'ಗೋಲ್ಡಿಲಾಕ್ ಝೋನ್' ನಲ್ಲಿ ಭೂಮಿ ಗಾತ್ರದ ಜಗತ್ತು ಪತ್ತೆ!

ಭೂಮಿಯಾಚೆಗಿನ ಭೂಮಿ ಕುರಿತ ಅನ್ವೇಷಣೆಗಳು ಮತ್ತು ಶೋಧಗಳು ಚಾಲ್ತಿಯಲ್ಲಿರುವಂತೆಯೇ ಇತ್ತ ನಾಸಾ ಭೂಮಿ ಗಾತ್ರದ ಜಗತ್ತೊಂದನ್ನು ಪತ್ತೆ ಮಾಡಿದೆ.
ಭೂಮಿ ಗಾತ್ರದ ಜಗತ್ತು  TOI 700 d
ಭೂಮಿ ಗಾತ್ರದ ಜಗತ್ತು TOI 700 d

ವಾಷಿಂಗ್ಟನ್: ಭೂಮಿಯಾಚೆಗಿನ ಭೂಮಿ ಕುರಿತ ಅನ್ವೇಷಣೆಗಳು ಮತ್ತು ಶೋಧಗಳು ಚಾಲ್ತಿಯಲ್ಲಿರುವಂತೆಯೇ ಇತ್ತ ನಾಸಾ ಭೂಮಿ ಗಾತ್ರದ ಜಗತ್ತೊಂದನ್ನು ಪತ್ತೆ ಮಾಡಿದೆ.

ಹೌದು.. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಪ್ಲಾನೆಟ್ ಹಂಟರ್ ಉಪಗ್ರಹದ ಮೂಲಕ ಗೋಲ್ಡಿಲಾಕ್ ಝೋನ್ ನಲ್ಲಿ ಭೂಮಿ ಗಾತ್ರದ ಜಗತ್ತೊಂದು ಇದೆ ಎಂಬುದನ್ನು ಪತ್ತೆ ಮಾಡಿದೆ. ಹವಾಯಿಯ ಹೊನೊಲುಲು ನಲ್ಲಿ ನಡೆದ ಅಮೆರಿಕನ್ ಆಸ್ಟ್ರಾನೊಮಿಕಲ್ ಸೊಸೈಯಿ ವಾರ್ಷಿಕ ಸಭೆಯಲ್ಲಿ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಈ ವಿಚಾರವನ್ನು ಘೋಷಣೆ ಮಾಡಿದೆ.

