ಚಂದ್ರಯಾನ-2 ಗೆ ಸಿದ್ಧತೆ: ಮೊದಲ ಚಿತ್ರ ಬಿಡುಗಡೆ ಮಾಡಿದ ಇಸ್ರೊ

ಭಾರತದ ಬಹು ಆಕಾಂಕ್ಷಿತ ಎರಡನೇ ಚಂದ್ರಯಾನ ಉಡಾವಣೆಗೆ ಸಜ್ಜಾಗಿದ್ದು, ನಿಗದಿಯಂತೆ ...
ಚಂದ್ರಯಾನ 2
ಚಂದ್ರಯಾನ 2
ಬೆಂಗಳೂರು: ಭಾರತದ ಬಹು ಆಕಾಂಕ್ಷಿತ ಎರಡನೇ ಚಂದ್ರಯಾನ ಉಡಾವಣೆಗೆ ಸಜ್ಜಾಗಿದ್ದು, ನಿಗದಿಯಂತೆ ಜುಲೈಯಲ್ಲಿ ಉಡಾವಣೆಯಾಗಲಿದೆ. ಈ ಸಂದರ್ಭದಲ್ಲಿ ಚಂದ್ರಯಾನ 2 ಯೋಜನೆಯ ಮೊದಲ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ ಬಿಡುಗಡೆ ಮಾಡಿದೆ. 
ಶ್ರೀ ಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಜುಲೈ 9 ರಿಂದ ಜುಲೈ 16 ರ ನಡುವೆ ಚಂದ್ರಯಾನ 2 ಉಡ್ಡಯನಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಉಡ್ಡಯನಕ್ಕೆ ಸಿದ್ಧಗೊಂಡಿರುವ ಚಂದ್ರಯಾನ 2 ಯೋಜನೆಯ ಚಿತ್ರಗಳು ವಿಜ್ಞಾನ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಚಂದ್ರಯಾನ 2 ಯೋಜನೆಯು ದೇಶೀಯ ನಿರ್ಮಿತ ಜಿಎಸ್‌ಎಲ್‌ವಿ ಎಂಕೆ3 ನೌಕೆ ಮೂಲಕ ಮೂರು ಮೊಡ್ಯುಲ್‌ಗಳನ್ನು ಸಾಗಿಸಲಿದೆ. ಆರ್ಬಿಟರ್‌, ಲ್ಯಾಂಡರ್‌ ಮತ್ತು ರೋವರ್‌ - ಈ ಮೂರು ಮೊಡ್ಯುಲ್‌ಗಳನ್ನು ಜಿಎಸ್‌ಎಲ್‌ವಿ ಎಂಕೆ3 ಚಂದ್ರನಲ್ಲಿಗೆ ಹೊತ್ತೊಯ್ಯಲಿದೆ. ಲ್ಯಾಂಡರ್‌ಗೆ ವಿಕ್ರಮ್‌ ಎಂದು ಹೆಸರಿಡಲಾಗಿದೆ. ರೋವರ್‌ಗೆ ಪ್ರಾಗ್ಯನ್‌ ಎಂದು ಹೆಸರಿಡಲಾಗಿದೆ. ಚಂದ್ರ ಉಪಗ್ರಹದ ಮೇಲೆ ಲ್ಯಾಂಡರ್‌ ಇಳಿಯಲಿದೆ. ಇದು ಬೆಂಗಳೂರಿನ ಇಸ್ರೊ ಕೇಂದ್ರದಲ್ಲಿ ಸಿದ್ದವಾಗಿದೆ.
10 ವರ್ಷಗಳ ನಂತರ ಎರಡನೇ ಬಾರಿಗೆ ಭಾರತ ಚಂದ್ರಯಾನ ಯೋಜನೆಯನ್ನು ಕೈಗೆತ್ತಿಕೊಂಡಿದೆ. 2009ರಲ್ಲಿ ಇಸ್ರೋ ಚಂದ್ರಯಾನ 1 ಯೋಜನೆ ಕೈಗೊಂಡಿತ್ತು. ಆದರೆ ರೋವರ್‌ಅನ್ನು ಈ ಯೋಜನೆಯಲ್ಲಿ ಸೇರಿಸಿರಲಿಲ್ಲ. ಆರ್ಬಿಟರ್‌ ಮತ್ತು ಇಂಪ್ಯಾಕ್ಟರ್‌ ಗಳು ಚಂದ್ರಯಾನ 1ರ ಭಾಗವಾಗಿದ್ದವು. ಇಂಪ್ಯಾಕ್ಟರ್‌ ಚಂದ್ರನ ಮೇಲ್ಮೈನ ದಕ್ಷಿಣ ಭಾಗದಲ್ಲಿ ಪತನವಾಗಿತ್ತು. 
ಇದು ಚಂದ್ರನಲ್ಲಿ ಸೆಪ್ಟೆಂಬರ್ 6ಕ್ಕೆ ತಲುಪಲಿದೆ.  ಜಿಎಸ್‌ಎಲ್‌ವಿ ಎಂಕೆ3 ಚಂದ್ರಯಾನ 2 ಮಾತ್ರವಲ್ಲ, ಇಂಟರ್‌ನ್ಯಾಷನಲ್‌ ಸ್ಪೇಸ್‌ ಏಜೆನ್ಸಿಸ್‌ನ ಪೇಲೋಡ್‌ಅನ್ನು ಹೊತ್ತೊಯ್ಯಲಿದೆ. ಅಮೆರಿಕದ ಒಂದು ಪೇಲೋಡ್‌ ಸೇರಿದಂತೆ ಒಟ್ಟು 13 ಪೇಲೋಡ್‌ಗಳನ್ನು ಹೊತ್ತು ಸಾಗಲಿರುವ ಜಿಎಸ್‌ಎಲ್‌ವಿ ಎಂಕೆ 3 ಬಾಹ್ಯಾಕಾಶ ರಂಗ ಹೊಸ ಇತಿಹಾಸ ಸೃಷ್ಟಿಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com