ಗೂಗಲ್-ಜಿಪಿಎಸ್ ಗೆ ಸಡ್ಡು; ಶಿಯೋಮಿ ಮೊಬೈಲ್ ಗಳಲ್ಲಿ ಇಸ್ರೋದ 'ನಾವಿಕ್' ತಂತ್ರಜ್ಞಾನ!

ಟೆಕ್ ದೈತ್ಯ ಗೂಗಲ್ ಮತ್ತು ಜಿಪಿಎಸ್ ತಂತ್ರಜ್ಞಾನಕ್ಕೆ ಸೆಡ್ಡು ಹೊಡೆದು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ತಯಾರಿಸಿದ್ದ ನಾವಿಕ್ ತಂತ್ರಜ್ಞಾನವನ್ನು ಇದೀಗ ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಶಿಯೋಮಿ ತನ್ನ ಸ್ಮಾರ್ಟ್ ಫೋನ್ ಗಳಿಗೆ ಅಳವಡಿಸಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಟೆಕ್ ದೈತ್ಯ ಗೂಗಲ್ ಮತ್ತು ಜಿಪಿಎಸ್ ತಂತ್ರಜ್ಞಾನಕ್ಕೆ ಸೆಡ್ಡು ಹೊಡೆದು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ತಯಾರಿಸಿದ್ದ ನಾವಿಕ್ ತಂತ್ರಜ್ಞಾನವನ್ನು ಇದೀಗ ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಶಿಯೋಮಿ ತನ್ನ ಸ್ಮಾರ್ಟ್ ಫೋನ್ ಗಳಿಗೆ ಅಳವಡಿಸಿಕೊಂಡಿದೆ.

ಈ ಹಿಂದೆ ಇಸ್ರೋ ಸತತ ಸಂಶೋಧನೆ ನಡೆಸಿ ದೇಸೀ ನಿರ್ಮಿತ ನ್ಯಾವಿಗೇಷನ್ ತಂತ್ರಜ್ಞಾನವನ್ನು ಕಂಡುಹಿಡಿದಿತ್ತು. ಅದಕ್ಕೆ ನಾವಿಕ್‌ ( ನ್ಯಾವಿಗೇಷನ್‌ ವಿತ್‌ ಇಂಡಿಯನ್‌ ಕಾನ್‌ಸ್ಟಲೇಷನ್‌) ಎಂದು ಹೆಸರು ಕೂಡ ನೀಡಿತ್ತು. ಇದೀಗ ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಶಿಯೋಮಿ ಸಂಸ್ಥೆ ತನ್ನ ಮೊಬೈಲ್ ಗಳಿಗೆ ಅಳವಡಿಸಿದೆ.

ಹಾಲಿ ವರ್ಷ ಅಂದರೆ 2020ರಲ್ಲಿ ಶಿಯೋಮಿ ತಯಾರಿಸುತ್ತಿರುವ ಕೆಲ ಆಯ್ದ ಸ್ಮಾರ್ಟ್ ಫೋನ್ ಗಳಲ್ಲಿ ಗೂಗಲ್ ಜಿಪಿಎಸ್ ಬದಲಿಗೆ ಇಸ್ರೋದ ನಾವಿಕ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಪ್ರಮುಖವಾಗಿ ಕೆಲ ಸ್ನಾಪ್ ಡ್ರಾಗನ್ ಚಿಪ್ ಸೆಟ್ ಗಳಲ್ಲೂ ಈ ತಂತ್ರಜ್ಞಾನ ಲಭ್ಯವಿದೆ ಎಂದು ಸಂಸ್ಛೆಯ ವಕ್ತಾರರು ತಿಳಿಸಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಶಿಯೋಮಿ ಇಂಡಿಯಾ ಸಂಸ್ಥೆಯ ಉಪಾಧ್ಯಕ್ಷ ಮನು ಜೈನ್ ಅವರು, ಇಸ್ರೋ ತಯಾರಿಸಿದ ಸ್ವದೇಶಿ ನಿರ್ಮಿತ ತಂತ್ರಜ್ಞಾನ ಅಳವಡಿಕೆ ಮಾಡಿರುವ ಸ್ಮಾರ್ಟ್ ಫೋನ್ ಗಳನ್ನು ನಮ್ಮ ಗ್ರಾಹಕರ ಕೈ ತಲುಪಿಸುತ್ತಿರುವುದಕ್ಕೆ ನಮಗೆ ಅತೀವ ಹೆಮ್ಮೆ ಇದೆ. ಇದು ನಮಗೆ ಸಿಕ್ಕ ಗೌರವ ಎಂದು ಹೇಳಿದ್ದಾರೆ. 

