ಚಂದ್ರಯಾನ-2; ಚಂದ್ರನ ಮೇಲ್ಮೈ ಕುರಿತ ಹೊಸ ಚಿತ್ರ ರವಾನಿಸಿದ ಆರ್ಬಿಟರ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ  ಮಹತ್ವಾಕಾಂಕ್ಷೆಯ ಚಂದ್ರಯಾನ -2 ಉಡಾವಣೆಯಲ್ಲಿ ವಿಕ್ರಮ್ ಲ್ಯಾಂಡರ್ ವಿಫಲವಾಗಿದ್ದರೂ, ಆರ್ಬಿಟರ್ ಮಾತ್ರ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ.
ಅರ್ಬಿಟರ್ ಕಳುಹಿಸಿದ ಚಂದ್ರನ ಮೇಲ್ಮೈ ಚಿತ್ರ
ಅರ್ಬಿಟರ್ ಕಳುಹಿಸಿದ ಚಂದ್ರನ ಮೇಲ್ಮೈ ಚಿತ್ರ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ  ಮಹತ್ವಾಕಾಂಕ್ಷೆಯ ಚಂದ್ರಯಾನ -2 ಉಡಾವಣೆಯಲ್ಲಿ ವಿಕ್ರಮ್ ಲ್ಯಾಂಡರ್ ವಿಫಲವಾಗಿದ್ದರೂ, ಆರ್ಬಿಟರ್ ಮಾತ್ರ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ.

ಹೊಸದಾಗಿ ಚಂದ್ರನ ಮೇಲ್ಮೈಗೆ ಸಂಬಂಧಿಸಿದ ಪ್ರಕಾಶಮಾನ ಛಾಯಾಚಿತ್ರಗಳನ್ನು ಸೆರೆಹಿಡಿದಿರುವ ಅರ್ಬಿಟರ್, ಅವುಗಳನ್ನು ರವಾನಿಸಿದೆ. ಸ್ಪೆಕ್ಟ್ರೋಮೀಟರ್ ಬಳಸಿ ಚಂದ್ರನ  ಮೇಲ್ಮೈ ನಲ್ಲಿ ಸೂರ್ಯನಕಾಂತಿಯ ವ್ಯತ್ಯಾಸಗಳನ್ನು ವಿಶ್ಲೇಷಿಸಿದೆ, ಚಂದ್ರನ ಮೇಲ್ಮೈಯಲ್ಲಿ ಸಂಗ್ರಹವಾಗಿರುವ ನಿಕ್ಷೇಪ ಮೂಲಗಳ ಮಟ್ಟ,  ಚಂದ್ರನ ಮೂಲ ಸ್ಥಾನ, ಪರಿಭ್ರಮಣೆಗೆ ಸಂಬಂಧಿಸಿದ ವಿದ್ಯಮಾನಗಳನ್ನು  ತಿಳಿಯಲು ಸಾಧ್ಯವಾಗಿಸಿದೆ. ಅರ್ಬಿಟರ್ ಹೊಸದಾಗಿ ಸೆರೆಹಿಡಿದಿರುವ ಛಾಯಾಚಿತ್ರಗಳನ್ನು ಇಸ್ರೋ ತನ್ನ ಟ್ವಿಟ್ಟರ್‌ನಲ್ಲಿ  ಹಂಚಿಕೊಂಡಿದೆ.

ಚಂದ್ರ ಸ್ವಯಂ ಪ್ರಕಾಶಿಸುವವನಲ್ಲ. ಸೂರ್ಯ ಕಾಂತಿ ಕನ್ನಡಿಯ ಮೇಲೆ ಪ್ರತಿಫಲಿಸಿದಂತೆ, ಚಂದ್ರನ ಮೇಲ್ಮೈಯಲ್ಲಿ ಸೂರ್ಯನ ಕಿರಣ ಬಿದ್ದು ಪ್ರತಿಬಿಂಬಿಸುವ ಮೂಲಕ ಚಂದ್ರ ಹೊಳೆಯುವಂತೆ ಕಾಣುತ್ತಾನೆ. ಚಂದ್ರನ ಮೇಲ್ಮೈಯಲ್ಲಿ  ಬೆಳಕು ಒಂದೇ ರೀತಿ ಪ್ರತಿಫಲಿಸುವುದಿಲ್ಲ. ಚಂದ್ರನಿಗೆ ಸಂಬಂಧಿಸಿದ ಇಂತಹ ಎಷ್ಟೋ ವಿಷಯಗಳು ತಿಳಿದುಕೊಳ್ಳಲು ಇಸ್ರೋ  ಕಳುಹಿಸಿರುವ ಆರ್ಬಿಟರ್ ಈಗ ಉಪಯೋಗವಾಗುತ್ತಿದೆ.

ಚಂದ್ರಯಾನ -2 ಅರ್ಬಿಟರ್ ಹೊಸದಾಗಿ ಬಿಡುಗಡೆ ಮಾಡಿರುವ ಫೋಟೋಗಳ ಆಧಾರದ ಮೇಲೆ, ಚಂದ್ರನ ಮೇಲ್ಮೈನಲ್ಲಿರುವ  ಖನಿಜ ಸಂಯೋಜನೆಯಲ್ಲಿನ ವ್ಯತ್ಯಾಸಗಳಿಂದಾಗಿ ಚಂದ್ರನು ಕೆಲವೊಮ್ಮೆ ಅತ್ಯಂತ ಪ್ರಕಾಶಮಾನವಾಗಿ... ಕೆಲವೊಮ್ಮೆ  ಮಾಮೂಲಿಯಾಗಿ ಕಾಣುತ್ತಾನೆ ಎಂದು ಇಸ್ರೋ ವಿವರಿಸಿದೆ. ಚಂದ್ರನ ಮೇಲ್ಮೈ  ಯಾವುದರಿಂದ ನಿರ್ಮಿತಗೊಂಡಿದೆ, ಅಲ್ಲಿನ ಮೂಲಾಂಶಗಳು, ಖನಿಜಗಳ ಪ್ರಮಾಣ ಎಷ್ಟು ಮತ್ತಿತರ ರಹಸ್ಯಗಳನ್ನು ತಿಳಿಯಲು ನೆರವಾಗುತ್ತದೆ.

ಆರ್ಬಿಟರ್ ತೆಗೆದ ಫೋಟೋಗಳಲ್ಲಿ ಚಂದ್ರನ ಹೊಂಡಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಹೇಳಲಾಗುತ್ತದೆ. ಚಂದ್ರಯಾನ-2 ಆರ್ಬಿಟರ್‌ನಲ್ಲಿರುವ ಎಂಟು ಸಾಧನಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೋ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com