ಕಳೆದ 2018ರ ಏಪ್ರಿಲ್ ನಲ್ಲಿ ಉಡಾವಣೆಯಾಗಿ ಜುಲೈನಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದ್ದ ನಾಸಾದ ಪ್ಲಾನೆಟ್‌ ಹಂಟರ್‌ ಟ್ರಾನ್ಸಿಟಿಂಗ್‌ ಎಕ್ಸೋಪ್ಲಾನೆಟ್‌ ಸರ್ವೇ ಸ್ಯಾಟಲೈಟ್‌ (ಟೆಸ್‌) ಉಪಗ್ರಹ ಇದೀಗ ಭೂಮಿ ಗಾತ್ರದ ಜಗತ್ತನ್ನು ಪತ್ತೆ ಮಾಡಿದೆ. ಪ್ಲಾನೆಟ್ ಹಂಟರ್ ಪತ್ತೆ ಮಾಡಿರುವ ಭೂಮಿ ಗಾತ್ರದ ಜಗತ್ತಿಗೆ TOI 700 d ಎಂದು ನಾಮಕರಣ ಮಾಡಲಾಗಿದ್ದು, ಈ TOI 700 d ಭೂಮಿಯಿಂದ ಸುಮಾರು 100 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಇನ್ನು ಈ TOI 700 d ಜಗತ್ತಿನ ಕುರಿತು ಹೆಚ್ಚಿನ ಮಾಹಿತಿ ವಿಜ್ಞಾನಿಗಳಿಗೆ ಲಭ್ಯವಾಗಿಲ್ಲವಾದರೂ, ಇದು ಸೂರ್ಯನ ಗಾತ್ರಕ್ಕಿಂತ ಶೇ.40 ಚಿಕ್ಕದಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಅದೇ 'ಗೋಲ್ಡಿಲಾಕ್ ಝೋನ್' ನಲ್ಲಿ ಸರಿ ಸುಮಾರು ಅದೇ ಗಾತ್ರದ 3 ಗ್ರಹಗಳಿದ್ದು, ಮೂರು ಗ್ರಹಗಳಿಗೂ TOI 700b, TOI 700 C ಮತ್ತು TOI 700 D  ಎಂದು ಹೆಸರಿಡಲಾಗಿದೆ. ಈ ಪೈಕಿ TOI 700 d ಭೂಮಿಗೆ ಹತ್ತಿರದಲ್ಲಿದ್ದು, ಇಲ್ಲಿ ನೀರಿನ ಸಂಗ್ರಹ ಇರಬಹುದು ಎಂದು ಶಂಕಿಸಲಾಗಿದೆ. TOI 700 b ಮತ್ತು c ಸೂರ್ಯನಿಂದ ಶೇ.86ರಷ್ಟು ಶಕ್ತಿ (ಸೌರ ಇಂಧನ) ಪಡೆಯಲಿದ್ದು,  TOI 700b ಶೇ.20ರಷ್ಟು ಮಾತ್ರ ಸೂರ್ಯನ ಶಕ್ತಿ ಪಡೆಯುತ್ತದೆ. ಹೀಗಾಗಿ ಈ ಎರಡೂ ಗ್ರಹಗಳಲ್ಲಿನ ವಾತಾವರಣ ಭೂಮಿಯನ್ನು ಹೋಲುವುದಿಲ್ಲ. ಆದರೆ TOI 700 d ಸೂರ್ಯನಿಂದ ಶೇ.43ರಷ್ಟು ಶಕ್ತಿ ಪಡೆಯುತ್ತಿದ್ದು, ಇಲ್ಲಿನ ತಾಪಮಾನ ಭೂಮಿಯ ತಾಪಮಾನದಂತೆಯೇ ಇರಬಹುದು ಎನ್ನಲಾಗಿದೆ. ಇದೇ ಕಾರಣಕ್ಕೆ ವಿಜ್ಞಾನಿಗಳು TOI 700 d ಕುರಿತ ಅಧ್ಯಯನವನ್ನು ತೀವ್ರಗೊಳಿಸಿದ್ದಾರೆ ಎನ್ನಲಾಗಿದೆ.

ನಾಸಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿರುವಂತೆ TOI 700 d ವಿಶಾಲವಾದ ಸಮುದ್ರವಲಯ ಹೊಂದಿದ್ದು, ಇದು ದಟ್ಟವಾದ ಇಂಗಾಲದ ಡೈಆಕ್ಸೈಡ್ ವಾತಾವರಣ ಹೊಂದಿದೆ. ಇದು ಯೌವ್ವನಾವಸ್ಥೆಯಲ್ಲಿದ್ದ ಮಂಗಳ ಗ್ರಹವನ್ನು ಹೋಲುತ್ತಿದೆ. ಭೂಮಿ ಮತ್ತು ಸೌರವ್ಯೂಹದಂತೆಯೇ TOI 700 d ಕೂಡ ದೊಡ್ಡ ನಕ್ಷತ್ರದ ಕಕ್ಷೆಯಲ್ಲಿದೆ. ಇದೇ ಕಾರಣಕ್ಕೆ ಇಲ್ಲಿ ಭೂಮಿಯಲ್ಲಿರುವಂತೆ ಜೀವಿಗಳಿರಬಹುದು ಅಥವಾ ಜೀವಿಗಳು ವಾಸಿಸಲು ಯೋಗ್ಯವಾದ ವಾತಾವರಣವಿರಬಹುದು ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com