ಕೂಡ ಸಾಕಷ್ಟು ಸೂಪರ್ ಮೂನ್ ಗಳು ಘಟಿಸಿದ್ದರೂ, ಈ ಬಾರಿಯ ಸೂಪರ್ ಮೂನ್ ವಿಶೇಷವಾದದ್ದು ಎಂಬುದು ನಾಸಾ ವಿಜ್ಞಾನಿಗಳ ಅಭಿಪ್ರಾಯ. ಮುಂದಿನ ತಿಂಗಳು ಅಂದರೆ ಡಿಸೆಂಬರ್ 14ರಂದು ಕೂಡಾ  ಸೂಪರ್ ಮೂನ್ ಸಂಭವಿಸಲಿದೆ. ಇದಾದ ಬಳಿಕ ಮತ್ತೆ ಸೂಪರ್ ಮೂನ್ ವೀಕ್ಷಣೆಗೆ 2034ರವರೆಗೆ ಕಾಯಬೇಕು ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಬೆಂಗಳೂರು ನೆಹರೂ ತಾರಾಲಯದಲ್ಲಿ ಸೋಮವಾರ ಸಂಜೆ ಸೂಪರ್ ಮೂನ್ ವೀಕ್ಷಣೆಗಾಗಿ ವ್ಯವಸ್ಥೆ ಮಾಡಲಾಗಿದ್ದು, ಸಂಜೆ 6 ಗಂಟೆಯಿಂದ 7.30 ವರೆಗೆ ಈ ವ್ಯವಸ್ಥೆಯಿರುವುದು. ಆಸಕ್ತರು ಈಗಲೇ ತಾರಾಲಯಕ್ಕೆ ಹೋಗಿ ವೀಕ್ಷಣೆ  ಖಚಿತಪಡಿಸಿಕೊಳ್ಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com