ಶಿಯೋಮಿಯ ಈ ಕಾರ್ಯಕ್ಕೆ ಕ್ವಾಲ್ಕಾಮ್ ಟೆಕ್ನಾಲಜೀಸ್ ಇಂಕ್ ಸಂಸ್ಛೆ ಕೈ ಜೋಡಿಸಿದ್ದು, ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ ತಂತ್ರಜ್ಞಾನದ ಮೊಬೈಲ್ ಗಳಲ್ಲಿ ನಮಗೆ ನಾವಿಕ್ ಬಳಕೆಗೆ ದೊರೆಯುತ್ತದೆ ಎಂದು ಶಿಯೋಮಿ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಹಿಂದೆ ಈ ನಾವಿಕ್ ತಂತ್ರಜ್ಞಾನದ ಕುರಿತು ಮಾತನಾಡಿದ್ದ ಇಸ್ರೋ ಸಂಸ್ಥೆ, ಅತ್ಯಂತ ನಿಖರವಾದ ಮಾಹಿತಿಯನ್ನು ಇದು ನೀಡಬಲ್ಲದು ಎಂದು ಹೇಳಿದೆ. ಜಿಪಿಎಸ್‌ ಸಾಮಾನ್ಯವಾಗಿ ಭೌಗೋಳಿಕ ಪ್ರದೇಶದ ಮಾಹಿತಿ ನೀಡುವ ಸುಮಾರು 20-30 ಮೀಟರ್‌ನಷ್ಟು ವ್ಯತ್ಯಾಸವಿರುತ್ತದೆ. ಆದರೆ ನಾವಿಕ್‌ 5 ಮೀಟರ್‌ನಷ್ಟು ಮಾತ್ರ ವ್ಯತ್ಯಾಸ ಕಾಣಿಸಬಹುದು ಎಂದು ಹೇಳಲಾಗಿದೆ. ಅಲ್ಲದೆ ಭಾರತದಲ್ಲಿ ನಾವಿಕ್ ಸುಮಾರು 1500 ಕಿ.ಮೀ ವ್ಯಾಪ್ತಿಯ ನಿಖರ ಮಾಹಿತಿ ನೀಡಲಿದೆ ಎಂದು ಹೇಳಿತ್ತು.

ಮೊಬೈಲ್‌ ಫೋನ್‌ಗಳು, ವಾಹನಗಳು, ಸರಕು ಸಾರಿಗೆಗಳಿಗೆ ಈ ಸೇವೆ ಲಭ್ಯವಾಗಲಿದೆ. ಧ್ವನಿ ಹಾಗೂ ದೃಶ್ಯ ರೂಪದಲ್ಲಿ ನ್ಯಾವಿಗೇಷನ್‌ ಒದಗಿಸಲಿದೆ. ಪ್ರಕೃತಿ ವಿಕೋಪಗಳು, ನಿಖರ ಕಾಲಮಾನ, ಭೂಮಿ, ವಾಯು ಹಾಗೂ ಸಾಗರಯಾನದಲ್ಲಿ ಹೆಚ್ಚು ನಿಖರ ಮಾಹಿತಿ ನೀಡುವ ಮೂಲಕ ನೆರವಾಗಲಿದೆ ಎನ್ನಲಾಗಿದೆ. ಈ ಸೇವೆಯನ್ನು ಹೆಚ್ಚು ಸಮರ್ಥವಾಗಿ ನಿರ್ವಹಿಸಲು ಅನುಕೂಲವಾಗಲೆಂದು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಏಳು ಉಪಗ್ರಹಗಳ ಜೊತೆಗೆ, ಇನ್ನು ನಾಲ್ಕು ಉಪಗ್ರಹಗಳನ್ನು ಸೇರಿಸುವ ಉದ್ದೇಶ ಹೊಂದಿರುವುದಾಗಿ ಇಸ್ರೋ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com