ಗಗನಯಾನ: ಭಾರತದ 12 ಗಗನಯಾನಿಗಳಿಗೆ ರಷ್ಯಾ ತರಬೇತಿ: ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಗಗನಯಾನಕ್ಕೆ ಈಗಾಗಲೇ ಸಜ್ಜಾಗುತ್ತಿದ್ದು, ಯೋಜನೆ ನಿಮಿತ್ತ ಭಾರತದ 12 ಗಗನಯಾನಿಗಳನ್ನು ತರಬೇತಿಗಾಗಿ ರಷ್ಯಾಗೆ ಕಳುಹಿಸಲು ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಗಗನಯಾನಕ್ಕೆ ಈಗಾಗಲೇ ಸಜ್ಜಾಗುತ್ತಿದ್ದು, ಯೋಜನೆ ನಿಮಿತ್ತ ಭಾರತದ 12 ಗಗನಯಾನಿಗಳನ್ನು ತರಬೇತಿಗಾಗಿ ರಷ್ಯಾಗೆ ಕಳುಹಿಸಲು ನಿರ್ಧರಿಸಿದೆ.

ಇಸ್ರೋ ಮೂಲಗಳ ಪ್ರಕಾರ 2020ರ ಡಿಸೆಂಬರ್ ವೇಳೆಗೆ ಭಾರತದ ಗಗನ ಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ರವಾನೆ ಮಾಡಲು ಯೋಜನೆ ರೂಪಿಸಿದ್ದು, ಅದರಂತೆ ಗಗನಯಾತ್ರಿಗಳನ್ನು ತರಬೇತಿ ನಿಮಿತ್ತ ರಷ್ಯಾಗೆ ಕಳುಹಿಸಲಾಗುತ್ತಿದೆ. ಭಾರತದ ಒಟ್ಟು 12 ಗಗನಯಾತ್ರಿಗಳು ರಷ್ಯಾ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಇಸ್ರೋ ಅಧ್ಯಕ್ಷ ಕೆ ಶಿವನ್ ಅವರು ಮಾಹಿತಿ ನೀಡಿದ್ದು, ಅಹ್ಮದಾಬಾದ್ ನಲ್ಲಿರುವ ಸ್ಪೇಸ್ ಅಪ್ಲಿರೇಶನ್ ಸೆಂಟರ್ ನಲ್ಲಿ ಮಾತನಾಡಿದ ಅವರು, ಗಗನಯಾನ ಯೋಜನೆ ನಿಮಿತ್ತ ಒಟ್ಟು 12 ಗಗನಯಾತ್ರಿಗಳನ್ನುರಷ್ಯಾಗೆ ತರಬೇತಿಗಾಗಿ ಕಳುಹಿಸಲಾಗುತ್ತಿದೆ. ಆದರೆ ಈ 12 ಗಗನ ಯಾತ್ರಿಗಳ ಆಯ್ಕೆ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ ಎಂದು ಹೇಳಿದರು. ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಷ್ಯಾ ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ತರಬೇತಿ ಕುರಿತು ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ಭಾರತದ ಗಗನಯಾತ್ರಿಗಳು ರಷ್ಯಾದಲ್ಲಿ ಸುಮಾರು 1 ತಿಂಗಳ ಕಾಲ ತರಬೇತಿ ಪಡೆಯಲಿದ್ದಾರೆ ಎಂದು ಶಿವನ್ ಮಾಹಿತಿ ನೀಡಿದರು.

ಇನ್ನು ಭಾರತದ ಮೊದಲ ಮಾನವ ರಹಿತ ಗಗನಯಾನ ಯೋಜನೆ 2020ರ ಡಿಸೆಂಬರ್ ನಲ್ಲಿ ಉಡಾವಣೆಯಾಗಲಿದ್ದು, 2ನೇ ಉಡಾವಣೆ 2021ರ ಜುಲೈನಲ್ಲಿ ಉಡಾವಣೆಯಾಗಲಿದೆ. ಅದೇ ವರ್ಷದ ಡಿಸೆಬಂರ್ ನಲ್ಲಿ ಭಾರತದ ಮೊಟ್ಟ ಮೊದಲ ಮಾನವ ಸಹಿತ ಗಗನಯಾನ ಯೋಜನೆ ಉಡಾವಣೆಯಾಗಲಿದೆ ಎಂದು ಶಿವನ್ ಹೇಳಿದರು.

ಅಂತೆಯೇ ಗಗನಯಾತ್ರಿಗಳ ತಂಡದಲ್ಲಿ ಮಹಿಳೆ ಇರಲಿದ್ದಾರೆ ಎಂಬ ಊಹಾಪೋಹಕ್ಕೆ ಸ್ಪಷ್ಟನೆ ನೀಡಿದ ಶಿವನ್, ಈ ವರೆಗೂ ಈ ಕುರಿತ ಚರ್ಚೆ ಉದ್ಭವಿಸಿಲ್ಲ. ಒಂದು ವೇಳೆ ಮಹಿಳೆ ಆಯ್ಕೆಯಾಗುವುದಾದರೆ ನಾವೂ ಕೂಡ ಖುಷಿ ಪಡುತ್ತೇವೆ. ನಮಗೆ ಸಮರ್ಥ ಗಗನಯಾತ್ರಿಗಳು. ಇದರಲ್ಲಿ ಯಾವುದೇ ರೀತಿಯ ಲಿಂಗ ಬೇದವಿಲ್ಲ ಎಂದು ಶಿವನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com